ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಒಳಚರಂಡಿ ಕಳಪೆ ಕಾಮಗಾರಿ; ವಾರ್ಡ್ ನಂ ೨೦,೨೧ ರಲ್ಲಿ ಕುಡಿಯುವ ನೀರಿ ಬಾವಿ ಸೇರುತ್ತಿರುವ ಕೊಳಚೆ ನೀರು

ಒಳಚರಂಡಿ ಕಳಪೆ ಕಾಮಗಾರಿ; ವಾರ್ಡ್ ನಂ ೨೦,೨೧ ರಲ್ಲಿ ಕುಡಿಯುವ ನೀರಿ ಬಾವಿ ಸೇರುತ್ತಿರುವ ಕೊಳಚೆ ನೀರು

Thu, 11 Jan 2024 00:15:04  Office Staff   SOnews

 

ಭಟ್ಕಳ: ಭಟ್ಕಳ ಪಟ್ಟಣದ ವಾರ್ಡ್ ನಂ.20 ಮತ್ತು 21ರಲ್ಲಿ ಒಳಚರಂಡಿ (ಅಂಡರ್ ಗ್ರೌಂಡ್ ಡ್ರೈನೇಜ್ ಪೈಪ್ ಲೈನ್ ಹಾಗೂ ಮ್ಯಾನ್ ಹೋಲ್) ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲದ ಕಾರಣ ಮನೆಗಳ ಬಾವಿಗೆ ಕೊಳಚೆ ನೀರು ಸೇರುತ್ತಿರುವ ಬಗ್ಗೆ ಭಟ್ಕಳ ಪುರಸಭೆ ಸದಸ್ಯರಾದ ಮುಲ್ಲಾ ಫಯಾಜ್ ಹಾಗೂ ಫಾತಿಮಾ ಕೌಸರ್ ಚಾಮುಂಡಿ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ಪುರಸಭೆ ಮುಖ್ಯಾಧಿಕಾರಿ ಹಾಗೂ ಸಹಾಯಕ ಆಯುಕ್ತರಿಗೆ ಮನವಿ ಪತ್ರ ನೀಡಿ ಆದಷ್ಟು ಬೇಗ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ.

ಮನವಿ ಪತ್ರದ ಪ್ರತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಹಾಗೂ ಜಿಲ್ಲಾಧಿಕಾರಿ ಗಂಗುಬಾಯಿ ಮಾನಕರ ಅವರಿಗೆ ನೀಡಲಾಗಿದ್ದು, ಹಳೆಯ ಇಟ್ಟಿಗೆಯ ಮ್ಯಾನ್‌ಹೋಲ್‌ಗಳ ಬದಲಿಗೆ ಹೊಸ ಕಾಂಕ್ರೀಟ್ ಮ್ಯಾನ್‌ಹೋಲ್‌ಗಳು ಅತ್ಯಂತ ಕಳಪೆಯಾಗಿದ್ದು, ಗುಣಮಟ್ಟದಿಂದ ಕೂಡಿಲ್ಲ ಎಂದು ತಿಳಿಸಲಾಗಿದೆ. ಪೈಪ್ ಲೈನ್ ಕಾಮಗಾರಿಯೂ ಅತ್ಯಂತ ಅವೈಜ್ಞಾನಿಕವಾಗಿ ನಡೆದಿರುವುದರಿಂದ ತ್ಯಾಜ್ಯ ನೀರು ಸರಾಗವಾಗಿ ಹರಿದು ಹೋಗದ ಪರಿಣಾಮ ಮ್ಯಾನ್ ಹೋಲ್ ನಲ್ಲಿ ಕಸ ಶೇಖರಣೆಯಾದ ಬಳಿಕ ತ್ಯಾಜ್ಯ ನೀರು ಆ ಜಾಗಕ್ಕೆ ಹರಿದು ಬಾವಿಗಳಿಗೆ ಸೇರುತ್ತಿದೆ. ಹೀಗಾಗಿ ಕೊಳಚೆ ನೀರು ಮಿಶ್ರಣಗೊಂಡು ಕೊಳವೆಬಾವಿ ನೀರು ಬಳಕೆಗೆ ಯೋಗ್ಯವಾಗಿಲ್ಲ. ಇದಲ್ಲದೇ ಈ ಕೊಳಕು ಹಾಗೂ ಕಲುಷಿತ ನೀರಿನಿಂದಾಗಿ ವಿವಿಧ ರೀತಿಯ ರೋಗಗಳು ಹರಡುವ ಭೀತಿ ಎದುರಾಗಿದೆ. ಕಲುಷಿತಗೊಂಡಿರುವ ಕೊಳವೆಬಾವಿಗಳಿಂದ ಕುಡಿವ ನೀರಿಗೆ ಹಾಹಾಕಾರ ಉಂಟಾಗಿ ಇಲ್ಲಿನ ನಿವಾಸಿಗಳು ಕಂಗಾಲಾಗಿದ್ದು, ಮನೆ ತೊರೆದು ಬೇರೆ ಪ್ರದೇಶಗಳಿಗೆ ತೆರಳುವ ಸ್ಥಿತಿ ನಿರ್ಮಾಣವಾಗಿದೆ.

ಈ ಹಿನ್ನಲೆಯಲ್ಲಿ ಈ ಎರಡು ವಾರ್ಡಿನ ಪುರಸಭಾ ಸದಸ್ಯರು ಕೂಡಲೆ ಕಳಪೆ ಹಾಗೂ ದೋಷಪೂರಿತ ಮ್ಯಾನ್ ಹೋಲ್, ಪೈಪ್ ಲೈನ್ ಗಳನ್ನು ತೆಗೆದು ಹೊಸ ಹಾಗೂ ಸರಿಯಾದ ಮಾದರಿಯ ಮ್ಯಾನ್ ಹೋಲ್ ಗಳನ್ನು ನಿರ್ಮಿಸಿ ಈ ಸಮಸ್ಯೆಯಿಂದ ವಾರ್ಡಿನ ಜನರಿಗೆ ಮುಕ್ತಿ ನೀಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.


Share: