ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬ್ರಿಟಿಷ್ ಯುಗದ ಕಾನೂನುಗಳಿಗೆ ತೆರೆ; ಇಂದಿನಿಂದ ಮೂರು ನೂತನ ಕ್ರಿಮಿನಲ್ ಕಾಯ್ದೆಗಳು ಜಾರಿ

ಬ್ರಿಟಿಷ್ ಯುಗದ ಕಾನೂನುಗಳಿಗೆ ತೆರೆ; ಇಂದಿನಿಂದ ಮೂರು ನೂತನ ಕ್ರಿಮಿನಲ್ ಕಾಯ್ದೆಗಳು ಜಾರಿ

Mon, 01 Jul 2024 13:53:00  Office Staff   Vb News

ಹೊಸದಿಲ್ಲಿ: ಸೋಮವಾರ, ಜುಲೈ 1ರಂದು ಮೂರು ನೂತನ ಕ್ರಿಮಿನಲ್ ಕಾನೂನುಗಳು ದೇಶಾದ್ಯಂತ ಜಾರಿಗೊಳ್ಳಲಿದ್ದು ಬ್ರಿಟಿಷ್ ಯುಗದ ಕಾನೂನುಗಳು ಅಸ್ತಿತ್ವ ಕಳೆದುಕೊಳ್ಳಲಿವೆ.

ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಇವು ಅನುಕ್ರಮವಾಗಿ ಬ್ರಿಟಿಷ್ ಯುಗದ ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಗಳನ್ನು ಬದಲಿಸಲಿದ್ದು, ಭಾರತದ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆಗಳನ್ನು ತರಲಿವೆ.

ಶೂನ್ಯ ಎಫ್‌ಐಆ‌ರ್, ಪೊಲೀಸ್‌ ದೂರುಗಳ ಆನ್‌ಲೈನ್ ನೋಂದಣಿ, ವಿದ್ಯುನ್ಮಾನ ಸಮನ್ಸ್‌ಗಳು ಮತ್ತು ಎಲ್ಲ ಘೋರ ಅಪರಾಧ ಪ್ರಕರಣಗಳಲ್ಲಿ ಅಪರಾಧ ಸ್ಥಳಗಳ ಕಡ್ಡಾಯ ವೀಡಿಯೊ ಚಿತ್ರೀಕರಣದಂತಹ ನಿಬಂಧನೆಗಳೊಂದಿಗೆ ನ್ಯಾಯ ವ್ಯವಸ್ಥೆಯನ್ನು ಆಧುನೀಕರಿಸುವ ಗುರಿಯನ್ನು ಈ ಸುಧಾರಣೆಗಳು ಹೊಂದಿವೆ.

ನೂತನ ಶಾಸನಗಳು ಪ್ರಸ್ತುತ ಸಾಮಾಜಿಕ ಸಂದರ್ಭಗಳು ಮತ್ತು ಅಪರಾಧಗಳನ್ನು ನಿಭಾಯಿಸುತ್ತವೆ ಹಾಗೂ ಸಂವಿಧಾನದಲ್ಲಿ ಎತ್ತಿ ಹಿಡಿಯಲಾಗಿರುವ ತತ್ವಗಳಿಗೆ ಅನುಗುಣವಾಗಿವೆ ಎಂದು ಹೇಳಲಾಗಿದೆ. ನೂತನ ಕಾನೂನುಗಳನ್ನು ಮಂಡಿಸಿದ್ದ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು,ಇವು ದಂಡನಾ ಕ್ರಮಕ್ಕಿಂತ ನ್ಯಾಯಕ್ಕೆ ಆದ್ಯತೆ ನೀಡುವ ಮೂಲಕ ವಸಾಹತುಶಾಹಿ ಯುಗದ ಕ್ರಿಮಿನಲ್ ನ್ಯಾಯ ಕಾನೂನುಗಳಿಂದ ನಿರ್ಗಮನವನ್ನು ಸೂಚಿಸುತ್ತವೆ ಎಂದು ಒತ್ತಿ ಹೇಳಿದ್ದರು.


Share: