ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ರೇವಣ್ಣ, ಪ್ರಜ್ವಲ್ ಉಚ್ಚಾಟನೆಗೆ ಜೆಡಿಎಸ್ ಶಾಸಕರ ಪಟ್ಟು

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ರೇವಣ್ಣ, ಪ್ರಜ್ವಲ್ ಉಚ್ಚಾಟನೆಗೆ ಜೆಡಿಎಸ್ ಶಾಸಕರ ಪಟ್ಟು

Tue, 30 Apr 2024 12:54:24  Office Staff   Vb

ಬೆಂಗಳೂರು:  ರಾಜ್ಯದ ಜನತೆಯ ಮುಂದೆ ತಲೆ ತಗ್ಗಿಸುವಂತಹ ಕೆಲಸ ಮಾಡಿದವರನ್ನು ರಾಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಘನತೆಯನ್ನು ಉಳಿಸಬೇಕಿದೆ ಎಂದು ಜೆಡಿಎಸ್ ಶಾಸಕರು ಪಕ್ಷದ ವರಿಷ್ಠರಿಗೆ ಪ್ರಶ್ನೆ ಮಾಡಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್, ಪಕ್ಷದ ರಾಷ್ಟ್ರಾಧ್ಯಕ್ಷರು ಎಚ್.ಡಿ. ದೇವೇಗೌಡರು, ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕಾದ ಸಮಯವಿದಾಗಿದೆ. ನಿಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ 19 ಜನ ಶಾಸಕರ ಭವಿಷ್ಯ ಬೇಕೋ ತಮ್ಮ ಕುಟುಂಬದ ರೇವಣ್ಣ, ಪ್ರಜ್ವಲ್ ಅವರು ಮುಖ್ಯವೋ ತೀರ್ಮಾನಿಸಬೇಕಿದೆ.

24 ಗಂಟೆಗಳಲ್ಲಿ ಆರೋಪ ಹೊತ್ತಿರುವ ರೇವಣ್ಣ ಮತ್ತು ಪ್ರಜ್ವಲ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಸಿದ್ದಾಂತಗಳನ್ನು ಉಳಿಸಿ ಕಾರ್ಯಕರ್ತರನ್ನು, ನಮ್ಮನ್ನು ಮುಜುಗರದಿಂದ ಪಾರು ಮಾಡಲು ಕೋರುತ್ತೇನೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರಿಗೆ ಪತ್ರ ಬರೆದಿರುವ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್, ನಾನು ತುಂಬಾ ಕಿರಿಯ. ಅತ್ಯಂತ ಹಿರಿಯರಾದ ತಮಗೆ ಸಲಹೆ ಕೊಡುವಷ್ಟು ದೊಡ್ಡವನಲ್ಲ. ಆದರೆ ಪರಿಸ್ಥಿತಿ ಹಾಗೆ ಬಂದೊದಗಿದೆ. ಹೀಗಾಗಿ ತಮಗೆ ಪತ್ರ ಬರೆದು ನನ್ನ ಅಂತರಾಳದ ಅಭಿಪ್ರಾಯಗಳನ್ನು ಮುಕ್ತ ಮನಸ್ಸಿನಿಂದ ವ್ಯಕ್ತಪಡಿಸುತ್ತಿರುವೆ.

ಕೆಲವು ದಿನಗಳಿಂದ ರಾಜ್ಯಾದ್ಯಂತ ಹರಿದಾಡುತ್ತಿರುವ ಅಶ್ಲೀಲ ವೀಡಿಯೊ ತುಣುಕುಗಳಿಂದ ಪಕ್ಷಕ್ಕೆ ತೀರಾ ಮುಜುಗರ ಉಂಟಾಗಿದೆ. ಈ ವೀಡಿಯೊ ದೃಶ್ಯಗಳಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಕಾಣಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಅವರು ತಪ್ಪಿತಸ್ಥರೆಂಬ ಭಾವನೆ ಉಂಟಾಗಿದೆ. ಹಾಗಾಗಿ ಅವರನ್ನು ಕೂಡಲೇ ಪಕ್ಷದಿಂದ ಅಮಾನತು ಮಾಡಲು ತಮ್ಮಲ್ಲಿ ಕೋರುತ್ತೇನೆ ಎಂದು ಮನವಿ ಮಾಡಿದ್ದಾರೆ.


Share: