ಭಟ್ಕಳ: ತಾಲೂಕಿನ ಹೆಬಳೆ ಗ್ರಾ.ಪಂ.ವ್ಯಾಪ್ತಿಯ ತೆಂಗಿನಗುಂಡಿ ಬಂದರಿಗೆ ಗುರುವಾರ ಸಂಜೆ ರಾಜ್ಯ ಮೀನುಗಾರಿಕಾ ಸಚಿವ ಆನಂದ ಅಸ್ನೋಟಿಕರ್ ಭೇಟಿ ನೀಡಿದ್ದು ಅಲ್ಲಿ ಶಿಥಿಲಗೊಂಡು ಕುಸಿಯು ಹಂತಕ್ಕೆ ತಲುಪಿರುವ ಮೀನು ಹರಾಜು ಕೇಂದ್ರ ಹಾಗೂ ಕುಸಿದಿರುವ ಜಟ್ಟಿಯನ್ನು ವೀಕ್ಷಿಸಿದರು. ನಂತರ ಅಧಿಕಾರಿಗಳೊಂದಿಗೆ ಇದನ್ನು ಮಳೆಗಾಲ ಆರಂಭವಾಗುವ ಪೂರ್ವದಲ್ಲಿ ದುರಸ್ತಿ ಕಾರ್ಯವನ್ನು ಕೈಗೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮೀನುಗಾರರ ಮುಖಂಡರು ಕಳೆದ ಹಲವು ವರ್ಷಗಳಿಂದ ತೆಂಗಿನಗುಂಡಿ ಬಂದರಿನಲ್ಲಿ ಬ್ರೇಕ್ ವಾಟರ್ ನಿರ್ಮಾಣ, ಹಾಳಾಗಿರುವ ಜಟ್ಟಿ ಹಾಗೂ ಶಿಥಿಲಗೊಂಡಿರುವ ಮೀನು ಹರಾಜು ಕೇಂದ್ರ ರಿಪೇರಿಯ ಕುರಿತು ಒತ್ತಾಯಿಸುತ್ತಲೇ ಬಂದಿದ್ದೇವೆ. ಕಳೆದ ವರ್ಷ ಮೀನು ಹರಾಜು ಕೇಂದ್ರಕ್ಕೆ ಮೇಲ್ಚಾವಣಿ ರಿಪೇರಿ ಮಾತ್ರ ಕೈಗೊಳ್ಳಲಾಗಿದ್ದು,ತಗಡು ಶೀಟ್‌ಗಳು ಗಾಳಿಗೆ ಹಾರಿ ಹೋಗಿದೆ. ಅಳಿವೆ ಪ್ರದೇಶದಲ್ಲಿ ವ್ಯಾಪಕವಾಗಿ ಹೂಳು ತುಂಬಿದ್ದರಿಂದ ಪ್ರತಿವರ್ಷ ಬೋಟುಗಳು ಮುಳುಗಿ ಹಾನಿಯಾಗುತ್ತಲೇ ಇದೆ. ಇದರಿಂದ ಜೀವಹಾನಿಯೂ ಉಂಟಾದ ಉದಾಹರಣೆ ಇದೆ. ಹೂಳು ತುಂಬಿದ್ದರಿಂದ ಬಂದರಿಗೆ ಬರುವ ಬೋಟುಗಳ ಸಂಖ್ಯೆ ಕಡಿಮೆಯಾಗಿದ್ದು, ಬ್ರೇಕ್ ವಾಟರ್ ನಿರ್ಮಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಯಾವ ಬೋಟುಗಳು ತೆಂಗಿನಗುಂಡಿಗೆ ಬರದ ಪರಿಸ್ಥಿತಿ ಉಂಟಾಗುತ್ತದೆ ಎಂದರು. ಮೀನುಗಾರರ ಸಮಸ್ಯೆಗಳನ್ನು ಕೇಳಿದ ಸಚಿವ ಆನಂದ ಆಸ್ನೋಟಿಕರ್ ಬಂದರಿನಲ್ಲಿ ಬ್ರೇಕ್ ವಾಟರ್ ಕಾಮಗಾರಿಯ ಅಧ್ಯಯನಕ್ಕೆ ಪುಣೆ ಇನ್ಸಸ್ಟಿಟ್ಯೂಟ್‌ವೊಂದಕ್ಕೆ ೧೦ ಲಕ್ಷ ರೂಪಾಯಿ ನೀಡಿ ಅಧ್ಯಯನ ವರದಿ ತಯಾರಿಸಿ ಮುಂದಿನ ಅಗತ್ಯ ಕ್ರಮದ ಬಗ್ಗೆ ನಿರ್ಧಾರಕೈಗೊಳ್ಳುವ ಭರವಸೆ ನೀಡಿದರು. ಅದರಂತೆ ಈ ಹಿಂದೆ ಇದ್ದ ಅಧ್ಯಯನ ವರದಿಯನ್ನು ಪರಿಶೀಲನೆ ನಡೆಸಿ ನಬಾರ್ಡನಲ್ಲಿ ಈ ಕಾಮಗಾರಿಯನ್ನು ಕೈಗೊಳ್ಳುವ ಭರವಸೆಯನ್ನೂ ನೀಡಿದ ಅವರು ಮೀನುಗಾರರಿಗೆ ಹೆಚ್ಚಿನ ಅನುಕೂಲವಾಗಲು ಹರಾಜು ಕೇಂದ್ರ ರಿಪೇರಿ, ಬಂದರು ಪ್ರದೇಶದಲ್ಲಿ ಕಾಂಕ್ರೀಟಿಕರಣ ಹಾಗೂ ಬ್ರೇಕ್ ವಾಟರ್ ಕಾಮಗಾರಿ ಕೂಡಲೇ ಆರಂಭಿಸುವ ಭರವಸೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ತೆಂಗಿನಗುಂಡಿ ಮೀನುಗಾರರ ಒಕ್ಕೂಟದ ಅಧ್ಯಕ್ಷ ನಾರಾಯಣ ಮೊಗೇರ,ಎಫ್. ಕೆ. ಮೊಗೇರ, ಪರಮೇಶ್ವರ ದೇವಾಡಿಗ, ಕುಮಾರ ಹೆಬಳೆ, ಪುಂಡಲೀಕ ಹೆಬಳೆ, ಹೊನ್ನಪ್ಪ ಮೊಗೇರ, ಕೇಶವ ಮೊಗೇರ, ವಿಠಲ ದೈಮನೆ, ಅನಂತ ಮೊಗೇರ, ಕೃಷ್ಣ ಮೊಗೇರ, ತಿಮ್ಮಪ್ಪ ಮೊಗೇರ, ಭಾಷಾ ಸೇರಿದಂತೆ ತಹಶೀಲ್ದಾರ ಎಸ್ ಎಂ ನಾಯ್ಕ, ತಾಪಂ ಕಾರ್ಯನಿರ್ವಹಣಾಧಿಕಾರಿ ಉದಯ ನಾಯ್ಕ, ಮೀನುಗಾರಿಕಾ ಸಹಾಯಕ ನಿರ್ದೇಶಕ ರವಿಕುಮಾರ ಮುಂತಾದವರು ಉಪಸ್ಥಿತರಿದ್ದರು.