ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕೇರಳದಲ್ಲಿ ಹೆಚ್ಚಿದ ಹಕ್ಕಿಜ್ವರ; ಗಡಿಯಲ್ಲಿ ತೀವ್ರ ಕಟ್ಟೆಚ್ಚರ

ಕೇರಳದಲ್ಲಿ ಹೆಚ್ಚಿದ ಹಕ್ಕಿಜ್ವರ; ಗಡಿಯಲ್ಲಿ ತೀವ್ರ ಕಟ್ಟೆಚ್ಚರ

Mon, 29 Apr 2024 00:08:16  Office Staff   sonews

ಮಂಗಳೂರು: ನೆರೆಯ ಕೇರಳ ರಾಜ್ಯದಲ್ಲಿ ಹಕ್ಕಿಜ್ವರ ಭೀತಿ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ.

ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ ಮಾತನಾಡಿ, ಹಕ್ಕಿಜ್ವರ ಹರಡದಂತೆ ಸುಳ್ಯದ ಜಾಲ್ಸೂರು, ಬಂಟ್ವಾಳದ ಸಾರಡ್ಕ, ಉಳ್ಳಾಲದ ತಲಪಾಡಿ ಚೆಕ್ ಪೋಸ್ಟ್ ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಹೇಳಿದ್ದಾರೆ.

ಆಲಪ್ಪುಳ ನಮ್ಮ ಜಿಲ್ಲೆಯಿಂದ ಸುಮಾರು 400 ಕಿಲೊಮೀಟರ್ ದೂರದಲ್ಲಿದೆ. ಆದ್ದರಿಂದ ಯಾರೂ ಆತಂಕಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲ. ಕೇರಳ ಗಡಿಭಾಗ ಸುಳ್ಯದ ಜಾಲ್ಸೂರು, ಬಂಟ್ವಾಳದ ಸಾರಡ್ಕ, ಉಳ್ಳಾಲದ ತಲಪಾಡಿಯಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ.

ಕರ್ನಾಟಕದ ಕೋಳಿ, ಕೋಳಿ ಮಾಂಸ ಮತ್ತು ಕೋಳಿ ಉತ್ಪನ್ನಗಳಿಗೆ ಕೇರಳವೇ ದೊಡ್ಡ ಮಾರುಕಟ್ಟೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಕೇರಳಕ್ಕೆ ಇವುಗಳನ್ನು ಸಾಗಿಸಲಾಗುತ್ತದೆ. ಈ ಸಾಗಾಟದ ವಾಹನಗಳನ್ನು ಗಡಿಭಾಗಗಳಲ್ಲಿ ಸ್ಯಾನಿಟೈಜ್ ಮಾಡಲಾಗುತ್ತದೆ. ಕೇರಳದಿಂದ ಖಾಲಿ ವಾಹನಗಳು ಬರುತ್ತವೆ. ಈ ವಾಹನಗಳನ್ನು ಕೂಡ ಗಡಿಯಲ್ಲಿ ಸ್ಯಾನಿಟೈಜ್ ಮಾಡಿದ ನಂತರವೇ ಒಳಗೆ ಬಿಡಲಾಗುತ್ತದೆ ಎಂದು ತಿಳಿಸಿದರು.

ಹೊರಗಿನವರು ಮತ್ತು ಅಪರಿಚಿತರನ್ನು ಕೋಳಿ ಸಾಕಣೆ ಕೇಂದ್ರದೊಳಗೆ ಬಿಡಬಾರದು ಎಂದು ಕೇಂದ್ರಗಳ ಮಾಲೀಕರಿಗೆ ಸೂಚಿಸಲಾಗಿದೆ. ಸೋಂಕು ಹರಡುವುದನ್ನು ತಡೆಯುವುದಕ್ಕಾಗಿ ಹೊರರಾಜ್ಯದಿಂದ ಬರುವ ವಾಹನವನ್ನು ಕೇಂದ್ರದೊಳಗೆ ಬಿಡುವ ಮೊದಲು ಕಡ್ಡಾಯವಾಗಿ ಸ್ಯಾನಿಟೈಜ್ ಮಾಡಬೇಕು ಎಂದು ತಿಳಿಸಲಾಗಿದೆ.

ಹಕ್ಕಿಜ್ವರ ಹೆಚ್ಚಾಗಿ ವಲಸೆ ಹಕ್ಕಿಗಳಿಂದ ಹರಡುತ್ತದೆ. ದಕ್ಷಿಣ ಕನ್ನಡ ಜಿಲ್ಲೆಗೆ ವಿದೇಶದಿಂದ ಹಕ್ಕಿಗಳ ವಲಸೆ ಇಲ್ಲ. ಕೇರಳ ಮತ್ತು ಸುತ್ತಮುತ್ತಲಿಂದ ಬರುತ್ತವೆ. ಆದರೆ ಈಗ ಕಡು ಬೇಸಿಗೆ ಇರುವುದರಿಂದ ಹಕ್ಕಿಗಳ ವಲಸೆ ತೀರಾ ಅಪರೂಪ. ಹೀಗಾಗಿ ಹಕ್ಕಿ‌ಜ್ವರದ ಸೋಂಕು ಹರಡುವ ಸಾಧ್ಯತೆ ಕಡಿಮೆ. ಆದರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಹಕ್ಕಿಗಳು ಅಥವಾ ಕೋಳಿಗಳು ಶಂಕಾಸ್ಪದವಾಗಿ ಸಾವಿಗೀಡಾಗಿರುವುದು ಕಂಡುಬಂದರೆ ತಕ್ಷಣ ಇಲಾಖೆಯ ಗಮನಕ್ಕೆ ತರಬೇಕು ಎಂದು ರೈತರಿಗೆ ತಿಳಿಸಲಾಗಿದೆ. ಹಕ್ಕಿಜ್ವರ ಹರಡುವುದರ ಕುರಿತು ಮತ್ತು ಅದನ್ನು ತಡೆಯುವ ಕ್ರಮಗಳ ಬಗ್ಗೆ ಪಶುವೈದ್ಯರು ರೈತರಿಗೆ ಮಾಹಿತಿ ನೀಡಿದ್ದಾರೆ. ಕೋಳಿ ಸಾಕಣೆ ಕೇಂದ್ರ ಮತ್ತು ಮಾಂಸ ಸಂಸ್ಕರಣೆ ಘಟಕಗಳಲ್ಲಿ ಕೆಲಸ ಮಾಡುವವರಿಗೆ ಹಕ್ಕಿಜ್ವರದ ಸೋಂಕು ತಗಲುವ ಸಾಧ್ಯತೆ ಹೆಚ್ಚು ಇರುವುದರಿಂದ ಜಾಗೃತರಾಗಿರುವಂತೆ ತಿಳಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಇದುವರೆಗೆ ಹಕ್ಕಿಜ್ವರದ ಯಾವ ಲಕ್ಷಣವೂ ಕಂಡುಬಂದಿಲ್ಲ. ಆದರೂ ಇಲಾಖೆ ಜಾಗರೂಕವಾಗಿದೆ. ಹಕ್ಕಿಜ್ವರ ಇದ್ದರೂ ಕೋಳಿ ಮಾಂಸ ಸೇವನೆಯಿಂದ ಹರಡುವುದಿಲ್ಲ. ಆದ್ದರಿಂದ ಮಾಂಸ ತಿನ್ನುವುದನ್ನು ಬಿಡಬೇಡಿ. ಸೋಂಕು ಕಾಲಿಟ್ಟರೂ ಕೋಳಿ ಸಾಕಣೆ ಕೇಂದ್ರದಲ್ಲಿ ಮತ್ತು ಮಾಂಸ ಸಂಸ್ಕರಣೆ ಮಾಡುವವರಿಗೆ ಮಾತ್ರ ತಗಲುತ್ತದೆ. ಮತ್ತೊಂದು ವಿಶೇಷವೆಂದರೆ ಈ ಸೋಂಕು ಮನುಷ್ಯನಿಂದ ಮನುಷ್ಯನಿಗೆ ಹರಡುವುದಿಲ್ಲ. ಹಕ್ಕಿಗಳಿಂದ ಮಾತ್ರ ಹರಡುತ್ತದೆ. ಆದ್ದರಿಂದ ಯಾರೂ ಗಾಬರಿಯಾಗಬೇಕಾದ ಅಗತ್ಯವಿಲ್ಲ. ಮಾಂಸದ ಬೇಡಿಕೆ ಕಡಿಮೆಯಾದ ಕೋಳಿ ಸಾಕಣೆ ಮತ್ತು ವ್ಯಾಪಾರದ ಮೇಲೆಯೂ ದುಷ್ಪರಿಣಾಮ ಉಂಟಾಗುತ್ತದೆ. ಅದಕ್ಕೆ ಆಸ್ಪದ ನೀಡುವುದು ಬೇಡ ಎಂದು ಹೇಳಿದರು.


Share: