ಭಟ್ಕಳ : ಚಾಲಕನ ನಿರ್ಲಕ್ಷತನದಿಂದಾಗಿ ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದು ವಿದ್ಯಾರ್ಥಿನಿ ಗಾಯಗೊಂಡ ಘಟನೆ ತಾಲೂಕಿನ ಶಿರಾಲಿಯಲ್ಲಿ ವರದಿಯಾಗಿದೆ.
ಬಸ್ ಹತ್ತುವ ಮೊದಲೇ ಚಾಲಕ ಬಸ್ ಚಲಾಯಿಸಿಕೊಂಡು ಹೋದ ಹಿನ್ನೆಲೆ ವಿದ್ಯಾರ್ಥಿನಿ ಬಸ್ ನಿಂದ ಬಿದ್ದು ಗಾಯಗೊಂಡಿದ್ದಾಳೆ ಎಂದು ವಿದ್ಯಾರ್ಥಿನಿಯ ಪಾಲಕರು ಆರೋಪಿಸಿದ್ದಾರೆ.
ಭಟ್ಕಳ ತಾಲೂಕಿನ ಮೂಡಶಿರಾಲಿಯ ಚಿತ್ರಾ ಮಂಜುನಾಥ ನಾಯ್ಕ ಎಂಬ ವಿದ್ಯಾರ್ಥಿನಿ ಬೈಂದೂರು ಪಿಯು ಕಾಲೇಜಿನಲ್ಲಿ ಪ್ರಥಮ ವರ್ಷದ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಎಂದಿನಂತೆ ಶುಕ್ರವಾರ ಬೆಳಿಗ್ಗೆ ಕಾಲೇಜಿಗೆ ತೆರಳಲು ಶಿರಾಲಿಯಲ್ಲಿ ಬಸ್ಸಿಗೆ ಕಾಯುತ್ತಿದ್ದಳು. ಬೆಳಿಗ್ಗೆ ೭.೧೫ರ ಸುಮಾರಿಗೆ ಕುಮಟಾ ಕಡೆಯಿಂದ ಭಟ್ಕಳ ಕಡೆಗೆ ತೆರಳುತ್ತಿದ್ದ ಜನಸ್ನೇಹಿ ಬಸ್ ಶಿರಾಲಿಯಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ಭಟ್ಕಳದ ಕಡೆ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳೊಂದಿಗೆ ಈಕೆ ಕೂಡ ಬಸ್ ಹತ್ತಲು ಮುಂದಾಗಿದ್ದಾಳೆ. ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿನಿ ಬಸ್ ಹತ್ತುವ ಮೊದಲೇ ಬಸ್ ಚಾಲಕ ಬಸ್ ಚಲಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ. ಬಸ್ ಹತ್ತುತ್ತಿದ್ದ ವಿದ್ಯಾರ್ಥಿನಿ ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದು ಗಾಯಗೊಂಡಿದ್ದಾಳೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಬಸ್ ನಿಂದ ಬಿದ್ದ ವಿದ್ಯಾರ್ಥಿನಿಯ ಎರಡೂ ಮೊಣ ಕಾಲು ಹಾಗೂ ಮುಖದ ಗಲ್ಲಕ್ಕೆ ಗಾಯವಾಗಿದೆ. ತಕ್ಷಣ ಆಕೆಯನ್ನು ಶಿರಾಲಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದ್ದಾರೆ.