ಬೆಂಗಳೂರು,ಜನವರಿ 6:ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕೇವಲ ಲಿಂಗಾಯತ ಸಮುದಾಯ ಮಾತ್ರವೇ ಅಲ್ಲದೇ ದಲಿತ ಸಮುದಾಯವೂ ಕಾರಣ ಎಂದಿರುವ ಸಣ್ಣ ನೀರಾವರಿ ಸಚಿವ ಗೋವಿಂದ ಕಾರ್ಜೋಳ್,ಈ ಸಮುದಾಯಕ್ಕೆ ಜನಸಂಖ್ಯೆ ಆಧರಿತ ಒಳಮೀಸಲಾತಿ ಕಲ್ಪಿಸಿಕೊಡಲು ತ್ವರಿತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸುವುದಾಗಿ ಹೇಳಿದ್ದಾರೆ.
ಇಂದಿಲ್ಲಿ ಸಮಾಜ ಕಲ್ಯಾಣ ಸಚಿವ ಡಿ.ಸುಧಾಕರ್,ಶಾಸಕ ನಾರಾಯಣಸ್ವಾಮಿ ಅವರೊಂದಿಗೆ ಜಂಟಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಶೋಷಣೆಗೆ ಒಳಗಾಗಿರುವ ಮೂಲ ಅಸ್ಪೃಶ್ಯರಿಗೆ ಅನ್ಯಾಯವಾಗಿರುವುದು ನಿಜ.ಈ ಹಿನ್ನೆಲೆಯಲ್ಲಿ ಅವರಿಗೆ ಒಳಮೀಸಲಾತಿ ಕಲ್ಪಿಸಿಕೊಡುವುದು ಸೂಕ್ತ ಎಂದು ಹೇಳಿದರು.
ಹೀಗೆ ಒಳಮೀಸಲಾತಿ ಕಲ್ಪಿಸಿಕೊಡುವ ವಿಷಯದಲ್ಲಿ ತಮ್ಮ ಸರ್ಕಾರಕ್ಕೆ ಬದ್ಧತೆಯಿದೆ ಎಂದ ಅವರು,ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಹಿಂದೆ ಪ್ರತಿಪಕ್ಷದ ನಾಯಕರಾಗಿದ್ದ ಕಾಲದಿಂದಲೂ ಇಂತಹ ಒಳಮೀಸಲಾತಿಯ ಪರವಾಗಿರುವುದಾಗಿ ಸ್ಪಷ್ಟ ಪಡಿಸಿದ್ದಾರೆ.
ಹೀಗಾಗಿ ಒಳಮೀಸಲಾತಿ ಕಲ್ಪಿಸಿಕೊಡುವುದು,ಆ ಸಮುದಾಯಕ್ಕೆ ಸಲ್ಲಬೇಕಾದ ಸವಲತ್ತುಗಳೇನು ಎಂಬುದನ್ನು ಅಧ್ಯಯನ ಮಾಡಲು ಸದಾಶಿವ ಆಯೋಗವನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು.
ಬಿಜೆಪಿ ಅಧಿಕಾರಕ್ಕೆ ಬರಲು ಕೇವಲ ಲಿಂಗಾಯತ ಸಮುದಾಯ ಮಾತ್ರವಲ್ಲ, ದಲಿತ ಸಮುದಾಯವೂ ಕಾರಣ ಎಂದ ಅವರು,ಎಲ್ಲ ಸಮುದಾಯಗಳ ಬೆಂಬಲದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ.ಇಂತಹ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡುವ ಕೆಲಸವೂ ಸರ್ಕಾರದಿಂದ ಆಗಲಿದೆಯೆಂದು ಭರವಸೆ ನೀಡಿದರು.
ಇದೇ ರೀತಿ ಒಳಮೀಸಲಾತಿ ಕಲ್ಪಿಸಿಕೊಡುವ ವಿಷಯದಲ್ಲಿ ಸಂವಿಧಾನಬದ್ಧ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ, ಅದಿರುವುದು ಕೇಂದ್ರ ಸರ್ಕಾರಕ್ಕೆ ಎಂದ ಅವರು,ಹೀಗಾಗಿ ಒಳಮೀಸಲಾತಿ ಕಲ್ಪಿಸಿಕೊಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡುವ ಕೆಲಸ ನಮ್ಮಿಂದ ಆಗಲಿದೆ ಎಂದು ಹೇಳಿದರು.
ಕಳೆದ ಐವತ್ತು ವರ್ಷಗಳಿಂದ ಈ ಸಮುದಾಯದಿಂದ ಚುನಾವಣೆ ಸಮಯದಲ್ಲಿ ನೆರವು ಪಡೆದು ಸರ್ಕಾರ ರಚಿಸಿದವರು ಅವರಿಗೆ ನ್ಯಾಯ ಕೊಡಲಿಲ್ಲ. ನಮ್ಮ ಸರ್ಕಾರ ಅವರಿಗೆ ನ್ಯಾಯ ಕೊಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹದಿನೈದು ದಿನಗಳಲ್ಲಿ ಸಭೆ
ದಲಿತರ ಒಳಮೀಸಲಾತಿಗೆ ಪೂರಕವಾಗಿ ಅವರ ಜನಸಂಖ್ಯೆಯನ್ನು ಗಣತಿ ಮಾಡುವ ಕೆಲಸಕ್ಕೆ ಹಣಕಾಸಿನ ನೆರವು ಸಮರ್ಪಕವಾಗಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲೇ ಹದಿನೈದು ದಿನಗಳಲ್ಲಿ ಉನ್ನತ ಮಟ್ಟದ ಸಭೆ ಕರೆಯುವುದಾಗಿ ಇದೇ ಸಂಧರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಡಿ.ಸುಧಾಕರ್ ಪ್ರಕಟಿಸಿದರು.
ಈಗಾಗಲೇ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಇದಕ್ಕೆ ಸಂಬಂಧಿಸಿದಂತೆ ಒಂದಷ್ಟು ಹಣವನ್ನು ಬಿಡುಗಡೆ ಮಾಡಿವೆ. ಆದರೂ ಹಣದ ಕೊರತೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಹಣ ಬಿಡುಗಡೆ ಮಾಡುವ ಸಲುವಾಗಿ ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳು,ಶಾಸಕರು ಹಾಗೂ ಸಮಾಜದ ಪ್ರಮುಖರ ಸಭೆಯನ್ನು ಹದಿನೈದು ದಿನಗಳ ಒಳಗಾಗಿ ಕರೆಯುವುದಾಗಿ ಅವರು ನುಡಿದರು.