ಬೆಂಗಳೂರು,ಮಾ,೫-ಹಸಿರು ಕ್ರಾಂತಿಯ ಮಹತ್ವಾಕಾಂಕ್ಷೆಯೊಂದಿಗೆ ನೀರಾವರಿ, ಇಂಧನ, ಶಿಕ್ಷಣ, ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ, ಜಲಸಿರಿ, ಅಂತರ್‌ಗಂಗಾ, ನನ್ನ ಮನೆಯಂತಹ ಹೊಸ ಯೋಜನೆಗಳನ್ನು ರೂಪಿಸಿ,ಅದೇ ಕಾಲಕ್ಕೆ ಜನ ಸಾಮಾನ್ಯರ ಮೇಲೆ ಹೊಸ ತೆರಿಗೆ ಭಾರ ಹೊರಿಸಿ ಕರ್ನಾಟಕದ ಅಭಿವೃದ್ಧಿಯನ್ನು ಸಾಧಿಸುವ ಕನಸಿನ ೨೦೧೦-೧೧ ನೇ ಸಾಲಿನ ಆಯವ್ಯಯ ಪತ್ರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯಲ್ಲಿಂದು ಮಂಡಿಸಿದರು.
ಇಂದು ಮಧ್ಯಾಹ್ನ ಸರಿಯಾಗಿ ೧೨:೩೦ ಕ್ಕೆ ವಿಧಾನಸಭೆಯಲ್ಲಿ ೭೦,೦೬೩ ಕೋಟಿ ರೂ ಗಾತ್ರದ ಆಯವ್ಯಯ ಪತ್ರವನ್ನು ಮಂಡಿಸಿದರಲ್ಲದೇ ಅಭಿವೃದ್ಧಿಗೆ ಪೂರಕವಾಗುವ ಯೋಜನಾ ವೆಚ್ಚಕ್ಕೆ ಮೂವತ್ತೊಂದು ಸಾವಿರ ಕೋಟಿ ರೂಗಳನ್ನು ಒದಗಿಸಲಾಗಿದೆ ಎಂದರು.
ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಹೆಚ್ಚುವರಿ ತೆರಿಗೆಯನ್ನು ಸಂಗ್ರಹಿಸುವ ಅನಿವಾರ್ಯತೆಯನ್ನು ಪ್ರತಿಪಾದಿಸಿದ ಅವರು, ಪ್ರಸಕ್ತ ವರ್ಷ ೧೮೨೯ ಕೋಟಿ ರೂಗಳಷ್ಟು ಹೆಚ್ಚುವರಿ ತೆರಿಗೆಯನ್ನು ಸಂಗ್ರಹಿಸಲು ನಿರ್ಧರಿಸಲಾಗಿದೆ ಎಂದರು.
ಬೊಕ್ಕಸಕ್ಕೆ ತೆರಿಗೆ ಮೂಲಗಳಿಂದ ಶೇಕಡಾ ೫೨,ಸಾಲದಿಂದ ಶೇಕಡಾ ೧೭,ಕೇಂದ್ರ ಸರ್ಕಾರದ ಅನುದಾನಗಳಿಂದ ಶೇಕಡಾ ೧೩, ತೆರಿಗೆಯೇತರ ರಾಜಸ್ವದಿಂದ ಶೇಕಡಾ ೮, ಕೇಂದ್ರ ತೆರಿಗೆ ಪಾಲಿನಿಂದ ಶೇಕಡಾ ೪,ಸಾಲ ಮತ್ತು ಮುಂಗಡಗಳ ವಸೂಲಾತಿಯಿಂದ ಶೇಕಡಾ ೨ ಹಾಗೂ ಸಾರ್ವಜನಿಕ ಲೆಕ್ಕದಿಂದ ಶೇಕಡಾ ೨ ರಷ್ಟು ಆದಾಯ ಲಭ್ಯವಾಗಲಿದೆ ಎಂದರು.
ಈ ಪೈಕಿ ಕೃಷಿ,ನೀರಾವರಿ ಹಾಗೂ ಗ್ರಾಮೀಣಾಭಿವೃದ್ಧಿಗೆ ಶೇಕಡಾ ೧೭,ಶಿಕ್ಷಣಕ್ಕೆ ಶೇಕಡಾ ೧೫,ಸಾಲತೀರಿಕೆಗೆ ಶೇಕಡಾ ೧೨,ಸಮಾಜಕಲ್ಯಾಣಕ್ಕೆ ಶೇಕಡಾ ೯,ಆರೋಗ್ಯಕ್ಕೆ ಶೇಕಡಾ ೪,ನೀರು ಪೂರೈಕೆ ಮತ್ತು ನೈರ್ಮಲ್ಯಕ್ಕೆ ಶೇಕಡಾ ೩,ಆರ್ಥಿಕ ಸೇವೆಗಳಿಗೆ ೧೩,ಸಾಮಾಜಿಕ ಸೇವೆಗಳಿಗೆ ೬ ಹಾಗೂ ಇತರ ಸಾಮಾನ್ಯ ಸೇವೆಗಳಿಗೆ ಶೇಕಡಾ ೨೧ ರಷ್ಟು ಹಣವನ್ನು ವೆಚ್ಚ ಮಾಡಲಾಗುವುದು ಎಂದು ನುಡಿದರು.
ತಂಬಾಕು ಉತ್ಪನ್ನಗಳು, ವಿಲಾಸಿ ತೆರಿಗೆ, ಸಕ್ಕರೆ, ಮೋಟಾರು ವಾಹನ, ಕಾರು, ಜೀಪ್, ದ್ವಿಚಕ್ರ ವಾಹನ ಸೇರಿದಂತೆ ವಿವಿಧ ವಸ್ತುಗಳ ಮೇಲೆ ತೆರಿಗೆಯನ್ನು ಏರಿಕೆ ಮಾಡಲಾಗಿದ್ದು, ಅದೇ ಕಾಲಕ್ಕೆ ಭತ್ತ, ಅಕ್ಕಿ, ಗೋಧಿ, ಬೇಳೆಕಾಳುಗಳುಗಳಿಗೆ ಒಂದು ವರ್ಷ ಕಾಲ ಸಂಪೂರ್ಣ ತೆರಿಗೆ ವಿನಾಯ್ತಿ ನೀಡಲು ತೀರ್ಮಾನಿಸಲಾಗಿದೆ ಎಂದರು.
ಇದೇ ರೀತಿ ಸಾಂಬಾರು ಪದಾರ್ಥಗಳು, ಮಸಾಲೆ ಮಿಶ್ರಣ ಪುಡಿಗಳು, ವಿದ್ಯುತ್ ಜನರೇಟರ್‌ಗಳು, ರೇಲ್ವೇ ಕಾಂಕ್ರೀಟ್ ಸ್ಲೀಪರ್‌ಗಳ ಮೇಲಿನ ಮೌಲ್ಯವರ್ಧಿತ ತೆರಿಗೆ ಪ್ರಮಾಣವನ್ನು ಶೇಕಡಾ ೧೨.೫ ರಿಂದ ಶೇಕಡಾ ೫ ಕ್ಕಿಳಿಸುವುದಾಗಿ ಪ್ರಕಟಿಸಿದರು.
ಪ್ರಸಕ್ತ ವರ್ಷ ವಿವಿಧ ಮೂಲಗಳಿಂದ ರಾಜ್ಯ ಸರ್ಕಾರ ೭೦,೦೬೩ ಕೋಟಿ ರೂಗಳ ಆದಾಯವನ್ನು ನಿರೀಕ್ಷಿಸುತ್ತಿದ್ದು ಈ ಪೈಕಿ ಆರ್ಥಿಕ ಅಭಿವೃದ್ಧಿಗೆ ಪೂರಕವಾಗುವ ಯೋಜನಾ ವೆಚ್ಚಕ್ಕೆ ಮೂವತ್ತೊಂದು ಸಾವಿರ ಕೋಟಿ ರೂಗಳನ್ನು ಒದಗಿಸುವುದಾಗಿ ತಿಳಿಸಿದರು.
ಯೋಜನೆ ಬಾಬ್ತಿನಲ್ಲಿ ನೀರಾವರಿಗೆ ೪೪೨೮ ಕೋಟಿ,ಇಂಧನಕ್ಕೆ ೩೩೫೯ ಕೋಟಿ,ಸಾರಿಗೆಗೆ ೩೦೯೬ ಕೋಟಿ,ಕೃಷಿಗೆ ೨೩೫೬ ಕೋಟಿ,ಶಿಕ್ಷಣಕ್ಕೆ ೨೬೩೪ ಕೋಟಿ,ನಗರಾಭಿವೃದ್ಧಿಗೆ ೪೭೪೮ ಕೋಟಿ ರೂ ನೀಡಲಾಗುವುದು.
ಇದೇ ರೀತಿ ಗ್ರಾಮೀಣ ಅಭಿವೃದ್ಧಿಗೆ ೧೫೦೫ ಕೋಟಿ,ನೀರು ಸರಬರಾಜಿಗೆ ೧೬೭೪ ಕೋಟಿ ರೂ ನೀಡುವುದಾಗಿ ಪ್ರಕಟಿಸಿದ ಅವರು,ಪ್ರಸಕ್ತ ಸಾಲಿನ ಬಜೆಟ್ ಆರ್ಥಿಕಾಭಿವೃದ್ಧಿಯ ದರವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಈ ಬಾರಿಯ ಬಜೆಟ್ ಸಮೃದ್ಧ ಕರ್ನಾಟಕದ ಪರಿಕಲ್ಪನೆಯನ್ನು ಹೊಂದಿದ್ದು ರಾಜ್ಯದಲ್ಲಿ ಎರಡನೇ ಹಸಿರುಕ್ರಾಂತಿಯನ್ನು ಸಾಧಿಸಲು ಸರ್ಕಾರ ಬಯಸಿದು,ಇದಕ್ಕಾಗಿ ರಾಜ್ಯದಲ್ಲಿ ಪ್ರತೀ ವರ್ಷ ಎರಡು ಲಕ್ಷ ಚೆಕ್ ಡ್ಯಾಂ,ಬಾಂದಾರ,ಮತ್ತಿತರ ಜಲಪೂರಣಸ್ಥಾವರಗಳನ್ನು ನಿರ್ಮಿಸಲಾಗುವುದು.ಇದಕ್ಕಾಗಿ ೫೦೦ ಕೋಟಿ ರೂ ಒದಗಿಸಲಾಗುವುದು ಎಂದರು.
ನೀರಾವರಿ ಪ್ರದೇಶವನ್ನು ಮುಂದಿನ ಮೂರು ವರ್ಷಗಳಲ್ಲಿ ೨.೧೧ ಲಕ್ಷ ಹೆಕ್ಟೇರ್‌ನಷ್ಟು ವಿಸ್ತರಿಸಲು ಸರ್ಕಾರ ನಿರ್ಧರಿಸಿದ್ದು ಅದೇ ಕಾಲಕ್ಕೆ ಸಣ್ಣ ಕೆರೆಗಳ ಜೀರ್ಣೋದ್ಧಾರ ಹಾಗೂ ಸಣ್ಣ ನೀರಾವರಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೃಷಿ ಉತ್ಪನ್ನಗಳ ಎಕ್ಸ್‌ಚೇಂಜ್‌ನ್ನು ನಿರ್ಮಿಸಲಾಗುವುದು,ಸುವರ್ಣ ಗ್ರಾಮೋದಯ ಯೋಜನೆಯಡಿ ಪ್ರತೀ ವರ್ಷ ಒಂದು ಸಾವಿರ ಕೋಟಿ ರೂ ವೆಚ್ಚದಲ್ಲಿ ಒಂದು ಸಾವಿರ ಗ್ರಾಮಗಳನ್ನು ಅಭಿವೃದ್ಧಿಪಡಿಸಲಾಗುವುದು.
ಪ್ರಸಕ್ತ ವರ್ಷದಿಂದಲೇ ಕರ್ನಾಟಕದ ಎಲ್ಲಾ ಮಕ್ಕಳಿಗೆ ಹತ್ತನೆ ತರಗತಿಯವರೆಗಿನ ಶಿಕ್ಷಣವನ್ನು ಕಡ್ಡಾಯಗೊಳಿಸಲಾಗುವುದು, ಸಮಾಜದ ಎಲ್ಲ ವರ್ಗಗಳ ವಿದ್ಯಾರ್ಥಿಗಳಿಗಾಗಿ ಎಲ್ಲ ಜಿಲ್ಲೆಗಳಲ್ಲಿ ಮಾದರಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಲಾಗುವುದು ಎಂದರು.
ರಾಜ್ಯದಲ್ಲಿ ಕೌಶಲ್ಯ ಅಭಿವೃದ್ಧಿಗೆ ಆಂದೋಲನವನ್ನೇ ಪ್ರಾರಂಭಿಸಲು ನಿರ್ಧರಿಸಲಾಗಿದ್ದು ಇದಕ್ಕಾಗಿ ಪ್ರತೀ ವರ್ಷ ಮೂರರಿಂದ ಐದು ಲಕ್ಷ ಯುವಕ ಯುವತಿಯರಿಗೆ ತರಬೇತಿ ನೀಡಲಾಗುವುದು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡಲಾಗುವುದು ಇದಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಹತ್ತು ಸಾವಿರ ಎಕರೆ ವಿಸ್ತೀರ್ಣದ ಕೈಗಾರಿಕಾ ವಸಾಹತುಗಳನ್ನು ನಿರ್ಮಿಸಲಾಗುವುದು.
ಮುಂದಿನ ಮೂರು ವರ್ಷಗಳಲ್ಲಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಈಗಿರುವ ಎಂಟು ಸಾವಿರ ಮೆಗಾವ್ಯಾಟ್‌ನಿಂದ ಹನ್ನೆರಡು ಸಾವಿರ ಮೆಗಾವ್ಯಾಟ್‌ಗಳಿಗೇರಿಸಲು ನೀತಿ ರೂಪಿಸಲಾಗುವುದು.
ರಾಜ್ಯದ ನಗರಗಳು ಮತ್ತು ಪಟ್ಟಣಗಳ ವ್ಯವಸ್ಥಿತ ಅಭಿವೃದ್ಧಿಗಾಗಿ ಪ್ರತೀ ವರ್ಷ ಒಂದು ಸಾವಿರ ಕೋಟಿ ರೂಗಳನ್ನು ವಿನಿಯೋಗಿಸಲಾಗುವುದು, ಹನಿ ನೀರಾವರಿ ಮತ್ತು ತುಂತುರು ನೀರಾವರಿಗೆ ಸಂಬಂಧಿಸಿದಂತೆ ರೈತರಿಗೆ ಅಗತ್ಯವಿರುವ ಸಹಾಯಧನ ಮತ್ತು ತಾಂತ್ರಿಕತೆಯನ್ನು ಒದಗಿಸಲು ಅಂತರ್‌ಗಂಗಾ ಸೂಕ್ಷ್ಮ ನೀರಾವರಿ ನಿಗಮವನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ ೧೦೦ ಕೋಟಿ ರೂ ಒದಗಿಸಲಾಗುವುದು ಎಂದರು.
ಸಾವಯವ ಕೃಷಿಯನ್ನು ಉತ್ತೇಜಿಸಲು ಈ ವರ್ಷ ೧೦೦ ಕೋಟಿ ನೀಡಲಾಗುವುದು,ರೈತರಿಗೆ ಅಗತ್ಯವಿರುವ ಉಪಕರಣಗಳನ್ನು ಒಂದೇ ಸ್ಥಳದಲ್ಲಿ ಪಡೆಯಲು ಅನುಕೂಲವಾಗುವಂತೆ ವಿವಿಧ ಪದಾರ್ಥಗಳ ಸೂಪರ್ ಸ್ಟೋರ್‌ಗಳನ್ನು ತೆರೆಯಲು ಪ್ರೋತ್ಸಾಹಧನ ನೀಡಲಾಗುವುದು.
ರೈತರು ಪಹಣಿ ಪತ್ರಿಕೆಗಳನ್ನು ಪಡೆಯಲು ನೀಡಬೇಕಾದ ಶುಲ್ಕವನ್ನು ಹದಿನೈದು ರೂಗಳಿಂದ ಹತ್ತು ರೂಗಳಿಗೆ ಇಳಿಸಲಾಗುವುದು, ಪ್ರತಿಯೊಂದು ಹೋಬಳಿಗಳಲ್ಲಿ ನಿರ್ಮಿಸಲಾಗಿರುವ ರೈತ ಕೇಂದ್ರಗಳಿಗೆ ಕಟ್ಟಡಗಳನ್ನು ಒದಗಿಸಲು ೨೫ ಕೋಟಿ ರೂ ಒದಗಿಸಲಾಗುವುದು
ರಾಜ್ಯದಲ್ಲಿ ತೋಟಗಾರಿಕಾ ಬೆಳೆಗಳ ವಿಸ್ತೀರ್ಣವನ್ನು ಹದಿನೆಂಟು ಲಕ್ಷ ಹೆಕ್ಟೇರ್‌ಗಳಿಂದ ಇಪ್ಪತ್ತೈದು ಲಕ್ಷ ಹೆಕ್ಟೇರ್‌ಗಳಿಗೆ ವಿಸ್ತರಿಸಲು ನಿರ್ಧರಿಸಲಾಗಿದ್ದು ಇದಕ್ಕಾಗಿ ಐನೂರು ಕೋಟಿ ರೂಗಳನ್ನು ಒದಗಿಸಲಾಗುವುದು.
ಮಾವು ಬೆಳೆಯ ಉತ್ತೇಜನಕ್ಕಾಗಿ ಹತ್ತು ಕೋಟಿ ವೆಚ್ಚದಲ್ಲಿ ಮಾವು ಮಂಡಳಿಯನ್ನು ನಿರ್ಮಿಸಲಾಗುವುದು, ರೇಷ್ಮೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಹಿಪ್ಪು ನೇರಳೆ ಬೆಳೆಯುವ ಪ್ರದೇಶವನ್ನು ೭೦ ಸಾವಿರ ಹೆಕ್ಟೇರ್‌ಗಳಿಂದ ಒಂದು ಲಕ್ಷ ಹೆಕ್ಟೇರ್‌ಗಳಿಗೆ ವಿಸ್ತರಿಸಲಾಗುವುದು.
ರೇಷ್ಮೆ ನೂಲು ಬಿಚ್ಚಾಣಿಕೆಯನ್ನು ಅವಲಂಬಿಸಿರುವ ಕುಟುಂಬಗಳಿಗೆ ಶೇಕಡಾ ಮೂರರ ಬಡ್ಡೀ ದರದಲ್ಲಿ ಸಾಲ ನೀಡಲಾಗುವುದು,ಪಶು ವೈದ್ಯಕೀಯ ಇಲಾಖೆಯಲ್ಲಿ ಖಾಲಿಯಾಗಿರುವ ೪೮೭ ಪಶುವೈದ್ಯರ ಹುದ್ದೆಗಳನ್ನು ಈ ವರ್ಷ ಭರ್ತಿ ಮಾಡಲಾಗುವುದು.
ಯಶಸ್ವಿನಿ ಯೋಜನೆಗೆ ಈ ಬಾರಿ ನಲವತ್ತು ಕೋಟಿ ರೂಗಳನ್ನು ಹೆಚ್ಚುವರಿಯಾಗಿ ನೀಡಲಾಗುವುದು, ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನು ಒದಗಿಸಲು ಪ್ರತಿ ಜಿಲ್ಲೆಗಳ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
ಎಪಿಎಂಸಿಗಳ ವತಿಯಿಂದ ಸಂತೆಮಾಳಗಳನ್ನು ಅಭಿವೃದ್ಧಿಪಡಿಸಲು ಪ್ರತಿ ತಾಲ್ಲೂಕಿಗೆ ಒಂದು ಕೋಟಿ ರೂ ನೀಡಲಾಗುವುದು ಎಂದ ಅವರು,ಆಹಾರ ಸಂಸ್ಕರಣೆ ಘಟಕಗಳನ್ನು ಸ್ಥಾಪಿಸಲು ಪ್ರತಿ ಘಟಕಕ್ಕೆ ಐದು ಎಕರೆ ಕೃಷಿ ಭೂಮಿಯನ್ನು ಖರೀದಿಸಲು ಅವಕಾಶ ಮಾಡಿಕೊಡಲಾಗುವುದು ಎಂದರು.
ಹಳ್ಳಿಗಳಿಂದ ನಗರ ಪ್ರದೇಶಗಳಿಗೆ ವಲಸೆ ಬರುತ್ತಿರುವವರ ಸಂಖ್ಯೆಯನ್ನು ಕಡಿಮೆ ಮಾಡಿ ಮರಳಿ ಹಳ್ಳಿಗೆ ಹೋಗಲು ಪೂರಕವಾಗುವ ಯೋಜನೆಯನ್ನು ತಮ್ಮ ಸರ್ಕಾರ ರೂಪಿಸಿದೆ ಎಂದ ಅವರು,ಪಂಚಾಯತ್‌ರಾಜ್ ಸಂಸ್ಥೆಗಳಲ್ಲಿ ಮಹಿಳೆಯರ ಪಾತ್ರವನ್ನು ಇನ್ನಷ್ಟು ಬಲಪಡಿಸಲು ಆ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇಕಡಾ ೫೦ ಸ್ಥಾನಗಳನ್ನು ಮೀಸಲಿಡಲು ಬಯಸಿದ್ದು ಇದಕ್ಕೆ ಸಂಬಂಧಿಸಿದ ಕಾನೂನಿಗೆ ತಿದ್ದುಪಡಿ ತರುವುದಾಗಿ ವಿವರಿಸಿದರು.
ಈ ವರ್ಷ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ೩೦೦೦ ಕೋಟಿ ರೂಗಳನ್ನು ವೆಚ್ಚ ಮಾಡಿ ಗ್ರಾಮೀಣ ಪ್ರದೇಶಗಳಲ್ಲಿ ಕೆರೆ,ಕಾಲುವೆ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು.
ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಪ್ರಧಾನಮಂತ್ರಿಗಳ ಗ್ರಾಮೀಣ ಸಡಕ್ ಯೋಜನೆಯಡಿ ಪ್ರಸಕ್ತ ವರ್ಷ ೧೫೦೦ ಕೋಟಿ ರೂಗಳನ್ನು ವೆಚ್ಚ ಮಾಡಲಾಗುತ್ತಿದ್ದು ಇದರಲ್ಲಿ ರಾಜ್ಯ ಸರ್ಕಾರ ೧೦೦ ಕೋಟಿ ರೂ ಪಾಲನ್ನು ಒದಗಿಸಲಿದೆ.
ಗ್ರಾಮೀಣ ರಸ್ತೆಗಳ ವಾರ್ಷಿಕ ನಿರ್ವಹಣೆಗಾಗಿ ಈ ವರ್ಷ ೧೫೦ ಕೋಟಿ ರೂಗಳನ್ನು ನೀಡಲಾಗುವುದು,ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗಾಗಿ ಡಾ||ಡಿ.ಎಂ.ನಂಜುಂಡಪ್ಪ ನೀಡಿದ ವರದಿಯನುಸಾರ ಆ ಭಾಗಕ್ಕೆ ೨೫೮೦ ಕೋಟಿ ರೂಗಳನ್ನು ಒದಗಿಸಲಾವುದು ಎಂದರು.
ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಗಾಗಿ ಪ್ರಸಕ್ತ ವರ್ಷ ೩೦೦ ಕೋಟಿ ರೂಗಳನ್ನು ಒದಗಿಸಲಾಗುವುದು ಎಂದ ಅವರು, ಗ್ರಾಮೀಣ ವಸತಿ ಯೋಜನೆಯಡಿ ವೆಚ್ಚ ಮಾಡುವ ಹಣದ ಪ್ರಮಾಣವನ್ನು ನಲವತ್ತು ಸಾವಿರ ರೂಗಳಿಂದ ಅರವತ್ತು ಸಾವಿರ ರೂಗಳಿಗೆ ಹೆಚ್ಚಿಸಲಾಗಿದ್ದು ಪ್ರಸಕ್ತ ವರ್ಷ ಈ ಯೋಜನೆಗಳಡಿ ೧.೫೦ ಲಕ್ಷ ಮನೆಗಳನ್ನು ನಿರ್ಮಿಸಲಾಗುವುದು ಎಂದರು.
ನಗರ ಪ್ರದೇಶಗಳ ವಸತಿಹೀನರಿಗಾಗಿ ಪ್ರಸಕ್ತ ವರ್ಷ ೫೦,೦೦೦ ಸಾವಿರ ಮನೆಗಳನ್ನು ನಿರ್ಮಿಸಲು ವಾಜಪೇಯಿ ವಸತಿ ಯೋಜನೆಯನ್ನು ಆರಂಭಿಸಲಾಗುವುದು ಎಂದು ಪ್ರಕಟಿಸಿದ ಅವರು,ನಗರ ಪ್ರದೇಶಗಳು ಹಾಗೂ ಸಣ್ಣ ಪಟ್ಟಣಗಳ ಮಧ್ಯಮವರ್ಗದ ಜನರ ವಸತಿ ಸಮಸ್ಯೆಯನ್ನು ಪರಿಹರಿಸುವ ದೃಷ್ಟಿಯಿಂದ ನನ್ನ ಮನೆ ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸುವುದಾಗಿ ಪ್ರಕಟಿಸಿದರು.
ಶಾಲಾ ಮಕ್ಕಳಿಗೆ ಬೈಸಿಕಲ್ ನೀಡುವ ಯೋಜನೆಗೆ ಪ್ರಸಕ್ತ ವರ್ಷ ಇನ್ನೂರು ಕೋಟಿ ರೂಪಾಯಿಗಳನ್ನು ಕೊಡುತ್ತಿರುವುದಾಗಿ ನುಡಿದ ಅವರು, ರಾಜ್ಯದಲ್ಲಿ ಈ ವರ್ಷ ಎಪ್ಪತ್ನಾಲ್ಕು ಮಾದರಿ ಫ್ರೌಢಶಾಲೆಗಳನ್ನು ಸ್ಥಾಪಿಸಲಾಗುವುದು ಎಂದು ಸ್ಪಷ್ಟ ಪಡಿಸಿದರು.
ರಾಜ್ಯದ ಎಲ್ಲಾ ಸರ್ಕಾರೀ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಕೊಠಡಿ, ಪೀಠೋಪಕರಣಗಳು, ಕುಡಿಯುವ ನೀರಿನ ಸೌಕರ್ಯ ಮತ್ತು ಶೌಚಾಲಯಗಳನ್ನು ನಿರ್ಮಿಸಲು ೧೦೦ ಕೋಟಿ ರೂ ನೀಡಲಾಗುವುದೆಂದರು.
ರಾಜ್ಯದಲ್ಲಿ ತಾಂತ್ರಿಕ ಶಿಕ್ಷಣದ ಸೌಲಭ್ಯಗಳನ್ನು ಉತ್ತಮಪಡಿಸಲು ವಿಶ್ವಬ್ಯಾಂಕ್ ನೆರವಿನ ಈಕ್ವಿಪ್ ಯೋಜನೆಯಡಿ ೮೦ ಕೋಟಿ ರೂಗಳನ್ನು ಒದಗಿಸಿ ಇಂಜಿನಿಯರಿಂಗ್ ಕಾಲೇಜುಗಳ ಮೂಲಭೂತಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ವಿವರಿಸಿದರು.
ರಾಜ್ಯದ ಸರ್ಕಾರೀ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಉದ್ಯೋಗಾರ್ಹತೆಯನ್ನು ಹೆಚ್ಚಿಸಲು ಅಗತ್ಯವಿರುವ ಭಾಷಾ ಜ್ಞಾನ, ಸಂವಹನ ಚತುರತೆ ಹಾಗೂ ವ್ಯಕ್ತಿತ್ವ ನಿರೂಪಣೆಗಾಗಿ ಹೊಸ ಯೋಜನೆಯನ್ನು ಪ್ರಾರಂಭಿಸಲು ಹತ್ತು ಕೋಟಿ ರೂ ನೀಡುವುದಾಗಿ ಅವರು ಹೇಳಿದರು.
ವಾಜಪೇಯಿ ಆರೋಗ್ಯ ಶ್ರೀ ಯೋಜನೆಗೆ ಈ ವರ್ಷ ನಲವತ್ತು ಕೋಟಿ ರೂಗಳನ್ನು ನೀಡಲಾಗುವುದು.ವಿವಿಧ ಹಂತದ ಆಸ್ಪತ್ರೆಗಳಲ್ಲಿ ಅಗತ್ಯವಿರುವ ೫೦೨೧ ಅರೆ ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ನೂರಾ ನಲವತ್ತೆರಡು ಆಸ್ಪತ್ರೆಗಳನ್ನು ಉನ್ನತೀಕರಿಸಲಾಗುವುದು,ತಾಲ್ಲೂಕು ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡಗಳ ನಿರ್ಮಾಣಕ್ಕಾಗಿ ೧೦೦ ಕೋಟಿ ರೂ ನೀಡಲಾಗುವುದು ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗ್ರಾಮೀಣ ಮಹಿಳೆಯರಿಗೆ ಉಚಿತ ಹೆರಿಗೆ ಸೌಲಭ್ಯ ಒದಗಿಸಲಾಗುವುದು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆ ಸೌಲಭ್ಯ ಪಡೆಯುವ ಮಹಿಳೆಯರಿಗೆ ಒಂದು ಸಾವಿರ ರೂ ವಿಶೇಷ ಸಹಾಯಧನ ಒದಗಿಸಲಾಗುವುದು ಎಂದು ಹೇಳಿದರು.
ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಸರ್ಕಾರ ನಿರ್ಧರಿಸಿದ್ದು,ಅದೇ ಕಾಲಕ್ಕೆ ರಾಜ್ಯದ ಹತ್ತು ಜಿಲ್ಲೆಗಳಲ್ಲಿ ತಲಾ ಐದರಿಂದ ಹತ್ತು ಸಾವಿರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಿದ್ಧ ಉಡುಪು ತಯಾರಿಕಾ ಘಟಕಗಳಿಗೆ ಶಕ್ತಿ ನೀಡಲಾಗುವುದು ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ಆದ್ಯತೆ ನೀಡಲು ಈ ವರ್ಷ ಹತ್ತು ಕೋಟಿ ರೂ ವೆಚ್ಚದಲ್ಲಿ ೧೦೦ ಬಿಪಿಓ ಕೇಂದ್ರಗಳನ್ನು ಸ್ಥಾಪಿಸಲಾಗುವುದು ನೈಸರ್ಗಿಕ ವಿಪತ್ತುಗಳ ಮುನ್ಸೂಚನೆ ನೀಡುವ ಮಾಸ್ಟರ್ ಕಂಟ್ರೋಲ್ ಕೇಂದ್ರವನ್ನು ಒಂದು ಕೋಟಿ ರೂ ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ಅವರು ವಿವರ ನೀಡಿದರು.
ಪ್ರತೀ ವರ್ಷ ರಾಜ್ಯದಲ್ಲಿ ಎರಡು ಲಕ್ಷ ಜನರಿಗೆ ಉದ್ಯೋಗ ತರಬೇತಿ ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು ನಾಲ್ಕು ಲಕ್ಷಕ್ಕೇರಿಸುವ ದೃಷ್ಟಿಯಿಂದ ಮೂರು ವರ್ಷಗಳಲ್ಲಿ ನೂರು ಕೈಗಾರಿಕಾ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದರು.
ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆಯುವ ವಿದ್ಯಾರ್ಥಿಗೆ ಪ್ರತಿ ವರ್ಷ ೬೦೦೦ ರೂಪಾಯಿ ಅನುದಾನ ನೀಡಲಾಗುವುದು, ಒಂದು ಸಾವಿರ ಸಣ್ಣ ನೀರಾವರಿ ಕೆರೆಗಳ ಪುನರುಜ್ಜೀವನಕ್ಕಾಗಿ ನೂರು ಕೋಟಿ ರೂಗಳನ್ನು ನೀಡಲಾಗುವುದು ಎಂದು ವಿವರಿಸಿದರು.