ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕನ್ನಡ ರಾಜ್ಯೋತ್ಸವ; ಜಾತಿ, ಮತ, ಧರ್ಮಗಳ ಬೇಧವಿಲ್ಲದೆ ಆಚರಿಸುವ ಎಲ್ಲರ ಹಬ್ಬ-ಡಾ.ನಯನಾ

ಕನ್ನಡ ರಾಜ್ಯೋತ್ಸವ; ಜಾತಿ, ಮತ, ಧರ್ಮಗಳ ಬೇಧವಿಲ್ಲದೆ ಆಚರಿಸುವ ಎಲ್ಲರ ಹಬ್ಬ-ಡಾ.ನಯನಾ

Fri, 01 Nov 2024 23:12:48  Office Staff   SOnews

ಭಟ್ಕಳ: ನವೆಂಬರ್ ಒಂದರಂದು ಕನ್ನಡ ನಾಡಿನ ಉದ್ದಗಲಕ್ಕೂ ಆಚರಿಸಲ್ಪಡುವ ಕರ್ನಾಟಕ ರಾಜ್ಯೋತ್ಸವ ಜಾತಿ, ಮತ, ಪಂಥ, ಧರ್ಮಗಳ ಭೇದವಿಲ್ಲದೆ ಎಲ್ಲರೂ ಸಂಭ್ರಮದಿಂದ ಅಚರಿಸುವ ಹಬ್ಬ ಎಂದು ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತ ಡಾ. ನಯನಾ ಹೇಳಿದರು.

ಅವರು ಶುಕ್ರವಾರದಂದು ಭಟ್ಕಳ ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ಪುರಸಭೆ ಹಾಗೂ ಪಟ್ಟಣ ಪಂಚಾಯತ್ ಜಾಲಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ  ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕನ್ನಡ ನಾಡು ಕವಿಗಳ ಬೀಡು, ಕಲೆ ಸಂಸ್ಕೃತಿ ಗಳ ನೆಲೆಬೀಡು, ಇಂತಹ ಸುಂದರ ನಾಡಿನ ಹಬ್ಬವನ್ನು ಕನ್ನಡಿಗರಷ್ಟೇ ಅಷ್ಟೇ ದೇಶ ವಿದೇಶಗಳಲ್ಲಿ ಆಚರಿಸಿ ಕನ್ನಡ ಅಭಿಮಾನವನ್ನು ಮೆರೆಯುತ್ತಾರೆ. ಅದರಂತೆ ನಮ್ಮ ತಾಲ್ಲೂಕಿನಲ್ಲಿಯು ಸಹ ಅತ್ಯಂತ ಸಡಗರ, ಸಂಭ್ರಮದಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂದರು.  

ಕನ್ನಡ ನಾಡು ನುಡಿಯ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಉಪನ್ಯಾಸವನ್ನು ನೀಡಿದರು.

ಈ ಸಂಧರ್ಭದಲ್ಲಿ ಪತ್ರಕರ್ತರ ವಿಭಾಗದಲ್ಲಿ ವಿಷ್ಣು ಎಂ.ದೇವಾಡಿಗ, ಸಂಗೀತ ಕ್ಷೇತ್ರದಲ್ಲಿ ಶಿಕ್ಷಕಿ ಮಂಜುಳಾ ಶಿರೂರಕರ್ ಮತ್ತು ಹೇಮಾ ನಾಯ್ಕ, ಸಾಹಿತ್ಯದಲ್ಲಿ ಮಂಜುನಾಥ ಮುರುಡೇಶ್ವರ, ಜನಪದ ಕಲೆಯಲ್ಲಿ ಕೃಷ್ಣ ಮಾಸ್ತಿ ಗೊಂಡ, ಯಕ್ಷಗಾನ ಅಚ್ಚುತ ವೈದ ಬೈಲೂರು , ನಾಟಕ ರಘುರಾಮ ಮಡಿವಾಳ, ಸೋಬಾನೆ ಪದ ಕಾಳಿ ಸಂಕಯ್ಯ ಗೊಂಡ, ಸಂಗೀತ ಭಜನೆ ಗಣಪತಿ ಶಿರೂರು, ಸಮಾಜ ಸೇವೆ ವಿಭಾಗದಲ್ಲಿ ಡಿ.ಬಿ ನಾಯ್ಕ, ಮತ್ತು ಫಯಾಜ್ ಎಚ್ ಮುಲ್ಲಾ ರನ್ನು ಸನ್ಮಾಸಿ ಗೌರವಿಸಲಾಯಿತು.

ಇದೆ ಸಂದರ್ಭದಲ್ಲಿ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಮಾದ್ಯಮದಲ್ಲಿ ಅತೀ ಹೆಚ್ಚು ಅಂಕ ಪಡೆದು ಮೊದಲ ಮೂರು ಸ್ಥಾನ ಪಡೆದ ಹರ್ಷನ್ ನಾಗಯ್ಯ ಗೊಂಡ, ಭಾವನಾ ಪ್ರಭಾಕರ ನಾಯ್ಕ, ಮಾಧುರಿ ಕೃಷ್ಣ ಗೊಂಡ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಅತ್ಯುತ್ತಮ ದೀಪಾಲಂಕಾರ ಮಾಡಿದ ಭಟ್ಕಳ ಪುರಸಭೆ ಪ್ರಥಮ ಬಹುಮಾನ ಪಡೆದುಕೊಂಡಿದ್ದು, ಭಟ್ಕಳ ವಲಯ ಅರಣ್ಯ ಕಚೇರಿ ಟಾಬ್ಲೋ ಮೊದಲ ಸ್ಥಾನ, ಎರಡನೇ ಸ್ಥಾನ ಕ್ಷೇತ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಮೂರನೇ ಸ್ಥಾನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಭಟ್ಕಳ ಪಡೆದುಕೊಂಡಿತು.

ಸಭಾ ಕಾರ್ಯಕ್ರಮಕ್ಕೂ ಮುನ್ನ ತಾಲೂಕಾ ಆಡಳಿತ ಸೌಧದಲ್ಲಿ ಶ್ರೀ ಭುವನೇಶ್ವರಿ ದೇವಿಗೆ ಸಹಾಯ ಆಯುಕ್ತರು ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.  

ವೇದಿಕೆಯಲ್ಲಿ ತಹಶೀಲ್ದಾರ್ ಅಶೋಕ ಎನ್ ಭಟ್, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯ್ಕ, ಭಟ್ಕಳ ಪುರಸಭೆ ಅಧ್ಯಕ್ಷ ಅಲ್ತಾಫ್ ಮೂಹಿದ್ದೀನ್ ಖರೂರಿ, ಜಾಲಿ ಪಟ್ಟಣ  ಪಂಚಾಯತ ಅಧ್ಯಕ್ಷೆ ಖಾಜೀಯಾ ಅಫ್ಸಾ ಹುಜೈಫಾ, ಭಟ್ಕಳ ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ಮೆಸ್ತಾ ಹಾಗೂ  ಜಾಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಮಂಜಪ್ಪ ಉಪಸ್ಥಿತರಿದ್ದರು


Share: