ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಚುನಾವಣಾ ವೀಕ್ಷಕರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ವೀಕ್ಷಣೆ; 17 ನಾಮಪತ್ರಗಳು ತಿರಸ್ಕೃತ

ಕಾರವಾರ: ಚುನಾವಣಾ ವೀಕ್ಷಕರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ವೀಕ್ಷಣೆ; 17 ನಾಮಪತ್ರಗಳು ತಿರಸ್ಕೃತ

Sun, 21 Apr 2024 00:48:01  Office Staff   S O News

ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸದಂತೆ ಜಿಲ್ಲೆಗೆ ಭಾರತ ಚುನಾವಣಾ ಆಯೋಗದಿಂದ ವೀಕ್ಷಕರಾಗಿ ನೇಮಕಗೊಂಡಿರುವ ರಾಜೀವ್ ರತನ್ ಭಾ.ಆ.ಸೇ. ರವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆಗಳನ್ನು ವೀಕ್ಷಿಸಿದರು.

ನಾಮಪತ್ರಗಳ ಸ್ವೀಕಾರ ವೇಳೆಯಲ್ಲಿ ಚುನಾವಣಾ ಆಯೋಗ ನೀಡಿರುವ ಎಲ್ಲಾ ನಿರ್ದೇಶನಗಳನ್ನು ಪಾಲಿಸುತ್ತಿರುವ ಕುರಿತಂತೆ ವೀಕ್ಷಣೆ ನಡೆಸಿದ ಅವರು, ಜಿಲ್ಲೆಯಲ್ಲಿ ಮುಕ್ತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆಗಾಗಿ ಇದುವರೆಗೆ ನಡೆಸಿರುವ ಸಿದ್ದತೆಗಳ ಕುರಿತಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರೊಂದಿಗೆ ಚರ್ಚಿಸಿದರು.

17 ನಾಮಪತ್ರಗಳು ತಿರಸ್ಕೃತ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸದಂತೆ, ಚುನಾವಣಾ ವೀಕ್ಷಕರಾದ ರಾಜೀವ ರತನ್ ಅವರ ಸಮ್ಮುಖದಲ್ಲಿ ಶನಿವಾರ ನಡೆದ ನಾಮಪತ್ರಗಳ ಪರಿಶೀಲನೆಯಲ್ಲಿ ಈಗಾಗಲೇ ನಾಮಪತ್ರಗಳನ್ನು ಸಲ್ಲಿಸಿದ್ದ 6 ಅಭ್ಯರ್ಥಿಗಳ ಒಟ್ಟು 17 ನಾಮಪತ್ರಗಳು ತಿರಸ್ಕೃತಗೊಂಡಿದ್ದು, ನಾಮಪತ್ರಗಳ ಪರಿಶೀಲನೆಯ ನಂತರ 13 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ದವಾಗಿವೆ.

ನಾಮಪತ್ರ ತಿರಸ್ಕೃತಗೊಂಡವರ ವಿವರ: ರಾಷ್ಟೀಯ ಜನ ಸಂಭಾವನಾ ಪಕ್ಷದ ನಾಗರಾಜ ಶ್ರೀಧರ್ ಶೇಟ್, ಪಕ್ಷೇತರ ಆಭ್ಯರ್ಥಿಗಳಾದ ರೂಪಾ ನಾಯ್ಕ್, ಉಮೇಶ್ ದೈವಜ್ಞ, ಮಡಗಾಂವಕರ್ ಪ್ರಮೋದ್, ಸುಜಯ್ ಸುಧೀರ್ ಗೋಕರ್ಣ ಮತ್ತು ಪ್ರಕಾಶ್ ಪಿಂಟೋ ಅವರ ನಾಮಪತ್ರಗಳು ತಿರಸ್ಕೃತಗೊಂಡಿವೆ.

ಕ್ರಮಬದ್ದವಾಗಿ ನಾಮಪತ್ರ ಸಲ್ಲಿಸಿರುವವರ ವಿವರ: ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನ ಡಾ. ಅಂಜಲಿ ನಿಂಬಾಳ್ಕರ್, ಭಾರತೀಯ ಜನತಾ ಪಾರ್ಟಿಯ ಕಾಗೇರಿ ವಿಶ್ವೇಶ್ವರ ಹೆಗಡೆ, ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಗಣಪತಿ ಹೆಗಡೆ, ಕರ್ನಾಟಕ ರಾಷ್ಟೀಯ ಸಮಿತಿಯ ವಿನಾಯಕ ಮಂಗೇಶ ನಾಯ್ಕ್, ಉತ್ತಮ ಪ್ರಜಾಕೀಯ ಪಕ್ಷದ ಸುನೀಲ್ ಪವಾರ್, ಪಕ್ಷೇತರ ಅಭ್ಯರ್ಥಿಗಳಾದ ಕೃಷ್ಣಾಜಿ ಪಾಟೀಲ್, ಚಿದಾನಂದ ಹನುಮಂತಪ್ಪ ಹರಿಜನ, ನಿರಂಜನ್ ಉದಯಸಿನ್ಹಾ ಸರ್‌ದೇಸಾಯಿ, ನಾಗರಾಜ ಅನಂತ ಶಿರಾಲಿ, ಅರವಿಂದ ಗೌಡ, ಅವಿನಾಶ್ ನಾರಾಯಣ ಪಾಟೀಲ, ಕೃಷ್ಣ ಹನುಮಂತಪ್ಪ ಬಳೆಗಾರ, ರಾಜಶೇಖರ ಶಂಕರ ಹಿಂಡಲಗಿ ಅವರ ನಾಮಪತ್ರಗಳು ಕ್ರಮಬದ್ದವಾಗಿವೆ.

ನಾಮಪತ್ರಗಳ ಪರಿಶೀಲನೆ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್ ಮತ್ತು ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಗಳು ಉಪಸ್ಥಿತರಿದ್ದರು.

ಏಪ್ರಿಲ್ 22 ರಂದು ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದ್ದು, ಮೇ 7 ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.


Share: