ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಯುವಜನ, ರೈತರು, ಮಹಿಳೆಯರು, ಸಣ್ಣ ಉದ್ಯಮಗಳ ಸುತ್ತ; ಬಿಜೆಪಿಯ ಚಕ್ರವ್ಯೂಹ; ಲೋಕಸಭೆಯಲ್ಲಿ ರಾಹುಲ್ ವಾಗ್ದಾಳಿ

ಯುವಜನ, ರೈತರು, ಮಹಿಳೆಯರು, ಸಣ್ಣ ಉದ್ಯಮಗಳ ಸುತ್ತ; ಬಿಜೆಪಿಯ ಚಕ್ರವ್ಯೂಹ; ಲೋಕಸಭೆಯಲ್ಲಿ ರಾಹುಲ್ ವಾಗ್ದಾಳಿ

Tue, 30 Jul 2024 14:10:17  Office Staff   Vb

ಹೊಸದಿಲ್ಲಿ: ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ದೇಶದ ಯುವಜನರು, ರೈತರು, ಮಹಿಳೆಯರು ಮತ್ತು ಸಣ್ಣ ಉದ್ಯಮಗಳ ಸುತ್ತ 'ಚಕ್ರವ್ಯೂಹ'ವೊಂದನ್ನು ನಿರ್ಮಿಸಿದೆ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ಈ ಚಕ್ರವ್ಯೂಹವೆಂಬ 'ಪದ್ಮವ್ಯೂಹ' (ಬಿಜೆಪಿಯ ಚುನಾವಣಾ ಚಿಹ್ನೆ ತಾವರೆ)ವನ್ನು ನರೇಂದ್ರ ಮೋದಿ, ಅಮಿತ್ ಶಾ, ಮೋಹನ್ ಭಾಗವತ್, ಅಜಿತ್ ದೋವಲ್, ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ- ಈ ಆರು ಮಂದಿ ನಿಯಂತ್ರಿಸುತ್ತಿದ್ದಾರೆ ಎಂದು ಅವರು ಲೋಕಸಭೆಯಲ್ಲಿ ಹೇಳಿದರು.

“ಸಾವಿರಾರು ವರ್ಷಗಳ ಹಿಂದೆ, ಕುರುಕ್ಷೇತ್ರದಲ್ಲಿ, ಆರು ಮಂದಿ ಅಭಿಮನ್ಯುವನ್ನು 'ಚಕ್ರವ್ಯೂಹ'ದಲ್ಲಿ ಸಿಕ್ಕಿಸಿ ಹಾಕಿ ಕೊಂದರು. ಈ ವಿಷಯದಲ್ಲಿ ನಾನು ಸಲ ಸಂಶೋಧನೆ ಮಾಡಿ, 'ಚಕ್ರವ್ಯೂಹ'ವನ್ನು 'ಪದ್ಮವ್ಯೂಹ' ಎಂಬುದಾಗಿಯೂ ಕರೆಯುತ್ತಾರೆ ಎನ್ನುವುದನ್ನು ಕಂಡುಕೊಂಡಿದ್ದೇನೆ. ಚಕ್ರವ್ಯೂಹವು ತಾವರೆಯ ಆಕಾರದಲ್ಲಿದೆ. 21ನೇ ಶತಮಾನದಲ್ಲಿ ನೂತನ 'ಚಕ್ರವ್ಯೂಹ'ವೊಂದನ್ನು, ಅದೂ ತಾವರೆಯ ರೂಪದಲ್ಲಿ ನಿರ್ಮಿಸಲಾಗಿದೆ. ಅದರ ಚಿಹ್ನೆಯನ್ನು ಪ್ರಧಾನಿ ತನ್ನ ಎದೆಯಲ್ಲಿ ಧರಿಸುತ್ತಾರೆ. ಅಂದು ಅಭಿಮನ್ಯುವಿಗೆ ಏನು ಮಾಡಲಾಗಿತ್ತೋ ಅದನ್ನು ಈಗ ಭಾರತದ ಯುವಜನರು, ರೈತರು, ಮಹಿಳೆಯರು, ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಮಾಡಲಾಗುತ್ತಿದೆ. ಇಂದಿನ ಚಕ್ರವ್ಯೂಹವನ್ನು ಆರು ಮಂದಿ ನಿಯಂತ್ರಿಸುತ್ತಿದ್ದಾರೆ.

ಅವರೆಂದರೆ ನರೇಂದ್ರ ಮೋದಿ, ಅಮಿತ್ ಶಾ, ಮೋಹನ್ ಭಾಗವತ್, ಅಜಿತ್ ದೋವಲ್, ಅಂಬಾನಿ ಮತ್ತು ಅದಾನಿ” ಎಂದು ಲೋಕಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಹೇಳಿದರು.

ಇದಕ್ಕೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಆಕ್ಷೇಪ ವ್ಯಕ್ತಪಡಿಸಿದಾಗ, “ಹಾಗಾದರೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಉದ್ಯಮಿಗಳಾದ ಅಂಬಾನಿ ಮತ್ತು ಅದಾನಿ ಹೆಸರುಗಳನ್ನು ಬಿಟ್ಟು ಬಿಡುತ್ತೇನೆ' ಎಂಬುದಾಗಿ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದರು.

ತನ್ನ 'ಚಕ್ರವ್ಯೂಹ' ಸಮೀಕರಣಕ್ಕೆ ವಿವರಣೆ ನೀಡಿದ ರಾಹುಲ್ ಗಾಂಧಿ, 'ಚಕ್ರವ್ಯೂಹ'ದ ಹಿಂದೆ ಮೂರು ಶಕ್ತಿಗಳಿವೆ ಎಂದರು.

“ಭಾರತವನ್ನು ಆಕ್ರಮಿಸಿಕೊಂಡಿರುವ 'ಚಕ್ರವ್ಯೂಹ'ದ ಬೆನ್ನ ಹಿಂದೆ ಮೂರು ಶಕ್ತಿಗಳಿವೆ. ಮೊದಲನೆಯದು, ಬಂಡವಾಳ ಏಕಸ್ವಾಮ್ಯ. ಅಂದರೆ ದೇಶದ ಇಡೀ ಸಂಪತ್ತನ್ನು ಹಂಚಿಕೊಳ್ಳಲು ಇಬ್ಬರಿಗೆ ಮಾತ್ರ ಅವಕಾಶ ನೀಡುವುದು. ಹಾಗಾಗಿ, 'ಚಕ್ರವ್ಯೂಹ'ದ ಒಂದು ಶಕ್ತಿಯು ಆರ್ಥಿಕ ಶಕ್ತಿಯ ಕ್ರೋಡೀಕರಣದಿಂದ ಬರುತ್ತದೆ. ಎರಡನೆಯದು, ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳು, ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆ ಮುಂತಾದ ತನಿಖಾ ಸಂಸ್ಥೆಗಳು. ಮೂರನೆಯದು, ರಾಜಕೀಯವಾಗಿ ಸರಕಾರದ ಶಕ್ತಿ. ಈ ಮೂರು ಶಕ್ತಿಗಳು 'ಚಕ್ರವ್ಯೂಹ' ಹೃದಯ ಭಾಗದಲ್ಲಿವೆ. ಅವುಗಳು ಈ ದೇಶವನ್ನು ನಾಶಪಡಿಸಿವೆ' ಎಂದು ರಾಹುಲ್ ಗಾಂಧಿ ಹೇಳಿದರು.

'ಏಕಸ್ವಾಮ್ಯವನ್ನು ಬಲಪಡಿಸುವುದು ಬಜೆಟ್‌ನ ಉದ್ದೇಶ ಕೇಂದ್ರ ಆಂದ್ರ ಸರಕಾರದ ಬಜೆಟನ್ನು ತೀವ್ರವಾಗಿ ಟೀಕಿಸಿದ ರಾಹುಲ್, ಬಜೆಟ್‌ನ ಏಕೈಕ ಉದ್ದೇಶ ಏಕಸ್ವಾಮ್ಯದ ಚೌಕಟ್ಟನ್ನು ಬಲಪಡಿಸುವುದಾಗಿದೆ ಎಂದು ಹೇಳಿದರು.

“ಈ ಬಜೆಟ್ 'ಚಕ್ರವ್ಯೂಹ'ದ ಶಕ್ತಿಯನ್ನು ದುರ್ಬಲಗೊಳಿಸಬಹುದು, ಈ ಬಜೆಟ್ ಈ ದೇಶದ ರೈತರಿಗೆ ಸಹಾಯ ಮಾಡಬಹುದು, ಈ ಬಜೆಟ್ ಈ ದೇಶದ ಯುವಜನರು, ಕಾರ್ಮಿಕರು ಮತ್ತು ಸಣ್ಣ ಉದ್ಯಮಿಗಳಲ್ಲಿ ಭರವಸೆ ಹುಟ್ಟಿಸಬಹುದು ಎಂದು ನಾನು ನಿರೀಕ್ಷಿಸಿದ್ದೆ.

ಆದರೆ, ಈ ಬಜೆಟ್‌ನ ಏಕೈಕ ಉದ್ದೇಶ ಏಕಸ್ವಾಮ್ಯದ ಉದ್ಯಮಗಳನ್ನು ಬಲಪಡಿಸುವುದು, ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ನಾಶಪಡಿಸಿ ರಾಜಕೀಯ ಏಕಸ್ವಾಮ್ಯವನ್ನು ಬಲಪಡಿಸುವುದು ಮತ್ತು ರಹಸ್ಯವಾಗಿ ವ್ಯವಹರಿಸುವ ಸರಕಾರ ಮತ್ತು ಅದರ ಸಂಸ್ಥೆಗಳನ್ನು ಬಲಪಡಿಸುವುದಾಗಿದೆ. ಇದರ ಪರಿಣಾಮವಾಗಿ, ಭಾರತಕ್ಕೆ ಉದ್ಯೋಗ ನೀಡುತ್ತಿದ್ದ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮೇಲೆ ನಗದು ಅಮಾನೀಕರಣ, ಜಿಎಸ್‌ ಮತ್ತು ತೆರಿಗೆ ಭಯೋತ್ಪಾದನೆಯ ಮೂಲಕ ದಾಳಿ ನಡೆಸಲಾಗಿದೆ'' ಎಂದು ರಾಹುಲ್ ಗಾಂಧಿ ಹೇಳಿದರು.


Share: