ಬೆಂಗಳೂರು, ಮಾರ್ಚ್ ೮: ದುಡಿಮೆಯಲ್ಲಿ ಸತತ ಶೋಷಣೆಗೆ ಗುರಿಯಾಗುತ್ತಿರುವ ಅಮಾಯಕ ಮಕ್ಕಳಿಗೆ ಅಂತಹ ಪರಿಸ್ಥಿತಿಯಿಂದ ಹೊರಬರಲು ನೆರವಾಗುವ ಉದ್ದೇಶದ ಕರ್ನಾಟಕ ರಾಜ್ಯ ಸರ್ಕಾರದ ಮಕ್ಕಳ ದುಡಿಮೆ ನಿರ್ಮೂಲನ ಕ್ರಿಯಾ ಯೋಜನೆ ೨೦೧೦-೨೦೧೭ನ್ನು ಸಾಮಾನ್ಯವಾಗಿ ಮಕ್ಕಳ ಬಗ್ಗೆ ಆಲೋಚಿಸುವವರೆಲ್ಲರೂ ಸ್ವಾಗತ ಮಾಡುವುದು ಸಹಜ. ಆದರೆ ಅದು ಹಾಗಿಲ್ಲ. ಈ ಯೊಜನೆ ಬಹಳ ಮೂರ್ಖತನದಿಂದ ಕೂಡಿದೆ. ಆದ್ದರಿಂದ ಈ ಕೂಡಲೇ ಈ ಯೋಜನೆಯ ಪುನರ್ ವಿಮರ್ಶೆ ಆಗಲೇಬೇಕಿದೆ. ಮಕ್ಕಳನ್ನು ದುಡಿಮೆಯ ಅಪಾಯದಿಂದ ತಪ್ಪಿಸಬೇಕೆನ್ನುವ ಕಾರಣಕ್ಕೆ ರಾಜ್ಯ ಸರ್ಕಾರದ ಆಯವ್ಯಯದಿಂದ ಮಂಜೂರಾದ ಹಣ ಮಕ್ಕಳಿಗೆ ಉಪಯೋಗವಾಗುವ ರೀತಿಯಲ್ಲಿ ವಿನಿಯೋಗವಾಗಬೇಕಿದೆ. ಇದು ನಾವು ನಮ್ಮ ಮಕ್ಕಳಿಗೆ ತೀರಿಸಬೇಕಾದ ಋಣ.
ಈಗ ಮಾರ್ಪಾಡಾದ ಕ್ರಿಯಾ ಯೋಜನೆಯು ಹಳೆಯ ಕ್ರಿಯಾ ಯೊಜನೆಗಿಂತ ಭಿನ್ನವಾಗಿಲ್ಲ. ಪರಿಸ್ಥಿತಿಯನ್ನು ಸರಿಯಾಗಿ ಅರ್ಥೈಸಿ ವಿಶ್ಲೇಷಣೆ ಮಾಡಿಲ್ಲ. ಹಿಂದೆ ಮಾಡಿದ ತಪ್ಪುಗಳಿಂದ ಕಲಿಯುವ ಮನೋಭಾವ ಇಲ್ಲಿ ಕಾಣಿಸುತ್ತಿಲ್ಲ. ಈ ಯೋಜನೆಯ ತಯಾರಿಯ ಒಟ್ಟಾರೆ ಪ್ರಕ್ರಿಯೆಯಲ್ಲಿ ದುಡಿಯುವ ಮಕ್ಕಳು ಭಾಗವಹಿಸದೇ ಇರುವುದು ಕ್ರಿಯಾ ಯೋಜನೆಯ ಬಹು ದೊಡ್ಡ ಕೊರತೆ. ಇದೊಂದು ಅಸ್ಪಷ್ಟವಾದ ದಾಖಲೆ. ಮಕ್ಕಳ ಇರುವನ್ನು ಸದಾ ಅನುಸರಿಸುವ, ದುಡಿಯುವ ಮಕ್ಕಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಒಂದೆಡೆ ಸಿಗುವಂತೆ ಮಾಡುವ ಬಗ್ಗೆ ಹೇಳಿದ್ದಾರೆ. ಒಟ್ಟಾರೆ ಪ್ರಕ್ರಿಯೆಯಲ್ಲಿ ಇವು ಉತ್ತಮವಾದ ಅಂಶವಾದರೂ ಉಳಿದಂತೆ ಪರಿಹಾರ ಏನು ಎಂದು ಕ್ರಿಯಾ ಯೋಜನೆಯ ದಾಖಲೆ ಹೇಳುವುದಿಲ್ಲ. ಹಿಂದಿನ ಕ್ರಿಯಾ ಯೋಜನೆಯ ಅಂಶಗಳನ್ನೇ ಈ ದಾಖಲೆ ಒಳಗೊಂಡಿದೆ. ಇದು ಈಗಿರುವ ೨೦೦೧ರ ಕ್ರಿಯಾ ಯೋಜನೆಯ ಮುಂದುವರೆದ ಭಾಗವಾಗಿದೆ. ಈಗಾಗಲೇ ೨೦೦೧ರ ಕ್ರಿಯಾ ಯೊಜನೆಯನ್ನು ೨ ಬಾರಿ ಮುಂದುವರೆಸಲಾಗಿದೆ. ಈಗಿನ ಕ್ರಿಯಾ ಯೋಜನೆಯ ದಾಖಲೆಯನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಇದು ಮಕ್ಕಳಿಗೆ ಈಗಿನದಕ್ಕಿಂತ ಹೆಚ್ಚು ಕೆಟ್ಟದ್ದನ್ನು ಮಾಡುವ ಲಕ್ಷಣಗಳಿವೆ.
ಮಕ್ಕಳು ದುಡಿಯುತ್ತಿರುವ ಪರಿಸ್ಥಿತಿಯ ಬಗ್ಗೆ ಹೊಸ ಕ್ರಿಯಾ ಯೋಜನೆಗೆ ಏನೇನೂ ತಿಳಿದಂತೆ ಇಲ್ಲ. ಈಗ ಮಕ್ಕಳು ಬಹಳ ಮಟ್ಟಿಗೆ ಶೋಷಣೆಗೆ ಒಳಗಾಗುತ್ತಿರುವುದು, ಎಲ್ಲಾ ರೀತಿಯ ಹಕ್ಕು ಸವಲತ್ತುಗಳಿಂದ ವಂಚಿತರಾಗುವ ಪ್ರವೃತ್ತಿ ದಿನೇ ದಿನೇ ಹೆಚ್ಚಾಗುತ್ತಿರುವುದು ಈ ಕ್ರಿಯಾ ಯೋಜನೆಯ ಗಮನಕ್ಕೆ ಬಂದಂತೆ ಇಲ್ಲ. ಮಕ್ಕಳು ದುಡಿಯುವುದನ್ನೇ ಅಪರಾಧೀಕರಣ ಮಾಡುವುದರಿಂದ ಮಕ್ಕಳ, ಅವರ ಕುಟುಂಬ, ಸಮುದಾಯಗಳಿಗೆ ಉಂಟಾಗುವ ಅಡ್ಡ ಪರಿಣಾಮಗಳ ಬಗ್ಗೆ ಯಾವುದೇ ಗಂಭೀರ ಚಿಂತನೆ ನಡೆಸಿದಂತೆ ಕಾಣುವುದಿಲ್ಲ. ಈಗ ಮಕ್ಕಳು, ಮಕ್ಕಳ ದುಡಿಮೆಯನ್ನು ನಿಯಂತ್ರಿಸುವ, ವ್ಯವಸ್ಥೆಯ ಕಣ್ಣಿಗೂ ಬೀಳದಂತೆ, ಭೂಗತರಾಗಿ, ಗುಟ್ಟಾಗಿ ದುಡಿಯುತ್ತಿದ್ದಾರೆ. ದುಡಿಯುತ್ತಿರುವ ಮಕ್ಕಳಿಗೆ ತನ್ನ ನೈಜ ಕಾಳಜಿ ಸಮಸ್ಯೆಗಳನ್ನು ಹೇಳಿಕೊಳ್ಳಲು ಯಾವುದೇ ದಾರಿಗಳಿಲ್ಲ. ಮಕ್ಕಳು ತಾವು ದುಡಿಯುತ್ತಿದ್ದೇವೆ ಎಂದಾಕ್ಷಣ ಅವರನ್ನು ಕೆಲಸದ ಸ್ಥಳದಿಂದ ಎಳೆದುಕೊಂಡು ಹೋಗಿ ಬಂಧಿಗಳನ್ನು ಇರಿಸುವಂತೆ ಒಂದೋ ಬಾಲಮಂದಿರಗಳಿಗೆ ಅಥವಾ ಸ್ವಯಂ ಸೇವಾ ಸಂಸ್ಥೆಗಳು ನಡೆಸುವ ಮಕ್ಕಳ ಮಂದಿರಗಳಿಗೆ ದೂಡಲಾಗುತ್ತದೆ.
ಮಕ್ಕಳನ್ನು ’ರೈಡ್ ಮಾಡಿ ರಕ್ಷಿಸುವುದೊಂದೆ’ ಈ ಯೋಜನೆಯ ಕಾರ್ಯತಂತ್ರದ ತುಂಬಾ ತುಂಬಿಕೊಂಡ ಅಂಶ. ಉಳಿದೆಲ್ಲ ಪರಿಹಾರೋಪಾಯಗಳು ಕಾರ್ಮಿಕ ಇಲಾಖೆಯನ್ನು ಬಿಟ್ಟು ರಾಜ್ಯ ಸರ್ಕಾರದ ಇನ್ನುಳಿದ ಇಲಾಖೆಗಳ ಕಾರ್ಯಕ್ರಮಗಳ, ಸ್ಕೀಮುಗಳನ್ನು ಅವಲಂಬಿಸಿದೆ. ಎಲ್ಲಾ ಇಲಾಖೆಗಳೂ ಸೇರಿ ತಮ್ಮ ಹಲವಾರು ಕಾರ್ಯಕ್ರಮಗಳನ್ನು ಈ ವಿಷಯಕ್ಕೆ ಕೇಂದ್ರೀಕರಿಸಿ ಕೆಲಸ ಮಾಡಬೇಕೆಂದು ಯೋಜನೆಯಲ್ಲಿ ಹೇಳಲಾಗಿದೆಯಾದರೂ ಸಹ ನಿಜವಾಗಿ ಅವು ಹೇಗೆ ಸೇರಿ ಕೆಲಸ ಮಾಡಬೇಕು ಎನ್ನುವ ಬಗ್ಗೆ ಯಾವುದೇ ಮಾರ್ಗದರ್ಶೀ ಅಂಶಗಳು ಈ ಕ್ರಿಯಾ ಯೋಜನೆಯಲ್ಲಿ ಇಲ್ಲ. ’ಮಕ್ಕಳ ಸಂರಕ್ಷಣಾ ಯೋಜನೆ (Integrated Child Protection Scheme.{CPS.} ಯನ್ನು ಜಾರಿಗೆ ತರುವ ಬಗ್ಗೆ ನಮ್ಮ ರಾಜ್ಯವು ಕೇಂದ್ರ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಳ್ಳುವತ್ತ ಆಲೋಚಿಸುತ್ತಿದೆ. (ಕಾನೂನಿನ ಜೊತೆ ಸಂಘರ್ಷದಲ್ಲಿರುವ, ಸಂರಕ್ಷಣೆ ಮತ್ತು ಆರೈಕೆ ಅಗತ್ಯವಿರುವ ಎಲ್ಲಾ ಮಕ್ಕಳಿಗೆ ಸಂರಕ್ಷಣೆಯನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶ.) ೬ನೇ ಮಾರ್ಚ್,೨೦೧೦ರಂದು ಈ ಬಗ್ಗೆ ಪ್ರಕಟಣೆ ಹೊರಬಿದ್ದಿದೆ. ಈ ಹೊಸ ಕ್ರಿಯಾ ಯೋಜನೆಯಲ್ಲಿ ನಮೂದಿಸಿದ ವಿಷಯ ಹಾಗೂ ಮುಂದೆ ಜಾರಿ ಮಾಡುವ ಕಾರ್ಯಕ್ರಮಗಳಲ್ಲಿ ಇರುವ ಸಮಾನ ಅಂಶಗಳು ಹಾಗೂ ಯಾವ ಯಾವ ವಿಷಯಗಳು ಒಂದಕ್ಕೊಂದು ಸಾಮ್ಯ ಇದೆ ಎಂಬುದನ್ನೂ ನಾವು ಗಮನಿಸಬೇಕಾಗಿದೆ. ಉದಾ: ಹೊಸ ಕ್ರಿಯಾ ಯೋಜನೆ ಹಾಗೂ ’ಮಕ್ಕಳ ಸಂರಕ್ಷಣಾ ಯೋಜನೆ’ ಎರಡರಲ್ಲೂ ಜಿಲ್ಲಾ ಮಟ್ಟದ ಸಮಿತಿ ರಚನೆ ಬಗ್ಗೆ ತಿಳಿಸುತ್ತವೆ. ಒಂದು ಸಮಿತಿ ಮಕ್ಕಳ ದುಡಿಮೆಯನ್ನು ನಿರ್ಮೂಲನ ಮಾಡುವ ಉದ್ದೇಶ ಹೊಂದಿದ್ದರೆ, ಇನ್ನೊಂದು ದುಡಿಯುವ ಮಕ್ಕಳು ಸೇರಿದಂತೆ ಎಲ್ಲಾ ಮಕ್ಕಳಿಗೂ ಸಂರಕ್ಷಣೆ ಒದಗಿಸುವ ಉದ್ದೇಶವನ್ನು ಹೊಂದಿದೆ.
’ರೈಡ್ ಮತ್ತು ಸಂರಕ್ಷಿಸು’ವ ಕಾರ್ಯಕ್ರಮ ದಯನೀಯವಾಗಿ ಸೋತು ಹೋದರೂ, ಅದರಿಂದ ಮಕ್ಕಳಿಗೆ ಆಘಾತಕಾರೀ ಪರಿಣಾಮಗಳು ಆದ ಬಳಿಕವೂ ಸಹ ಹಲವು ಜನ ’ಕಾರ್ಯಕ್ರಮಗಳ ಅನುಷ್ಟಾನಕರು’ ಇನ್ನೂ ಕಟ್ಟಡ ಕೆಲಸದಲ್ಲಿ ದುಡಿಯುವ ಮಕ್ಕಳನ್ನು, ಅಥವಾ ಬಸ್ ನಿಲ್ದಾಣಗಳಿಂದ, ರೈಲ್ವೇ ನಿಲ್ದಾಣಗಳಿಂದ ’ರೌಂಡ್ ಅಪ್’ ಮಾಡಿ ವಶಕ್ಕೆ ತೆಗೆದುಕೊಳ್ಳುತ್ತಾರೆ. ಅಪ್ರಾಪ್ತ ವಯಸ್ಕರು, ಅವರು ದುಡಿಮೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಅವರನ್ನು ವಶಕ್ಕೆ ತೆಗೆದುಕೊಳ್ಳುತ್ತೇವೆ ಎನ್ನುವುದು ನಂತರ ಅವರುಗಳು ಕೊಡುವ ಹೇಳಿಕೆ. ಆದರೆ ಈಗಿನ ಹೊಸ ಕ್ರಿಯಾ ಯೊಜನೆಯಲ್ಲಿ ಸಹ ಕಾರ್ಮಿಕರಿಂದ ದುಡಿಸಿಕೊಳ್ಳುವ ಮಾಲೀಕರು ಅಥವಾ ಮೂಲ ಕೆಲಸ ಕೊಡುವ ಮಾಲೀಕರು ನೌಕರರ ಕುಂಟುಂಬಗಳಿಗಾಗಿ ನಡೆಸಬೇಕಾದ ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವ ವ್ಯವಸ್ಥೆ, ಅಂಗನವಾಡಿ, ಸಂಚಾರಿ ಶಾಲೆಗಳು, ಆರೋಗ್ಯ ಸೇವೆ, ಪೌಷ್ಟಿಕ ಆಹಾರಗಳ ಪೂರೈಕೆಯಂತಹ ಕಾರ್ಯಕ್ರಮಗಳನ್ನು ಸರಿಯಾಗಿ ನಡೆಸುವಂತೆ ಮಾಡಲು ಹಾಕಿಕೊಂಡ ಕ್ರಮಗಳ ಬಗ್ಗೆ ಏನನ್ನೂ ಹೇಳುವುದಿಲ್ಲ.
ಮಕ್ಕಳ ದುಡಿಮೆಗೆ ಬಡತನ ಒಂದು ಕಾರಣ ಎಂದು ಈ ಕ್ರಿಯಾ ಯೊಜನೆ ಗುರುತಿಸುತ್ತದೆ. ಆದರೆ ಬಡತನಕ್ಕೆ ಕಾರಣಗಳನ್ನು ಕಂಡು ಹುಡುಕುವುದಾಗಲೀ ಅಥವಾ ಬಡತನದ ಪರಿಸ್ಥಿತಿಯ ವಿಶ್ಲೇಷಣೆ ಮಾಡುವ ಗೋಜಿಗೆ ಹೋಗುವುದಿಲ್ಲ. ಮಗು ಎದುರಿಸುತ್ತಿರುವ ಅನೇಕ ಸಮಸ್ಯೆಗಳಲ್ಲಿ ದುಡಿಯುತ್ತಿರುವುದು ಒಂದು. ಆದರೆ ಈ ಒಂದು ಸಮಸ್ಯೆಗೆ ಮೂಲ ಕೇವಲ ಒಂದು ವಿಚಾರದಲ್ಲಿ ಇಲ್ಲ. ಅದರ ಮೂಲಗಳು ನಮ್ಮ ಸಮಾಜದ ಅನೇಕ ಅನಾರೋಗ್ಯಕರ ಆರ್ಥಿಕ ಸಾಮಾಜಿಕ ಪರಿಸ್ಥಿತಿಯಲ್ಲಿ ಇವೆ. ಆ ಮೂಲಭೂತ ಕಾರಣಗಳನ್ನು ಕಂಡು ಬಗೆಹರಿಸದೇ ಕೇವಲ ಮೇಲ್ಪದರದಲ್ಲಿ ಕಂಡದ್ದನ್ನು ಪರಿಹರಿಸಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಮಗುವನ್ನು ಅವರ ಕುಟುಂಬ ಮತ್ತು ಅವರ ಸಮುದಾಯದಿಂದ ಬೇರ್ಪಡಿಸಿ ನೋಡಲಾಗುವುದಿಲ್ಲ ಅನ್ನುವುದೂ ಸಹ ಸತ್ಯ. ಪ್ರಸ್ತುತ ಕ್ರಿಯಾ ಯೋಜನೆಯಲ್ಲಿ ದುಡಿಯುವ ಮಕ್ಕಳ ಕುಟುಂಬಗಳನ್ನು ’ಮಕ್ಕಳ ದುಡಿಮೆಯಿಂದ ನೊಂದ ಕುಟುಂಬಗಳು’ ಎಂದು ನಮೂದಿಸಲಾಗಿದೆ. ’ಬದುಕನ್ನು ಸಾಗಿಸಲು ಮಕ್ಕಳನ್ನು ದುಡಿಮೆಗೆ ಕಳುಹಿಸುವಷ್ಟು ಒತ್ತಡಗಳಿಗೆ ಒಳಗಾದ ಕುಟುಂಬಗಳು’ ಎಂದು ಕ್ರಿಯಾ ಯೋಜನೆ ನೋಡುವುದಿಲ್ಲ. ಹಾಗಾಗಿ ಈ ಕುಟುಂಬಗಳಿಗೆ ಕ್ರಿಯಾ ಯೋಜನೆ ತೋರುವ ಪ್ರತಿಕ್ರಿಯೆ ಕೂಡ ಸರಿಯಾದ ಚೌಕಟ್ಟಿನಲ್ಲಿ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಯಾವಾಗ ಕುಟುಂಬಗಳು ಸಹಜವಾದ ಬದುಕನ್ನು ನಡೆಸಲು ಆಗದೇ ಇರುವ ಪರಿಸ್ಥಿತಿಯಲ್ಲಿ ಪರದಾಡುವ ಪರಿಸ್ಥಿತಿ ಬಂದಾಗ, ಅದರಿಂದ ಹೊರ ಬಂದು ಕೊನೇ ಪಕ್ಷ ಬದುಕಿಗೆ ಬೇಕಾದ ಕನಿಷ್ಟ ಸೌಲಭ್ಯಗಳನ್ನು ಪಡೆದುಕೊಂಡು ಸುಧಾರಿತ ಬದುಕನ್ನು ರೂಪಿಸಿಕೊಳ್ಳಲು ಅವರನ್ನು ಸಶಕ್ತಗೊಳಿಸುವುದು ಸರ್ಕಾರದ ಆದ್ಯ ಕರ್ತವ್ಯ.
ಈ ಹೊಸ ಕ್ರಿಯಾ ಯೋಜನೆ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಅನೇಕ ವಿಧಿಗಳನ್ನು ಉಲ್ಲಂಘಿಸುತ್ತದೆ. ಮಕ್ಕಳ ವಿವಿಧ ಹಕ್ಕುಗಳಾದ ಬದುಕಿನ ಹಕ್ಕು, ಕುಟುಂಬದ ಹಕ್ಕು, ಶಿಕ್ಷಣದ ಹಕ್ಕು, ವ್ಯಕ್ತಿಗತ ಹಕ್ಕು, ಸರ್ಕಾರ ಮತ್ತಿತರಿಂದ ಶೋಷಣೆಯ ವಿರುದ್ಧ ಸಂರಕ್ಷಣೆಯ ಹಕ್ಕು ಇವೆಲ್ಲಾವನ್ನು ಸಮಗ್ರವಾಗಿ ನೋಡಿ, ಮಗು ಅವುಗಳನ್ನು ಪಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕ್ರಿಯಾ ಯೋಜನೆ ಆಲೋಚಿಸಿಲ್ಲ. ಸರ್ಕಾರದ ಪಾಲಿಸಿಯಲ್ಲಿ ಹಾಗೂ ಕ್ರಿಯಾ ಯೋಜನೆಯಲ್ಲಿ ಕಾರ್ಯಕ್ರಮದ ಜಾರಿಗೆ ತರಲು ಕೈಗೊಳ್ಳುವ ಕ್ರಮಗಳ ಬಗ್ಗೆ ಬೊಟ್ಟು ಮಾಡಿ ತೋರಿಸಬಹುದಾದ ಒಂದೇ ಒಂದು ಆಶಾದಾಯಕ ಅಂಶವೆಂದರೆ ಮಕ್ಕಳ ’ರೈಡ್ ಮತ್ತು ಪುನರ್‌ವಸತಿ’ ಬಗ್ಗೆ ಹೊಸ ಮಾರ್ಗದರ್ಶೀ ಸೂತ್ರವನ್ನು ಅಭಿವೃದ್ಧಿಪಡಿಸಲಾಗುವುದು ಎನ್ನುವುದು. ಆದರೆ ಇದನ್ನ ಹೇಗೆ ಸಾಧಿಸುವುದು ಎಂಬುದು ಈಗ ನಮ್ಮ ಮುಂದಿರುವ ಪ್ರಶ್ನೆ. ಅದೂ ’ರೈಡ್ ಮತ್ತು ಸಂರಕ್ಷಣೆ’ ತತ್ವವೇ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿರುವಾಗ ಅದನ್ನು ಮಕ್ಕಳ ಸ್ನೇಹಿಯಾಗುವಂತೆ ಮಾಡುವುದು ಹೇಗೆ ಎನ್ನುವುದು ಇನ್ನೊಂದು ಮಹತ್ವದ ಪ್ರಶ್ನೆ.
ದುಡಿಯುವ ಮಕ್ಕಳಿಗೆ ಒಳಿತಾಗಬೇಕೆಂದು ಮಾಡಿದ ಈ ಕ್ರಿಯಾ ಯೋಜನೆಯಲ್ಲಿ ಮಕ್ಕಳ ದುಡಿಮೆ ಬಗ್ಗೆ ಆಗಿರುವ ಬೇರೆ ಸಂಘ ಸಂಸ್ಥೆಗಳ ವಿಶ್ಲೇಷಣೆ, ಕೆಲಸಗಳನ್ನು, ಅದರ ಅನುಭವಗಳ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಬೇರೆ ಬೇರೆ ವಿಚಾರಗಳನ್ನು, ಜ್ಞಾನಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ದುಡಿಮೆ ಅಪಾಯಕಾರಿ ಎಂಬ ಪದಗಳನ್ನು ವಿವರಿಸದೇ ಹಾಗೆ ಬಿಡಲಾಗಿದೆ. ಇದರಿಂದಾಗಿ ಬೇರೆ ಬೇರೆ ವ್ಯಕ್ತಿಗಳು, ಸಂಘ ಸಂಸ್ಥೆಗಳು, ಸರ್ಕಾರಿ ಇಲಾಖೆಗಳು, ಪರಿಸ್ಥಿತಿಯನ್ನು ತಮ್ಮ ಮೂಗಿನ ನೇರಕ್ಕೆ ಅರ್ಥೈಸಿ ತಮ್ಮ ಅಗತ್ಯಕ್ಕೆ ತಕ್ಕಂತೆ ತಿರುಚುವುದಕ್ಕೆ ಹೇರಳ ಅವಕಾಶವಿದೆ. ಸ್ಪಷ್ಟವಾಗಿ ಅರ್ಥೈಸದ ಪಾಲಿಸಿಯು, ಅರ್ಥಪೂರ್ಣವಾದ ಸಮೀಕ್ಷೆಗಳನ್ನು ಮಾಡುತ್ತದೆ ಎಂದಾಗಲೀ, ಅಗತ್ಯ ಮಾಹಿತಿಗಳನ್ನು ಒಟ್ಟು ಹಾಕುತ್ತದೆ ಎಂದಾಗಲೀ ಅಥವಾ ಕಾರ್ಯಕ್ರಮ ಪರಿಣಾಮಕಾರಿಯಾಗಿ ಜಾರಿಗೊಳಿಸುವುದನ್ನು, ಯೋಜನೆಯ ಪ್ರಗತಿಯನ್ನು ಸಮರ್ಪಕವಾಗಿ ಮೇಲ್ವಿಚಾರಣೆ ಮಾಡುತ್ತದೆ ಎಂಬ ಭರವಸೆಯಾಗಲೀ ಹುಟ್ಟುವುದಿಲ್ಲ.
ಮಗುವನ್ನು ದುಡಿಮೆಯಿಂದ ತೆಗೆದು ಶಾಲೆಗೆ ಸೇರಿಸಿ ಬಿಟ್ಟರೆ ಸಮಸ್ಯೆ ಪರಿಹಾರ ಎನ್ನುವ ಬಹಳ ಸರಳೀಕೃತ ಊಹೆಯ ಮೇಲೆ ಈ ಕ್ರಿಯಾ ಯೋಜನೆ ಕೆಲಸ ಮಾಡುತ್ತದೆ. ವರ್ತಮಾನದ ಶಿಕ್ಷಣ ಪದ್ಧತಿಯಲ್ಲಿ ಸಮಸ್ಯೆ ಸವಾಲುಗಳನ್ನು ಈ ಕ್ರಿಯಾ ಯೋಜನೆ ವಿಮರ್ಶೆ ಮಾಡುವ ಗೊಡವೆಗೇ ಹೋಗುವುದಿಲ್ಲ. ಬಹು ಮುಖ್ಯವಾಗಿ ಇಂದಿನ ಶಾಲಾ ಶಿಕ್ಷಣ ಪದ್ಧತಿ ಮಕ್ಕಳನ್ನು ಶಾಲೆ ಬಿಟ್ಟು ದುಡಿಮೆಗೆ ಹೋಗುವಂತೆ ಒತ್ತಾಯಿಸುತ್ತದೆ ಎಂಬ ಅಂಶವನ್ನು ಕ್ರಿಯಾ ಯೋಜನೆ ಗಮನಿಸಿದಂತೆ ಕಾಣಿಸುವುದಿಲ್ಲ. ಸರಿಯಾಗಿ ಕೆಲಸ ಮಾಡದ ಶಾಲೆಗಳನ್ನು ಮುಚ್ಚುತ್ತೇವೆ ಎನ್ನುವ ಸರ್ಕಾರದ ಹೇಳಿಕೆಯನ್ನು ವಿಮರ್ಶಿಸುವತ್ತ ಕ್ರಿಯಾ ಯೋಜನೆ ಗಮನ ಹರಿಸಿಲ್ಲ. ಅದೇ ರೀತಿ, ನಾಚಿಕೆ ಬಿಟ್ಟು ಶಿಕ್ಷಣವನ್ನು ಖಾಸಗೀಕರಣ ಮಾಡಬೇಕೆಂದು ವಾದಿಸುತ್ತಿರುವ ಹೊಸ ಶಿಕ್ಷಣ ಕಾನೂನಿನ ಬಗ್ಗೆ ಸಹ ಕ್ರಿಯಾ ಯೋಜನೆ ಮೌನ ತಾಳಿದೆ. ಇವೆಲ್ಲಾ ಸಮಾಜದ ಅತ್ಯಂತ ಬದಿಗೊತ್ತಲ್ಪಟ್ಟ ಸಮುದಾಯದ ಮಕ್ಕಳು ಶಿಕ್ಷಣವನ್ನು ಪಡೆದುಕೊಳ್ಳುವಲ್ಲಿ ಬಹು ದೊಡ್ಡ ಅಡೆತಡೆಗಳಾಗುತ್ತವೆ.
ಈಗೀಗ ಬದಿಗೊತ್ತಲ್ಪಟ್ಟ ಸಮುದಾಯಗಳ ಹೆಚ್ಚು ಹೆಚ್ಚು ಕುಟುಂಬಗಳು ತಮ್ಮ ಮಕ್ಕಳಿಗೆ ಶಿಕ್ಷಣದಿಂದ ಆಗುವ ಪ್ರಯೋಜನಗಳನ್ನು ಮನಗಾಣುತ್ತಿವೆ. ಆದರೆ ಆ ಎಲ್ಲಾ ಪ್ರಯೋಜನಗಳನ್ನು ಶಾಲೆಗಳು ಅದರಲ್ಲೂ ಸರ್ಕಾರೀ ಶಾಲೆಗಳು ಪೂರೈಸುತ್ತವೆ ಎಂಬ ಬಗ್ಗೆ ಅವರಿಗೆ ನಂಬಿಕೆ ಇಲ್ಲ. ಹಾಗಾಗಿ ಇಂತಹ ಕುಟುಂಬಗಳ ಅನೇಕ ಮಕ್ಕಳು ಶಿಕ್ಷಣದ ಜೊತೆ ಕೆಲಸವನ್ನೂ ಮಾಡುತ್ತಾರೆ. ವಾರಾಂತ್ಯಗಳ ರಜೆಗಳಲ್ಲಿ, ಬೇಸಿಗೆ, ಮಧ್ಯಂತರ ರಜೆಗಳಲ್ಲಿ ದುಡಿಮೆಗೆ ಹೋಗುತ್ತಾರೆ. ಹೊಸ ಕ್ರಿಯಾ ಯೋಜನೆ ಇಂತಹ ಮಕ್ಕಳ ಬಗ್ಗೆ ಬಹಳ ಸ್ವಲ್ಪವೇ ಆಲೋಚಿಸಿದಂತಿದೆ. ೧೪ ವರ್ಷ ಮೇಲ್ಪಟ್ಟ ಮಕ್ಕಳ ಪಾಡು ಹೇಳತೀರದು. ಇಂತಹ ಮಕ್ಕಳಿಗೆ ಅವರ ಜೀವನ ರೂಪಿಸಿಕೊಳ್ಳಲು, ಆರೋಗ್ಯ, ಶಿಕ್ಷಣಗಳ ವಿಚಾರಕ್ಕೆ ಸರ್ಕಾರದ ಪಾಲಿಸಿ ಮಟ್ಟದಲ್ಲಿ ಕಾರ್ಯಕ್ರಮಗಳ ಅಗತ್ಯವಿದೆ. (ಪಾರ್ಟ್ ಟೈಂ ಕೆಲಸದ ವ್ಯವಸ್ಥೆ, ರಾತ್ರಿ ಶಾಲೆಯಂತಹ ಕಾರ್ಯಕ್ರಮಗಳು ಅವರ ಅಗತ್ಯ). ಆದರೆ ಹೊಸ ಕ್ರಿಯಾ ಯೋಜನೆಯಲ್ಲಿ ಇವೆಲ್ಲಾ ಕಾಣಸಿಗುವುದಿಲ್ಲ. ಆದ್ದರಿಂದ ಈ ಮಕ್ಕಳು ತಮ್ಮ ಪಾಡನ್ನು ತಾವೇ ನೋಡಿಕೊಳ್ಳಬೇಕು.
ಮಕ್ಕಳ ದುಡಿಮೆಯ ಸಮಸ್ಯೆಯಲ್ಲಿ ಬೇಡಿಕೆಯ ಕಾರಣವನ್ನು ನೋಡದೇ ತಾನು ಪೂರೈಕೆಯ ಕಡೆಯಿಂದ ಸಮಸ್ಯೆಯ ಪರಿಹರಿಸುವುದಾಗಿ ಹೊಸ ಕ್ರಿಯಾ ಯೋಜನೆ ತಿಳಿಸುತ್ತದೆ. ಹೀಗೆ ಮಾಡಲು ಸರ್ಕಾರದ ಎಲ್ಲಾ ಇಲಾಖೆಗಳು ಒಟ್ಟು ಸೇರಿ ಕೆಲಸ ಮಾಡುವುದು ಅತೀ ಅಗತ್ಯ. ಪ್ರತಿಯೊಂದು ದುಡಿಯುವ ಮಗುವಿನ ಪರಿಸ್ಥಿತಿಗೆ ತಕ್ಕ ಪರಿಹಾರವನ್ನು ಕಂಡುಹುಡುಕಬೇಕು. ಇದನ್ನು ಸ್ಥಳೀಯ ಸರ್ಕಾರಗಳು ಪರಿಣಾಮಕಾರಿಯಾಗಿ ಮಾಡಬಲ್ಲವು. ಅದಕ್ಕೆ ತಳ ಮಟ್ಟದಿಂದ ಮೇಲ್ಮುಖವಾಗಿ ಪ್ರವಹಿಸುವ ಯೋಜನಾ ಕ್ರಮದ ಅಗತ್ಯವಿದೆ. ಅದಕ್ಕೆ ಪೂರಕವಾಗಿ ಅಧಿಕಾರ ಮತ್ತು ಸಂಪನ್ಮೂಲನಗಳ ವಿಕೇಂದ್ರೀಕರಣವಾಗಬೇಕು. ಕ್ರಿಯಾ ಯೋಜನೆಯಲ್ಲಿ ಕಣ್ಣಿಗೆ ಹೊಡೆಯುವ ಇನ್ನೊಂದು ಕೊರತೆ ಎಂದರೆ ಖಾಸಗೀ ಉದ್ದಿಮೆಗಳ ಉಪಟಳ. ಖಾಸಗೀಕರಣದ ಜಾಗತೀಕರಣ. ಜನ ಭಾಗವಹಿಸುವ ಪ್ರಜಾಪ್ರಭುತ್ವದ ಅಂಶಗಳನ್ನು ಪ್ರಜ್ಞಾಪೂರ್ವಕವಾಗಿ ನಿರ್ಲಕ್ಷಿಸುವ ಪ್ರಯತ್ನಗಳು ರಾಜ್ಯದ ಎಲ್ಲೆಡೆ ಆಗುತ್ತಿದೆ. ಪ್ರಜೆಗಳ ನಾಗರೀಕ ಹಾಗೂ ರಾಜಕೀಯ ಹಕ್ಕುಗಳ ಮೇಲೆ ಸತತವಾದ ಪ್ರಹಾರ ನಡೆಯುತ್ತಲೇ ಇದೆ. ಇದೆಲ್ಲದರ ನೇರ ಪರಿಣಾಮ ಮೊದಲು ಆಗುವುದು ಬದಿಗೊತ್ತಲ್ಪಟ್ಟ ಸಮುದಾಯದ ಮಕ್ಕಳ ಮೇಲೆ.
ದುಡಿಯುವ ಮಕ್ಕಳಿಗೆ ಒಳಿತಾಗಬೇಕೆಂದು ಮಾಡಿದ ಈ ಕ್ರಿಯಾ ಯೋಜನೆಯಲ್ಲಿ ಮಕ್ಕಳ ದುಡಿಮೆ ಬಗ್ಗೆ ಆಗಿರುವ ಬೇರೆ ಸಂಘ ಸಂಸ್ಥೆಗಳ ವಿಶ್ಲೇಷಣೆ, ಕೆಲಸಗಳನ್ನು, ಅದರ ಅನುಭವಗಳ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಬೇರೆ ಬೇರೆ ವಿಚಾರಗಳನ್ನು, ಜ್ಞಾನಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ದುಡಿಮೆ ಅಪಾಯಕಾರಿ ಎಂಬ ಪದಗಳನ್ನು ವಿವರಿಸದೇ ಹಾಗೆ ಬಿಡಲಾಗಿದೆ. ಇದರಿಂದಾಗಿ ಬೇರೆ ಬೇರೆ ವ್ಯಕ್ತಿಗಳು, ಸಂಘ ಸಂಸ್ಥೆಗಳು, ಸರ್ಕಾರಿ ಇಲಾಖೆಗಳು, ಪರಿಸ್ಥಿತಿಯನ್ನು ತಮ್ಮ ಮೂಗಿನ ನೇರಕ್ಕೆ ಅರ್ಥೈಸಿ ತಮ್ಮ ಅಗತ್ಯಕ್ಕೆ ತಕ್ಕಂತೆ ತಿರುಚುವುದಕ್ಕೆ ಹೇರಳ ಅವಕಾಶವಿದೆ. ಸ್ಪಷ್ಟವಾಗಿ ಅರ್ಥೈಸದ ಪಾಲಿಸಿಯು, ಅರ್ಥಪೂರ್ಣವಾದ ಸಮೀಕ್ಷೆಗಳನ್ನು ಮಾಡುತ್ತದೆ ಎಂದಾಗಲೀ, ಅಗತ್ಯ ಮಾಹಿತಿಗಳನ್ನು ಒಟ್ಟು ಹಾಕುತ್ತದೆ ಎಂದಾಗಲೀ ಅಥವಾ ಕಾರ್ಯಕ್ರಮ ಪರಿಣಾಮಕಾರಿಯಾಗಿ ಜಾರಿಗೊಳಿಸುವುದನ್ನು, ಯೋಜನೆಯ ಪ್ರಗತಿಯನ್ನು ಸಮರ್ಪಕವಾಗಿ ಮೇಲ್ವಿಚಾರಣೆ ಮಾಡುತ್ತದೆ ಎಂಬ ಭರವಸೆಯನ್ನು ಹುಟ್ಟಿಸುವುದಿಲ್ಲ.
ಮಕ್ಕಳ ಚಲನವಲಗಳನ್ನು ಗಮನಿಸುವ ವ್ಯವಸ್ಥೆ ಬಹಳ ಉತ್ತಮವಾದುದು. ಇದು ಸ್ವಾಗತಾರ್ಹ ಕ್ರಮ. ಆದರೆ ಅದರಲ್ಲಿ ಮಕ್ಕಳ ಸ್ವಂತ ವಿಚಾರಗಳು, ಕಷ್ಟಗಳನ್ನು ಹೇಳಿಕೊಳ್ಳಲು ಸಾಧ್ಯವಾದಾಗ ಅದು ಅರ್ಥಪೂರ್ಣ. ಅದೇ ರೀತಿ ಮಕ್ಕಳ ಬಗೆಗಿನ ಮಾಹಿತಿ ಸತ್ಯವಾಗಿರಬೇಕು, ಪಾರದರ್ಶಕವಾಗಿರಬೇಕು. ಮತ್ತು ಎಲ್ಲಾ ಮಾಹಿತಿಗಳು ಮಗುವಿನ ದೃಷ್ಟಿಕೋನದಿಂದ ನೋಡುವಂತಿರಬೇಕು. ಇವೆಲ್ಲಾ ಕಾಣುವಂತೆ ಖಚಿತವಾದ ವ್ಯವಸ್ಥೆಯಾದರೆ ಮಾತ್ರ ಆ ವ್ಯವಸ್ಥೆ ಮಕ್ಕಳ ಗರಿಷ್ಟ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡಲು ಸಾಧ್ಯ. ಸಧ್ಯಕ್ಕೆ ಕ್ರಿಯಾ ಯೋಜನೆಯಲ್ಲಿ ವಿವರಿಸಿದ್ದು ಬಹಳ ಗೊಂದಲಮಯವಾಗಿದೆ, ಅಸ್ಪಷ್ಟವಾಗಿದೆ ಮತ್ತು ತಪ್ಪಾಗಿ ಅರ್ಥೈಸಲಾಗಿದೆ. ಇದರಿಂದ ನಿಜ ಬಳಕೆಗೆ ಅಗತ್ಯವಾದ ಬೇಸ್ ಲೈನ್ ಅನ್ನು ತಯಾರಿಸಿಕೊಳ್ಳಲು ಅಗತ್ಯವಾದ ಅಂಕಿ - ಅಂಶಗಳನ್ನು ಸಂಗ್ರಹಿಸಲು ಕಷ್ಟವಾಗುತ್ತದೆ ಎಂಬ ಬಹಳ ಮಹತ್ವದ ಅಂಶವನ್ನು ಗಮನಿಸಬಹುದು. ಶಾಲಾ ಮಕ್ಕಳ ದಾಖಲಾತಿ, ಶಾಲೆಯಲ್ಲಿ ಮಕ್ಕಳ ಹಾಜರಾತಿಗಳ ಬಗ್ಗೆ ಅಂಕಿ - ಅಂಶಗಳನ್ನು ಹುಟ್ಟುಹಾಕಿದ, ನಿಜ ಸಂಗತಿಗಳನ್ನು ಮರೆಮಾಚಲು ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿರುವ ಬಗ್ಗೆ ವರದಿಗಳು ಇವೆ. ಶಾಲೆಗೆ ಬಾರದೇ ಇರುವ ಮಗುವಿನ ಉತ್ತರ ಪತ್ರಿಕೆಯನ್ನು ಶಾಲೆಗೆ ಬರುವ ಮಗು ತನ್ನ ಉತ್ತರ ಪತ್ರಿಕೆಯ ಜೊತೆ ಪರೀಕ್ಷೆಗಳಲ್ಲಿ ಬರೆಯುವಂತೆ ಶಾಲೆಗಳಲ್ಲಿ ಮಾಡುತ್ತಾರೆ. ಹಾಗಾಗಿ ವಾಸ್ತವವಾಗಿ ಕೆಲವಾರು ಮಕ್ಕಳು ಖಾಯಂ ಶಾಲೆಗೆ ಬರುತ್ತಿರುವುದಿಲ್ಲ. ಆದರೆ ಅವರೆಲ್ಲಾ ಶಾಲೆಯಲ್ಲಿ ಇದ್ದಾರೆ ಎನ್ನುವುದಕ್ಕೆ ಇದು ಪುರಾವೆ. ಶಾಲೆಗೆ ಬಾರದಿರುವ ಮಕ್ಕಳ ಹಾಜರಾತಿಯನ್ನು ಖಾಲಿ ಬಿಟ್ಟು ವಾರಾಂತ್ಯದಲ್ಲಿ ಅದನ್ನು ಹಾಜರಿದ್ದರು ಎಂದು ತುಂಬಿಸುವುದು ಶಿಕ್ಷಕರು ಅನುಸರಿಸುವ ಇನ್ನೊಂದು ವಿಧಾನ. ಅಕಸ್ಮಾತ್ ಮಧ್ಯದಲ್ಲಿ ಅಂತಹ ಮಕ್ಕಳಿಗೆ ಏನಾದರೂ ತೀವ್ರ ಅನಾರೋಗ್ಯ ಅವಘಡಗಳು ಆದಾಗ ಅಂದು ಮಾತ್ರ ಗೈರು ಹಾಜರಾಗಿದ್ದಾರೆ ಎಂದು ನಮೂದಿಸುವುದು ಕೂಡ ಚಾಲ್ತಿಯಲ್ಲಿ ಇದೆ. ಇದೆಲ್ಲಾ ಕಾನೂನಿನ ಕಣ್ಣಿಗೆ ಮಣ್ಣೆರುಚುವ ತಂತ್ರಗಳು. ಕಾನೂನಿನಿಂದ ತಪ್ಪಿಸಿಕೊಳ್ಳಲು ಮಾಡುವ ಉಪಾಯಗಳು. ಕ್ರಿಯಾ ಯೊಜನೆಯಲ್ಲಿ ದೋಷಗಳಿದ್ದರೆ, ಕೆಲವರನ್ನೇ ದೋಷಿಗಳು ಎಂದು ಬೊಟ್ಟು ಮಾಡಿ ತೋರಿಸಿದರೆ ಕಾನೂನಿಗೆ ಮಣ್ಣೆರೆಚುವುದು ಆಗುತ್ತಲೇ ಇರುತ್ತದೆ. ಆಗ ಮಕ್ಕಳು ದುಡಿಯುವುದನ್ನು ಮರೆಮಾಚುವುದು ಸಾಧ್ಯವಾಗುತ್ತದೆ. ಮಕ್ಕಳು ಕಣ್ಣೆದುರಿನಿಂದ ’ಭೂಗತ’ರಾಗಿ, ’ಅದೃಷ್ಯ’ರಾಗಿ ದುಡಿಮೆಗೆ ತಳ್ಳಲ್ಪಡುತ್ತಾರೆ.
ಮಕ್ಕಳನ್ನು ಸಮಗ್ರವಾಗಿ ನೋಡುವುದು ಬಹಳ ಮುಖ್ಯ. ಅವರಿಗೆ ತೊಂದರೆ ಕೊಡುತ್ತಿರುವ ಎಲ್ಲಾ ಅಂಶಗಳನ್ನು ಸಮಗ್ರವಾಗಿ ನೋಡಿ, ಅವುಗಳ ಪರಿಹಾರಕ್ಕೆ ಯತ್ನಿಸಬೇಕು. ನೋಡುವುದಕ್ಕೆ ಮಗು ದುಡಿಮೆಯಂತಹ ಒಂದೇ ಸಮಸ್ಯೆಯನ್ನು ಎದುರಿಸುತ್ತಿರುವಂತೆ ಕಂಡರೂ ಸಹ ಅದು ನಮ್ಮ ಸಮಾಜದ ಅನಾರೋಗ್ಯಕರ ಆರ್ಥಿಕ, ಸಾಮಾಜಿಕ, ರಾಜಕೀಯ ಪರಿಸ್ಥಿತಿಯಿಂದ ಹುಟ್ಟಿಕೊಂಡ ಒಂದು ಲಕ್ಷಣವಷ್ಟೆ. ಅದಾವುದನ್ನೂ ಪರಿಹರಿಸದೇ, ಸರಿ ಮಾಡದೇ ದುಡಿಮೆಯಲ್ಲಿರುವ ಮಗುವಿಗೆ ನೆರವಾಗುವುದು ಅಸಾಧ್ಯ. ಮಗುವನ್ನು ಅವರ ಕುಟುಂಬ ಹಾಗೂ ಅವರ ಸಮುದಾಯದಿಂದ ಬೇರ್ಪಡಿಸಿ ನೋಡುವುದು ಕೂಡ ಸಮಂಜಸವಲ್ಲ. ಹಾಗೆಯೇ ಅವರೆಲ್ಲಾ ಎದುರಿಸುತ್ತಿರುವ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಅವರಿಗೆ ಆಗುತ್ತಿರುವ ವಂಚನೆಗಳ ಬಗ್ಗೆ ಸಹ ಗಮನಿಸಬೇಕು. ಒಂದೇ ಅಂಶವನ್ನು ಇಟ್ಟುಕೊಂಡು ಕೆಲಸ ಮಾಡುವುದು ಯಶಸ್ಸನ್ನು ಕೊಡುವುದಿಲ್ಲ. ಎಲ್ಲಾ ವಿಚಾರಗಳನ್ನು ಒಳಗೊಂಡ ಸಮಗ್ರ ಪರಿಹಾರ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಬೇಕು.
ಈ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯದಲ್ಲಿ ಎಲ್ಲರ ಸಂಯೋಜನೆ ಬಹಳ ಮಹತ್ವದ್ದು. ಸರ್ಕಾರದ ನೂರಾರು ಯೋಜನೆಗಳು, ಕೇಂದ್ರೀಕೃತ ತಿರ್ಮಾನದ ವ್ಯವಸ್ಥೆ. ಒಂದೇ ಇಲಾಖೆಯಲ್ಲಿ ಬೇರೆ ಬೇರೆ ವಿಷಯಕ್ಕೆ ಬೇರೆ ಬೇರೆ ಮುಖ್ಯಸ್ಥರು ಇರುವಂತಹ ಪರಿಸ್ಥಿತಿಯಲ್ಲಿ ಇದು ಬಹಳ ಸುಲಭದಲ್ಲಿ ಸಾಧಿಸುವಂತಹದಲ್ಲ.
ಹಲವು ದಶಕಗಳಿಂದ ಕೇಂದ್ರೀಕೃತ ವ್ಯವಸ್ಥೆಯಲ್ಲಿ ಪರಿಹಾರ ಹುಡುವ ಪ್ರಕ್ರಿಯೆ ಸಾಗಿದೆ. ಸರ್ಕಾರದ ಒಂದು ಮಕ್ಕಳಿಗೆ ಸಂಬಂಧಿಸಿದ ಮಂತ್ರಾಲಯ ಜಟಿಲವಾದ ಸಮಸ್ಯೆಯನ್ನು ಬಗೆಹರಿಸುತ್ತದೆ ಎಂಬ ತಪ್ಪು ಊಹೆಯಲ್ಲಿ ನಾವು ನಡೆಯುತ್ತಿದ್ದೇವೆ. ಪರಿಣಾಮ ಈ ಮಂತ್ರಾಲಯ ಶಕ್ತಿಹೀನವಾಗಿದೆ. ತನ್ನದೇ ಆದ ಪರಿಣಾಮಕಾರಿಯಾದ ಕಾರ್ಯಕ್ರಮಗಳನ್ನು ರೂಪಿಸಲು ಆಗುತ್ತಿಲ್ಲ. ರಾಜ್ಯದಲ್ಲಿ ಕೈಗಾರಿಕೆ, ಕಾರ್ಮಿಕ ಮುಂತಾದ ’ಹೆಚ್ಚು ಶಕ್ತಿಶಾಲಿ’ ಖಾತೆಗಳ ಮರ್ಜಿಯಲ್ಲಿ ತಮ್ಮ ಕಾರ್ಯಕ್ರಮಗಳಿಗೆ ಸಂಪನ್ಮೂಲನಗಳನ್ನು ಪಡೆಯುವ ದಯನೀಯ ಸ್ಥಿತಿಗೆ ಬಂದು ತಲುಪಿದೆ. ಹೇಗಾದರೂ ರಾಜ್ಯ ಸರ್ಕಾರ ಪ್ರತಿ ಮಗುವಿನ ಅಗತ್ಯ, ಬೇರೆ ಬೇರೆ ಪರಿಸ್ಥಿತಿಗಳಿಗೆ ಅನುಗುಣವಾದ ಪರಿಹಾರಗಳನ್ನು ರೂಪಿಸುವ ಪರಿಸ್ಥಿತಿಯಿಂದ ಬಹು ದೂರದಲ್ಲಿ ಇದೆ. ಇದನ್ನು ಸಾಧಿಸಬೇಕೆಂದರೆ ಇರುವ ಒಂದೇ ಮಾರ್ಗ ಸ್ಥಳೀಯ ಸರ್ಕಾರಗಳ ಸಶಕ್ತತೆ. ಅಧಿಕಾರ, ಸಂಪನ್ಮೂಲಗಳು ವಿಕೇಂದ್ರೀಕರಣವಾಗಿ ಸ್ಥಳೀಯ ಸರ್ಕಾರಗಳಿಗೆ ಹೆಚ್ಚಿನ ಅಧಿಕಾರ ಅವಕಾಶಗಳು ಸಿಗುವಂತಾಗಬೇಕು. ದುಡಿಯುವ ಮಕ್ಕಳ ಹಾಗೂ ಅವರ ಕುಟುಂಬಗಳಿಗೆ ಸೂಕ್ತವಾದ ರೀತಿಯಲ್ಲಿ ನೆರವಾಗಲು ಅವರನ್ನು ಮಾಹಿತಿ ಮಾತ್ತು ಅನುಭವಗಳ ಮೂಲಕ ಸಶಕ್ತಗೊಳಿಸಬೇಕು. ಮಕ್ಕಳಿಗೆ ಸಂಬಂಧಿಸಿದ ವಿವಿಧ ಕಾನೂನುಗಳ ಜ್ಞಾನ ಅವರಿಗೆ ದೊರೆಯುಂತಾಗಬೇಕು. ಮಕ್ಕಳಿಗೆ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸುವಲ್ಲಿ ’ಒಳ್ಳೆಯ ಆಚರಣೆ’ಗಳ ಮಾದರಿಗಳನ್ನು ಸೃಷ್ಟಿಸುವಂತೆ ಅವರಿಗೆ ಪ್ರೇರಣೆ ಪ್ರೋತ್ಸಾಹಗಳನ್ನು ನೀಡುವ ಅಗತ್ಯ ಕೂಡ ಇದೆ.
ಗ್ರಾಮೀಣ ಪ್ರದೇಶಗಳಲ್ಲಿ, ಗ್ರಾಮ, ನಗರಗಳಲ್ಲಿ, ವಾರ್ಡ್ ಮಟ್ಟಗಳಲ್ಲಿ ಎಲ್ಲರೂ ಸೇರಿ ಕೆಲಸ ಮಾಡುವುದನ್ನು ಸಾಧಿಸಲು ಸಾಧ್ಯ. ಒಂದೊಮ್ಮೆ ಅವರು ನಿರೂಪಿಸುವ ಕಾರ್ಯಕ್ರಮಗಳಿಗೆ ಕೆಲ ಮಟ್ಟಿನ ಸಂಪನ್ಮೂಲ ಬೇಕೆನಿಸಿದರೂ ಸಹ, ಸ್ಥಳೀಯ ಜನರ ಭಾಗವಹಿಸುವಿಕೆಯಿಂದ ಸ್ಥಳೀಯವಾಗಿ ಸಂಪನ್ಮೂಲನಗಳನ್ನು ಕ್ರೋಢೀಕರಿಸಲು ಸಾಧ್ಯ.
ದುರ್ದೈವದ ಸಂಗತಿಯೆಂದರೆ, ಅದೆಲ್ಲವೂ ಹೊಸ ಕ್ರಿಯಾ ಯೋಜನೆಯ ಕರಡಿನಿಂದ ಬಹು ದೂರದಲ್ಲಿದೆ. ವಿವಿಧ ಇಲಾಖೆಗಳು ಏನು ಮಾಡಬಹುದು ಎಂಬ ಪಟ್ಟಿ ಹೊಸ ಕ್ರಿಯಾಯೋಜನೆಯಲ್ಲಿ ಇದೆ. ಹೆಚ್ಚಾಗಿರುವುದು ಏನು ಮಾಡಲೇ ಬೇಕೆಂಬ ಪಟ್ಟಿ. ಆದರೆ ಇದೆಲ್ಲಾ ಆಯಾ ಇಲಾಖೆಗಳಲ್ಲಿ ಮೇಲಿನಿಂದ ಕೆಳಗೆ ಆದೇಶಗಳು ಹೋಗಿ ಕೆಲಸವಾಗುವ ವ್ಯವಸ್ಥೆಯಲ್ಲಿ ಕಾರ್ಯಕ್ರಮಗಳು ಆಗಬೇಕಿದೆ. ವಿವಿಧ ಇಲಾಖೆಗಳು ಸ್ಥಳೀಯವಾಗಿ ಹೇಗೆ ಸಂಯೋಜನೆಯಿಂದ ಕೆಲಸ ಮಾಡುತ್ತಾರೆ ಎಂಬುದಕ್ಕೆ ಇಲ್ಲಿ ಯಾವ ಹೊಸ ಆಲೋಚನೆಗಳು ಇಲ್ಲ. ಅದು ಆಗುವುದನ್ನು ಯಾರು ಖಚಿತಪಡಿಸಿಕೊಳ್ಳುತ್ತಾರೆ? ಅಂತಿಮವಾಗಿ ಅದು ಯಾರ ಹೊಣೆ ಎಂಬ ಬಗ್ಗೆ ಪ್ರಸ್ತಾಪಗಳಿಲ್ಲ.
ಸ್ಥಳೀಯ ಸರ್ಕಾರಗಳ ಪಾತ್ರಗಳನ್ನು ಹೆಚ್ಚು ಮಾಡುವ ಬದಲು ಈಗಿನ ದುಡಿಯುವ ಮಕ್ಕಳ ಸಮಸ್ಯೆಯ ಪರಿಹಾರದ ಕ್ರಿಯಾ ಯೋಜನೆ ಅವುಗಳನ್ನು ಸಂಪೂರ್ಣವಾಗಿ ಬದಿಗೆ ಸರಿಸಿದೆ. ಈ ಕ್ರಿಯಾ ಯೋಜನೆಯನ್ನು ತಯಾರಿಸುವ ಹಂತದಲ್ಲಿ ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಬಳಸಿಕೊಂಡಿಲ್ಲ. ಕ್ರಿಯಾ ಯೋಜನೆಯ ತಯಾರಿಯಲ್ಲಾಗಲೀ, ಜಾರಿಗೆ ತರುವಲ್ಲಾಗಲೀ, ಮೇಲ್ವಿಚಾರಣೆಯಲ್ಲಾಗಲೀ ಅವುಗಳಿಗೆ ಕ್ರಿಯಾ ಯೋಜನೆಯಲ್ಲಿ ಯಾವುದೇ ಮಹತ್ತರದ ಪಾತ್ರವಿಲ್ಲ. ಅದಕ್ಕೆ ಸಂಬಂಧಿಸಿ ಅವುಗಳಿಗೆ ಯಾವುದೇ ವಿಶೇಷ ಅಧಿಕಾರವಾಗಲಿ ಅಥವಾ ಹಣಕಾಸನ್ನಾಗಲೀ ಕೊಡುವ ಬಗ್ಗೆ ಪ್ರಸ್ತಾಪವಿಲ್ಲ. ಕ್ರಿಯಾ ಯೋಜನೆಯಲ್ಲಿ ಕಣ್ಣಿಗೆ ರಾಚುವ ಇನ್ನೊಂದು ಅಂಶವೆಂದರೆ ನಗರ ಪ್ರದೇಶಗಳಲ್ಲಿ ಈ ಕ್ರಿಯಾ ಯೋಜನೆಯನ್ನು ಜಾರಿಗೆ ತರುವ ವ್ಯವಸ್ಥೆಗಳ ಬಗ್ಗೆ ನಿಖರವಾದ ವಿವರಗಳು ಇಲ್ಲದಿರುವುದು. ಈ ತಹರ ಹಲವು ಲೋಪದೋಷಗಳಿಂದ ಕೂಡಿದ ಈ ಯೋಜನೆಯನ್ನು ಸರ್ಕಾರ ಈ ಕೂಡಲೇ ಪರಾಮರ್ಶಿಸಲು ಮುಂದಾಗಬೇಕೆಂದು ಒತ್ತಾಯಿಸುತ್ತೇವೆ.