ಮಂಗಳೂರು, ನ.17: ನೂರಾರು ವರ್ಷ ಗಳಿಂದ ಸಾಂಪ್ರದಾಯಿಕವಾಗಿ ಬೆಳೆಸುತ್ತಿರುವ ಹಣ್ಣು, ತರಕಾರಿಗಳನ್ನು ಬಿಟಿ(ಬ್ಯಾಸಿಲಸ್ ತುರಿಂಜೀನ್)ತಂತ್ರಜ್ಞಾನಕ್ಕೊಳಪಡಿಸಿ ದೇಶದ ಜನರಿಗೆ ವಿಷವುಣಿಸುವ ಮೂಲಕ ಇಲ್ಲಿಯ ಆಹಾರ ಮಾರು ಕಟ್ಟೆಗೆ ಲಗೆ ಹಾಕಲು ವಿದೇಶಿ ಕಂಪನಿ ಗಳು ಹುನ್ನಾರ ನಡೆಸಿವೆ ಎಂದು ಸ್ವದೇಶಿ ಜಾಗರಣ ಮಂಚ್ದ ರಾಷ್ಟ್ರೀಯ ಸಹ ಸಂಚಾಲಕ ಪ್ರೊ.ಬಿ.ಎಂ. ಕುಮಾರಸ್ವಾಮಿ ಹೇಳಿದ್ದಾರೆ.
ಇಂದು ನಾಗರಿಕ ಸೇವಾಟ್ರಸ್ಟ್ ಹಾಗೂ ಇತರ ಸಂಘಟನೆಗಳ ಆಶ್ರಯ ದಲ್ಲಿ ಮಣ್ಣಗುಡ್ಡೆಯ ರೋಟರಿ ಬಾಲ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕುಲಾಂತರಿ ಆಹಾರ ಅಪಾಯಗಳು -ರಕ್ಷಣೆ’ಯ ಕುರಿತಾದ ಕಾರ್ಯಾಗಾರ ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗ ವಹಿಸಿ ಅವರು ಮಾತನಾಡುತ್ತಿದ್ದರು.
೧೯೯೫ರಿಂದ ಈಚೆಗೆ ದೇಶದಲ್ಲಿ ೨.೫ ಲಕ್ಷಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿ ಕೊಂಡಿದ್ದರೆ, ಅವರಲ್ಲಿ ಹೆಚ್ಚಿನವರು ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಬಿಟಿ ಹತ್ತಿಯನ್ನು ಬೆಳೆದು ಸಂಕಷ್ಟಕ್ಕೀ ಡಾದವರು ಎನ್ನುವುದು ಉಲ್ಲೇಖಾರ್ಹ. ೧೯೬೦ರಲ್ಲಿ ಹಸಿರು ಕ್ರಾಂತಿಯ ಮೂಲಕ ರಾಸಾಯನಿಕ ಗೊಬ್ಬರ ಪರಿಚಯಿಸ ಲಾದರೂ ಕೇವಲ ೩೦ ವರ್ಷಗಳಲ್ಲೇ ರಾಸಾಯನಿಕ ಕೃಷಿ ಅಪಾಯ ಎಂಬು ದನ್ನು ಸಮಾಜ, ರೈತರು ಅರಿತು ಮತ್ತೆ ಸಾವಯವ ಕೃಷಿಗೆ ಮೊರೆ ಹೋಗುವಂತಾಗಿದೆ. ಆದುದರಿಂದ ಬಿಟಿ ತಂತ್ರಜ್ಞಾನವನ್ನು ಇಂದು ಜನರು ನಂಬುವ ಸ್ಥಿತಿಯಲ್ಲಿ ಇಲ್ಲ.
ಭಾರತದಲ್ಲಿ ಬೆಳೆಯಲಾಗುವ ಎಲ್ಲ ರೀತಿಯ ಆಹಾರ ಪದಾರ್ಥಗಳು, ಹಣ್ಣು ತರಕಾರಿಗಳಿಗೆ ಕೀಟಗಳ ಬಾಧೆ ಸರ್ವ ಸಾಮಾನ್ಯ, ಅದು ಸಮಸ್ಯೆಯೇ ಅಲ್ಲ. ಆದರೆ ವಿದೇಶಿ ಕಂಪನಿಯೊಂದು ಆ ಸಮಸ್ಯೆಯನ್ನು ಉತ್ಪ್ಪ್ರೇಕ್ಷಿಸಿ ದೇಶದ ಆಹಾರ ತಟ್ಟೆಗೆ ವಿಷವುಣಿಸುವ ಜಾಲವನ್ನು ಹೆಣೆದಿದೆ ಎಂದವರು ಆತಂಕ ವ್ಯಕ್ತಪಡಿಸಿದರು.
ಬೇರೆ ಒಂದು ಕೀಟದ ಜೀವಕೋ ವನ್ನು ಹಣ್ಣು, ತರಕಾರಿಗಳಿಗೆ ಅಳವಡಿಸಿ ಆ ಮೂಲಕ ಬೆಳೆಯಲಾಗುವ ಈ ವಿಷಕಾರಿ ರಾಸಾಯನಿಕ ಪ್ರಕ್ರಿಯೆಯ ಬಿಟಿ ತಂತ್ರಜ್ಞಾನ ಮುಂದೆ ಜನರ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ. ರೈತರಿಗೆ ಲಾಭವಾಗಲಿದೆ ಎಂಬ ಹಸಿಹಸಿ ಸುಳ್ಳಿನ ಮೂಲಕ ವಿದೇಶಿ ಕಂಪನಿಯ ಸ್ವಾರ್ಥಕ್ಕೆ ಬಲಿಯಾಗಿ ವಿಜ್ಞಾನಿಗಳು ಕೂಡಾ ಜನರಿಗೆ ವಿಷವುಣ್ಣಿಸಲು ಮುಂದಾಗಿರು ವುದು ವಿಷಾದನೀಯ. ಬಿಟಿ ತಂತ್ರಜ್ಞಾನ ಅಳವಡಿಕೆ ವಿಜ್ಞಾನಿಗಳಿಗೆ ಮಾತ್ರ ಸೀಮಿತ ಆಗಿಲ್ಲ. ಅದನ್ನು ತಿನ್ನುವವರನ್ನು ಕೇಳಿ ಅಳವಡಿಸ ಬೇಕಾಗಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ವೇದಿಕೆಯಲ್ಲಿದ್ದ ಸಭಿಕರಿಗೆ ಮಟ್ಟಿಗುಳ್ಳವನ್ನು ನೀಡುವ ಮೂಲಕ ಉದ್ಘಾಟಿಸಿದ ಕೃಷಿಕ ವಿಠಲ ಶೆಟ್ಟಿ, ಓಟಿಗಾಗಿ ಕೈಚಾಚುವ ಜನಪ್ರತಿನಿಧಿಗಳು ಇದೀಗ ಆಹಾರ ವಸ್ತುಗಳಿಗಾಗಿಯೂ ಬೇರೆ ರಾಷ್ಟ್ರಗಳ ಜೊತೆಗೆ ಕೈಚಾಚುತ್ತಿರುವುದು ಖೇದಕರ ಎಂದರು.
ಈ ರೀತಿಯ ತಲೆಕೆಟ್ಟ ಉದ್ಯಮದಿಂದ ಹಳ್ಳಿ ಸಂಸ್ಕೃತಿಯನ್ನು ಉಳಿಸಲಾಗದು ಎಂದು ಆತಂಕ ವ್ಯಕ್ತಪಡಿಸಿದ ವಿಠಲ ಶೆಟ್ಟಿ, ಕುಲಾಂತರಿ ಬೀಜಗಳಿಗೆ ಅವಕಾಶ ನೀಡದೆ ಜನಪ್ರತಿನಿಧಿಗಳು ಹಿಂದಿನ ಕೃಷಿ ಪದ್ಧತಿಯನ್ನು ಉಳಿಸಬೇಕೆಂದು ಮನವಿ ಮಾಡಿದರು.
ನಾಗರಿಕ ಸೇವಾ ಟ್ರಸ್ಟ್ನ ಅಧ್ಯಕ್ಷ ಕೆ. ಸೋಮನಾಥ ನಾಯಕ್ ಸ್ವಾಗತಿಸಿದರು.
ಉಪಾಧ್ಯಕ್ಷೆ ವಿದ್ಯಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಕೇರಳ ಕುಲಾಂತರಿ ಆಹಾರ ಮುಕ್ತ
ಕುಲಾಂತರಿ ಆಹಾರದಿಂದ ಆಗುವ ಅಪಾಯಗಳ ಬಗ್ಗೆ ಮನವರಿಕೆ ಮಾಡಲಾಗಿರುವ ಕಾರಣ ಕೇರಳ ಸರಕಾರ ರಾಜ್ಯವನ್ನು ಕುಲಾಂತರಿ ಆಹಾರ ಉತ್ಪಾದನೆಯಿಂದ ಮುಕ್ತಗೊಳಿಸುವಂತೆ ಕೇಂದ್ರದ ಮನವೊಲಿಸುವಲ್ಲಿ ಯಶಸ್ವಿ ಯಾಗಿದೆ ಎಂದು ಕೇರಳದ ತಿರುವನಂತಪುರ ತಲಾನ್ ಸಂಸ್ಥೆಯ ನಿರ್ದೇಶಕಿ ಉಷಾ ಎಸ್.ತಿಳಿಸಿದರು.
ನಮ್ಮ ಆಹಾರ ಮತ್ತು ಬೀಜದ ಮೇಲಿನ ಸಾರ್ವಭೌಮತ್ವ ರಕ್ಷಿಸಲು ಕುಲಾಂತರಿ ಆಹಾರದಿಂದ ಮುಕ್ತವಾಗಿರುವುದು ಅಗತ್ಯ. ಬಿಟಿ ತಂತ್ರಜ್ಞಾನದ ಪ್ರಕಾರ ಒಂದು ಬೆಳೆಯಿಂದ ಇನ್ನೊಂದು ಬೆಳೆ ಬೆಳೆಯುವ ಜಾಗಕ್ಕೆ ೩೦೦ ಮೀಟರ್ ಅಂತರವಿರಬೇಕು. ಭಾರತದಂತಹ ಸಣ್ಣ ಪುಟ್ಟ ಹಿಡುವಳಿ ಜಾಗವನ್ನು ಹೊಂದಿರುವ ರೈತರಿಂದ ಈ ರೀತಿಯ ಅಂತರ ಕಾಯ್ದುಕೊಳ್ಳಲು ಅಸಾಧ್ಯ. ಹಾಗಾಗಿ ಈ ಬಿಟಿ ಬೆಳೆಯ ರಾಸಾಯನಿಕ ಸಮೀಪದ ಇತರ ಬೆಳೆಗಳಿಗೂ ಪಸರಿಸಿ ಸಂಪೂರ್ಣ ಆಹಾರವೇ ವಿಷಯುಕ್ತವಾಗುವುದರಲ್ಲಿ ಸಂಶಯವಿಲ್ಲ ಎಂದು ಉಷಾ ವಿವರಿಸಿದರು.
ಬಿಟಿ ತಂತ್ರಜ್ಞಾನದಿಂದಾಗಿ ಕಳೆದ ೪೦೦ ವರ್ಷಗಳಿಂದಲೂ ೫೦ ವಿವಿಧ ರೀತಿಯ ತಳಿಗಳಲ್ಲಿ ಬೆಳೆಯುತ್ತಿರುವ ಬದನೆ ತಳಿಗಳು ನಾಶವಾಗಲಿವೆ. ಈ ಬಗ್ಗೆ ರೈತರು ಎಚ್ಚೆತ್ತುಕೊಳ್ಳಬೇಕು ಎಂದು ವನಜಾ ರಾಂ ಪ್ರಸಾದ್ ಅಭಿಪ್ರಾಯಿಸಿದರು.
‘ಕುಲಾಂತರಿ ಆಹಾರದ ಅಪಾಯಗಳು-ರಕ್ಷಣೆ’ ಕಾರ್ಯಾಗಾರ: ಮಾಂಸಾಹಾರವೊ ಸಸ್ಯಾಹಾರವೊ... !?
ಕುಲಾಂತರಿ ಬದನೆ ಬೆಳೆಯಲು ಅವಕಾಶವಾದರೆ ಮುಂದೆ ಮೀನಿನ ಜೀವಕೋಶವನ್ನು ಟೊಮೆಟೋ ಒಳಗಿಟ್ಟು ಬಿಟಿ ಟೊಮೆಟೋ, ಚೇಳಿನ ಜೀವಕೋಶವನ್ನು ಮುಸುಕಿನ ಜೋಳದೊಳಗಿಡುವುದು, ಹಂದಿಯ ಜೀವಕೋಶವನ್ನು ಹೂಕೋಸಿನ ಒಳಗಿಡುವುದು, ಒಟ್ಟು ಪ್ರಕೃತಿದತ್ತ ತರಕಾರಿ, ಹಣ್ಣುಗಳನ್ನು ಕಲಬೆರಕೆಗೊಳಿಸಿ ತರಕಾರಿ ಬೆಳೆಯುವ ಕಾಲ ದೂರವಿಲ್ಲ.
ನಾವು ಉಪಯೋಗಿಸುತ್ತಿರುವುದು ಸಸ್ಯಾಹಾರವೊ, ಮಾಂಸಾ ಹಾರವೊ ಎಂದು ಅರಿವಾಗದ ಪರಿಸ್ಥಿತಿಯಲ್ಲಿ ಆಹಾರ ಸೇವಿಸಬೇಕಾಗಬಹುದು. ಕಂಪನಿಯ ಲಾಭಕ್ಕಾಗಿ ವಿಜ್ಞಾನಿಗಳು ಆಹಾರಕ್ಕೆ ವಿಷ ನೀಡುವ ಈ ಹುನ್ನಾರದ ವಿರುದ್ಧ ನಾವು ಧ್ವನಿ ಎತ್ತಲೇ ಬೇಕಾಗಿದೆ.
-ಪ್ರೊ.ಬಿ.ಎಂ.ಕುಮಾರಸ್ವಾಮಿ