ಕಾರವಾರ: ನಮ್ಮ ರಾಷ್ಟçದ ನಾಗರೀಕರ ಪ್ರಮುಖ ವಿಶಿಷ್ಠ ಗುರುತಿನ ಚೀಟಿಯಾಗಿರುವ ಆಧಾರ್ ಕಾರ್ಡ್, ಅಕ್ರಮ ವಲಸಿಗರಿಗೆ ಮತ್ತು ನುಸುಳುಕೋರರಿಗೆ ದೊರಕದಂತೆ ಆಧಾರ್ ನೋಂದಣಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುವವರು ಅತ್ಯಂತ ಜಾಗರೂಕತೆ ವಹಿಸಬೇಕು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್ ಹೇಳಿದರು.
ಅವರು ಶುಕ್ರವಾರ, ಪೊಲೀಸ್ ಕಲ್ಯಾಣ ಮಂಟಪದಲ್ಲಿ, ಆಧಾರ್ ನೋಂದಣಿ ಮತ್ತು ನವೀಕರಣ ಕುರಿತಂತೆ ಮಾಸ್ಟರ್ ಟ್ರೆöÊನರ್‌ಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಆಧಾರ್ ಕಾರ್ಡ್ನ್ನು ಪ್ರಮುಖ ಗುರುತಿನ ಚೀಟಿಯಾಗಿ ವಾಸ ಸ್ಥಳದ ವಿಳಾಸ, ಬ್ಯಾಕಿಂಗ್ ಸೇರಿದಂತೆ ದೈನಂದಿನ ಎಲ್ಲಾ ವ್ಯವಹಾರಗಳಿಗೆ ಬಳಸಲಾಗುತ್ತಿದ್ದು, ಇದು ಅಕ್ರಮ ವಲಸಿಗರಿಗೆ ಮತ್ತು ನುಸುಳುಕೋರರಿಗೆ ದೊರೆತಲ್ಲಿ ಅತ್ಯಂತ ಅಪಾಯಕಾರಿಯಾಗಲಿದ್ದು, ಅಕ್ರಮವಾಗಿ ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಆಧಾರ್ ನೋಂದಣಿ ಕೇಂದ್ರಗಳಿಗೆ ಬರುವವರ ಬಗ್ಗೆ ಪೊಲೀಸ್ ಇಲಾಖೆಗೆ ತಕ್ಷಣ ಮಾಹಿತಿ ನೀಡುವಂತೆ ತಿಳಿಸಿದರು.
ದೇಶದ ನಾಗರೀಕರಿಗೆ ಅತ್ಯಂತ ಮಹತ್ವವಾದ ಮತ್ತು ಪ್ರಯೋಜನಕಾರಿಯದ ಆಧಾರ್ ಕಾರ್ಡ್ ಹಲವು ರೀತಿಯಲ್ಲಿ ನೆರವು ನೀಡಲಿದ್ದು, ಇತ್ತೀಚೆಗೆ ಜಿಲ್ಲೆಯಲ್ಲಿ ಸಂಭವಿಸಿದ ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಮೃತಪಟ್ಟ 4 ಜನರ ಗುರುತು ಪತ್ತೆ ಹಚ್ಚಲು ಪೊಲೀಸ್ ಇಲಾಖೆಗೆ ಆಧಾರ್ ಸಹಕಾರಿಯಾಗಿದೆ. ಆಧಾರ್ ಕಾರ್ಡ್ನ ದುರುಪಯೋಗವಾಗದಂತೆ ತಡೆಯುವ ಮಹತ್ವ ಜವಾಬ್ದಾರಿ ಎಲ್ಲಾ ಆಧಾರ್ ನೋಂದಣಿ ಕೇಂದ್ರಗಳ ಮಾಸ್ಟರ್ ಟ್ರೆöÊನರ್‌ಗಳ ಮೇಲಿದ್ದು, ಆಧಾರ್ ನೋಂದಣಿ ಕೇಂದ್ರಗಳಿಗೆ ಆಗಮಿಸುವವರಿಂದ ಸಮರ್ಪಕ ದಾಖಲೆಗಳನ್ನು ಪಡೆದು, ಅವುಗಳ ನೈಜತೆಯನ್ನು ಮತ್ತೊಮ್ಮೆ ಪರಿಶೀಲಿಸಿದ ನಂತರವೇ ಆಧಾರ್ ನೋಂದಣಿ ಕಾರ್ಯವನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್ ಮಾತನಾಡಿ, ಆಧಾರ್ ಕಾರ್ಡ್ ಮಾಡುವಾಗ ಸಂಬAದಪಟ್ಟ ವ್ಯಕ್ತಿಗಳಿಂದಲೇ ಅವರ ಹೆಸರನ್ನು ಬರೆಸಿ, ಆ ಅಕ್ಷರಗಳ ರೀತಿಯಲ್ಲಿಯೇ ಆಧಾರ್‌ನಲ್ಲಿ ಹೆಸರನ್ನು ನಮೂದಿಸಬೇಕು. ಇದರಿಂದ ಸರ್ಕಾರದ ವಿವಿಧ ಯೋಜನೆಗಳಲ್ಲಿ ಡಿಬಿಟಿ ಮೂಲಕ ನೀಡುವ ಆರ್ಥಿಕ ನೆರವನ್ನು ಸಮರ್ಪಕವಾಗಿ ತಲುಪಿಸಲು ಸಾಧ್ಯವಾಗಲಿದ್ದು, ಹೆಸರಿನಲ್ಲಿ ಒಂದು ಅಕ್ಷರ ತಪ್ಪಾಗಿರುವ ಕಾರಣದಿಂದಲೇ ಡಿಬಿಟಿ ಮಾಡಲು ಸಮಸ್ಯೆಗಳನ್ನು ಎದುರಿಸಲಾಗುತ್ತಿದೆ. ಅಲ್ಲದೇ ಆಧಾರ್ ಕಾರ್ಡ್ನ ನವೀಕರಣ ಕುರಿತಂತೆ ಸಾರ್ವಜನಿಕರಿಗೆ ವ್ಯಾಪಕ ಪ್ರಚಾರ ನೀಡಬೇಕಿದೆ ಎಂದರು.
ಕಾರವಾರ ಅಂಚೆ ವಿಭಾಗದ ಅಧೀಕ್ಷ÷ಕ ಧನಂಜಯ ಆಚಾರ್ ಮಾತನಾಡಿ, ಜಿಲ್ಲೆಯಲ್ಲಿ ಅಂಚೆ ಇಲಾಖೆವತಿಯಿಂದ ಕಾರವಾರ ಮತ್ತು ಶಿರಸಿ ವಿಭಾಗದಲ್ಲಿ ಒಟ್ಟು 36 ಕೇಂದ್ರಗಳಲ್ಲಿ ಆಧಾರ್ ನೋಂದಣಿ ಮತ್ತು ನವೀಕರಣ ಕಾರ್ಯವನ್ನು ಮಾಡಲಾಗುತ್ತಿದ್ದು, ಎಲ್ಲಾ ತಾಲೂಕು ಕೇಂದ್ರಗಳಲ್ಲಿಯು ಈ ಸೌಲಭ್ಯ ಲಭ್ಯವಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಆಧಾರ್ ನೋಂದಣಿ ಕಚೇರಿಯ ಉಪ ನಿರ್ದೇಶಕ ರಾಘವೇಂದ್ರ, ಜಿಲ್ಲಾ ಆಧಾರ್ ಸಮಾಲೋಚಕ ಮಹಾಬಲೇಶ್ವರ ದೇಸಾಯಿ ಮತ್ತಿತರರು ಉಪಸ್ಥಿತರಿದ್ದರು.