ಭಟ್ಕಳ: ಮಹಾಶಿವರಾತ್ರಿ ಪ್ರಯುಕ್ತ ಉಡುಪಿಯ ಸ್ಯಾಂಡ್ ಥೀಮ್ ತಂಡದ ಸದಸ್ಯರಿಂದ ಭಟ್ಕಳ ತಾಲೂಕಿನ ಪ್ರಸಿದ್ಧ ಶಿವ ತಾಣ ಮುರ್ಡೇಶ್ವರದಲ್ಲಿ ಮುರುಢೇಶ್ವರನ ಮರಳು ಕಲಾಕೃತಿ ಅರಳಿನಿಂತಿದೆ.
ಮಹಾಶಿವರಾತ್ರಿ ಮುನ್ನಾದಿನ ಗುರುವಾರ ಹರೀಶ್ ಸಾಗಾ, ಪ್ರಸಾದ್ ಆರ್., ಸಂತೋಷ ಭಟ್ ಹಾಲಾಡಿ ಅವರನ್ನು ಒಳಗೊಂಡ ಸ್ಯಾಂಡ್ ಥೀಮ್ ಉಡುಪಿ ತಂಡ ಮುರುಡೇಶ್ವರ ಕಡಲತೀರದಲ್ಲಿ ನಿರ್ಮಿಸಿರುವ ಶಿವನ ಮರಳು ಶಿಲ್ಪ ಕಲಾಕೃತಿ ಶಿವರಾತ್ರಿ ಸಂಭ್ರಮಕ್ಕೆ ವಿಶೇಷ ಮೆರುಗನ್ನು ನೀಡಿದೆ. ಮರಳಿನಲ್ಲಿ ಅರಳಿದ ಶಿವ ಪ್ರತಿಮೆಯ ಸುತ್ತ ಪ್ರವಾಸಿಗರು ಸೇರುತ್ತಿದ್ದು, ಮೊಬೈಲ್ನಲ್ಲಿ ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಂಡು ಸಂತಸಪಡುತ್ತಿರುವುದು ಕಂಡುಬಂದಿದೆ.
ಮರಳು ಶಿಲ್ಪ ಕಲಾಕೃತಿಗೆ ಹೆಸರುವಾಸಿಯಾಗಿರುವ ಸ್ಯಾಂಡ್ ಥೀಮ್ ತಂಡ ಈಗಾಗಲೇ ಉಡುಪಿ, ಮಂಗಳೂರು, ಮಲ್ಪೆ ಸೇರಿದಂತೆ ಹಲವು ಕಡಲ ಕಿನಾರೆಯಲ್ಲಿ ನೂರಕ್ಕೂ ಹೆಚ್ಚು ಮರಳು ಕಲಾಕೃತಿಯನ್ನು ನಿರ್ಮಿಸಿದೆ.