ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ರೈತರ ಜಮೀನು ವಸತಿ ಯೋಜನೆಗೆ - ಹೀಗೇ ಮುಂದುವರೆದರೆ ಆತಂಕಕಾರಿ ಮಟ್ಟ ತಲುಪಲಿರುವ ಕರ್ನಾಟಕ

ಬೆಂಗಳೂರು: ರೈತರ ಜಮೀನು ವಸತಿ ಯೋಜನೆಗೆ - ಹೀಗೇ ಮುಂದುವರೆದರೆ ಆತಂಕಕಾರಿ ಮಟ್ಟ ತಲುಪಲಿರುವ ಕರ್ನಾಟಕ

Sun, 17 Jan 2010 19:01:00  Office Staff   S.O. News Service
ಬೆಂಗಳೂರು,ಜನವರಿ 17: ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಕರ್ನಾಟಕದ ಮುಖ್ಯಮಂತ್ರಿಯಾದ ಯಡಿಯೂರಪ್ಪ ಒಂದು ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
ಅಂದ ಹಾಗೆ ಇದು ರೈತ ಸಮುದಾಯದ ಹಿತದೃಷ್ಟಿಯ ಜತೆಗೇ ರಾಜ್ಯದ ಹಿತದೃಷ್ಟಿಯಿಂದಲೂ ತುಂಬ ಮುಖ್ಯ ಎಂಬ ಕಾರಣಕ್ಕಾಗಿ ಇದನ್ನು ಯಡಿಯೂರಪ್ಪ ಗಂಭೀರವಾಗಿ ತೆಗೆದುಕೊಳ್ಳಬೇಕು.
ಯಾಕೆಂದರೆ ಒಂದು ಅಂದಾಜಿನ ಪ್ರಕಾರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಇರಬಹುದು,ಕರ್ನಾಟಕ ಗೃಹ ಮಂಡಳಿ ಇರಬಹುದು,ನಗರಾಭಿವೃದ್ಧಿ ಪ್ರಾಧಿಕಾರಗಳಿರಬಹುದು,ಹೀಗೆ ಸರ್ಕಾರದ ವ್ಯಾಪ್ತಿಯಲ್ಲಿರುವ ವಿವಿಧ ಇಲಾಖೆಗಳ ಮೂಲಕ ರೈತರ ಭೂಮಿಯನ್ನು ವಶಪಡಿಸಿಕೊಳ್ಳುವ ಕೆಲಸ ಹಿಂದಿನಿಂದಲೂ ಸಾಂಗೋಪಾಂಗವಾಗಿ ನಡೆದುಕೊಂಡು ಬಂದಿದೆ.

ಒಂದು ಅಂದಾಜಿನ ಪ್ರಕಾರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಇಲ್ಲಿಯವರೆಗೆ ರೈತರಿಂದ ಒಂದು ಲಕ್ಷ ಎಕರೆಗಳಿಗೂ ಹೆಚ್ಚಿನ ಪ್ರಮಾಣದ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದೆ.

ಕರ್ನಾಟಕ ಗೃಹ ಮಂಡಳಿ,ಬಿಡಿ‌ಎ ಸೇರಿದಂತೆ ವಿವಿಧ ನಗರಾಭಿವೃದ್ಧಿ ಪ್ರಾಧಿಕಾರಗಳು ಕೂಡಾ ಎಲ್ಲ ಸೇರಿ ಒಂದೂವರೆ ಲಕ್ಷ ಎಕರೆಯಷ್ಟು ಭೂಮಿಯನ್ನು ವಸತಿ ಯೋಜನೆಗಳಿಗಾಗಿ ವಶಪಡಿಸಿಕೊಂಡಿವೆ.

ಇನ್ನು ಸರ್ಕಾರದ ವತಿಯಿಂದ ನೈಸ್‌ನಂತಹ ಯೋಜನೆಗಳಿಗೆ ಕೊಟ್ಟ ಸರ್ಕಾರೀ ಭೂಮಿಯ ಪ್ರಮಾಣ ಕೂಡಾ ದಂಡಿಯಾದಂತದ್ದೇ.ಹೀಗೆ ಒಂದೇ ಸಮನೆ ವಿವಿಧ ಯೋಜನೆಗಳ ಹೆಸರಿನಲ್ಲಿ ಲಕ್ಷಾಂತರ ಎಕರೆ ಭೂಮಿಯನ್ನು ಕೊಡುವ ಈ ಸಂಪ್ರದಾಯವೇನಿದೆ?ಇದಕ್ಕೆ ಕಡಿವಾಣ ಹಾಕದಿದ್ದರೆ ಕರ್ನಾಟಕದ ಭವಿಷ್ಯ ಆತಂಕಕಾರಿ ಮಟ್ಟಕ್ಕೆ ತಲುಪಲಿದೆ.
ನಿಜ,ಹೊಸ ಹೊಸ ಉದ್ಯೋಗಗಳನ್ನು ಸೃಷ್ಟಿಸಿಕೊಡುವ ವಿಷಯ ಬಂದರೆ ನಾವು ಕೈಗಾರಿಕೆಗಳತ್ತಲೇ ನೋಡಬೇಕು.ಯಾಕೆಂದರೆ ಕೃಷಿ ವಲಯದ ಮೇಲೇ ಎಲ್ಲ ಅವಲಂಬನೆ ಸಾಧ್ಯವಿಲ್ಲ,ಅದು ಸಾಧುವೂ ಅಲ್ಲ.

ಹೀಗಾಗಿ ಸಾವಿರಗಟ್ಟಲೆ ಜನರಿಗೆ ಉದ್ಯೋಗ ಒದಗಿಸಲು ಕೈಗಾರಿಕೆಗಳ ಅಗತ್ಯವಿದೆ.ಹೀಗಾಗಿ ಅಂತಹ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯವಾದ ಭೂಮಿಯನ್ನು ಸರ್ಕಾರ ಒದಗಿಸಲೇಬೇಕು.
ಆದರೆ ಹೀಗೆ ಭೂಮಿಯನ್ನು ಒದಗಿಸಿಕೊಡುವಾಗ ಒಂದು ಕೈಗಾರಿಕೆ ಹೂಡುವ ಬಂಡವಾಳ ಏನು?ಸದರಿ ಕೈಗಾರಿಕೆಯಿಂದ ಎಷ್ಟು ಮಂದಿಗೆ ಉದ್ಯೋಗಾವಕಾಶ ಸಿಗುತ್ತದೆ?ಎಂಬುದನ್ನೂ ಗಮನದಲ್ಲಿಟ್ಟುಕೊಳ್ಳಬೇಕಲ್ಲ?

ವಸ್ತುಸ್ಥಿತಿಯೆಂದರೆ,ಇದುವರೆಗೆ ಸರ್ಕಾರ ವಿವಿಧ ಯೋಜನೆಗಳ ಹೆಸರಿನಲ್ಲಿ ಕೈಗಾರಿಕೆಗಳಿಗೆ ಕೊಟ್ಟ ಭೂಮಿಯೇನಿದೆ?ಅದು ಆಯಾ ಕೈಗಾರಿಕೆಗಳಿಗೆ ಅವಶ್ಯಕವಿರುವುದಕ್ಕಿಂತ ಹೆಚ್ಚು.

ಐಟಿ ಬಿಟಿ ಸಂಸ್ಥೆಗಳನ್ನೇ ತೆಗೆದುಕೊಳ್ಳಿ.ನೂರಾರು ಎಕರೆ ಭೂಮಿಯನ್ನು ಕ್ಯಾಂಪಸ್ ಮಾಡುವ ಸಲುವಾಗಿ ಪಡೆದ ಹಲವು ಸಂಸ್ಥೆಗಳು ಅಲ್ಲಿ ಐಷಾರಾಮದ ಉದ್ದೇಶಕ್ಕಾಗಿ ಭೂಮಿಯನ್ನು ಬಳಸಿಕೊಂಡಿವೆ.

ಇದೇ ರೀತಿ ಕೈಗಾರಿಕೆಗಳನ್ನು ಸ್ಥಾಪಿಸುವ ಹೆಸರಿನಲ್ಲಿ ನೂರಾರು ಎಕರೆ ಭೂಮಿಯನ್ನು ಪಡೆದ ಹಲವು ಸಂಸ್ಥೆಗಳು ಇನ್ನೂ ಅಲ್ಲಿ ಕೈಗಾರಿಕೆಯನ್ನೇ ಸ್ಥಾಪಿಸಿಲ್ಲ.ಇನ್ನು ಬಹುತೇಕ ಕೈಗಾರಿಕೆಗಳು ಪಡೆದ ಭೂಮಿಯ ಪ್ರಮಾಣಕ್ಕೆ ಹೋಲಿಸಿದರೆ ಅಲ್ಲಿ ಸೃಷ್ಟಿಯಾದ ಉದ್ಯೋಗಾವಕಾಶಗಳ ಪ್ರಮಾಣ ತುಂಬ ಕಡಿಮೆ.

ನೂರು ಎಕರೆ ಭೂಮಿ ಪಡೆದು ನೂರೈವತ್ತು ಜನರಿಗೆ ಉದ್ಯೋಗ ಸೃಷ್ಟಿಸಿದರೆ ಅದು ಯಾವ ದೃಷ್ಟಿಯಿಂದಲೂ ಲಾಭದಾಯಕವಲ್ಲ.ಯಾಕೆಂದರೆ ಕೃಷಿ ವ್ಯವಸ್ಥೆ ಒಂದು ಎಕರೆ ಪ್ರದೇಶದಲ್ಲಿ ಎಷ್ಟು ಮಂದಿಗೆ ಅನ್ನ ಕೊಡುತ್ತದೆಯೋ?ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೈಗಾರಿಕೆಗಳು ಅನ್ನ ಕೊಡಬೇಕು.ಆದರೆ ಅಂತಹ ಕೆಲಸವಾಗಿದೆಯೇ?ಎಂಬುದನ್ನು ಯಡಿಯೂರಪ್ಪ ಸರ್ಕಾರ ಪರಿಶೀಲಿಸಬೇಕು.ಒಂದು ಕಾಲದಲ್ಲಿ ಕೃಷಿ ವ್ಯವಸ್ಥೆಯ ಮೇಲೆ ಶೇಕಡಾ ಎಂಬತ್ತಕ್ಕಿಂತ ಹೆಚ್ಚಿನ ಪ್ರಮಾಣದ ಜನ ಅವಲಂಬಿತರಾಗಿದ್ದರು.

ಆದರೆ ಇವತ್ತು ಕೈಗಾರಿಕಾ ವಲಯದ ಮೇಲೆ ಶೇಕಡಾ ಇಪ್ಪತ್ತೆದರಷ್ಟು ಜನ ಅವಲಂಬಿತರಾಗಿದ್ದಾರೆ.ಉಳಿದಂತೆ ಸೇವಾ ವಲಯದಲ್ಲೂ ಗಣನೀಯ ಪ್ರಮಾಣದ ಜನ ಅವಲಂಬಿತರಾಗಿದ್ದಾರೆ.

ಅದೇನೇ ಇರಲಿ,ಸರ್ಕಾರ ಕೈಗಾರಿಕೆಗಳಿಗೆ ಭೂಮಿಯನ್ನು ಕೊಡುವಾಗ ಅದು ಕೃಷಿ ವಲಯ ನೀಡುತ್ತಿದ್ದ ಉದ್ಯೋಗಕ್ಕಿಂತ ಹೆಚ್ಚಿನ ಪ್ರಮಾಣದ ಉದ್ಯೋಗಗಳನ್ನು ಸೃಷ್ಟಿಸುತ್ತಿದೆಯೇ?ನೋಡಿಕೊಳ್ಳಬೇಕು.

ಇನ್ನು ಕರ್ನಾಟಕ ಗೃಹ ಮಂಡಳಿ ಇರಬಹುದು,ವಿವಿಧ ನಗರಾಭಿವೃದ್ಧಿ ಪ್ರಾಧಿಕಾರಿಗಳಿರಬಹುದು,ವಸತಿ ಯೋಜನೆಗಳಿಗಾಗಿ ಭೂಮಿಯನ್ನು ವಶಪಡಿಸಿಕೊಳ್ಳುವಾಗ ನಿವೇಶನಗಳ ಸೃಷ್ಟಿಗಿಂತ ಬಹುವಸತಿ ಸಂಕೀರ್ಣಗಳ ಸ್ಥಾಪನೆಗೆ ಆದ್ಯತೆ ನೀಡಬೇಕು.
ಇವತ್ತು ಹತ್ತು ಎಕರೆ ಭೂಮಿಯನ್ನು ನಿವೇಶನದ ರೂಪದಲ್ಲಷ್ಟೇ ಮಾರ್ಪಡಿಸಿಕೊಡುವುದರಿಂದ ಹೆಚ್ಚೆಂದರೆ ಮುನ್ನೂರು ಇಲ್ಲವೇ ನಾನೂರು ಜನರಿಗೆ ನಿವೇಶನ ಸಿಗಬಹುದು.ಆದರೆ ಅದೇ ಜಾಗದಲ್ಲಿ ಬಹುವಸತಿ ಸಂಕೀರ್ಣಗಳನ್ನು ಕಟ್ಟಲು ಆದ್ಯತೆ ನೀಡಿದರೆ ಸಾವಿರಾರು ಜನರಿಗೆ ಅನುಕೂಲ ಕಲ್ಪಿಸಿಕೊಡಬಹುದು.

ಹೀಗೆ ಬಹುವಸತಿ ಸಂಕೀರ್ಣಗಳನ್ನು ಕಟ್ಟುವಾಗ ಖಾಸಗಿ ಸಹಭಾಗಿತ್ವವನ್ನು ಪಡೆದರೂ ಒಳ್ಳೆಯದು.ಯಾಕೆಂದರೆ ಉದ್ದೇಶಿತ ಯೋಜನೆ ನಿಗದಿತ ಸಮಯಕ್ಕೆ ಸರಿಯಾಗಿ ಪೂರ್ಣವಾಗಲು ಅನುಕೂಲವಾಗುತ್ತದೆ.ಹಾಗೂ ಸೂರಿಲ್ಲದವರಿಗೆ ಸೂರು ಕೊಡುವ ಜವಾಬ್ದಾರಿಯನ್ನೂ ಸರ್ಕಾರ ಸಮರ್ಪಕವಾಗಿ ನಿರ್ವಹಿಸಿದಂತಾಗುತ್ತದೆ.

ಹೀಗೆ ಮಾಡುವುದರಿಂದ ಆಗುವ ಬಹುದೊಡ್ಡ ಅನುಕೂಲವೆಂದರೆ ರೈತರಿಂದ ಬೇಕಾಬಿಟ್ಟಿಯಾಗಿ ಅಪಾರ ಪ್ರಮಾಣದ ಭೂಮಿಯನ್ನು ವಶಪಡಿಸಿಕೊಳ್ಳುವ ಕೆಲಸಕ್ಕೆ ಕಡಿವಾಣ ಬೀಳುತ್ತದೆ.ಅಂದ ಹಾಗೆ ಕೈಗಾರಿಕೆಗಳು ಹಾಗೂ ವಸತಿ ಯೋಜನೆಗಳಿಗೆ ಭೂಮಿಯನ್ನು ವಶಪಡಿಸಿಕೊಳ್ಳುವಾಗ ಸಾಧ್ಯವಿದ್ದಷ್ಟೂ ಒಣಭೂಮಿಯನ್ನು ಪಡೆಯುವುದು ಸೂಕ್ತವೇ ಹೊರತು ಕೃಷಿ ಭೂಮಿಯ ಸ್ವಾಧೀನಕ್ಕೆ ಹೆಚ್ಚಿನ ಆದ್ಯತೆ ನೀಡಬಾರದು.

ಈ ಎಲ್ಲ ಅಂಶಗಳ ಬಗ್ಗೆ ಯಡಿಯೂರಪ್ಪ ಸರ್ಕಾರ ಯೋಚಿಸಿದರೆ,ಮತ್ತದನ್ನು ಜಾರಿಗೊಳಿಸಿದರೆ ಅವರು ಏಕಕಾಲಕ್ಕೆ ರೈತರು ಮತ್ತು ಜನಸಮುದಾಯಕ್ಕೆ ಒಳ್ಳೆಯದನ್ನು ಮಾಡಿದಂತಾಗುತ್ತದೆ.ಇಲ್ಲದಿದ್ದರೆ ಮುಂದಿನ ಕೆಲವೇ ವರ್ಷಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಲಿದೆ. 





Share: