ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಮಂಗನ ಕಾಯಿಲೆಯಿಂದ (ಕೆಎಫ್ಡಿ) ಉಲ್ಭಣಗೊಂಡಿದ್ದು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 18ವರ್ಷದ ಯುವತಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಇನ್ನೂ ಮೂವರು ವ್ಯಕ್ತಿಗಳಲ್ಲಿ ಈ ರೋಗದ ಲಕ್ಷಣ ಕಂಡುಬಂದಿದ್ದು ಪಾಸಿಟಿವ್ ವರದಿ ಬಂದಿದೆ ಎಂದು ತಿಳಿದುಬಂದಿದೆ.
ಹೊಸನಗರದ ಅರಮನೆ ಕೊಪ್ಪ ವ್ಯಾಪ್ತಿಯ ಗ್ರಾಮವೊಂದರ ಯುವತಿಗೆ ವಾರದ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಏಕಾಏಕಿ ಜ್ವರ ಉಲ್ಬಣಗೊಂಡು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಕೆಎಫ್ ಡಿ ಟೆಸ್ಟ್ ನಡೆಸಿದಾಗ ಮೊದಲ ಬಾರಿ ನೆಗೆಟಿವ್, ಎರಡನೇ ಬಾರಿ ಪಾಸಿಟಿವ್ ಬಂದಿತ್ತು. ಮೆಗ್ಗಾನ್ ಆಸ್ಪತ್ರೆಯಲ್ಲಿ ಐಸಿಯುನಲ್ಲಿದ್ದ ಯುವತಿಯನ್ನು ಶುಕ್ರವಾರ ಸಂಜೆ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಹು ಅಂಗಾಂಗ ವೈಫಲ್ಯದಿಂದ ಸೋಮವಾರ ಬೆಳಗ್ಗೆ ಯುವತಿ ಸಾವನ್ನಪ್ಪಿದ್ದಾಳೆ.
ಈವರೆಗೆ ಮೂರು ಮಂದಿಗೆ ಪಾಸಿಟಿವ್ ಬಂದಿದ್ದು ಒಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.