ಲಕ್ನೋ: ಸಂಭಲ್‌ನಲ್ಲಿ ನವೆಂಬರ್ 24ರಂದು ನಡೆದ ಹಿಂಸಾಚಾರದ ತನಿಖೆಗೆ ಮೂವರು ಸದಸ್ಯರ ನ್ಯಾಯಾಂಗ ತನಿಖಾ ಆಯೋಗವನ್ನು ರಚಿಸಲಾಗಿದೆ ಎಂದು ಉತ್ತರಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಪ್ರಕಟಿಸಿದ್ದಾರೆ.
ಅಧಿಸೂಚನೆಯ ದಿನಾಂಕದಿಂದ ಎರಡು ತಿಂಗಳ ಒಳಗೆ ತನಿಖೆಯನ್ನು ಪೂರ್ಣಗೊಳಿಸುವಂತೆ ಆಯೋಗಕ್ಕೆ ನಿರ್ದೇಶಿಸಲಾಗಿದೆ. ಈ ಗಡುವನ್ನು ಯಾವುದೇ ರೀತಿ ಯಲ್ಲಿ ವಿಸ್ತರಿಸುವುದಾದರೆ ಸರಕಾರದ ಅನುಮತಿ ಅಗತ್ಯ ವಿದೆ ಎಂದು ರಾಜ್ಯಪಾಲರ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನವೆಂಬರ್ 28ರಂದು ಜಾರಿಗೊಳಿಸಿದ ಅಧಿಸೂಚನೆಯಲ್ಲಿ ರಾಜ್ಯಪಾಲರು ಸಾರ್ವಜನಿಕ ಹಿತಾಸಕ್ತಿ ಹಾಗೂ ಪಾರದರ್ಶಕತೆಯ ಖಾತರಿ ನೀಡಲು ಕೂಲಂಕಶ ವಿಚಾರಣೆ ನಡೆಸುವ ಅಗತ್ಯದ ಕುರಿತು ಒತ್ತಿ ಹೇಳಿದ್ದಾರೆ.
ಅಲಹಾಬಾದ್ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ದೇವೇಂದ್ರ ಕುಮಾರ್ ಅರೋರಾ ಅವರು ಈ ತನಿಖಾ ಆಯೋಗದ ನೇತೃತ್ವ ವಹಿಸಲಿದ್ದಾರೆ. ಇತರ ಸದಸ್ಯರಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಅಮಿತ್ ಮೋಹನ್ ಪ್ರಸಾದ್ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಅರವಿಂದ ಕುಮಾರ್ ಜೈನ್ ಒಳಗೊಳ್ಳಲಿದ್ದಾರೆ ಎಂದು ಅಧಿಸೂಚನೆ ತಿಳಿಸಿದೆ. ಈ ಘಟನೆ ಚೆನ್ನಾಗಿ ಯೋಜಿಸಲಾದ ಕ್ರಿಮಿನಲ್ ಪಿತೂರಿಯ ಫಲಿತಾಂಶವೇ ಎಂಬುದನ್ನು ನಿರ್ಧರಿಸುವುದು ಸೇರಿದಂತೆ ನಾಲ್ಕು ಪ್ರಮುಖ ವಿಷಯಗಳ ಕುರಿತು ಆಯೋಗವು ಗಮನ ಕೇಂದ್ರೀಕರಿಸಲಿದೆ.
ಇದು ಜಿಲ್ಲಾಡಳಿತ ಹಾಗೂ ಪೊಲೀಸರು ಮಾಡಿರುವ ಕಾನೂನು ಹಾಗೂ ಸುವ್ಯವಸ್ಥೆಯ ಕುರಿತು ತನಿಖೆ ನಡೆಸಲಿದೆ. ಈ ಘಟನೆಯ ಹಿಂದಿನ ಸನ್ನಿವೇಶ ಹಾಗೂ ಕಾರಣಗಳ ಕುರಿತು ವಿಶ್ಲೇಷಿಸಲಿದೆ. ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸುವುದನ್ನು ತಡೆಯುವ ಕ್ರಮಗಳನ್ನು ಶಿಫಾರಸು ಮಾಡಲಿದೆ ಎಂದು ಅವರು ಹೇಳಿದ್ದಾರೆ. ಈ ಆಯೋಗದ ವರದಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯುವಲ್ಲಿ ನಿರ್ಣಾಯಕವಾಗಿದೆ ಎಂದು ಅಧಿಸೂಚನೆ ತಿಳಿಸಿದೆ.