ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬಂಡಿಪುರ ಅರಣ್ಯ ಪ್ರದೇಶದಲ್ಲಿ ರಾತ್ರಿಸಂಚಾರ ನಿಷೇಧಿಸಲು ಆಗ್ರಹ

ಬಂಡಿಪುರ ಅರಣ್ಯ ಪ್ರದೇಶದಲ್ಲಿ ರಾತ್ರಿಸಂಚಾರ ನಿಷೇಧಿಸಲು ಆಗ್ರಹ

Sun, 25 Oct 2009 03:04:00  Office Staff   S.O. News Service
ಬೆಂಗಳೂರು, ಅ. 24 : ದಟ್ಟಾರಣ್ಯದ ನಟ್ಟ ನಡುವೆ ಹೆಗ್ಗಣ ನುಂಗಿದ ಹೆಬ್ಬಾವಿನಂತೆ ಮಲಗಿರುವ ಕರುನಾಡಿನ ಈ ಎರಡು ರಸ್ತೆಗಳಿಗೆ ನೆರೆಯ ಕೇರಳ ಸರ್ಕಾರ ಕಂಟಕ ಪ್ರಾಯವಾಗಿ ಪರಿಣಮಿಸಿದೆ. 
೧      ಗುಂಡ್ಲುಪೇಟೆಯಿಂದ ಬಂಡೀಪುರ ಹಾದು ಊಟಿ ಯತ್ತ ಸಾಗುವ ರಸ್ತೆ. ಇದು ಬಂಡೀಪುರ ಅರಣ್ಯದಲ್ಲಿ ೧೨.೫ ಕಿ.ಮೀ. ಹಾದು ಹೋಗುತ್ತದೆ. 
೨      ಗುಂಡ್ಲುಪೇಟೆಯಿಂದ ಬಂಡೀಪುರ ಹಾದು ಸುಲ್ತಾನ್ ಬತ್ತೇರಿಯತ್ತ ಸಾಗುವ ರಸ್ತೆ. ಬಂಡೀಪುರ ಅರಣ್ಯದಲ್ಲಿ ೨೨ ಕಿ.ಮೀ ಇದೆ. 
ಬಂಡೀಪುರದ ಅರಣ್ಯದೊಳಗೆ ಸಾಗುವ ಈ ರಸ್ತೆಗಳ ನಿದ್ದೆ ಕೆಡದಿರಲಿ. ಇಲ್ಲಿನ ವನ್ಯ, ಪ್ರಾಣಿ ಸಂಪತ್ತು ಉಳಿಯಲಿ ಎಂದು ಹೈಕೋರ್ಟ್ ಸಹ ರಾತ್ರಿ ಸಂಚಾರ ನಿಷೇಧಿಸಿತ್ತು. ಆದರೆ, ಈ ರಸ್ತೆಗಳನ್ನು ಹೆಚ್ಚಾಗಿ ಬಳಸುವ ನೆರೆ ರಾಜ್ಯ ಕೇರಳ ಮಾತ್ರ ಈ ರಸ್ತೆಗಳನ್ನು ನೆಮ್ಮದಿಯಾಗಿ ಇರಲು ಬಿಡುತ್ತಿಲ್ಲ. ಕೇರಳ ಸರ್ಕಾರದ ಪ್ರಭಾವಿಗಳಿಂದ ಒತ್ತಡಕ್ಕೆ ಒಳಗಾಗಿರುವ ರಾಜ್ಯ ಸರ್ಕಾರ ಈ ರಸ್ತೆಗಳಲ್ಲಿ ರಾತ್ರಿ ಸಂಚಾರ ಆರಂಭಿಸುವ ಬಗ್ಗೆ ಹೈಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸುವ ಕುರಿತು ಚಿಂತನೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ. ಇದು ನಾಡಿನ ಪರಿಸರ ಪ್ರೇಮಿಗಳನ್ನು ಕಂಗೆಡಿಸಿದೆ. 
ವನ್ಯಜೀವಿಗಳ ಮಾರಣಹೋಮ: ಈ ಎರಡು ರಸ್ತೆಗಳಲ್ಲಿ ವೇಗವಾಗಿ ಓಡುವ ವಾಹನಗಳಿಂದ ‘ಹತ್ಯೆ’ಗೀಡಾಗುವ ವನ್ಯಜೀವಿಗಳ ಸಂಖ್ಯೆ ಹೆಚ್ಚುತ್ತಿತ್ತು. ಇದನ್ನು ನೋಡಲಾಗದೆ ಹಾಹಾಕಾರ ಎಬ್ಬಿಸುತ್ತಿದ್ದ ಪರಿಸರ ಪ್ರೇಮಿಗಳ ಹೊರತಾಗಿ ಮತ್ಯಾರೂ ಈ ರಸ್ತೆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಹೀಗಾಗಿ ಅಷ್ಟು ಪ್ರಖ್ಯಾತಿಯೂ ಈ ರಸ್ತೆಗಳಿಗೆ ಇರಲಿಲ್ಲ. 
ಆದರೆ, ಯಾವಾಗ ಚಾಮರಾಜನಗರ ಜಿಲ್ಲಾಧಿಕಾರಿಗಳು ಈ ರಸ್ತೆಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧಿಸಿ, ಕೆಲವೇ ದಿನಗಳಲ್ಲಿ ಹಿಂತೆಗೆದುಕೊಂಡರೋ ಆಗಿನಿಂದಲೇ ಈ ರಸ್ತೆಗಳು ‘ಲೈಮ್‌ಲೈಟ್’ಗೆ ಬಂದಿವೆ. ಬಂಡೀಪುರದ ಈ ರಸ್ತೆಗಳಲ್ಲಿ ರಾತ್ರಿ ವಾಹನ ಸಂಚಾರ ಬೇಡ ಎಂದು ಖುದ್ದು ಹೈಕೋರ್ಟ್ ತೀರ್ಪು ನೀಡಿದ್ದರೂ, ಕೇರಳ ಮಾತ್ರ ರಾಜ್ಯದ ಈ ರಸ್ತೆಗಳಲ್ಲಿ ರಾತ್ರಿ ಸಂಚಾರ ಬೇಕು ಎಂದು ‘ವರಾತ’ ಆರಂಭಿಸಿದೆ. 
 
ಕೇರಳದ ೨ ‘ಕು’ತಂತ್ರ: ಸಂಚಾರ ಪುನಾರಂಭಕ್ಕೆ ಕೇರಳ ೨ ರೀತಿ ತಂತ್ರ ರೂಪಿಸಿದೆ. 
೧      ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮೂಲಕ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ನ್ಯಾಯಾಂಗ ಹೋರಾಟ ಆರಂಭಿಸಿದೆ. 
೨      ಸಿ‌ಎಂ ಯಡಿಯೂರಪ್ಪ ಮೇಲೆ ಒತ್ತಡ ಬೀರಲು ಪ್ರಯತ್ನ ಆರಂಭಿಸಿದೆ. 
ಈ ಒತ್ತಡದ ಪರಿಣಾಮವಾಗಿ ಈ ರಸ್ತೆಗಳಲ್ಲಿ ರಾತ್ರಿ ಸಂಚಾರ ಮತ್ತೆ ಮುಕ್ತಗೊಳಿಸುವ ಪರವಾಗಿ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿದರೆ ಹೇಗೆ? ಎಂದು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಕೇರಳ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ಈ ರೀತಿ ಅಫಿಡವಿಟ್ ಸಲ್ಲಿಸಲು ಮುಂದಾದರೆ ನಾಡಿನ ಅಮೂಲ್ಯ ಸಂಪತ್ತು ನಾಶವಾಗುವುದು. 
ಹಿನ್ನೆಲೆ:  ಈ ರಸ್ತೆಗಳ ಕಥೆ-ವ್ಯಥೆ ಆರಂಭವಾಗಿದ್ದು, ಕಳೆದ ಜೂನ್ ೬ರಂದು ಚಾಮರಾಜನಗರ ಜಿಲ್ಲಾಧಿಕಾರಿಗಳು ಈ ರಸ್ತೆಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧಿಸಿದ ನಂತರ. ಈ ಎರಡು ರಸ್ತೆಗಳಲ್ಲಿ ರಾತ್ರಿ ವೇಳೆ ಭಾರಿ ಪ್ರಮಾಣದ ವಾಹನಗಳ ಸಂಚರಿಸುವುದರಿಂದ ಬಂಡೀಪುರದ ವನ್ಯಜೀವಿಗಳ ಕಂಟಕಮಯವಾಗಿದೆ ಎಂದು ಪರಿಸರ ಪ್ರೇಮಿಗಳ ಸತತ ಒತ್ತಡದ ನಂತರ ಚಾಮರಾಜನಗರ ಜಿಲ್ಲಾಧಿಕಾರಿ ಇಂತಹದೊಂದು ಗಟ್ಟಿ ನಿರ್ಧಾರ ಕೈಗೊಂಡಿದ್ದರು. ರಸ್ತೆ ಬಂದ್ ಆಗುತ್ತಿದ್ದಂತೆಯೇ ನೆರೆಯ ಕೇರಳದ ಂಬರ್ ಲಾಬಿ ಎದ್ದು ನಿಂತಿತು. ಅಮೂಲ್ಯ ವನ್ಯ ಸಂಪತ್ತು ಹಾಗೂ ವನ್ಯಜೀವಿ ಬೇಟೆಯಾಡುವ ತಂಡಗಳು ನಾನಾ ರೀತಿ ಪ್ರಭಾವ ಬೀರತೊಡಗಿದವು. ಕರ್ನಾಟಕ ಸರ್ಕಾರಕ್ಕೆ ಅಕ್ಕಿ ಲೆವಿ ತಪ್ಪಿಸಿ, ನೆರೆಯ ಕೇರಳಕ್ಕೆ ಮಾರಾಟ ಮಾಡುವ ಅಕ್ಕಿ ಕಳ್ಳಸಾಗಣೆದಾರರು ಕಾರ್ಯಪ್ರವೃತ್ತರಾದರು. 
ಪರಿಣಾಮ- ಕೇರಳ ಸರ್ಕಾರ ಅಲುಗಾಡತೊಡಗಿತು. ತನ್ನ ನೆರೆಯ ರಾಜ್ಯ ಕರ್ನಾಟಕ ಸರ್ಕಾರದ ಮೇಲೆ ಒತ್ತಡ ಬೀರತೊಡಗಿತು. ಈ ಒತ್ತಡ ಯಾವ ಪ್ರಮಾಣದಲ್ಲಿ ಇತ್ತು ಎಂದರೆ, ನಮ್ಮ ಮುಖ್ಯಮಂತ್ರಿಗಳ ಕಚೇರಿಯಿಂದ ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಒಂದು ಮೌಖಿಕ ಸಂದೇಶ ರವಾನೆಯಾಯಿತು. ತಕ್ಷಣ ರಾತ್ರಿ ಸಂಚಾರ ಬಂದ್ ಆಗಿದ್ದ ಬಂಡೀಪುರ ರಸ್ತೆಯಲ್ಲಿನ ನಿರ್ಬಂಧ ತೆರವಾಗಿತ್ತು. ವಿಚಿತ್ರವೆಂದರೆ, ಈ ಎಲ್ಲಾ ಪ್ರಕ್ರಿಯೆಗಳು ಕೇವಲ ೩ ದಿನಗಳಲ್ಲಿ ನಡೆದು ಹೋಗಿದ್ದವು. ಜೂ. ೬ರಂದು ನಿಷೇಧ ಆದೇಶ ಪ್ರಕಟವಾಗಿದ್ದರೆ, ಆದೇಶ ಹಿಂತೆಗೆದುಕೊಂಡಿದ್ದು ಜೂ.೯ ರಂದು. 

ರಸ್ತೆಗೇಕೆ ಮಹತ್ವ?: ರಾಜ್ಯದಿಂದ ಕೇರಳದತ್ತ ಹಾದು ಹೋಗುವ ಪ್ರಮುಖ ರಸ್ತೆಯಾದ ಈ ಬಂಡೀಪುರದ ರಸ್ತೆಗಳು ಹಲವು ಅಕ್ರಮಗಳ ಸಾಗಾಟಕ್ಕೆ ಹೆದ್ದಾರಿಯಾಗಿದ್ದವು. ಕೇರಳದಲ್ಲಿ ಅತ್ಯಂತ ಕ್ರಿಯಾಶೀಲವಾಗಿರುವ ವನ್ಯಜೀವಿ ಬೇಟೆಗಾರರ ತಂಡಕ್ಕೆ ಈ ಹಾದಿ ಸ್ವರ್ಗದ ಬಾಗಿಲು ಇದ್ದಂತೆ. ದೊಡ್ಡ ಬೇಟೆ (ಹುಲಿಬೇಟೆ)ಯಿಂದ ಹಿಡಿದು, ಕಾಡಿನ ಅಮೂಲ್ಯ ಸಂಪತ್ತಿನ ಲೂಟಿಗೆ ಹೆಬ್ಬಾಗಿಲು ಇದ್ದಂತೆ. ಇವಿಷ್ಟೇ ಅಲ್ಲದೆ, ರಾಜ್ಯದ ಕೆಲ ಅಕ್ಕಿ ಕಳ್ಳಸಾಗಣೆದಾರರು ಸರ್ಕಾರಕ್ಕೆ ಲೆವಿ ತಪ್ಪಿಸಲು ಸಹ ಈ ಮಾರ್ಗವನ್ನು ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ರಸ್ತೆಗಳಲ್ಲಿ ಬೆಳಗಿನ ಸಂಚಾರಕ್ಕಿಂತ ರಾತ್ರಿ ಸಂಚಾರವೇ ಹೆಚ್ಚು.  ಆಪದ್ಬಾಂಧವವಾದ ಹೈಕೋರ್ಟ್ ಆದೇಶ: ಈ ಲಾಬಿಗಳು ಎಷ್ಟು ಪ್ರಭಾವಶಾಲಿಯಾಗಿದ್ದವು ಎಂದರೆ, ಹೈಕೋರ್ಟ್ ಆದೇಶವಿರದಿದ್ದರೆ ಈಗಲೂ ಈ ರಸ್ತೆಯು ಹಲವು ಅಕ್ರಮಗಳಿಗೆ ದಾರಿಯಾಗಿರುತ್ತಿತ್ತು. ಆದರೆ, ಚಾಮರಾಜನಗರ ಜಿಲ್ಲಾಧಿಕಾರಿ ತಮ್ಮ ನಿಷೇಧ ಹಿಂತೆಗೆದುಕೊಳ್ಳುತ್ತಿದ್ದಂತೆಯೇ ಬೆಂಗಳೂರಿನ ಶ್ರೀನಿವಾಸಬಾಬು ಎಂಬವರು ಈ ಬಗ್ಗೆ ಹೈಕೋರ್ಟ್‌ನಲ್ಲಿ ಆಕ್ಷೇಪಿಸಿ ಅರ್ಜಿ ಸಲ್ಲಿಸಿದರು. ಕೋರ್ಟ್ ಜಿಲ್ಲಾಧಿಕಾರಿಗಳ ರಾತ್ರಿ ರಸ್ತೆ ಸಂಚಾರ ರದ್ದುಗೊಳಿಸಿದ ಆದೇಶವನ್ನು ಮರು ಜಾರಿ ಮಾಡುವಂತೆ ಆದೇಶಿಸಿತು. ಹೈಕೋರ್ಟ್ ಆದೇಶ ಬಂದ ನಂತರವೂ ಲಾಬಿ ಕೊನೆಗೊಳ್ಳಲಿಲ್ಲ. ಖುದ್ದು ಕೇರಳ ಸರ್ಕಾರ ಅರ್ಥಾತ್ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಹೈಕೋರ್ಟ್ ಈ ಆದೇಶದಿಂದ ತಮ್ಮ ರಾಜ್ಯಕ್ಕೆ ಆಗುವ ತೊಂದರೆಗಳ ಪಟ್ಟಿ ಮಾಡಿ ಕೋರ್ಟ್ ಮೆಟ್ಟಿಲು ಹತ್ತಿದೆ. ಇವರೊಂದಿಗೆ ಕೇರಳ ಟ್ರಾವಲರ್ಸ್ ಅಸೋಸಿಯೇಷನ್ ಸಹ ಹೈಕೋರ್ಟ್‌ನಲ್ಲಿ ರಾತ್ರಿ ಸಂಚಾರ ಬಂದ್ ಮಾಡಬಾರದು ಎಂದು ಅರ್ಜಿ ಸಲ್ಲಿಸಿದೆ. ಈ ಬಗ್ಗೆ ನವೆಂಬರ್‌ನಲ್ಲಿ ವಿಚಾರಣೆ ನಡೆಯಲಿದೆ. 

ಇತ್ತೀಚೆಗಷ್ಟೇ ಕೇರಳದ ಅರಣ್ಯ ಸಚಿವ ಖುದ್ದು ಬೆಂಗಳೂರಿಗೆ ಆಗಮಿಸಿ ಸಿ‌ಎಂ ಯಡಿಯೂರಪ್ಪರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದ್ದರು. ಆದರೆ, ವಿಷಯ ಕೋರ್ಟ್‌ನಲ್ಲ್ಲಿ ಇರುವುದರಿಂದ ಸರ್ಕಾರ ಸಹ ಏನೂ ಮಾಡಲಾಗದು ಎಂಬ ಉತ್ತರ ಯಡಿಯೂರಪ್ಪನವರಿಂದ ಕೇರಳದ ಸಚಿವರಿಗೆ ದೊರೆತಿದೆ. ಆದರೆ, ಕೇರಳದ ಒತ್ತಡ ತೀವ್ರವಾಗಿರುವ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಆಸ್ಪದ ನೀಡುವುದಾಗಿ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸುವ ಕುರಿತು ರಾಜ್ಯ ಗಂಭೀರ ಚಿಂತನೆ ನಡೆಸಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ಸೌಜನ್ಯ: ಕನ್ನಡಪ್ರಭ, ಅಕ್ಟೋಬರ್ ೨೫


Share: