ಹೊಸದಿಲ್ಲಿ: 18ನೇ ಲೋಕಸಭಾ ಚುನಾವಣೆಯ ಏಳನೇ ಹಾಗೂ ಅಂತಿಮ ಹಂತದ ಮತದಾನ ಶನಿವಾರ ನಡೆದಿದ್ದು, ಇದರೊಂದಿಗೆ ಆರು ವಾರಗಳ ಸುದೀರ್ಘ ಮತದಾನ ಪ್ರಕ್ರಿಯೆಗೆ ತೆರೆ ಬಿದ್ದಿದೆ. ಇದೀಗ ದೇಶದ ಜನತೆಯ ಚಿತ್ತ ಲೋಕಸಭೆಯ 543 ಕ್ಷೇತ್ರಗಳ ಚುನಾವಣಾ ಫಲಿತಾಂಶದೆಡೆಗೆ ನೆಟ್ಟಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸತತ ಮೂರನೇ ಬಾರಿಗೆ ಅಧಿಕಾರ ಹಿಡಿಯುವ ನಿರೀಕ್ಷೆಯಲ್ಲಿದೆ. ಇದೇ ವೇಳೆ ಪ್ರತಿಪಕ್ಷ ಇಂಡಿಯಾ ಮೈತ್ರಿಕೂಟವು ಎನ್‌ಡಿಎ ಮೈತ್ರಿ ಕೂಟದ ಗೆಲುವಿನ ಓಟಕ್ಕೆ ಕಡಿವಾಣ ಹಾಕುವ ತವಕದಲ್ಲಿದೆ.
ಶನಿವಾರ ನಡೆದ ಅಂತಿಮ ಹಂತದ ಚುನಾವಣೆಯಲ್ಲಿ 57 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ಒಟ್ಟು ಶೇ. 59ಕ್ಕಿಂತಲೂ ಅಧಿಕ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಪಶ್ಚಿಮಬಂಗಾಳ ಹೊರತುಪಡಿಸಿ ಉಳಿದೆಡೆ ಮತದಾನ ಶಾಂತಿಯುತವಾಗಿ ನಡೆದಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.
ಪಶ್ಚಿಮಬಂಗಾಳದಲ್ಲಿ ಅಂತಿಮ ಹಂತದ ಮತದಾನದಲ್ಲಿಯೂ ಹಿಂಸಾಚಾರ ತಾಂಡವವಾಡಿದೆ. ಸಂದೇಶಖಾಲಿ ಪ್ರಾಂತದಲ್ಲಿ ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿಗರ ನಡುವೆ ವ್ಯಾಪಕ ಘರ್ಷಣೆಗಳು ನಡೆದಿರುವ ಬಗ್ಗೆ ವರದಿಗಳು ಬಂದಿವೆ.
ಪ್ರಧಾನಿ ನರೇಂದ್ರ ಮೋದಿಯವರ ಸಕ್ಷೇತ್ರವಾದ ಉತ್ತರಪ್ರದೇಶದ ವಾರಣಾಸಿ ಸೇರಿದಂತೆ ಏಳು ರಾಜ್ಯಗಳು ಹಾಗೂ ಕೇಂದ್ರಾಡಳಿತದ ಚಂಡಿಗಡದಲ್ಲಿ ಇಂದು ಮತದಾನ ನಡೆಯಿತು.
ತೀವ್ರವಾದ ಬಿಸಿಲ ಬೇಗೆಯ ನಡುವೆಯೂ ಹಲವೆಡೆ ಮತದಾರರು ಉತ್ಸಾಹದಿಂದ ಮತಚಲಾಯಿಸಿರುವುದು ಕಂಡುಬಂತು. ಪಂಜಾಬ್‌ನ 13, ಹಿಮಾಚಲಪ್ರದೇಶದ 4, ಉತ್ತರಪ್ರದೇಶ 13, ಪಶ್ಚಿಮಬಂಗಾಳದ 9, ಬಿಹಾರದ ಎಂಟು, ಒಡಿಶಾದ ಆರು, ಜಾರ್ಖಂಡ್‌ನ ಮೂರು, ಚಂಡಿಗಡದ ಒಂದು ಕ್ಷೇತ್ರಗಳಿಗೆ ಮತದಾನ ನಡೆಯಿತು.
ಲೋಕಸಭಾ ಚುನಾವಣೆಗಳ ಜೊತೆಗೆ ವಿಧಾನಸಬಾ ಚುನಾವಣೆಗಳನ್ನು ಎದುರಿಸುತ್ತಿರುವ ಒಡಿಶಾದ ಉಳಿದ 42 ಅಸೆಂಬ್ಲಿ ಕ್ಷೇತ್ರಗಳಿಗೂ ಹಾಗೂ ಹಿಮಾಚಲ ಪ್ರದೇಶದ ಆರು ಕ್ಷೇತ್ರಗಳ ಉಪಚುನಾವಣೆಗೂ ಇಂದು ಏಕಕಾಲದಲ್ಲಿ ಮತದಾನ ನಡೆಯಿತು.
ಎಪ್ರಿಲ್ 19ರಂದು ಮೊದಲ ಹಂತದ ಮತದಾನದೊಂದಿಗೆ, ದೇಶದ ಪ್ರಜಾಪ್ರಭುತ್ವದ ಹಬ್ಬಕ್ಕೆ ಚಾಲನೆ ದೊರೆತಿತ್ತು. ಲೋಕಸಭಾ ಚುನಾವಣೆಗಳ ಜೊತೆಗೆ ಒಡಿಶಾ ಮಾತ್ರವಲ್ಲದೆ ಆಂಧ್ರಪ್ರದೇಶ, ಅರುಣಾಚಲಪ್ರದೇಶ ಹಾಗೂ ಸಿಕ್ಕಿಂ ವಿಧಾನಸಭೆಗಳಿಗೂ ಚುನಾವಣೆ ನಡೆದಿದೆ.
ಜೂನ್ 4ರಂದು ಮತ ಎಣಿಕೆ ನಡೆಯಲಿದ್ದು, ಬಹುತೇಕ ಲೋಕಸಭಾ ಕ್ಷೇತ್ರಗಳ ಫಲಿತಾಂಶ ಅಂದೇ ಹೊರಬೀಳಲಿದೆ.