ಕಾರವಾರ: ಮಕ್ಕಳಿಗೆ ಬೌದ್ಧಿಕ ಕಲಿಕೆಯೊಂದಿಗೆ ದೈಹಿಕ ಕ್ರೀಡಾಭ್ಯಾಸಗಳಲ್ಲೂ ಆಸಕ್ತಿ ಮೂಡಿಸಬೇಕು. ಮಕ್ಕಳ ಪ್ರತಿಭೆಯನುಸಾರ ಉತ್ತಮ ಮಾರ್ಗದರ್ಶನ ನೀಡಬೇಕು. ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಮಕ್ಕಳ ಸರ್ವಾಂಗೀಣ ವಿಕಸನಕ್ಕೆ ಒತ್ತು ನೀಡಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕುಮಾರ ಕಾಂದೂ ಸೂಚನೆ ನೀಡಿದರು.
ಅವರು ಗುರುವಾರ ಅಂಕೋಲಾ ತಾಲೂಕಿನ ಬೆಳಸೆಯಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿದರು. ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ಕ್ರೀಡಾ ಕೊಠಡಿ, ಕಂಪ್ಯೂಟರ್ ಲ್ಯಾಬ್‌ಗಳನ್ನು ಸೇರಿದಂತೆ ಶಾಲಾ ಕಟ್ಟಡ ಮತ್ತು ಆವರಣದಲ್ಲಿ ಪರಿವೀಕ್ಷಿಸಿದರು. ಶಾಲೆಗೆ ಉತ್ತಮವಾದ ಕ್ರೀಡಾಂಗಣವಿದ್ದು, ಮಕ್ಕಳಿಗೆ ಯೋಚಿತ ಕ್ರೀಡಾ ತರಬೇತಿ ನೀಡುವ ಮೂಲಕ ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಲು ಶ್ರಮವಹಿಸಿ ಎಂದು ಸೂಚಿಸಿದರು.
ಇದಕ್ಕೂ ಪೂರ್ವದಲ್ಲಿ ಶೆಟಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿಚ್ಕಡದಲ್ಲಿ ಮನರೇಗಾ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಅಂಗನವಾಡಿ ಕೇಂದ್ರದ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಲಭ್ಯವಿರುವ ವಿಶಾಲವಾದ ಸ್ಥಳಾವಕಾಶವನ್ನು ಸದುಪಯೋಗ ಪಡಿಸಿಕೊಂಡು ಮಕ್ಕಳ ಆಟೋಪಚಾರಕ್ಕೆ ಬೇಕಾದ ಸಕಲ ವ್ಯವಸ್ಥೆಗಳನ್ನು ಅಳವಡಿಸುವ ಮೂಲಕ ತಾಲೂಕಿನಲ್ಲಿಯೇ ಮಾದರಿ ಅಂಗನವಾಡಿ ಕೇಂದ್ರವಾಗಿ ರೂಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳಿಕ ಬೆಳಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಒಳ ಮತ್ತು ಹೊರ ರೋಗಿಗಳ ದಾಖಲಾತಿ ಪುಸ್ತಕ, ಔಷಧಿ ಕೊಠಡಿ, ಲಸಿಕಾ ಕೊಠಡಿ, ಶಸ್ತ್ರಚಿಕಿತ್ಸಾ ಕೊಠಡಿ ಮತ್ತು ಚಿಕಿತ್ಸಾ ಕೊಠಡಿಗಳನ್ನು ಪರಿಶೀಲಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರವು ಉತ್ತಮ ರೀತಿಯಲ್ಲಿ ನಿರ್ವಹಿಸಲ್ಪಡುತ್ತಿದ್ದು, ಸ್ಥಳೀಯರಿಗೆ ಉತ್ತಮ ಗುಣಮಟ್ಟದ ಸೇವೆ ನೀಡಲು ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಸಗಡಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪೂರ್ಣಗೊಂಡ ಜೆಜೆಎಮ್ ಕಾಮಗಾರಿ ಸ್ಥಳ, ಕುಡಿಯುವ ನೀರಿನ ಮೇಲ್ತೊಟ್ಟಿ, ಶುದ್ಧ ಕುಡಿಯುವ ನೀರಿನ ಘಟಕ ಮತ್ತು ನರೇಗಾ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ, ಪರಿಶೀಲಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಸುನಿಲ್ ಎಂ, ಎಇಇ, ಆರ್‌ಡಬ್ಲ್ಯೂಎಸ್, ಪಿಆರ್‌ಡಿ ಸೇರಿದಂತೆ ಇನ್ನಿತರೆ ಪ್ರಮುಖ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಸಂಬAಧಪಟ್ಟ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.