ಬೆಂಗಳೂರು: ರಾಜ್ಯಾದ್ಯಂತ 2023-24ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಶೇ.73.40ರಷ್ಟು ಉತ್ತೀರ್ಣತೆ ದಾಖಲಾಗಿದೆ. ಎಂದಿನಂತೆ ಈ ಬಾರಿಯೂ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಬಾಲಕಿಯರ ಫಲಿತಾಂಶವು ಶೇ.81.11ರಷ್ಟು ಇದ್ದು, ಬಾಲಕರು ಶೇ.65.90ರಷ್ಟು ಮಾತ್ರ ಉತ್ತೀರ್ಣರಾಗಿದ್ದಾರೆ. ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಫಲಿತಾಂಶವನ್ನು ದಾಖಲಿಸಿದ್ದು, ನಗರ ಪ್ರದೇಶದ ವಿದ್ಯಾರ್ಥಿಗಳು ಶೇ.72.83ರಷ್ಟು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶೇ.74.17ರಷ್ಟು ಉತ್ತೀರ್ಣರಾಗಿದ್ದಾರೆ.
ನಿತ್ಯದ ಓದಿನಿಂದ ಇಷ್ಟು ಅಂಕಗಳಿಸಲು ಸಾಧ್ಯವಾಯಿತು. ನನ್ನ ಪೋಷಕರ ಸಲಹೆ ಸಹಕಾರ ಕೂಡ ಪೂರಕವಾಗಿ ಕೆಲಸ ಮಾಡಿದೆ. ಶಾಲೆಯಲ್ಲಿಯೂ ಶಿಕ್ಷಕರು ಸಮಯವನ್ನು ನೋಡದೆ ನನ್ನ ಸಂದೇಹಗಳನ್ನು ಬಗೆಹರಿಸುತ್ತಿದ್ದರು. ಸಂಸ್ಕೃತದಲ್ಲಿ 1 ಅಂಕ ಕಡಿಮೆ ಬಂದಿದೆ. ಮರುಮೌಲ್ಯಮಾಪನ ಹಾಕುವ ಕುರಿತು ಚಿಂತಿಸುತ್ತಿದ್ದೇನೆ. ಮುಂದೆ ಎಂಬಿಬಿಎಸ್ ಪೂರೈಸಿ ಸ್ತ್ರೀರೋಗತಜ್ಞೆ ಆಗುವ ಆಲೋಚನೆಯಿದೆ. ಮೇಧಾ ಪಿ.ಶೆಟ್ಟಿ, ಬೆಂಗಳೂರಿನ ಹೋಲಿ ಚೈಲ್ಡ್ ಇಂಗ್ಲಿಷ್ ಶಾಲೆಯ ವಿದ್ಯಾರ್ಥಿನಿ |
ಖಾಸಗಿ ಶಾಲೆಗಳ ಮಕ್ಕಳು ಸರಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗಿಂತ ಹೆಚ್ಚಿನ ಫಲಿತಾಂಶವನ್ನು ದಾಖಲಿಸಿದ್ದಾರೆ. ಸರಕಾರಿ ಶೇ.72.46, ಅನುದಾನಿತ ಶೇ.72.22 ಮತ್ತು ಖಾಸಗಿ ಶಾಲಾ ಮಕ್ಕಳ ಉತ್ತೀರ್ಣತೆ ಶೇ.86.46ರಷ್ಟಿದೆ.
ಒಟ್ಟು 2,288 ಶಾಲೆಗಳು ಶೇ.100ರಷ್ಟು ಉತ್ತೀರ್ಣತೆ ಫಲಿತಾಂಶವನ್ನು ದಾಖಲಿಸಿದ್ದು, 78 ಶಾಲೆಗಳು ಶೂನ್ಯ ಫಲಿತಾಂಶವನ್ನು ದಾಖಲಿಸಿವೆ.
ಶೇ.100ರಷ್ಟು ಉತ್ತೀರ್ಣತೆ ಫಲಿತಾಂಶ ದಾಖಲಿಸಿದ ಶಾಲೆಗಳ ಪೈಕಿ 785 ಸರಕಾರಿ, 206 ಅನುದಾನಿತ ಮತ್ತು 1,297 ಖಾಸಗಿ ಶಾಲೆಗಳಾಗಿವೆ. ಶೂನ್ಯ ಫಲಿತಾಂಶ ದಾಖಲಿಸಿದ ಶಾಲೆಗಳ ಪೈಕಿ 3 ಸರಕಾರಿ, 13 ಅನುದಾನಿತ ಮತ್ತು 62 ಖಾಸಗಿ ಶಾಲೆಗಳಾಗಿವೆ. ಹಿಂದಿನ ಬಾರಿ ಕೇವಲ 34 ಶಾಲೆಗಳು ಮಾತ್ರ ಶೂನ್ಯ ಫಲಿತಾಂಶವನ್ನು ದಾಖಲಿಸಿದ್ದವು.
7 ವಿದ್ಯಾರ್ಥಿಗಳಿಗೆ 624 ಅಂಕ: ಬೆಂಗಳೂರಿನ ಖಾಸಗಿ ಶಾಲೆಯ ವಿದ್ಯಾರ್ಥಿನಿ ಮೇಧಾ ಪಿ. ಶೆಟ್ಟಿ, ಶಿರಾ ಪಟ್ಟಣದ ಹರ್ಷಿತಾ ಡಿ.ಎಂ., ದಕ್ಷಿಣ ಕನ್ನಡ ಜಿಲ್ಲೆಯ ಚಿನ್ಮಯ್ ಜಿ.ಕೆ., ಸಿದ್ದಾಂತ ನಾಯ್ಕಬಾ ಗದಗೆ, ದರ್ಶನ್ ಸುಭಯ್ ಭಟ್, ಚಿನ್ಮಯಿ ಶ್ರೀಪಾದ್ ಹೆಗ್ಡೆ, ಶ್ರೀರಾಮ್ ಕೆ.ಎಂ. 625 ಅಂಕಗಳಿಗೆ 624 ಅಂಕಗಳನ್ನು ಪಡೆದಿದ್ದಾರೆ.
ಗ್ರೇಸ್ ಮಾರ್ಕ್ಸ್: ಎಸೆಸೆಲ್ಸಿ ಪರೀಕ್ಷೆಗಳಿಗೆ ಎಲ್ಲ ಕೃಪಾಂಕಗಳನ್ನು ಆಕರ್ಷಿಸಲು ಪಡೆಯಬೇಕಾದ ಅರ್ಹ ಅಂಕಗಳನ್ನು ಶೇ.35ರಿಂದ ಶೇ.25ಕ್ಕೆ ಇಳಿಸಲಾಗಿದೆ. ಹಾಗೆಯೇ, ಕೃಪಾಂಕದ ಪ್ರಮಾಣವನ್ನು ಶೇ.10ರಿಂದ ಶೇ.20ಕ್ಕೆ ಹೆಚ್ಚಿಸಲಾಗಿದೆ. ಈ ಕ್ರಮದ ನಂತರ ಒಟ್ಟಾರೆ ಫಲಿತಾಂಶವು ಶೇ.73.40 ಆಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ.
ಕರಾವಳಿ ಜಿಲ್ಲೆಗಳೇ ಮೇಲುಗೈ: ಎಸೆಸೆಲ್ಸಿ ಫಲಿತಾಂಶದಲ್ಲಿ ಕರಾವಳಿ ಜಿಲ್ಲೆಗಳೇ ಈ ಬಾರಿ ಮೇಲುಗೈ ಸಾಧಿಸಿವೆ. ಶೇ.94ರಷ್ಟು ಫಲಿತಾಂಶ ಪಡೆದ ಉಡುಪಿ ಜಿಲ್ಲೆಯು ಪ್ರಥಮ ಸ್ಥಾನ ಪಡೆದಿದ್ದರೆ, ಶೇ.92.12ರಷ್ಟು ಫಲಿತಾಂಶ ಪಡೆದ ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನ ಪಡೆದಿದೆ. ಮೂರನೇ ಸ್ಥಾನದಲ್ಲಿ ಶಿವಮೊಗ್ಗ, ನಾಲ್ಕನೇ ಸ್ಥಾನದಲ್ಲಿ ಕೊಡಗು ಮತ್ತು ಐದನೇ ಸ್ಥಾನದಲ್ಲಿ ಉತ್ತರ ಕನ್ನಡ ಜಿಲ್ಲೆ ಇದೆ. ಶೇ.50.59ರಷ್ಟು ಫಲಿತಾಂಶ ದಾಖಲಿಸಿದ ಯಾದಗಿರಿ ಕೊನೆಯ ಸ್ಥಾನದಲ್ಲಿದೆ.
ಹಿಂದಿನ ಫಲಿತಾಂಶಕ್ಕಿಂತ ಈ ಬಾರಿ ಕಡಿಮೆ ಉತ್ತೀರ್ಣ: ಈ ಬಾರಿ ಉತ್ತೀರ್ಣತೆಯ ಫಲಿತಾಂಶ ಶೇ.73.40ರಷ್ಟು ದಾಖಲಾಗಿದೆ. ಒಟ್ಟಾರೆ ಫಲಿತಾಂಶವು ಹಿಂದಿನ ವರ್ಷಕ್ಕಿಂತ ಈ ವರ್ಷದ ಉತ್ತೀರ್ಣತೆ ಶೇ.30ರಷ್ಟು ಕಡಿಮೆಯಾಗಿದ್ದು, 2022-23ನೇ ಸಾಲಿನಲ್ಲಿ ಎಸೆಸೆಲ್ಸಿ ಫಲಿತಾಂಶವು ಶೇ.83.89ರಷ್ಟು ಫಲಿತಾಂಶ ದಾಖಲಾಗಿತ್ತು. 2021-22 ರಲ್ಲಿ 85.13, 2022-210 ರಲ್ಲಿ 99.99 ಫಲಿತಾಂಶ ದಾಖಲಾಗಿತ್ತು.
ಪ್ರಪ್ರಥಮ ಬಾರಿಗೆ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿಗಳ ಮೂಲಕ ವೆಬ್ ಕ್ಯಾಸ್ಟಿಂಗ್ ಮಾಡುವ ಹೊಸ ಪದ್ದತಿಯನ್ನು ಪುನರ್ಸ್ಥಾಪಿಸಲು ಸಹಾಯಕವಾಗಿದೆ. ಮುಂಬರುವ ವರ್ಷಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನೂತನ ವ್ಯವಸ್ಥೆಗೆ ಉತ್ತಮವಾಗಿ ಹೊಂದಿಕೊಳ್ಳುವುದರಿಂದ ಫಲಿತಾಂಶ ವೃದ್ಧಿಯ ಅಗತ್ಯವಿರುವುದಿಲ್ಲ ಎಂದು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಲಿ ತಿಳಿಸಿದೆ.