ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕುವೈತ್: ಕಾರ್ಮಿಕರ ವಸತಿ ಕಟ್ಟಡದಲ್ಲಿ ಭೀಕರ ಅಗ್ನಿ ದುರಂತ; ಕನಿಷ್ಠ 49 ಭಾರತೀಯರ ಸಾವು

ಕುವೈತ್: ಕಾರ್ಮಿಕರ ವಸತಿ ಕಟ್ಟಡದಲ್ಲಿ ಭೀಕರ ಅಗ್ನಿ ದುರಂತ; ಕನಿಷ್ಠ 49 ಭಾರತೀಯರ ಸಾವು

Thu, 13 Jun 2024 18:47:08  Office Staff   Vb

ಕುವೈತ್ ನಗರ: ಕುವೈತ್‌ನಲ್ಲಿ ಕಾರ್ಮಿಕರ ವಸತಿ ಕಟ್ಟಡವೊಂದರಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿದುರಂತದಲ್ಲಿ ಬಹುತೇಕ ಭಾರತೀಯರು ಸೇರಿದಂತೆ ಕನಿಷ್ಠ 49 ಮಂದಿ ಮೃತಪಟ್ಟಿದ್ದಾರೆ ಹಾಗೂ 50ಕ್ಕೂ ಅಧಿಕ ಮಂದಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಕುವೈತ್‌ನ ಮಂಗಾಫ್ ಪ್ರದೇಶದಲ್ಲಿರುವ ಈ ಆರು ಅಂತಸ್ತಿನ ಕಟ್ಟಡದಲ್ಲಿ ಸುಮಾರು 200 ಮಂದಿ ಕಾರ್ಮಿಕರು ವಾಸವಾಗಿದ್ದರು.

ನಸುಕಿನ ವೇಳೆಗೆ ಕಟ್ಟಡದ ತಳಅಂತಸ್ತಿನಲ್ಲಿ ರುವ ಅಡುಗೆಕೋಣೆಯೊಂದರಲ್ಲಿ ಬೆಂಕಿ ಮೊದಲಿಗೆ ಕಾಣಿಸಿಕೊಂಡಿದ್ದು, ಕ್ಷಣಮಾತ್ರದಲ್ಲಿ ಅದು ಇಡೀ ಕಟ್ಟಡಕ್ಕೆ ಹರಡಿತ್ತು. ಕಟ್ಟಡದ ನಿವಾಸಿಗಳು ಮಲಗಿದ್ದಾಗ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಹೆಚ್ಚು ಮಂದಿ ದಟ್ಟವಾದ ಹೊಗೆಯಿಂದಾಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಲ್ಲಿ ಏಳು ಮಂದಿಯ ಪರಿಸ್ಥಿತಿ ಚಿಂತಾಜನಕವಾಗಿದೆಯೆಂದು ಅವರು ಹೇಳಿದ್ದಾರೆ.

ಅಡುಗೆ ಅನಿಲ ಸಿಲಿಂಡ‌ರ್ ಸ್ಫೋಟದಿಂದ ಬೆಂಕಿ ಅವಘಡ ಸಂಭವಿಸಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಮೂಲಗಳು ತಿಳಿಸಿವೆ. ಈ ಕಟ್ಟಡದಲ್ಲಿ 200 ಕಾರ್ಮಿಕರು ವಾಸವಾಗಿದ್ದರು.

ಕುವೈತ್‌ನ ಕ್ರಿಮಿನಲ್ ಪುರಾವೆ ಇಲಾಖೆಯ ಸಿಬ್ಬಂದಿ ಪ್ರಸಕ್ತ ಮೃತದೇಹಗಳನ್ನು ಗುರುತಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಹಾಗೂ ಕಾನೂನುಗಳ ಉಲ್ಲಂಘನೆಗಾಗಿ ಕಟ್ಟಡದ ಮಾಲಕರ ವಿರುದ್ದ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅವಘಡದಲ್ಲಿ ಮೃತಪಟ್ಟ ಭಾರತೀಯರಲ್ಲಿ ಹೆಚ್ಚಿನವರು ಕೇರಳ, ತಮಿಳುನಾಡು ಹಾಗೂ ಉತ್ತರ ಭಾರತದ ರಾಜ್ಯಗಳಿಗೆ ಸೇರಿದವರಾಗಿದ್ದು, 20ರಿಂದ 50 ವರ್ಷದೊಳಗಿನ ಪ್ರಾಯದವರೆಂದು ತಿಳಿದುಬಂದಿದೆ.

ಧಗಧಗನೆ ಹೊತ್ತಿ ಉರಿಯುತ್ತಿದ್ದ ಕಟ್ಟಡದಿಂದ ನಿವಾಸಿಗಳನ್ನು ರಕ್ಷಿಸುವ ಕಾರ್ಯಾಚರಣೆ ವೇಳೆ ಐದು ಮಂದಿ ಅಗ್ನಿಶಾಮಕದಳದ ಸಿಬ್ಬಂದಿ ಗಾಯಗೊಂಡಿದ್ದಾರೆ.

ಮೃತರಲ್ಲಿ ಕನಿಷ್ಠ 11 ಮಂದಿ ಕೇರಳೀಯರು: ಕುವೈತ್‌ನ ಮಂಗಾಫ್‌ನ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದವರಲ್ಲಿ ಕನಿಷ್ಠ 11 ಮಂದಿ ಕೇರಳೀಯರೆಂದು ತಿಳಿದುಬಂದಿದೆ. ಇವರಲ್ಲಿ ಆರು ಮಂದಿಯ ಮೃತದೇಹಗಳ ಗುರುತು ಪತ್ತೆಯಾಗಿದೆ. ಕೊಲ್ಲಂ ಆಯೂರ್ ನಿವಾಸಿ ಉಮರುದ್ದೀನ್ ಶಮೀರ್ (33), ಪಂದಂಳಂ ನಿವಾಸಿ ಆಕಾಶ್ ಶಶಿಧರನ್ ನಾಯರ್ (23) ಹಾಗೂ ಕಾಸರಗೋಡು ಚೆರ್ಕಳ ನಿವಾಸಿ ರಂಜಿತ್ ಕುಂಡಡ್ಕ (23), ಪತ್ತನಂತಿಟ್ಟ ನಿವಾಸಿ ಪಿ.ವಿ. ಮುರಳೀಧರನ್ ಹಾಗೂ ಕೊಟ್ಟಾಯಂ ನಿವಾಸಿ ಸ್ಟೀಫನ್ ಅಬ್ರಹಾಂ ಬಾಬು (29), ಕುಂ ಕೇಳು(55) ಅವರ ಮೃತದೇಹಗಳ ಗುರುತು ಪತ್ತೆಯಾಗಿದೆ.

ಸಹಾಯವಾಣಿ ಆರಂಭ: ಕುವೈತ್‌ನ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ ಸಂಬಂಧಿಸಿದ ವಿವರಗಳನ್ನು ಸಂತ್ರಸ್ತರ ಬಂಧುಗಳಿಗೆ ತಿಳಿಸಲು ಭಾರತ ಸರಕಾರ +96565505246 ಸಂಖ್ಯೆಯ ಹೆಲ್ಸ್‌ಲೈನ್ ಆರಂಭಿಸಿದೆ. ದುರಂತಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿಯವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೂ ಸಮಾಲೋಚನೆ ನಡೆಸಿದ್ದಾರೆ. ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಳನ್ನು ಏಕೀಕರಣಗೊಳಿಸಲು ಭಾರತೀಯ ರಾಯಭಾರಿ ಕಚೇರಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆಯೆಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.


Share: