ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಅಬಕಾರಿ ನೀತಿ ಹಗರಣ; ಕೇಜ್ರಿವಾಲ್ ಬಂಧನ; ಈ. ಡಿ. ವಶದಲ್ಲಿ ದಿಲ್ಲಿ ಸಿಎಂ

ಅಬಕಾರಿ ನೀತಿ ಹಗರಣ; ಕೇಜ್ರಿವಾಲ್ ಬಂಧನ; ಈ. ಡಿ. ವಶದಲ್ಲಿ ದಿಲ್ಲಿ ಸಿಎಂ

Fri, 22 Mar 2024 20:27:27  Office Staff   Vb

ಹೊಸದಿಲ್ಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ದಿಲ್ಲಿ ಮುಖ್ಯಮಂತ್ರಿ ಹಾಗೂ ಆಮ್‌ಆದ್ಮಿ ಪಕ್ಷದ ವರಿಷ್ಠ ಅರವಿಂದ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (ಈ.ಡಿ.)ಗುರುವಾರ ರಾತ್ರಿ ಬಂಧಿಸಿದೆ. ಲೋಕಸಭಾ ಚುನಾವಣೆಗೆ ಕೆಲವೇ ವಾರಗಳಿರುವಂತೆಯೇ ಕೇಜ್ರಿವಾಲ್  ಅವರ ಬಂಧನವು ರಾಷ್ಟ್ರ ರಾಜಕಾರಣದಲ್ಲಿ ಸಂಚಲನವನ್ನು ಸೃಷ್ಟಿಸಿದೆ.

ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕೇಜ್ರಿವಾಲ್ ಅವರಿಗೆ ಬಂಧನದಿಂದ ರಕ್ಷಣೆ ನೀಡಲು ದಿಲ್ಲಿಯ ಉಚ್ಚನ್ಯಾಯಾಲಯವು ನಿರಾಕರಿಸಿದ ಕೆಲವೇ ತಾಸುಗಳ ಬಳಿಕ ಅವರನ್ನು ಈ.ಡಿ. ಬಂಧಿಸಿದೆ.

ಹೈಕೋರ್ಟ್ ಆದೇಶದ ಬೆನ್ನಲ್ಲೇ ಈ.ಡಿ. ಅಧಿಕಾರಿಗಳ ತಂಡ ದಿಲ್ಲಿಯ ಫ್ಲ್ಯಾಗ್‌ಸ್ಟಾಪ್ ರೋಡ್‌ ನಲ್ಲಿರುವ ಕೇಜ್ರವಾಲ್ ಅವರ ಅಧಿಕೃತ ನಿವಾಸಕ್ಕೆ ತೆರಳಿ ಶೋಧ ಕಾರ್ಯಾಚರಣೆಯನ್ನು ನಡೆಸಿತು ಹಾಗೂ ಅವರನ್ನು ಬಂಧಿಸಿತೆಂದು ಅಧಿಕೃತ ಮೂಲಗಳು ತಿಳಿಸಿವೆ.

ಅಬಕಾರಿ ನೀತಿ ಹಗರಣದಲ್ಲಿ ತನ್ನ ಮುಂದೆ ವಿಚಾರಣೆಗೆ ಹಾಜರಾಗುವಂತೆ ಈ.ಡಿ. ಕೇಜ್ರವಾಲ್ ಅವರಿಗೆ 9 ಬಾರಿ ಸಮನ್ಸ್ ಜಾರಿಗೊಳಿಸಿದ್ದರೂ,

ಕೇಜ್ರಿವಾಲ್ ತಪ್ಪಿಸಿಕೊಂಡಿದ್ದರು. ಗುರುವಾರದೊಳಗೆ ತನ್ನೆದುರು ಹಾಜರಾಗುವಂತೆ ಈ.ಡಿ. ಸಮನ್ಸ್ ಹೊರಡಿಸಿರುವುದನ್ನು ಪ್ರಶ್ನಿಸಿ ಕೇಜ್ರಿವಾಲ್ ದಿಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಈ.ಡಿ. ವಿಚಾರಣೆಗೆ ಯಾಕೆ ಹಾಜರಾಗುತ್ತಿಲ್ಲವೆಂದು ಕೇಜ್ರಿವಾಲ್ ಅವರನ್ನು ಪ್ರಶ್ನಿಸಿತ್ತು ಹಾಗೂ ಅವರಿಗೆ ಸಂಭಾವ್ಯ ಬಂಧನದಿಂದ ರಕ್ಷಣೆ ನೀಡಲು ನಿರಾಕರಿಸಿತ್ತು.

ಕೇಜ್ರಿವಾಲ್ ಬಂಧನದ ಬಳಿಕ ಅವರ ನಿವಾಸದ ಹೊರಗೆ ದಿಲ್ಲಿಯ ಸಚಿವೆ ಅತಿಶಿ ಮಾತನಾಡಿ, ದಿಲ್ಲಿ ಮುಖ್ಯಮಂತ್ರಿಯವರ ಬಂಧನವು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ರೂಪಿಸಿದ ಸಂಚಾಗಿದೆ. ಈ ಪ್ರಕರಣದ ತನಿಖೆ ಎರಡು ವರ್ಷಗಳ ಹಿಂದೆಯೇ ಆರಂಭವಾಗಿದ್ದರೂ 1 ಸಾವಿರಕ್ಕೂ ಅಧಿಕ ದಾಳಿಗಳು ಹಾಗೂ ಆಪ್ ನಾಯಕರ ಬಂಧನದ ಹೊರತಾಗಿಯೂ ಜಾರಿ ನಿರ್ದೇಶನಾಲಯಕ್ಕಾಗಲಿ ಅಥವಾ ಸಿಬಿಐಗಾಗಲಿ ಒಂದೇ ಒಂದು ರೂಪಾಯಿಯನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದವರು ಹೇಳಿದ್ದಾರೆ. ಕೇಜ್ರಿವಾಲ್ ಬಂಧನ ವಿರುದ್ದ ಆಮ್‌ ಆದ್ಮಿ ಪಕ್ಷವು ಸುಪ್ರೀಂಕೋರ್ಟ್ ಮೆಟ್ಟಲೇರಲಿದೆ. ಇಂದು ರಾತ್ರಿಯೇ ಆಲಿಕೆಯನ್ನು ನಡೆಸುವಂತೆ ನಾವು ಆಗ್ರಹಿಸುತ್ತೇವೆ ಎಂದು ಅತಿಶಿ ಹೇಳಿದ್ದಾರೆ.

ಲೋಕಸಭಾ ಚುನಾವಣೆಯ ಘೋಷಣೆ ಸಂದರ್ಭದಲ್ಲಿ ಅರವಿಂದ ಕೇಜ್ರವಾಲ್ ಅವರ ಬಂಧನವು ಒಂದು ಸಂಚಾಗಿದೆ. ಕೇಜ್ರವಾಲ್ ಕೇವಲ ಒಬ್ಬ ವ್ಯಕ್ತಿಯಲ್ಲ, ಅವರೊಂದು ಚಿಂತನೆಯಾಗಿದ್ದಾರೆ. ಬಂಧಿಸುವ ಮೂಲಕ ಕೇಜ್ರವಾಲ್ ಅವರನ್ನು ಮುಗಿಸಬಹುದೆಂದು ನೀವು ಭಾವಿಸಿದ್ದರೇ. ಅದು ತಪ್ಪು. ಕೇಜ್ರವಾಲ್ ಅವರು ದಿಲ್ಲಿ ಮುಖ್ಯಮಂತ್ರಿಯಾಗಿಯೇ ಮುಂದುವರಿಯಲಿದ್ದಾರೆಂದು ಅತಿಶಿ ಹೇಳಿದ್ದಾರೆ.


Share: