ಬೆಂಗಳೂರು, ಜನವರಿ 19: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾವಿರಾರು ಕಬ್ಬು ಬೆಳೆಗಾರರು ನಗರದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿದರು.
ರಾಜ್ಯದ ನಾನಾ ಮೂಲೆಗಳಿಂದ ಆಗಮಿಸಿದ ಕಬ್ಬು ಬೆಳೆಗಾರರು ರೈಲ್ವೆ ನಿಲ್ದಾಣದಿಂದ ವಿಧಾನ ಸೌಧದವರೆಗೆ ಪ್ರತಿಭಟನೆ ನಡೆಸಿ ಸರ್ಕಾರದ ರೈತ ವಿರೋಧಿ ನೀತಿಯ ವಿರುದ್ಧ ಘೋಷಣೆ ಕೂಗಿದರು.
ವಿಧಾನ ಸೌಧದ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಿಂದ ಬಸವೇಶ್ವರ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದಾಗ ರಾಜ್ಯ ಸರ್ಕಾರದ ಪರವಾಗಿ ಸಕ್ಕರೆ ಸಚಿವ ಶಿವರಾಜ್ ತಂಗಡಿಗಿ ರೈತರಿಂದ ಮನವಿ ಸ್ವೀಕರಿಸಿ ಬೇಡಿಕೆ ಈಡೇರಿಕೆ ಬಗ್ಗೆ ಭರವಸೆ ನೀಡಿದರೂ ಸಹ ರೈತ ಮುಖಂಡರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಬಳಿ ಬಂದು ಆಶ್ವಾಸನೆ ನೀಡುವವರೆಗೆ ಪ್ರತಿಭಟನೆ ಮುಂದುವರೆಸುವುದಾಗಿ ಪಟ್ಟು ಹಿಡಿದರು.
ರೈತರ ಬೇಡಿಕೆಗೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಜರುಗಿಸುವ ಭರವಸೆ ನೀಡಿದರೂ ಸಹ ರೈತರು ಪ್ರತಿಭಟನೆ ಮುಂದುವರೆಸುವುದಾಗಿ ಪುನ: ಉಚ್ಚರಿಸಿದರು. ಇದಕ್ಕೂ ಮುನ್ನ ರೈತರು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸಕ್ಕರೆ ಬೆಲೆ ಹೆಚ್ಚಾಗಿರುವ ಪರಿಣಾಮ ಸಕ್ಕರೆ ಕಾರ್ಖಾನೆಗಳು ಹೆಚ್ಚಿನ ಲಾಭ ಮಾಡುತ್ತಿವೆ ಕಬ್ಬು ಬೆಳೆದ ರೈತರಿಗೆ ಮಾತ್ರ ಯಾವುದೇ ಲಾಭವಾಗುತ್ತಿಲ್ಲೆ ಎಂದು ಆರೋಪಿಸಿದರು.
ಕಬ್ಬು ಬೆಳೆಗಾರರಿಗೆ ಸೂಕ್ತ ಬೆಲೆ ನಿಗದಿಮಾಡುವಲ್ಲಿಯೂ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಬ್ಬಿಗೆ ಸಲಹಾ ಬೆಲೆಯನ್ನು ನೀಡಬೇಕೆಂದು ಆಗ್ರಹ ಪಡಿಸಿದರು.
ಕಬ್ಬಿನಿಂದ ಉತ್ಪಾಧಿಸುವ ಇತರ ಉತ್ವನ್ನದಿಂದ ಕಾರ್ಖಾನೆಗಳು ಲಾಭ ಗಳಿಸುತ್ತಿವೆ. ರೈತರಿಗೆ ಅದರಲ್ಲಿ ಪಾಲು ದೊರೆಯಬೇಕು. ಕಬ್ಬನ್ನು ಮುಕ್ತವಾಗಿ ಮಾರಾಟಮಾಡುವ ನೀತಿಯೊಂದನ್ನ ಜಾರಿಗೆ ತರಬೇಕು. ಬೆಳೆಗಾರರಿಗೆ ಪ್ರತಿ ಟನ್ನಿಗೆ ೩.೦೦೦ ರಿಂದ ೩.೫೦೦ ರೂ ದೊರೆಯುವಂತೆ ಮಾಡಬೇಕು ಎಂದು ರೈತರು ಪ್ರತಿಭಟನೆ ನಡೆಸಿದರು.
ರೈತರ ಪ್ರತಿಭಟನೆಯಿಂದ ವಿಧಾನ ಸೌಧಕ್ಕೆ ಬರುವ ಎಲ್ಲ ಮಾರ್ಗಗಳಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ರೈತರನ್ನು ಪ್ರೀಡಂ ಪಾರ್ಕ್‌ಬಳಿ ತಡೆಯಲಾಯಿತು. ಮುಖ್ಯಮಂತ್ರಿ ನಿವಾಸ ಸೇರಿದಂತೆ ವಿಧಾನ ಸೌಧದ ಸುತ್ತಮುತ್ತಲು ವಿಶೇಷ ಭದ್ರತೆ ಕಲ್ಪಸಲಾಗಿತ್ತು.
ರೈತರ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರೆಸುವುದಾಗಿ ಕುರುಬೂರು ಶಾಂತ ಕುಮಾರ್ ನಂತರ ಸುದ್ದಿಗಾರರಿಗೆ ತಿಳಿಸಿದರು. ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ 48 ಕೋಟಿ ರೂ. ಬಾಕಿ ಬರಬೇಕಾಗಿದೆ. ಕೂಡಲೇ ಬಾಕಿ ಬಿಡುಗಡೆಗೆ ಸರ್ಕಾರ ಮಧ್ಯ ಪ್ರವೇಶಿಸಬೇಕೆಂದು ಆಗ್ರಹ ಪಡಿಸಿದರು.