ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ದಿಲ್ಲಿ: ವಿಮಾನ ನಿಲ್ದಾಣದ ಮೇಲ್ಪಾವಣಿ ಕುಸಿತ; ಓರ್ವ ಸಾವು; 8 ಮಂದಿಗೆ ಗಾಯ

ದಿಲ್ಲಿ: ವಿಮಾನ ನಿಲ್ದಾಣದ ಮೇಲ್ಪಾವಣಿ ಕುಸಿತ; ಓರ್ವ ಸಾವು; 8 ಮಂದಿಗೆ ಗಾಯ

Sat, 29 Jun 2024 13:54:20  Office Staff   Vb

ಹೊಸದಿಲ್ಲಿ: ಶುಕ್ರವಾರ ಬೆಳಗ್ಗೆ ಸುರಿದ ಭಾರೀ ಮಳೆಗೆ ದಿಲ್ಲಿಯ ಇಂದಿರಾ ಗಾಂಧಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಒಂದನೇ ಟರ್ಮಿನಲ್‌ ಮೇಲ್ಟಾವಣಿಯ ಒಂದು ಭಾಗ ಕುಸಿದು ಕಾರುಗಳ ಮೇಲೆ ಮೇಲೆ ಬಿದ್ದಿದ್ದು, ಕನಿಷ್ಠ ಒಬ್ಬರು ಮೃತಪಟ್ಟಿದ್ದಾರೆ ಮತ್ತು 8 ಮಂದಿ ಗಾಯಗೊಂಡಿದ್ದಾರೆ.

ಜಗತ್ತಿನ ಅತ್ಯಂತ ಚಟುವಟಿಕೆಗಳ ವಿಮಾನ ನಿಲ್ದಾಣಗಳ ಪೈಕಿ ಒಂದಾಗಿರುವ ಈ ವಿಮಾನ ನಿಲ್ದಾಣದ ಒಂದನೇ ಟರ್ಮಿನಲ್ ನಿಂದ ಹೊರಡುವ ಮತ್ತು ಆಗಮಿಸುವ ಎಲ್ಲಾ ವಿಮಾನಗಳನ್ನು ಮಧ್ಯಾಹ್ನ ಎರಡು ಗಂಟೆಯವರೆಗೆ ರದ್ದುಪಡಿಸಲಾಗಿತ್ತು ಎಂದು ವಿಮಾನ ನಿಲ್ದಾಣವನ್ನು ಪರಿಶೀಲಿಸಿದ ಬಳಿಕ, ಕೇಂದ್ರ ನಾಗರಿಕ ವಾಯುಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಪು ಹೇಳಿದರು.

ವಿಮಾನ ನಿಲ್ದಾಣದ ಮೇಲ್ಪಾವಣಿಯ ಶೀಟ್ ಮತ್ತು ತೊಲೆಗಳು ಕುಸಿದು, ಟರ್ಮಿನಲ್‌ ಪಿಕ್‌ ಅಪ್ ಮತ್ತು ಡ್ರಾಪ್ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ನಾಲ್ಕು ಕಾರುಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯಾಹ್ನ 2 ಗಂಟೆಯ ಬಳಿಕ ಟರ್ಮಿನಲ್ ಒಂದರಿಂದ ಹೊರಡಬೇಕಾಗಿರುವ ವಿಮಾನಗಳು ಟರ್ಮಿನಲ್ 2 ಮತ್ತು ಟರ್ಮಿನಲ್ 3ರಿಂದ ಹೊರಡುತ್ತವೆ ಎಂದು ಸಚಿವರು ತಿಳಿಸಿದರು.

ಟರ್ಮಿನಲ್ ಒಂದರಲ್ಲಿ ಎಲ್ಲಾ ವಿಮಾನಗಳ ಹಾರಾಟ ಮತ್ತು ಭೂಸ್ಪರ್ಶವನ್ನು ಮುಂದಿನ ಸೂಚನೆಯವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ದಿಲ್ಲಿ ವಿಮಾನ ನಿಲ್ದಾಣದ ವಕ್ತಾರರೊಬ್ಬರು ತಿಳಿಸಿದರು. ಆ ವಿಮಾನಗಳ ಹಾರಾಟಗಳನ್ನು ಟರ್ಮಿನಲ್ 2 ಮತ್ತು ಟರ್ಮಿನಲ್ 3ಕ್ಕೆ ಸ್ಥಳಾಂತರಿಸಲಾಗಿದೆ. ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 20 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ತಲಾ 3 ಲಕ್ಷ ರೂ. ಪರಿಹಾರವನ್ನು ವಾಯುಯಾನ ಸಚಿವರು ಘೋಷಿಸಿದರು.


Share: