ಭಟ್ಕಳ: ಇಲ್ಲಿನ ಜಾಲಿ ದೇವಿನಗರದಲ್ಲಿ ಹೊಸ ನಾಮಫಲಕ ಅಳವಡಿಕೆಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಮಂಗಳವಾರವೂ ಪ್ರತಿಭಟನೆ ನಡೆಸಿದರು.
ಮಂಗಳವಾರ ಬೆಳಿಗ್ಗೆಯೇ ಸ್ಥಳದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಅಧಿಕಾರಿಗಳು ತಹಸೀಲ್ದಾರ ಕಚೇರಿಯಲ್ಲಿ ಸಭೆ ನಡೆಸುವುದನ್ನು ಬಿಟ್ಟು ದೇವಿನಗರಕ್ಕೆ ಬಂದು ನಮ್ಮ ಮನವಿ ಆಲಿಸಬೇಕು. ಹೊಸ ನಾಮಫಲಕ ಅಳವಡಿಕೆಗೆ ಯಾವುದೇ ಅಡ್ಡಿಯನ್ನು ನಾವು ಸಹಿಸುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು. ಎಡಿಶನಲ್ ಎಸ್ಪಿ ಡಿ. ಟಿ. ಜಯಕುಮಾರ, ತಹಸೀಲ್ದಾರ ತಿಪ್ಪೇಸ್ವಾಮಿ, ಡಿವಾಯ್‌ಎಸ್ಪಿ ಶ್ರೀಕಾಂತ ಸಿಬ್ಬಂದಿಗಳೊಡನೆ ಸ್ಥಳಕ್ಕೆ ಆಗಮಿಸಿ ಹೊಸ ನಾಮಫಲಕ ಅಳವಡಿಕೆಗೆ ಕಾನೂನಿನಲ್ಲಿ ಅವಕಾಶ ಇಲ್ಲದಿರುವುದನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು. ಕಾನೂನು ಕೈಗೆತ್ತಿಕೊಂಡರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಎಚ್ಚರಿಕೆಯನ್ನೂ ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ನಮಗೆ ಮಾತ್ರ ಕಾನೂನು ಪಾಠ ಮಾಡುವುದು ಸರಿಯಲ್ಲ. ಇಲ್ಲಿ ಮಸೀದಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಅದನ್ನೂ ಈಗಲೇ ತೆರವುಗೊಳಿಸಬೇಕು ಎಂದು ಪಟ್ಟು ಹಿಡಿದರು. ಇದನ್ನು ಒಪ್ಪದ ಅಧಿಕಾರಿಗಳು ದೇವಿನಗರದಲ್ಲಿ ಯಥಾ ಸ್ಥಿತಿ ಮುಂದುವರೆಯಬೇಕು. ಹೊಸದಾಗಿ ಯಾರಿಗೂ ಯಾವುದನ್ನೂ ಅಳವಡಿಸುವುದಕ್ಕೆ ಅವಕಾಶ ನೀಡಲು ಸಾಧ್ಯ ಇಲ್ಲ ಎಂದು ತಿಳಿಸಿದರು.
ನಂತರ ಪ್ರತಿಭಟನಾಕಾರರು ಅಲ್ಲಿಂದ ಯುವಕ ಮಂಡಳ ಕಟ್ಟಡದ ಬಳಿ ಸೇರಿ ಅಧಿಕಾರಿಗಳ ನಡೆಯನ್ನು ಖಂಡಿಸಿದರು. ಸೇರಿದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಭಟ್ಕಳ ಬಿಜೆಪಿ ಮಂಡಳದ ಅಧ್ಯಕ್ಷ ಸುಬ್ರಾಯ ದೇವಡಿಗ,ಕೃಷ್ಣ ನಾಯ್ಕ ಆಸರಕೇರಿ, ಶ್ರೀಕಾಂತ ನಾಯ್ಕ, ಅಧಿಕಾರಿಗಳು ಕಾನೂನು ಪಾಲನೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಜಾಲಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಪಟ್ಟಿ ಮಾಡಿಕೊಂಡು ಹೋರಾಟಕ್ಕೆ ಇಳಿಯುವುದಾಗಿ ಘೋಷಿಸಿದರು.
ಭಟ್ಕಳ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಭಾಸ್ಕರ ದೈಮನೆ, ದಿನೇಶ ನಾಯ್ಕ ಮುಂಡಳ್ಳಿ, ರವಿ ನಾಯ್ಕ ಜಾಲಿ, ರಾಘು ನಾಯ್ಕ ಮಣಕುಳಿ, ಜಾಲಿ ಪಟ್ಟಣ ಪಂಚಾಯತ ಸದಸ್ಯ ದಯಾನಂದ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.