ಭಟ್ಕಳ, ಜನವರಿ, 18 : ಇಂದು ಸಂಜೆ ಸುಮಾರು ಆರು ಘಂಟೆಗೆ ನಗರದ ಅಂಜುಮಾನ್ ಮಹಿಳಾ ಕಲಾ ಮತ್ತು ವಿಜ್ಞಾನ ಕಾಲೇಜಿನ ಆಡಳಿತ ಕಛೇರಿಯಲ್ಲಿ ಬೆಂಕಿ ಹಬ್ಬಿಕೊಂಡು ಕಛೇರಿಯಲ್ಲಿದ್ದ ಲಕ್ಷಾಂತರ ಮೌಲ್ಯದ ಸೊತ್ತುಗಳು ನಾಶವಾದ ವರದಿಯಾಗಿದೆ.
ಸುಟ್ಟ ವಸ್ತುಗಳಲ್ಲಿ ಎರೆಡು ಕಂಪ್ಯೂಟರ್, ಒಂದು ಜೆರಾಕ್ಸ್ ಯಂತ್ರ, ಟೈಪ್ ರೈಟರ್ ಹಾಗೂ ಅಮೂಲ್ಯ ಕಡತಗಳು ಒಳಗೊಂಡಿವೆ. ಬೆಂಕಿಗೆ ಕಾರಣ ಏನೆಂದು ಇದುವರೆಗೂ ತಿಳಿದುಬಂದಿಲ್ಲ. ಆದರೆ ಮೇಲ್ನೋಟಕ್ಕೆ ಒಂದು ಕಂಪ್ಯೂಟರ್ ಬಳಿಯಿಂದ ಬೆಂಕಿ ಪ್ರಾರಂಭವಾಗಿ ಇತರೆಡೆ ಹಬ್ಬಿರಬಹುದೆಂದು ಅನುಮಾನಿಸಲಾಗಿದೆ.
ಕಛೇರಿ ಮುಚ್ಚಿದ ಬಳಿಕ ಈ ಬೆಂಕಿ ಪ್ರಾರಂಭವಾಗಿದ್ದು ಕಾಲೇಜಿನ ಕಾವಲುಗಾರನಿಗೆ ಹೊಗೆಯ ವಾಸನೆ ಬಂದಿತ್ತು. ಕೂಡಲೇ ಆತ ಕಾಲೇಜಿನ ವಿದ್ಯುತ್ ಸಂಪರ್ಕದ ಮುಖ್ಯ ಸ್ವಿಚ್ ಆರಿಸಿ ಅಂಜುಮಾನ್ ಕಾಲೇಜಿನ ಹಿರಿಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದರಿಂದ ಹೆಚ್ಚಿನ ಅನಾಹುತವಾಗುವುದು ತಪ್ಪಿದೆ.
ಕಛೇರಿಯ ಮೇಜುಗಳ ಮೇಲಿಟ್ಟಿದ್ದ ಅಮೂಲ್ಯ ಮಾಹಿತಿಗಳಿದ್ದ ಕಡತಗಳೂ ಬೆಂಕಿಗಾಹುತಿಯಾಗಿವೆ. ಆದರೆ ಹಿಂಬದಿಯ ಕಪಾಟಿನಲ್ಲಿಟ್ಟಿದ್ದ ಕಡತಗಳು ಸುರಕ್ಷಿತವಾಗಿವೆ. ಕಾಲೇಜಿನ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದಾಗ ಕೋಣೆಯಲ್ಲಿ ಹೊಗೆ ತುಂಬಿಕೊಂಡಿತ್ತು. ಅಂಜುಮಾನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುರ್ ರಹೀಮ್ ಜುಕಾಕು, ಉಪಾಧ್ಯಕ್ಷ ಡಿ.ಎಚ್. ಶಬ್ಬಾರ್, ಕಾರ್ಯದರ್ಶಿ ಸಿದ್ದೀಖ್ ಇಸ್ಮಾಯಿಲ್ ಮತ್ತಿತರರು ಕಛೇರಿಗೆ ಆಗಮಿಸಿ ಪರಿಶೀಲನೆ ನಡೆಸಿದರು.
ಚಿತ್ರ, ವರದಿ: ಸಾಹಿಲ್ ವರದಿಗಾರರು, ಭಟ್ಕಳ