ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

Tue, 30 Apr 2024 16:37:26  Office Staff   Vb

ಹೊಸದಿಲ್ಲಿ: ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ರಕ್ಷಿಸುತ್ತಿದ್ದಾರೆ ಎಂದು ಸೋಮವಾರ ಇಲ್ಲಿ ಆರೋಪಿಸಿರುವ ಕಾಂಗ್ರೆಸ್, ಈ ವಿಷಯದಲ್ಲಿ ಅವರ ಮೌನವನ್ನು ಪ್ರಶ್ನಿಸಿದೆ.

ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೇತ ಅವರು, ಪ್ರಜ್ವಲ್ ರೇವಣ್ಣರ ದುರ್ನಡತೆಯ ಬಗ್ಗೆ ಗೊತ್ತಿದ್ದರೂ ಅವರನ್ನು ಮೈತ್ರಿಕೂಟದ ಜಂಟಿ ಅಭ್ಯರ್ಥಿಯನ್ನಾಗಿಸಿದ್ದಕ್ಕೆ ಮತ್ತು ಅವರನ್ನು ಹೊಗಳಿ ಅವರ ಪರವಾಗಿ ಮತಗಳನ್ನು ಯಾಚಿಸಿದ್ದಕ್ಕಾಗಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.

ಲೈಂಗಿಕ ದೌರ್ಜನ್ಯದ ವೀಡಿಯೊಗಳು ವೈರಲ್ ಆಗುತ್ತಿರುವ ಬಗ್ಗೆ ಪತ್ರದ ಮೂಲಕ ಮೋದಿಯವರಿಗೆ ಮಾಹಿತಿ ನೀಡಿದ್ದ ಬಿಜೆಪಿ ಶಾಸಕರು ಅವರನ್ನು ಅಭ್ಯರ್ಥಿಯನ್ನಾಗಿ ಮಾಡದಂತೆ ಕೋರಿಕೊಂಡಿದ್ದರು ಎಂದು ಹೇಳಿದ ಶ್ರೀನೇತ, ಜೆಡಿಎಸ್ ಜೊತೆ ಮೈತ್ರಿ ಮಾತುಕತೆಗಾಗಿ ಗೃಹಸಚಿವ ಅಮಿತ್ ಶಾ ಅವರು ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ಮೈಸೂರಿಗೆ ಭೇಟಿ ನೀಡಿದ್ದಾಗ ಸಾವಿರಾರು ಕಾರ್ಯಕರ್ತರು ಹಾಗೂ ಪ್ರೀತಂ ಗೌಡ ಮತ್ತು ಎ.ಟಿ.ರಾಮಸ್ವಾಮಿ ಸೇರಿದಂತೆ ನಾಯಕರು, ಪ್ರಜ್ವಲ್ ರೇವಣ್ಣ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಕುಖ್ಯಾತರಾಗಿದ್ದಾರೆ ಮತ್ತು ಕ್ಯಾಮರಾದ ಮುಂದೆ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ, ಹೀಗಾಗಿ ಅವರನ್ನು ಅಭ್ಯರ್ಥಿಯನ್ನಾಗಿಸದಂತೆ ಸೂಚಿಸಿದ್ದರು ಎಂದರು.

ಪ್ರಜ್ವಲ್ ರೇವಣ್ಣ ಮನೆಗೆಲಸದವರು, ಪಕ್ಷದ ಕಾರ್ಯಕರ್ತೆಯರು ಮತ್ತು ಸಂಸದೆಯರು ಸೇರಿದಂತೆ ಎಲ್ಲ ವಯೋಮಾನಗಳ ಮಹಿಳೆಯರ ವಿರುದ್ದ ಘೋರ ಅಪರಾಧಗಳನ್ನು ಎಸಗಿದ್ದಾರೆ ಎಂದು ಶ್ರೀನೇತ ಆರೋಪಿಸಿದರು.' ದೇಶವನ್ನೇ ತಲ್ಲಣಗೊಳಿಸಿರುವ ಇಡೀ ಘಟನೆಯ ಕುರಿತು ಮೌನ ವಹಿಸಿರುವುದಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರ ವಿರುದ್ಧವೂ ಶ್ರೀನೇತ ಕಿಡಿಕಾರಿದರು. ಮಾಧ್ಯಮಗಳಲ್ಲಿಯೂ ಈ ಬಗ್ಗೆ ಚರ್ಚೆಯಾಗುತ್ತಿಲ್ಲ ಎಂದೂ ಅವರು ಬೆಟ್ಟು ಮಾಡಿದರು. 'ಕರ್ನಾಟಕದ ಮಹಿಳಾ ಆಯೋಗವು ಈ ವಿಷಯವನ್ನು ಕೈಗೆತ್ತಿಕೊಂಡಾಗ ಸೂಕ್ತ ಪ್ರಕ್ರಿಯೆಯ ಬಳಿಕ ವಿಶೇಷ ತನಿಖಾ ತಂಡವನ್ನು ಸ್ಥಾಪಿಸಲಾಗಿದೆ ಮತ್ತು ಅದೇ ದಿನ ಪ್ರಜ್ವಲ ರೇವಣ್ಣಯುರೋಪ್‌ ಗೆ ಪರಾರಿಯಾಗಿದ್ದಾರೆ. ಅವರನ್ನು ಹಸ್ತಾಂತರಗೊಳಿಸುವ ಬಗ್ಗೆ ನಾವು ಪರಿಶೀಲಿಸುತ್ತಿದ್ದೇವೆ ಮತ್ತು ಅವರು ಭಾರತೀಯ ಕಾನೂನಿನ ಶಕ್ತಿಯನ್ನು ಎದುರಿಸುವಂತೆ ಮಾಡುತ್ತೇವೆ'ಎಂದು ಶ್ರೀನೇತ ತಿಳಿಸಿದರು.

ಇದಕ್ಕೆ ಹೆದರಿ ಓಡಿ ಹೋಗಲ್ಲ
ಇದಕ್ಕೆಲ್ಲಾ ಹೆದರಿ ಓಡಿಹೋಗುವ ವ್ಯಕ್ತಿ ನಾನಲ್ಲ. ಕಾನೂನು ಪ್ರಕಾರ ಏನು ಕ್ರಮ ತಗೆದುಕೊಳ್ಳುತ್ತಾರೋ, ತೆಗೆದುಕೊಳ್ಳಲಿ. ಪ್ರಜ್ವಲ್ ಮಾಮೂಲಿಯಾಗಿ ವಿದೇಶಕ್ಕೆ ಹೋಗಬೇಕಿತ್ತು, ಹೋಗಿದ್ದಾನೆ. ಪ್ರಜ್ವಲ್ ಗೆ ತನ್ನ ವಿರುದ್ದ ಎಫ್‌ಐಆರ್ ದಾಖಲಾಗುವ ಬಗ್ಗೆ ಗೊತ್ತಿರಲಿಲ್ಲ. ಅವನೆಲ್ಲೇ ಇದ್ದರೂ ಅಧಿಕಾರಿಗಳು ವಿಚಾರಣೆಗೆ ಕರೆದಾಗ ಬರುತ್ತಾನೆ. ಆದರೆ, ಉಚ್ಚಾಟನೆ ಮಾಡುವುದು ಪಕ್ಷಕ್ಕೆ ಸೇರಿದ್ದು ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿದ್ದಾರೆ.

ಪ್ರಜ್ವಲ್ ಉಚ್ಚಾಟನೆ?:
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಎನ್ನಲಾದ ಪೆನ್ ಡ್ರೈವ್ ಪ್ರಕರಣ ಜೆಡಿಎಸ್ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬಕ್ಕೆ ಭಾರೀ ಮುಜುಗರವನ್ನುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್‌ನಿಂದ ಉಚ್ಚಾಟನೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ಕುರಿತು ಈಗಾಗಲೇ ಎಚ್. ಡಿ. ಕುಮಾರಸ್ವಾಮಿ ಸುಳಿವು ನೀಡಿದ್ದಾರೆ. ಪ್ರಜ್ವಲ್ ಪ್ರಕರಣದಿಂದ ಜೆಡಿಎಸ್‌ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ. ಹೀಗಾಗಿ ಮಂಗಳವಾರ(ಎ.30) ಜೆಡಿಎಸ್ ಕೋರ್ ಕಮಿಟಿ ಸಭೆ ಕರೆಯಲಾಗಿದ್ದು. ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲು ತೀರ್ಮಾನ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಹೆಣ್ಣು ಮಕ್ಕಳನ್ನು ಹೆದರಿಸಿ, ಲೈಂಗಿಕ ದೌರ್ಜನ್ಯ; ನಾಗಲಕ್ಷ್ಮೀ ಚೌಧರಿ:
ಹಾಸನ ಲೈಂಗಿಕ ಹಗರಣದಲ್ಲಿ ಅಧಿಕಾರ ಹಾಗೂ ಸ್ಥಾನವನ್ನು ದುರುಪಯೋಗ ಮಾಡಿಕೊಂಡು ಸಾವಿರಾರು ಹೆಣ್ಣು ಮಕ್ಕಳನ್ನು ಹೆದರಿಸಿ, ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಪ್ರಪಂಚದಲ್ಲೇ ಇಂತಹ ಕೃತ್ಯ ಇದೇ ಮೊದಲ ಬಾರಿಗೆ ನಡೆದಿದ್ದು, ನಮ್ಮ ಮಣ್ಣಿನಲ್ಲಿ ನಡೆದಿರುವುದು ನಮ್ಮ ಪಾಲಿನ ದೊಡ್ಡ ದುರಂತ. ಈಗಾಗಲೇ ಸಂತ್ರಸ್ತ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಎಫ್ ಐಆರ್ ದಾಖಲಾಗಿದೆ ಎಂದರು. ಯಾರೇ ಬಂದು ದೂರು ಕೊಟ್ಟರೂ ಅವರ ಗೌಪ್ಯತೆ ಕಾಪಾಡುತ್ತೇವೆ. ಜತೆಗೆ ರಕ್ಷಣೆ ನೀಡುತ್ತೇವೆ. ಹೀಗಾಗಿ ಧೈರ್ಯವಾಗಿ ಬಂದು ದೂರು ದಾಖಲಿಸಬೇಕು ಎಂದ ಅವರು, ಪೆನ್‌ಡ್ರೈವ್‌ನಲ್ಲಿರುವ ವೀಡಿಯೊಗಳನ್ನು ನೋಡಲು ಕಷ್ಟವಾಯಿತು. ಅಮಾಯಕ ಹೆಣ್ಣು ಮಕ್ಕಳು ಹಾಗೂ ಮಹಿಳೆಯರನ್ನು ಅಕ್ಷರಶಃ ಶೋಷಣೆ ಮಾಡಲಾಗಿದೆ. ಇಂತಹ ವೀಡಿಯೊಗಳನ್ನು ವೈರಲ್ ಮಾಡಬಾರದು ಎಂದು ತಿಳಿಸಿದರು.


Share: