ಮಂಗಳೂರು: ಕೃಷ್ಣಾಪುರ ಮುಸ್ಲಿಮ್ ಜಮಾಅತ್‌ಗೆ ಒಳಪಡುವ ಕಾಟಿಪಳ್ಳ 3ನೇ ಬ್ಲಾಕ್‌ನ ಮಸ್ಟಿದುಲ್ ಹುದಾ ಜುಮಾ ಮಸೀದಿಗೆ ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಆರೋಪಿಗಳನ್ನು ಸುರತ್ಕಲ್ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಸುರತ್ಕಲ್ ಕಾನ ಕಟ್ಲ ಆಶ್ರಯ ಕಾಲನಿ ನಿವಾಸಿಗಳಾದ ಭರತ್ ಶೆಟ್ಟಿ(26), ಚೆನ್ನಪ್ಪ ಶಿವಾನಂದ ಚಲವಾದಿ ಅಲಿಯಾಸ್ ಮುತ್ತು (19), ಸುರತ್ಕಲ್ ಚೇಳಾಯರು ಖಂಡಿಗೆ ಪಾಡಿ ನಿವಾಸಿ ನಿತಿನ್ ಹಡಪ (22), ಮುಂಚೂರು ಕೊಡಿಪಾಡಿ ನಿವಾಸಿ ಸುಜಿತ್ ಶೆಟ್ಟಿ (23), ಹೊಸಬೆಟ್ಟು 3ನೇ ಕ್ರಾಸ್ ಈಶ್ವರ ನಗರ ನಿವಾಸಿ ಅಣ್ಣಪ್ಪ ಅಲಿಯಾಸ್ ಮನು (24), ಕಾಟಿಪಳ್ಳ 3ನೇ ಬ್ಲಾಕ್ ನಿವಾಸಿ ಪ್ರೀತಮ್ ಶೆಟ್ಟಿ (34) ಬಂಧಿತ ಆರೋಪಿಗಳು. ಇವರಿಂದ ಕೃತ್ಯಕ್ಕೆ ಉಪಯೋಗಿಸಿದ 1 ಕಾರು, 2 ಬೈಕ್ ಹಾಗೂ 4 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಸೀದಿಯಲ್ಲಿ ಮೀಲಾದುನ್ನಬಿ ಪ್ರಯುಕ್ತ ದೀಪಾಲಂಕಾರ ಮಾಡಿ ಯುವಕರು ಪೂರ್ವ ತಯಾರಿ ನಡೆಸುತ್ತಿದ್ದರು. ತಡರಾತ್ರಿ ಎರಡು ಬೈಕ್‌ಗಳಲ್ಲಿ ಜನತಾ ಕಾಲನಿ ಸ್ಮಶಾನದ ಕಡೆಯಿಂದ ಆಗಮಿಸಿದ ಕಿಡಿಗೇಡಿಗಳು ಮಸೀದಿಯ ಹಿಂಭಾಗದ ಕಿಟಕಿಗಳ ಮೇಲೆ ಕಲ್ಲು ತೂರಾಟ ಮಾಡಿದ್ದರು. ಈ ವೇಳೆ ಮಸೀದಿಯ ಬಳಿ ಕೆಲಸ ಮಾಡುತ್ತಿದ್ದ ಯುವಕರು ಬೊಬ್ಬೆ ಹೊಡೆದಿದ್ದಾರೆ. ಈ ಸಂದರ್ಭ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.
ಘಟನೆಗೆ ಸಂಬಂಧಿಸಿ ಮಸೀದಿಯ ಅಧ್ಯಕ್ಷ ಕೆ.ಎಚ್. ಅಬ್ದುಲ್ ರಹ್ಮಾನ್ ಎಂಬವರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಸುರತ್ಕಲ್ ಪೊಲೀಸರು ಪಣಂಬೂರು ಎಸಿಪಿ ಶ್ರೀಕಾಂತ್ ಕೆ. ನೇತೃತ್ವದಲ್ಲಿ ಸುರತ್ಕಲ್ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ತಂಡ ಆರೋಪಿಗಳನ್ನು ಬಂಧಿಸಿ ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.
ಆರೋಪಿಗಳ ಪೈಕಿ 1ನೇ ಆರೋಪಿ ಭರತ್ ಶೆಟ್ಟಿ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 12 ಪ್ರಕರಣಗಳಿದ್ದು, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ರೌಡಿಶೀಟ್ ತೆರೆಯಲಾಗಿದೆ. 2ನೇ ಆರೋಪಿ ಚೆನ್ನಪ್ಪ ಶಿವಾನಂದ ಚಲವಾದಿ ಆಲಿಯಾಸ್ ಮುತ್ತು ಮೇಲೆ 5 ಪ್ರಕರಣ, 3ನೇ ಆರೋಪಿ ನಿತಿನ್ ಹಡಪ ಮೇಲೆ 1 ಪ್ರಕರಣ, 5ನೇ ಆರೋಪಿ ಅಣ್ಣಪ್ಪ ಆಲಿಯಾಸ್ ಮನು ಮೇಲೆ 2 ಪ್ರಕರಣಗಳು, 6ನೇ ಆರೋಪಿ ಪ್ರೀತಮ್ ಶೆಟ್ಟಿ ಮೇಲೆ 2 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದ ಪಣಂಬೂರು ಎಸಿಪಿ: ಘಟನೆ ನಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ್ದ ಪಣಂಬೂರು ಉಪ ವಿಭಾಗದ ಎಸಿಪಿ ಶ್ರೀಕಾಂತ್ ಕೆ. ಮಸೀದಿ ಬಳಿಯೇ ರಾತ್ರಿ ಪೂರ್ತಿ ಮೊಕ್ಕಾಂ ಹೂಡಿದ್ದರು. ಅಲ್ಲದೆ ಆರೋಪಿಗಳ ಬಂಧನಕ್ಕೆ ಅನುಕೂಲವಾಗುವಂತೆ ಪ್ರತಿ ಕ್ಷಣ ಸೂಕ್ತ ಸಲಹೆ ಸೂಚನೆಗಳನ್ನು ಕಾರ್ಯಾಚರಣೆಯ ತಂಡಕ್ಕೆ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾದರು ಎಂದು ತಿಳಿದು ಬಂದಿದೆ.
ಕೃತ್ಯ ನಡೆದು ಮೂರೇ ಗಂಟೆಯಲ್ಲಿ ಆರೋಪಿಗಳ ಸೆರೆ: ಘಟನೆಯ ಮಾಹಿತಿ ಹಬ್ಬುತ್ತಿದ್ದಂತೆ ಸಾರ್ವಜನಿಕರು ಮಸೀದಿ ಬಳಿ ಜಮಾಯಿಸಲು ಆರಂಭಿಸಿದರು. ಇದನ್ನು ಕಂಡ ಸ್ಥಳದಲ್ಲಿದ್ದ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಮಸೀದಿ ಆಡಳಿತ ಸಮಿತಿಯೊಂದಿಗೆ ಚರ್ಚಿಸಿ, ಮಸೀದಿ ಬಳಿ ಸೇರಿರುವ ಸಾರ್ವಜನಿಕರನ್ನು ಸ್ಥಳದಿಂದ ಕಳುಹಿಸುವಂತೆ ಮನವಿ ಮಾಡಿಕೊಂಡರು. ಘಟನೆಗೆ ಸಂಬಂಧಿಸಿ ಆರೋಪಿಗಳ ಗುರುತು ಪತ್ತೆಯಾಗಿದ್ದು, 3ಗಂಟೆಗಳ ಒಳಗಾಗಿ ಬಂಧಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ತಕ್ಷಣ ಕಾರ್ಯಪ್ರವೃತ್ತರಾದ ಮಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ್ ಕೆ. ಸ್ಥಳದಲ್ಲೇ ಇದ್ದು ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದತೆಯೇ, ಸುರತ್ಕಲ್ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದ ತಂಡ ಕಾರ್ಯಾಚರಣೆ ಆರಂಭಿಸಿ ಆರೋಪಿಗಳ ಗುರುಪತ್ತೆ ಹಚ್ಚಿದ್ದರು. ಆರೋಪಿಗಳು ಮಂಗಳೂರು ನಗರದ ಕದ್ರಿಯ ಆಟದ ಮೈದಾನದಲ್ಲಿ ಕಾರೊಂದರಲ್ಲಿ ಇರುವ ಬಗ್ಗೆ ಮಾಹಿತಿ ಖಚಿತ ಪಡಿಸಿಕೊಂಡು ಅಲ್ಲಿಂದ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಒಟ್ಟಾರೆಯಾಗಿ ಎಸಿಪಿ ಶ್ರೀಕಾಂತ್ ಮತ್ತು ಸುರತ್ಕಲ್ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಕೃತ್ಯ ನಡೆದ ಮೂರು ಗಂಟೆಗಳ ಒಳಗಾಗಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.