ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

Tue, 23 Apr 2024 13:10:24  Office Staff   Vb

ಗದಗ: ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಮನೆಮಂದಿಯ ಹತ್ಯೆಗೆ ನಗರಸಭೆ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಪ್ರಕಾಶ್ ಬಾಕಳೆಯವರ ಮೊದಲ ಪತ್ನಿಯ ಹಿರಿಯ ಪುತ್ರ ವಿನಾಯಕ್ ಬಾಕಳೆ ಸುಪಾರಿ ನೀಡಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಪ್ರಕಾಶ್ ಬಾಕಳೆಯವರ ಪುತ್ರ ವಿನಾಯಕ್ ಬಾಕಳೆ(31), ಗದಗ ನಿವಾಸಿಗಳಾದ ಫೈರೋಝ್ ಖಾಜಿ (29), ಜಿಶಾನ್ ಖಾಜಿ (24), ಮಹಾರಾಷ್ಟ್ರದ ಮೀರಜ್‌ನ ನಿವಾಸಿಗಳಾದ ಸಾಹಿಲ್ ಖಾಜಿ (19), ಸುಹೈಲ್ ಖಾಜಿ (18), ಸುಲ್ತಾನ್ ಶೇಕ್ (23), ಮಹೇಶ್ ಜಗನ್ನಾಥ ಸಾಳೊಂಕೆ (21) ಹಾಗೂ ವಾಹಿದ್ ಬೇಪಾರಿ (21) ಎಂಬವರನ್ನು ಬಂಧಿಸಲಾಗಿದೆ ಎಂದು ಉತ್ತರ ವಲಯದ ಐಜಿಪಿ ವಿಕಾಸ್ ಕುಮಾರ್ ವಿಕಾಸ್ ಮಾಹಿತಿ ನೀಡಿದ್ದಾರೆ.

ಸೋಮವಾರ ಎಸ್ಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರು ತಿಂಗಳ ಹಿಂದೆ ವಿನಾಯಕ್ ಹಾಗೂ ಅವರ ತಂದೆ ಪ್ರಕಾಶ್ ಬಾಕಳೆ ಮಧ್ಯೆ ಆಸ್ತಿ ವಿಚಾರವಾಗಿ ಮನಸ್ತಾಪ ಉಂಟಾಗಿತ್ತು.

ತನ್ನ ಅನುಮತಿ ಇಲ್ಲದೆ ಆಸ್ತಿ ಮಾರಾಟ ಮಾಡಬಾರದು ಎಂದು ವಿನಾಯಕನಿಗೆ ತಂದೆ ಪ್ರಕಾಶ್ ಬಾಕಳೆ ಎಚ್ಚರಿಕೆ ನೀಡಿದ್ದರು. ಇದರಿಂದ ಕೋಪಗೊಂಡಿದ್ದ ವಿನಾಯಕ್ ಬಾಕಳೆಯು ಪ್ರಕಾಶ್ ಬಾಕಳೆ, ಮಲತಾಯಿ ಸುನಂದಾ ಬಾಕಳೆ ಮತ್ತು ಅವರ ಪುತ್ರ ಕಾರ್ತಿಕ್ ಬಾಕಳೆ ಕೊಲೆಗೆ ಸಂಚು ರೂಪಿಸಿದ್ದ. ಇದಕ್ಕಾಗಿ ಫೈರೋಝ್ ಖಾಜಿಗೆ ಸುಪಾರಿ ನೀಡಿದ್ದು, 65 ಲಕ್ಷ ರೂ.ಗೆ ಮಾತುಕತೆ ನಡೆಸಿ ಮುಂಗಡವಾಗಿ 2 ಲಕ್ಷ ರೂ. ನೀಡಿದ್ದ. ಅದರಂತೆ ದುಷ್ಕರ್ಮಿಗಳು ಎ.19ರಂದು ಬೆಳಗ್ಗಿನ ಜಾವ ಪ್ರಕಾಶ್ ಬಾಕಳೆಯ ಮನೆಗೆ ನುಗ್ಗಿ ಕಾರ್ತಿಕ್ ಬಾಕಳೆ (28), ಸಂಬಂಧಿಕ ಪರಶುರಾಮ್ ಹಾದಿಮನಿ (55), ಪತ್ನಿ ಲಕ್ಷ್ಮೀ ಹಾದಿಮನಿ (45) ಹಾಗೂ ಪುತ್ರಿ ಆಕಾಂಕ್ಷಾ (16)ಳನ್ನು ಹತ್ಯೆ ಮಾಡಿ ಪರಾರಿಯಾಗಿದ್ದರು.

ಕಳೆದ ಮೂರು ದಿನಗಳಿಂದ ಕಾರ್ಯಾಚರಣೆಗೆ ಇಳಿದಿದ್ದಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ನೇತೃತ್ವದಲ್ಲಿನ ಗದಗ ಹೆಚ್ಚುವರಿ ಎಸ್ಪಿ ಎಂ.ಬಿ.ಸಂಕದ, ಧಾರವಾಡ ಹೆಚ್ಚುವರಿ ಆಯುಕ್ತ ನಾರಾಯಣ ಬರಮನಿ, ಬಾಗಲಕೋಟ ಹೆಚ್ಚುವರಿ ಎಸ್ಪಿ ಹಾಗೂ ಗದಗ ಡಿವೈಎಸ್ಪಿ ಜೆ.ಎಚ್. ಇನಾಮದಾರ ನೇತೃತ್ವದ ಪೊಲೀಸರ ತಂಡ ಕೃತ್ಯ ನಡೆದ 72 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ಕೊಲೆಯ ಬಳಿಕ ಪರಾರಿಯಾಗಲು ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಐಜಿಪಿ ಮಾಹಿತಿ ನೀಡಿದರು.

ಈ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಡಿಜಿ, ಐಜಿಪಿ ಅಲೋಕ್ ಮೋಹನ್ 5 ಲಕ್ಷ ರೂ. ಬಹುಮಾನ ಘೋಷಣೆ ಮಾಡಿರುವುದಾಗಿ ವಿಕಾಸ್ ಕುಮಾರ್ ವಿಕಾಸ್ ಪ್ರಕಟಿಸಿದ್ದಾರೆ.


Share: