ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹೆಲಿಕಾಪ್ಟರ್‌ ದುರಂತ; ಇರಾನ್ ಅಧ್ಯಕ್ಷ ಇಬ್ರಾಹಿಂ ರಯೀಸಿ ಮೃತ್ಯು-ವರದಿ

ಹೆಲಿಕಾಪ್ಟರ್‌ ದುರಂತ; ಇರಾನ್ ಅಧ್ಯಕ್ಷ ಇಬ್ರಾಹಿಂ ರಯೀಸಿ ಮೃತ್ಯು-ವರದಿ

Mon, 20 May 2024 20:30:08  Office Staff   SOnews

ಹೊಸದಿಲ್ಲಿ: ಇರಾನ್‌ ಅಧ್ಯಕ್ಷ ಇಬ್ರಾಹಿಂ ರಯೀಸಿ ಮತ್ತು ಅವರ ವಿದೇಶ ಸಚಿವ ಹುಸೇನ್‌ ಅಮೀರ ಅಬ್ದೊಲ್ಲಾಹಿಯಾನ್‌ ಹೆಲಿಕಾಪ್ಟರ್‌ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ಇರಾನ್ ‌ಅಧಿಕಾರಿಯೊಬ್ಬರು ರಾಯ್ಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾಗಿ ವರದಿಯಾಗಿದೆ.

ಅಧ್ಯಕ್ಷ ಇಬ್ರಾಹಿಂ ರಯೀಸಿ ಅವರು ಇರಾನ್‌ನ ತಬ್ರೀಝ್‌ ನಗರದಲ್ಲಿ ಆಝರ್‌ಬೈಜಾನ್ ನ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಜೊತೆಗೂಡಿ ಖಿಝ್‌ ಖಲಾಸಿ ಅಣೆಕಟ್ಟನ್ನು ಎರಡೂ ದೇಶಗಳು ಹಂಚಿರುವ ಗಡಿ ಸ್ಥಳದಲ್ಲಿ ಉದ್ಘಾಟಿಸಿ ವಾಪಸಾಗುತ್ತಿರುವಾಗ ಈ ಘಟನೆ ಸಂಭವಿಸಿದೆ.  

ಹೆಲಿಕಾಪ್ಟರ್‌ ಪತನಗೊಂಡ ಸ್ಥಳದ ವೀಡಿಯೋ ಫುಟೇಜ್‌ ಕೂಡ ಲಭ್ಯವಾಗಿದೆ. ಹೆಲಿಕಾಫ್ಟರ್ ನಲ್ಲಿ ಅಧ್ಯಕ್ಷ ರಯೀಸಿ, ವಿದೇಶ ಸಚಿವ ಹುಸೇನ್‌ ಅಮೀರ್ ಅಬ್ದುಲ್ಲಾಹಿ ಮತ್ತು ಇತರ ಅಧಿಕಾರಿಗಳಿದ್ದರು. ಹಾರಾಟ ಆರಂಭಿಸಿದ ಸುಮಾರು 30 ನಿಮಿಷಗಳಲ್ಲಿ ಹೆಲಿಕಾಪ್ಟರ್‌ ಸಂಪರ್ಕ ಕಳೆದುಕೊಂಡಿತ್ತು.   ಆರಂಭಿಕ ವರದಿಗಳ ಪ್ರಕಾರ ಇದೊಂದು ಅಪಘಾತವೆಂದು ಇರಾನ್‌ ಸ್ಟೇಟ್‌ ಮಾದ್ಯಮ ವರದಿ ಮಾಡಿದೆ.

ಅಧ್ಯಕ್ಷರ ತಂಡದಲ್ಲಿದ್ದ ಇಬ್ಬರು ರಕ್ಷಣಾ ತಂಡವನ್ನು ಸಂಪರ್ಕಿಸಿದ್ದರು ಎಂದ ಎಕ್ಸಿಕ್ಯುಟಿವ್‌ ಅಫೇರ್ಸ್‌ ಉಪಾಧ್ಯಕ್ಷ ಮುಹ್ಸಿನ್ ಮನ್ಸೂರಿ ಹೇಳಿದ್ದಾರೆ.  ಅಧ್ಯಕ್ಷರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ನಾಪತ್ತೆಯಾಗಿದೆ ಎಂಬ ಸುದ್ದಿಗಳ ಬೆನ್ನಲ್ಲಿ 60ಕ್ಕೂ ಹೆಚ್ಚು ರಕ್ಷಣಾ ತಂಡಗಳು ಕಠಿಣ ಹವಾಮಾನ ಪರಿಸ್ಥಿತಿಗಳ ನಡುವೆ ಶೋಧ ನಡೆಸಿದ್ದವು.  ಇರಾನ್‌ನ ಸುದ್ದಿ ಸಂಸ್ಥೆ ಐಆರ್‌ಎನ್ ಎ ಅಧ್ಯಕ್ಷರ ಪತನಗೊಂಡ ಹೆಲಿಕಾಪ್ಟರ್‌ ಫುಟೇಜ್‌ ಬಿಡುಗಡೆಗೊಳಿಸಿದೆ.  ಹೆಲಿಕಾಪ್ಟರ್‌ನ ಸಂಪೂರ್ಣ ಕ್ಯಾಬಿನ್‌ ಸುಟ್ಟು ಹೋಗಿದೆ. ಕೆಲ ಮೃತದೇಹಗಳು ಗುರುತಿಸಲಾಗದಷ್ಟು ಸುಟ್ಟು ಹೋಗಿವೆ ಎಂದು ವರದಿಯಾಗಿದೆ.


Share: