ಹೊಸದಿಲ್ಲಿ: ಪೊಲೀಸರ ಸಾವಿರಾರು ಮತಗಳನ್ನು ಅವರಿಂದ 'ಕದಿಯಲಾಗಿದೆ' ಮತ್ತು ಅವರು ಮುಕ್ತ ಹಾಗೂ ನ್ಯಾಯಸಮ್ಮತ ಮತದಾನದಿಂದ ವಂಚಿತರಾಗಿದ್ದಾರೆ ಎಂದು ಹರ್ಯಾಣ ಪೊಲೀಸ್ ಸಂಘಟನೆ (ಎಚ್‌ಪಿಎಸ್ )ಯು ಹೇಳಿದೆ. ಲೋಕಸಭಾ ಚುನಾವಣೆಯ ಆರನೇ ಹಂತದ ಮತದಾನ ಮೇ 25ರಂದು ಹರ್ಯಾಣದಲ್ಲಿ ನಡೆದಿತ್ತು.
50,000ಕ್ಕೂ ಅಧಿಕ ಹಾಲಿ ಮತ್ತು ಮಾಜಿ ಪೊಲೀಸ್ ಅಧಿಕಾರಿಗಳು ಸದಸ್ಯರಾಗಿರುವ ಎಚ್ ಪಿಎಸ್ ಈ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
ಮತದಾನದ ದಿನದಂದು ಕರ್ತವ್ಯಕ್ಕೆ ನಿಯೋಜಿತ ಪೊಲೀಸ್ ಸಿಬ್ಬಂದಿ ಸಾಮಾನ್ಯವಾಗಿ ಅಂಚೆ ಮತದಾನ ವ್ಯವಸ್ಥೆಯ ಮೂಲಕ ತಮ್ಮ ಮತಗಳನ್ನು ಚಲಾಯಿಸುತ್ತಾರೆ. 'ನಮ್ಮ ಅಂಚೆ ಮತಪತ್ರಗಳಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಆಡಳಿತ ಹಸ್ತಕ್ಷೇಪ ಮಾಡಿರುವ ಆತಂಕವಿದೆ' ಎಂದು ಎಚ್‌ಪಿಎಸ್ ಅಧ್ಯಕ್ಷ ದಿಲಾವರ್ ಸಿಂಗ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
'ನಿಯಮದಂತೆ ನಾವು ಫಾರ್ಮ್ 12ರಲ್ಲಿ ನಮ್ಮ ವಿವರಗಳನ್ನು ಭರ್ತಿ ಮಾಡಬೇಕು ಮತ್ತು ಚುನಾವಣಾ ಅಭ್ಯರ್ಥಿಗಳು ಅಥವಾ ಚುನಾವಣಾ ಏಜೆಂಟರ ಉಪಸ್ಥಿತಿಯಲ್ಲಿ ನಮ್ಮ ಮತಗಳನ್ನು ಚಲಾಯಿಸಬೇಕು' ಎಂದು ತಿಳಿಸಿದ ಸಿಂಗ್, ಆದರೆ ನಾವೇ ಖುದ್ದಾಗಿ ನಮ್ಮ ಮತಗಳನ್ನು ಚಲಾಯಿಸಲು ಅವಕಾಶ ನೀಡುವ ಬದಲು ಪೊಲೀಸರನ್ನು ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಅಥವಾ ಜಿಲ್ಲಾ ಪೊಲೀಸ್ ಕೇಂದ್ರ ಕಚೇರಿಗೆ ಕರೆಸಲಾಗಿತ್ತು ಮತ್ತು ವಿವರಗಳೊಂದಿಗೆ ಅವರ ಫಾರ್ಮ್ 12 ಮತ್ತು ಮುದ್ರೆಯಿಲ್ಲದ ಮತಪತ್ರಗಳನ್ನು ಸಲ್ಲಿಸುವಂತೆ ಸೂಚಿಸಲಾಗಿತ್ತು' ಎಂದು ಆರೋಪಿಸಿದರು.
ಫಾರ್ಮ್ 12 ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿ ಅಂಚೆ ಮತದಾನ ವ್ಯವಸ್ಥೆಯ ಮೂಲಕ ತಮ್ಮ ಮತಗಳನ್ನು ಚಲಾಯಿಸಲು ವಿಧ್ಯುಕ್ತ ಅರ್ಜಿ ನಮೂನೆಯಾಗಿದೆ.
ಎಚ್‌ಪಿಎಸ್ ರಾಜ್ಯ ಚುನಾವಣಾ ಆಯುಕ್ತರಿಗೆ ಸಲ್ಲಿಸಿರುವ ದೂರಿನಲ್ಲಿ, ಪೊಲೀಸ್ ಸಿಬ್ಬಂದಿಯ ಮತಗಳನ್ನು 'ದೋಚಲಾಗಿದೆ' ಎಂದು ಪ್ರತಿಪಾದಿಸಿದೆ. 2019ರ ಸಾರ್ವತ್ರಿಕ ಚುನಾವಣೆಗಳಲ್ಲಿಯೂ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಆಡಳಿತ ಶಾಮೀಲಾಗಿತ್ತು ಎಂದು ಅದು ದೂರಿನಲ್ಲಿ ಆರೋಪಿಸಿದೆ.
ತಮ್ಮ ಫಾರ್ಮ್‌ಗಳನ್ನು ವಿವರಗಳ ಸಹಿತ ಚುನಾವಣಾ ಕೋಶವಾಗಿಯೂ ಕಾರ್ಯ ನಿರ್ವಹಿಸುವ ಪೊಲೀಸ್ ಕಲ್ಯಾಣ ಇಲಾಖೆಗೆ ಸಲ್ಲಿಸುವಂತೆ ಹರ್ಯಾಣ ಡಿಜಿಪಿ ಕರ್ತವ್ಯದಲ್ಲಿದ್ದ ಎಲ್ಲ ಪೊಲೀಸ್ ಸಿಬ್ಬಂದಿಗೆ ಆದೇಶಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
'2019ರಲ್ಲಿ ಅಂಚೆ ಮತದಾನದ ಅನುಭವದಿಂದಾಗಿ ಹಲವಾರು ಪೊಲೀಸ್ ಸಿಬ್ಬಂದಿ ಈ ಸಲ ಮತ ಚಲಾಯಿಸಲು ನಿರಾಕರಿಸಿದ್ದಾರೆ. ನಮ್ಮ ಫಾರ್ಮ್ ಗಳು, ಆಧಾರ ಕಾರ್ಡ್‌ಗಳು ಮತ್ತು ಮತದಾರರ ಗುರುತು ಚೀಟಿಗಳನ್ನು ಎಸ್‌ಪಿ ಕಚೇರಿಯಲ್ಲಿ ಇರಿಸುವಂತೆ ಮಾಡಲಾಗಿತ್ತು ಅದು ಮುಕ್ತ ಮತ್ತು ನ್ಯಾಯಸಮ್ಮತ ಮತದಾನವಲ್ಲ. ಈ ಸಲ ರೋಹಕ್ ಜಿಲ್ಲೆಯೊಂದರಲ್ಲೇ 2,125 ಪೊಲೀಸರ ಪೈಕಿ ಕೇವಲ 148 ಜನರು ಮತ ಚಲಾಯಿಸಿದ್ದಾರೆ, ಇತರರು ಮತದಾನದಿಂದ ದೂರವುಳಿದಿದ್ದರು. ಎಸ್‌ಪಿ ಕಚೇರಿಯು ತಮ್ಮ ದಾಖಲೆಗಳನ್ನು ಸಂಗ್ರಹಿಸಿ ಅವುಗಳನ್ನು ನಿರ್ವಹಿಸುವಾಗ ಅವರೇಕೆ ಮತ ಚಲಾಯಿಸುತ್ತಾರೆ' ಎಂದು ಸಿಂಗ್ ಪ್ರಶ್ನಿಸಿದರು.
ಎಚ್ ಪಿಎಸ್ ತನ್ನ ದೂರು ಮತ್ತು ಪತ್ರಿಕಾ ಪ್ರಕಟಣೆಯೊಂದಿಗೆ ಮಹೇಂದ್ರಗಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಇತ್ತೀಚೆಗೆ ಹೊರಡಿಸಿದ್ದ ನೊಟೀಸನ್ನು ಲಗತ್ತಿಸಿದೆ. ತಮ್ಮ ವಿವರಗಳೊಂದಿಗೆ ಫಾರ್ಮ್ 12 ಮತ್ತು ವೋಟರ್ ಐಡಿಯ ಪ್ರತಿಗಳನ್ನು ಎಸ್‌ಪಿ ಕಚೇರಿಯಲ್ಲಿಯ ಚುನಾವಣಾ ಕೋಶದಲ್ಲಿ ಠೇವಣಿಯಿರಿಸುವಂತೆ ಈ ನೊಟೀಸ್‌ನಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ನಿರ್ದೇಶನ ನೀಡಲಾಗಿದೆ.