ಭಟ್ಕಳ: ಇಂದು ದೇಶದಾದ್ಯಂತ “ಘರ್ ಘರ್ ತಿರಂಗ” ಅಭಿಯಾನ ನಡೆಯುತ್ತಿದೆ. ತ್ರೀವರ್ಣ ದ್ವಜ ಈ ದೇಶದ ಹೆಮ್ಮೆ. ಇದು ನಿರಂತರವಾಗಿ ಆಕಾಶದೆತ್ತರಕ್ಕೆ ಹಾರಬೇಕು. ಆದರೆ ತಿರಂಗದ ಜೊತೆಗೆ ಪ್ರತಿ ಮನೆಗೂ ಉದ್ಯೋಗದ ಭರವಸೆ ಸಿಗಬೇಕು ಎಂದು ವೆಲ್ಫೇರ್ ಸೂಸೈಟಿಯ ಚೇರಮನ್ ಕಾದಿರ್ ಮೀರಾ ಪಟೇಲ್ ಹೇಳಿದರು.
ಅವರು ಹೆಬಳೆ ಪಂಚಾಯತ್ ವ್ಯಾಪ್ತಿಯ ಜಾಮಿಯಾಬಾದ್ ರಸ್ತೆಯಲ್ಲಿರುವ ನ್ಯೂ ಶಮ್ಸ್ ಶಾಲೆಯಲ್ಲಿ ನಡೆದ 78ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಅತ್ಯಂತ ಖೇದಕರ ಸಂಗತಿ ಎಂದರೆ ಇಂದು ನಮ್ಮ ದೇಶದಲ್ಲಿ ದ್ವೇಷದ ವಿಷ ಬೀಜವನ್ನು ಬಿತ್ತಲಾಗುತ್ತಿದೆ. ಕೆಲ ವರ್ಷಗಳ ಹಿಂದೆ ಇಂತಹ ಪರಿಸ್ಥಿತಿ ಇದ್ದಿಲ್ಲ. ಸ್ವಾತಂತ್ರ್ಯೋತ್ಸವದ ಭಾಷಣಗಳಲ್ಲಿ ಇಂತಹ ವಿಷಯಗಳು ಇರುತ್ತಿರಲಿಲ್ಲ. ಅದರೆ ಬಹಳ ದುಃಖದಿಂದ ಇಂದು ಇದನ್ನೆಲ್ಲ ಹೇಳಬೇಕಾಗಿ ಬಂದಿದೆ. ದ್ವೇಷದ ವ್ಯಾಪಾರ ನಿಲ್ಲಬೇಕು, ಪ್ರೀತಿ ಪ್ರೇಮದ ಅಂಗಡಿಗಳು ತೆರೆದುಕೊಂಡಾಗ ಮಾತ್ರ ದೇಶ ಅಭಿವೃದ್ಧಿ ಕಾಣಲು ಸಾಧ್ಯ ಎಂದರು. "ಭಾರತದ ಸ್ಥಿತಿ ಹೀಗೇನಾದರೂ ಆಗಿದ್ದರೆ, ಇದರ ಕಥೆ ಏನಾಗಬಹುದು!?" "ಯಾವ ದೇಶದ ಬಾಲ್ಯ ಹಸಿವಿನಿಂದ ತಲ್ಲಣಗೊಳ್ಳುತ್ತದೆಯೋ, ಆ ದೇಶದ ಯುವಜನರ ಸ್ಥಿತಿ ಹೇಗಿರಬಹುದು!?" ("ಯೇ ಹಾಲ್ ರಹಾ ಥೋ ಭಾರತ್ ಕಾ, ಫಿರ್ ಇಸ್ಕಿ ಕಹಾನಿ ಕ್ಯಾ ಹೋಗಿ !?" "ಜಿಸ್ ದೇಶ್ ಕಾ ಬಚ್ಪನ್ ಭೂಖಾ ಹೋ , ಉಸ್ ದೇಶ್ ಕಿ ಜವಾನಿ ಕ್ಯಾ ಹೋಗಿ !?) ಎಂದು ಉರ್ದು ಕವಿತೆಯ ಸಾಲುಗಳೊಂದಿಗೆ ದೇಶದ ಪ್ರಸಕ್ತ ಸನ್ನಿವೇಶದ ಕುರಿತು ಕಳವಳ ವ್ಯಕ್ತಪಡಿಸಿದರು.
ಭಟ್ಕಳ ಮುಸ್ಲಿಮ್ ಜಮಾಅತ್ ದಮ್ಮಾಮ್ ಇದರ ಉಪಾಧ್ಯಕ್ಷ ಇಸಾ ಶಾಬಂದ್ರಿ ದ್ವಜಾರೋಹಣ ನೆರವೇರಿಸಿದರು.
ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಮಾಜಿ ಅಧ್ಯಕ್ಷ ಅಬ್ದುಲ್ ಕಾದಿರ್ ಬಾಷಾ ರುಕ್ನುದ್ದಿನ್ ಪ್ರಾಂಶುಪಾಲ ಲಿಯಾಖತ್ ಅಲಿ ಮಾತನಾಡಿದರು.
ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ಮೊಹತೆಶಮ್, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ನಝೀರ್ ಆಹ್ಮದ್ ಖಾಝಿ, ಅಝೀಝುರ್ರಹ್ಮಾನ್ ರುಕ್ನುದ್ದೀನ್ ನದ್ವಿ, ಸೈಯ್ಯದ್ ಖುತುಬ್ ಬರ್ಮಾವರ್ ನದ್ವಿ, ಸೈಯ್ಯದ್ ಯಾಸಿರ್ ಬರ್ಮಾವರ್ ನದ್ವಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.