ಡೆಹ್ರಾಡೂನ್(ಉತ್ತರಾಖಂಡ) : ಸಂಘ ಪರಿವಾರ ಕಾರ್ಯಕರ್ತರ ಗುಂಪೊಂದು ರವಿವಾರ ಇಲ್ಲಿ ಕ್ರೈಸ್ತ ಪ್ರಾರ್ಥನಾ ಸಭೆ ನಡೆಯುತ್ತಿದ್ದ ಮನೆಯ ಮೇಲೆ ದಾಳಿ ನಡೆಸಿದೆ. ಕನಿಷ್ಠ ಏಳು ಜನರ ಮೇಲೆ ಹಲ್ಲೆ ನಡೆಸಿದ ಗುಂಪು ಮನೆಯಲ್ಲಿ ದಾಂಧಲೆಗೈದಿದ್ದು, ಮನೆಯವರು ಇನ್ನೂ ಆಘಾತದಿಂದ ಹೊರಬಂದಿಲ್ಲ.
ಇಲ್ಲಿಯ ನೆಹರೂ ಕಾಲನಿ ಪೋಲಿಸ್ ಠಾಣಾ ವ್ಯಾಪ್ತಿಯ ನಿವಾಸಿ ದೀಕ್ಷಾ ಪೌಲ್ (35) ಎನ್ನುವವರ ಮನೆಯಲ್ಲಿ ಈ ಅಹಿತಕರ ಘಟನೆ ಸಂಭವಿಸಿದೆ. ಗುಂಪು ಪ್ರಾರ್ಥನಾ ಕೊಠಡಿ ಮತ್ತು ಬೆಡ್‌ರೂಮ್ ನಲ್ಲಿ ದಾಂಧಲೆ ನಡೆಸಿದ್ದು, ಕ್ರಿಶ್ಚಿಯನ್ ಧರ್ಮವನ್ನು ನಿಂದಿಸಿದ್ದಲ್ಲದೆ, ಬಲವಂತದ ಮತಾಂತರದ ಆರೋಪಗಳನ್ನು ಹೊರಿಸಿತ್ತು.
ಈ ಸಂಬಂಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ದೇವೇಂದ್ರ ದೋಭಲ್, ಬಿಜೇಂದ್ರ ಥಾಪಾ, ಸುಧೀರ್ ಥಾಪಾ, ಸಂಜೀವ್ ಪಾಲ್, ಸುಧೀರ ಪಾಲ್, ಧೀರೇಂದ್ರ ದೋಭಲ್, ಅರ್ಮಾನ್ ದೋಭಲ್, ಆರ್ಯಮಾನ್ ದೋಭಲ್, ಅನಿಲ್ ಹಿಂದು, ಭೂಪೇಶ್ ಜೋಶಿ ಮತ್ತು ಬಿಜೇಂದ್ರ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ.
ದಾಳಿಗೊಳಗಾದ ಮನೆಯಲ್ಲಿ ಧಾರ್ಮಿಕ ಮತಾಂತರ ನಡೆಯುತ್ತಿರಲಿಲ್ಲ, ಸಂಘ ಪರಿವಾರದ ಕಾರ್ಯಕರ್ತರು ಕುಟುಂಬದ ಸದಸ್ಯರೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಾರೆ ಮತ್ತು ದಾಂಧಲೆ ನಡೆಸಿದ್ದಾರೆ ಎಂದು ಪೊಲೀಸ್ ತನಿಖಾಧಿಕಾರಿ ಸತ್ಬೀರ್ ಸಿಂಗ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಗುಂಪು ಶಿಲುಬೆಯನ್ನಿರಿಸಿದ್ದ ವೇದಿಕೆ ಮತ್ತು ಸಂಗೀತ ಉಪಕರಣಗಳನ್ನು ಧ್ವಂಸಗೊಳಿಸುತ್ತಿರುವುದನ್ನು ಹಾಗೂ ಸಭೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ವೀಡಿಯೊ ತೋರಿಸಿದೆ.
ದೀಕ್ಷಾರ ಪತಿ ರಾಜೇಶ್ ಭೂಮಿ ಪ್ಯಾಸ್ಟರ್ ಆಗಿದ್ದು, ಹರಿದ್ವಾರದಲ್ಲಿ ಹೋಟೆಲ್ ಹೊಂದಿದ್ದಾರೆ. ಅವರು ಮಕ್ಕಳೊಂದಿಗೂ ಅನುಚಿತವಾಗಿ ನಡೆದುಕೊಂಡಿದ್ದರು. ಅವರ ತಲೆಗಳಿಗೆ ಹೊಡೆದು ಈ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದೇಕೆ ಎಂದು ಪ್ರಶ್ನಿಸಿದ್ದರು. ಭವಿಷ್ಯದಲ್ಲಿ ರವಿವಾರದ ಪ್ರಾರ್ಥನೆಗಳಲ್ಲಿ ಎಂದೂ ಭಾಗವಹಿಸದಂತೆ ಎಚ್ಚರಿಕೆ ನೀಡಿದ್ದರು ಎಂದು ರಾಜೇಶ್ ತಿಳಿಸಿದರು.
ದೇವೇಂದ್ರ ದೋಭಲ್ ಗುಂಪಿನ ನೇತೃತ್ವ ವಹಿಸಿದ್ದ ಎಂದು ದೀಕ್ಷಾ ತಿಳಿಸಿದರು. ದೋಭಲ್‌ನ ಫೇಸ್‌ಬುಕ್ ಪ್ರೊಫೈಲ್ ಪ್ರಕಾರ ಆತ ಮಾಜಿ ಸೈನಿಕ ಮತ್ತು ಆರೆಸ್ಸೆಸ್ ಪದಾಧಿಕಾರಿಯಾಗಿದ್ದಾನೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಡೆಹ್ರಾಡೂನ್ ವಿಹಿಂಪ ಮುಖ್ಯಸ್ಥ ವಿಕಾಶ್ ವರ್ಮಾ, ಕೆಲವು ಆರೋಪಿಗಳು ಸಂಘ ಪರಿವಾರದ ಸದಸ್ಯರಾಗಿದ್ದಾರೆ ಎನ್ನುವುದು ನಿಜ. ಉತ್ತರಾಖಂಡದಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಮತಾಂತರ ಪ್ರಕರಣಗಳಿಗೆ ಕಡಿವಾಣ ಹಾಕಲು ಅವರು ಸ್ವಯಂಪ್ರೇರಿತರಾಗಿ ಈ ಕ್ರಮ ಕೈಗೊಂಡಿದ್ದರು ಎಂದು ಸಮರ್ಥಿಸಿಕೊಂಡರು.
ಆದರೆ, ಕುಟುಂಬವು ಧಾರ್ಮಿಕ ಮತಾಂತರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆ ಪೊಲೀಸರನ್ನು ಸಂಪರ್ಕಿಸಬೇಕಿತ್ತು. ಈ ಘಟನೆಯು ಕುಟುಂಬಕ್ಕೆ ಆಘಾತವನ್ನುಂಟು ಮಾಡಿದೆ ಎಂದು ಪೊಲೀಸ್ ಅಧಿಕಾರಿ ಸತೀರ್ ಸಿಂಗ್ ಹೇಳಿದರು.
ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ಶೀಘ್ರವೇ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.