ಹೊಸದಿಲ್ಲಿ: ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ವಿಶಿಷ್ಟ ಸಂಖ್ಯೆಗಳು ಸೇರಿದಂತೆ ಚುನಾವಣಾ ಬಾಂಡ್‌ಗಳ ಸಂಪೂರ್ಣ ವಿವರಗಳನ್ನು ಗುರುವಾರ ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ.
ತನ್ನ ಬಳಿಯಿರುವ ಚುನಾವಣಾ ಬಾಂಡ್‌ಗಳ ಎಲ್ಲ ವಿವರಗಳನ್ನು ಸಂಪೂರ್ಣವಾಗಿ ಬಹಿರಂಗಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯವು ಮಾ.18ರಂದು ಎಸ್‌ಬಿಐಗೆ ಸೂಚಿಸಿತ್ತು. ಇದರೊಂದಿಗೆ ಬಾಂಡ್ ಖರೀದಿಸಿದವರ ಹೆಸರು, ಬಾಂಡ್‌ನ ಮುಖಬೆಲೆ ಮತ್ತು ನಿರ್ದಿಷ್ಟ ಸಂಖ್ಯೆ, ಬಾಂಡ್‌ನ್ನು ನಗದೀಕರಿಸಿದ ಪಕ್ಷದ ಹೆಸರು, ರಾಜಕೀಯ ಪಕ್ಷಗಳ ಬ್ಯಾಂಕ್ ಖಾತೆ ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳು ಹಾಗೂ ನಗದೀಕರಿಸಿದ ಬಾಂಡ್ ಗಳ ಮುಖಬೆಲೆ ಮತ್ತು ಸಂಖ್ಯೆ: ಹೀಗೆ ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದ ಐದು ವಿಷಯಗಳು ಬಹಿರಂಗಗೊಳ್ಳಲಿವೆ.
ಚುನಾವಣಾ ಬಾಂಡ್‌ಗಳ ಎಲ್ಲ ವಿವರಗಳನ್ನು ತಾನು ಚುನಾವಣಾ ಆಯೋಗಕ್ಕೆ ಒಪ್ಪಿಸಿರುವುದಾಗಿ ಎಸ್‌ಬಿಐ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದೆ.
ರಾಜಕೀಯ ಪಕ್ಷಗಳ ಸಂಪೂರ್ಣ ಬ್ಯಾಂಕ್ ಖಾತೆ ಸಂಖ್ಯೆಗಳು ಮತ್ತು ಕೆವೈಸಿ(ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ವಿವರಗಳನ್ನು ಬಹಿರಂಗಗೊಳಿಸಿಲ್ಲ,ಹಾಗೆ ಮಾಡಿದರೆ ಖಾತೆಗಳ ಭದ್ರತೆ (ಸೈಬರ್ ಸೆಕ್ಯೂರಿಟಿ)ಗೆ ಧಕ್ಕೆಯುಂಟಾಗಬಹುದು. ಇದೇ ರೀತಿ ಖರೀದಿದಾರರ ಕೆವೈಸಿ ವಿವರಗಳನ್ನೂ ಬಹಿರಂಗಗೊಳಿಸಿಲ್ಲ. ಆದಾಗ್ಯೂ ರಾಜಕೀಯ ಪಕ್ಷಗಳನ್ನು ಗುರುತಿಸಲು ಇವು ಅಗತ್ಯವಲ್ಲ ಎಂದು ಎಸ್‌ಬಿಐ ಅಫಿಡವಿಟ್‌ನಲ್ಲಿ ತಿಳಿಸಿದೆ.
ಕೆವೈಸಿ ವಿವರಗಳು ಮತ್ತು ಸಂಪೂರ್ಣ ಬ್ಯಾಂಕ್ ಖಾತೆ ಸಂಖ್ಯೆಗಳನ್ನು ಹೊರತುಪಡಿಸಿದರೆ ಬ್ಯಾಂಕಿನ ಬಳಿ ಈಗ ಬಹಿರಂಗಗೊಳಿಸದ ಯಾವುದೇ ವಿವರಗಳಿಲ್ಲ ಎಂದು ಎಸ್‌ಬಿಐ ಅಧ್ಯಕ್ಷರು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ವಿಶಿಷ್ಟ ಆಲ್ಫಾನ್ಯೂಮರಿಕ್ (ಅಕ್ಷರಸಂಖ್ಯಾಯುಕ್ತ) ಸಂಖ್ಯೆಗಳು ಬಾಂಡ್‌ನ್ನು ಗುರುತಿಸಲು ಮತ್ತು ಅದು ಯಾವ ಪಕ್ಷದ ಪಾಲಾಗಿದೆ ಎನ್ನುವುದನ್ನು ತಿಳಿದುಕೊಳ್ಳಲು ನೆರವಾಗುತ್ತವೆ.
ಈ ಸಂಖ್ಯೆಗಳನ್ನು ತಡೆಹಿಡಿಯುವ ಮೂಲಕ ಎಸ್‌ಬಿಐ ತನ್ನ ಮಾ.11ರ ಆದೇಶವನ್ನು ಸಂಪೂರ್ಣವಾಗಿ ಪಾಲಿಸಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿತ್ತು. ಚುನಾವಣಾ ಬಾಂಡ್‌ಗಳ ಎಲ್ಲ ವಿವರಗಳನ್ನು ಬಹಿರಂಗಗೊಳಿಸುವಂತೆ ಅದು ತನ್ನ ಮಾ.11ರ ಆದೇಶದಲ್ಲಿ ಎಸ್‌ಬಿಐಗೆ ಸೂಚಿಸಿತ್ತು.