ಬೆಂಗಳೂರು, ನ.೧೫ ಆಡಳಿತಾರೂಢ ಬಿಜೆಪಿಯಲ್ಲಿ ಕಳೆದೊಂದು ತಿಂಗಳಿಂದ ನಡೆದ ಬಂಡಾಯ ಚಟುವಟಿಕೆಯ ಫಲವಾಗಿ ವಿಧಾನಸಭೆಯ ಸ್ಪೀಕರ್ ಜಗದೀಶ್ ಶೆಟ್ಟರ್ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮಂಗಳವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಸೋಮವಾರ ಸಂಜೆ ೪ ಗಂಟೆ ಸುಮಾರಿಗೆ ವಿಧಾನಸಭೆಯ ಉಪಾಧ್ಯಕ್ಷ ಕೆ.ಜಿ. ಬೋಪಯ್ಯ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಲಿದ್ದು, ಮಂಗಳವಾರ ಬೆಳಗ್ಗೆ ೧೧.೩೦ ಕ್ಕೆ ರಾಜಭವನದ ಗಾಜಿನಮನೆಯಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವರು.
ಸದ್ಯಕ್ಕೆ ಶೆಟ್ಟರ್ ಮಾತ್ರ ಸಂಪುಟಕ್ಕೆ ಸೇರ್ಪಡೆಗೊಳ್ಳಲಿದ್ದು, ಬಂಡಾಯ ಬಣದ ಇನ್ನುಳಿದ ಕೆಲವು ಶಾಸಕರು ಮುಂದಿನ ಹಂತದ ಪುನಾರಚನೆ ಸಂದರ್ಭ ಸಚಿವರಾಗಲಿದ್ದಾರೆ. ತಾವೊಬ್ಬರೇ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವುದಿಲ್ಲ ಎಂಬ ಪಟ್ಟನ್ನು ವರಿಷ್ಠರ ಒತ್ತಡಕ್ಕೆ ಮಣಿದು ಸಡಿಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾನುವಾರ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಶೆಟ್ಟರ್, ಸದ್ಯಕ್ಕೆ ತಮಗೆ ಬಂದಿರುವ ಮಾಹಿತಿ ಪ್ರಕಾರ ತಾವೊಬ್ಬರೇ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವುದಾಗಿ ಮಾಹಿತಿ ನೀಡಿದರು.
ಸದ್ಯಕ್ಕೆ ಗ್ರಾಮೀಣಾಭಿವೃದ್ಧಿ, ಮುಂದೆ ಲೋಕೋಪಯೋಗಿ: ಶೆಟ್ಟರ್ ಲೋಕೋಪಯೋಗಿ ಖಾತೆಯ ಬಗ್ಗೆ ಆಸಕ್ತಿ ವಹಿಸಿದ್ದಾರೆ. ಆದರೆ, ‘ಸದ್ಯಕ್ಕೆ ಶೋಭಾ ಕರಂದ್ಲಾಜೆ ರಾಜೀನಾಮೆಯಿಂದ ತೆರವಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಖಾತೆಯನ್ನು ಇಟ್ಟುಕೊಳ್ಳಿ. ಶೀಘ್ರದಲ್ಲೇ ನಡೆಯುವ ಮತ್ತೊಂದು ಹಂತದ ಪುನಾರಚನೆ ನಂತರ ಲೋಕೋಪಯೋಗಿ ಅಥವಾ ಬೇರೊಂದು ಪ್ರಮುಖ ಖಾತೆಯನ್ನು ನೀಡೋಣ...’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶೆಟ್ಟರ್ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.
ಹೀಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಖಾತೆಯೇ ಸದ್ಯಕ್ಕೆ ಶೆಟ್ಟರ್ ಪಾಲಿಗೆ ದಕ್ಕುವ ಸಾಧ್ಯತೆ ಹೆಚ್ಚಾಗಿದೆ. ಒಂದು ವೇಳೆ ಶೆಟ್ಟರ್ ತೀರಾ ಪಟ್ಟು ಹಿಡಿದಲ್ಲಿ ಸಿ.ಎಂ.ಉದಾಸಿ ಬಳಿಯಿರುವ ಲೋಕೋಪಯೋಗಿ ಖಾತೆಯನ್ನು ಕಿತ್ತುಕೊಂಡು ಶೆಟ್ಟರ್ ಅವರಿಗೆ ನೀಡಬಹುದು. ಗ್ರಾಮೀಣಾಭಿವೃದ್ಧಿ ಖಾತೆಯ ಜವಾಬ್ದಾರಿಯನ್ನು ಉದಾಸಿಗೆ ವಹಿಸಬಹುದು. ಇಲ್ಲದಿದ್ದರೆ ಮುಖ್ಯಮಂತ್ರಿಗಳ ಬಳಿಯಿರುವ ಅರಣ್ಯ ಖಾತೆಯನ್ನೂ ನೀಡಬೇಕಾಗಿ ಬರಬಹುದು ಎಂದು ತಿಳಿದು ಬಂದಿದೆ.
-ಬುಧವಾರ ಸಮನ್ವಯ ಸಮಿತಿ:ಬುಧವಾರ ನಡೆಯಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ಸಂದರ್ಭ ಸಮನ್ವಯ ಸಮಿತಿ ರಚನೆಯಾಗುವ ನಿರೀಕ್ಷೆಯಿದೆ. ಅದಾದ ನಂತರ ಮುಂದಿನ ಸಂಪುಟ ಪುನಾರಚನೆ, ಯಾವ ಸಚಿವರು ರಾಜೀನಾಮೆ ನೀಡಲಿದ್ದಾರೆ, ಯಾರು ಹೊಸ ಸಚಿವರಾಗಲಿದ್ದಾರೆಂಬುದು ಅಂತಿಮಗೊಳ್ಳುವ ನಿರೀಕ್ಷೆಯಿದೆ.
ಸಭಾಧ್ಯಕ್ಷ ಹುದ್ದೆ ಬಗ್ಗೆ ಮಾಹಿತಿ ಇಲ್ಲ: ಸುರೇಶ್‌ಕುಮಾರ್
ಬೆಂಗಳೂರು: ಸ್ಪೀಕರ್ ಹುದ್ದೆಗೆ ತಮ್ಮನ್ನು ನೇಮಕ ಮಾಡುವ ಬಗ್ಗೆ ನಮಗಿನ್ನೂ ಯಾವುದೇ ಮಾಹಿತಿ ಬಂದಿಲ್ಲ ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಸ್. ಸುರೇಶ್‌ಕುಮಾರ್ ಹೇಳಿದ್ದಾರೆ.
ಭಾನುವಾರ ನಡೆದ ಯೋಜನಾ ಇಲಾಖೆ ಸುವರ್ಣ ಮಹೋತ್ಸವ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ಹುದ್ದೆಗೆ ನೇಮಕ ಮಾಡುವ ಕುರಿತು ಈ ಕ್ಷಣದವರೆಗೂ ಯಾರೂ ತಮ್ಮೊಂದಿಗೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.
’ಮುಖ್ಯಮಂತ್ರಿಯವರು ನನಗೆ ಮೂರು ಖಾತೆಗಳನ್ನು ವಹಿಸಿದ್ದಾರೆ. ಇಲ್ಲಿ ಒಳ್ಳೆ ಕೆಲಸ ಮಾಡುವ ಪ್ರಯತ್ನ ನಡೆಸುತ್ತಿದ್ದೇನೆ. ಸ್ಪೀಕರ್ ಮಾಡುವ ಬಗ್ಗೆ ಮುಖ್ಯಮಂತ್ರಿಯಾದಿಯಾಗಿ ಯಾರೂ ನನ್ನೊಂದಿಗೆ ಚರ್ಚಿಸಿಲ್ಲ’ ಎಂದು ಹೇಳಿದರು.
ಸೌಜನ್ಯ: ಕನ್ನಡಪ್ರಭ