ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ಮುರುಡೇಶ್ವರಕ್ಕೆ ಅಪ್ಪಳಿಸಿದ ಜನಮಾರುತ; ಸರಕಾರದ ಮಹಾ ಶಕ್ತಿ ಸಂಗಮಕ್ಕೆ ಪ್ರವಾಸಿ ತಾಣ ತತ್ತರ

ಭಟ್ಕಳ: ಮುರುಡೇಶ್ವರಕ್ಕೆ ಅಪ್ಪಳಿಸಿದ ಜನಮಾರುತ; ಸರಕಾರದ ಮಹಾ ಶಕ್ತಿ ಸಂಗಮಕ್ಕೆ ಪ್ರವಾಸಿ ತಾಣ ತತ್ತರ

Wed, 29 May 2024 07:51:34  Office Staff   S O News

ಭಟ್ಕಳ: ಮುಂಗಾರು ಆಗಮನಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ವಾರದ ರಜೆ ರವಿವಾರ ಪ್ರವಾಸಿಗರ ಸಮೂಹ ಮುರುಡೇಶ್ವರಕ್ಕೆ ಮಾರುತವಾಗಿ ಅಪ್ಪಳಿಸಿದ್ದು, ಪ್ರವಾಸಿ ತಾಣ ತತ್ತರಿಸಿ ಹೋಗಿದೆ.

ಮುರುಡೇಶ್ವರದಲ್ಲಿ ರವಿವಾರ ಒಂದೂವರೆ ಕಿಲೋಮೀಟರ್ ದೂರದವರೆಗೆ ವಾಹನ ದಟ್ಟಣೆ ನಿರ್ಮಾಣವಾಗಿದ್ದು, ನಡೆದಾಡಲೂ ಸಾಧ್ಯವಾಗದ ದೃಶ್ಯ ಕಂಡು ಬಂದಿದೆ. ರವಿವಾರ ಹೊತ್ತು ನೆತ್ತಿಗೇರುವ ಹೊತ್ತಿಗೆ ಮುರುಡೇಶ್ವರ ದೇವಾಲಯದ ಆವರಣದಲ್ಲಿ ಜನಜಂಗುಳಿ ಮಿತಿ ಮೀರಿತು. ಶಿವನ ದರ್ಶನಕ್ಕೆ ಜನರು ಮುಗಿ ಬಿದ್ದ ಕಾರಣ ಗೋಪುರ ಪ್ರವೇಶ ದ್ವಾರದಿಂದ ದೇವಾಲಯದ ಮಹಾದ್ವಾರದವರೆಗೂ ನೂಕುನುಗ್ಗಲು ಉಂಟಾಯಿತು. ಅಂಕೆ ಮೀರಿದ ಜನ ಪ್ರವಾಹದಿಂದಾಗಿ ಸ್ವಲ್ಪ ಹೊತ್ತು ದೇವಾಲಯ ಪ್ರವೇಶಕ್ಕೆ ನಿರ್ಬಂಧ ಹೇರಲಾಯಿತು. 

ಕಡಲ ತೀರದಲ್ಲಿಯೂ ಕೂಗಾಟ, ಚೀರಾಟ:
ಮುರುಡೇಶ್ವರ ಕಡಲ ತೀರದಲ್ಲಿಯೂ ಸಹಸ್ರಾರು ಜನರು ಸೇರಿದ್ದು, ಕಡಲ ಆರ್ಭಟದ ಶಬ್ದವನ್ನೂ ಮೀರಿ ಪ್ರವಾಸಿಗರ ಕೂಗಾಟ ಚೀರಾಟ ಕೇಳಿ ಬರುತ್ತಲೇ ಇತ್ತು. ಸಮುದ್ರದ ನೀರು ಮೇಲೆ ಉಕ್ಕಿ ಹರಿಯುವ ಉತ್ಸಾಹ ತೋರುತ್ತಿದ್ದರೂ, ಸಾವು ನೋವು ಎಲ್ಲವನ್ನೂ ಕಡೆಗಣಿಸಿ ಪ್ರವಾಸಿಗರು ನೀರಿನಲ್ಲಿ ಆಟ ಸುರುವಿಟ್ಟುಕೊಂಡಿದ್ದರು. ಸಂಭಾವ್ಯ ಅಪಘಾತವನ್ನೂ ನಿರ್ಲಕ್ಷಿಸಿ ಸಮುದ್ರದ ಬೇಲೆಯ ಮೇಲೆಯೇ ಪ್ರವಾಸಿಗರ ವಾಹನ ಓಡಾಡುತ್ತಲೇ ಇದ್ದವು. 

ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗಿಸಿದ ಶಕ್ತಿ :
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜಾರಿಗೆ ತಂದ ಶಕ್ತಿ ಯೋಜನೆಯಿಂದಾಗಿ ಮುರುಡೇಶ್ವರದಲ್ಲಿ ಪ್ರವಾಸಿಗರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಮಹಿಳೆಯರು ಉಚಿತ ಬಸ್ ಪ್ರಯಾಣದ ಲಾಭವನ್ನು ಪಡೆದುಕೊಂಡು ತಂಡೋಪತಂಡವಾಗಿ ಮುರುಡೇಶ್ವರಕ್ಕೆ ಆಗಮಿಸುವುದನ್ನು ಮುಂದುವರೆಸಿದ್ದಾರೆ. ಭಟ್ಕಳ ಹಾಗೂ ಅಕ್ಕಪಕ್ಕದ ತಾಲೂಕು, ಗ್ರಾಮಗಳ ನಿವಾಸಿಗಳು ಸಮಯ ಸಿಕ್ಕಾಗಲೆಲ್ಲ ಸರಕಾರಿ ಬಸ್ ಏರುತ್ತಿದ್ದು, ಮುರುಡೇಶ್ವರ ನಾಕಿ ಅಥವಾ ಬಸ್ ನಿಲ್ದಾಣದಿಂದ ಆಟೋ ಏರಿ ದೇವಸ್ಥಾನಕ್ಕೆ ಬಂದು ಹೋಗುವುದನ್ನು ರೂಢಿಸಿಕೊಂಡಿದ್ದಾರೆ. ಇದರಿಂದ ಮುರುಡೇಶ್ವರದ ಮೇಲಿನ ಒತ್ತಡ ದಿನೇ ದಿನೇ ಹೆಚ್ಚಾಗತೊಡಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ ಎನ್ನುತ್ತ ಇಲ್ಲಿನ ಅಂಗಡಿಕಾರರೋರ್ವರು ಕಾರಣ ಬಿಚ್ಚಿಡುವ ಪ್ರಯತ್ನ ಮಾಡುತ್ತಾರೆ. 

ಮೂಲಭೂತ ಸೌಕರ್ಯ ಅಧೋಗತಿಗೆ:
ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಾ ಹೋದಂತೆ ಮುರುಡೇಶ್ವರದಲ್ಲಿ ಮೂಲಭೂತ ಸೌಕರ್ಯ ಅಧೋಗತಿಯನ್ನು ತಲುಪಿದೆ. ವಸತಿಗೃಹಗಳು ಖಾಯಂ ಹೌಸ್‍ಫುಲ್ ಬೋರ್ಡ ಹಾಕಿಕೊಂಡರೆ, ಗಗನಕ್ಕೇರಿರುವ ರೂಮ್ ದರದಿಂದಾಗಿ ಪ್ರವಾಸಿಗರು ಬೇಲೆಯ ಮೇಲೆ ಹಗಲು ರಾತ್ರಿ ಕಳೆಯಲು ಯತ್ನಿಸುತ್ತಿರುವುದು ಕಂಡು ಬಂದಿದೆ. ಪ್ರವಾಸಿಗರ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ, ಸ್ನಾನ ಗೃಹವೂ ಇಲ್ಲದಿರುವುದರಿಂದ ಕಂಡಕಂಡಲಿ ಮಲಮೂತ್ರ ವಿಸರ್ಜನೆ ಆರಂಭವಾಗಿ ಬಿಟ್ಟಿದೆ. ಮುಂದೆ ಪ್ರವಾಸಿಗರು ಮುರುಡೇಶ್ವರಕ್ಕೆ ಕಾಲಿಡಲೂ ಅಸಹ್ಯ ಪಟ್ಟುಕೊಂಡರೆ ಆಶ್ಚರ್ಯ ಪಡುವಂತದ್ದೇನಿಲ್ಲ.

ಗೋವಾ ಮಾದರಿಯಲ್ಲಿ ಮುರುಡೇಶ್ವರ ಅಭಿವೃದ್ಧಿಯಾಗಲಿ:
ಮುರುಡೇಶ್ವರ ದೇವಾಲಯದ ಇಕ್ಕೆಲಗಳಲ್ಲಿ ವಿಶಾಲವಾದ ಕಡಲತೀರ ಇದ್ದರೂ, ಮುರುಡೇಶ್ವರದ ಒಟ್ಟೂ ಪ್ರವಾಸೋದ್ಯಮ ಚಟುವಟಿಕೆ ದೇವಾಲಯದ ಒಂದು ಬದಿಯಲ್ಲಿನ ಸೀಮಿತ ಒಂದೆರಡು ಕಿಲೋ ಮೀಟರ್ ವ್ಯಾಪ್ತಿ ಪ್ರದೇಶಕ್ಕೆ ಸೀಮಿತವಾಗಿದೆ. ಪ್ರವಾಸಿಗರ ಓಡಾಟ, ಜಲಕ್ರೀಡೆ, ಮೋಜಿನಾಟ ಎಲ್ಲವೂ ಅಲ್ಲಿಯೇ ಮುಗಿದು ಹೋಗುತ್ತಿದೆ. ಅದರ ಬದಲಿಗೆ ಮುರುಡೇಶ್ವರದಿಂದ ಬೈಲೂರಿನವೆರೆಗೆ, ಇತ್ತ ಮುರುಡೇಶ್ವರದಿಂದ ಸಣಬಾವಿಯವರೆಗೆ ಅಥವಾ ಅಳ್ವೆಕೋಡಿಯವರೆಗೆ ಒಟ್ಟೂ ಕಡಲ ತೀರವನ್ನು ಬಳಸಿಕೊಂಡು ಹೊಸ ಹೊಸ ಹೆಸರಿನೊಂದಿಗೆ ಗೋವಾ ಮಾದರಿಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಪ್ರತ್ಯೇಕ ಬೀಚ್‍ಗಳು ಸಿದ್ಧವಾಗಬೇಕು. ಪ್ರತಿ ಬೀಚ್‍ನಲ್ಲಿ ವಿಭಿನ್ನ ರೀತಿಯ ಜಲಕ್ರೀಡೆ, ವಸತಿ, ಮೋಜುಮಸ್ತಿಗೆ ಅವಕಾಶ ಕಲ್ಪಿಸಬೇಕು. ಎಲ್ಲ ಬೀಚ್‍ಗಳಲ್ಲಿಯೂ ಕಡಲ ತೀರದ ಶುಚಿರುಚಿಯಾದ ಆಹಾರವನ್ನು ಪರಿಚಯಿಸಬೇಕು. ಹಾಗೆ ಮಾಡಿದರೆ ಮುರುಡೇಶ್ವರ ಸೀಮಿತ ಪ್ರದೇಶದ ಮೇಲಿನ ವಿಪರೀತ ಒತ್ತಡ ವಿಕೇಂದ್ರಿಕರಣಗೊಂಡು ಮುರುಡೇಶ್ವರ ಹಗುರವಾಗುವುದರ ಜೊತೆಗೆ ಮುರುಡೇಶ್ವರ ತನ್ನ ವೈಭವವನ್ನು ಉಳಿಸಿಕೊಳ್ಳಲಿದೆ. ಜೊತೆಗೆ ಮುರುಡೇಶ್ವರದತ್ತ ಮುಖ ಮಾಡುವ ದೇಶಿ ಪ್ರವಾಸಿಗರಷ್ಟೇ ಅಲ್ಲ, ವಿದೇಶಿ ಪ್ರವಾಸಿಗರ ಸಂಖ್ಯೆಯೂ ಏರಿಕೆಯಾಗುವ ಅವಕಾಶ ಇದೆ. ಇದರಿಂದ ಸ್ಥಳೀಯ ಉದ್ಯೋಗಾವಕಾಶಗಳು 3 ಪಟ್ಟು ಹೆಚ್ಚಲಿವೆ. ಮುರುಡೇಶ್ವರದವರೇ ಆದ ಮಂತ್ರಿ ಮಂಕಾಳ ಸ್ವಲ್ಪ ಮುರುಸೊತ್ತು ಮಾಡಿಕೊಂಡು ಮುರುಡೇಶ್ವರದತ್ತ ಗಮನ ಹರಿಸಲಿ ಎನ್ನುವುದು ಇಲ್ಲಿನ ಜನರ ಆಗ್ರಹವಾಗಿದೆ. 


Share: