ಬೆಂಗಳೂರು, ಮಾರ್ಚ್ 9: ಪ್ರಮುಖ ರಾಜಕೀಯ ಪಕ್ಷಗಳ ಬೆಂಬಲ ಹಾಗೂ ಹಿಂದೆಂದೂ ಕಂಡರಿಯದಂತಹ ಅಮಿತೋತ್ಸಾಹದ ನಡುವೆ ರಾಜ್ಯ ಸಭೆಯಲ್ಲಿ ಮಹಿಳಾ ಮೀಸಲು ಮಸೂದೆಗೆ ಕೊನೆಗೂ ಅನುಮೋದನೆ ದೊರೆತಿದೆ.
ಮಸೂದೆ ಕುರಿತು ಪ್ರತಿಪಕ್ಷ ಸದಸ್ಯರು ಎತ್ತಿದ ಆಕ್ಷೇಪಗಳಿಗೆ ಪ್ರಧಾನಿ ಡಾ: ಮನಮೋಹನ್ ಸಿಂಗ್, ಕಾನೂನು ಸಚಿವ ವೀರಪ್ಪ ಮೊಯ್ಲಿ ಸ್ಪಷ್ಟನೆ ನೀಡಿದ ನಂತರ ರಾಜ್ಯ ಸಭೆಯ ಸಭಾಪತಿ ಡಾ: ಹಮೀದ್ ಅನ್ಸಾರಿ ಮಸೂದೆಯನ್ನು ಮತಕ್ಕೆ ಹಾಕಿದಾಗ ೧೮೯ ಮಂದಿ ಪರವಾಗಿ ಹಾಗೂ ಒಬ್ಬರು ವಿರುದ್ಧವಾಗಿ ಮತ ಚಲಾಯಿಸಿದರು. ಈ ಮೂಲಕ ಮಸೂದೆಗೆ ಅಂಗೀಕಾರ ದೊರೆಯಿತು. ಇದರಿಂದಾಗಿ ೧೩ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲು ಮಸೂದೆಗೆ ಮೇಲ್ಮನೆಯಲ್ಲಿ ಅಂಗೀಕಾರ ದೊರೆತಂತಾಗಿದೆ. ಲೋಕಸಭೆ ಮತ್ತು ರಾಜ್ಯ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ ೩೩ ರಷ್ಟು ಸ್ಧಾನ ಮೀಸಲಾತಿ ದೊರೆಯುವ ಐತಿಹಾಸಿಕ ಕ್ರಮಕ್ಕೆ ಇದೀಗ ಹಾದಿ ಸುಗಮವಾದಂತಾಗಿದೆ.
ರಾಜ್ಯ ಸಭೆಯಲ್ಲಿ ಅಂಗೀಕಾರವಾದ ಮಸೂದೆ ಲೋಕಸಭೆಯಲ್ಲಿ ಅನುಮೋದನೆ ಪಡೆದ ನಂತರ ರಾಷ್ಟ್ರಪತಿಯವರ ಅಂಕಿತಕ್ಕೆ ಕಳುಹಿಸಿದ ನಂತರ ಮಸೂದೆ ಕಾನೂನು ಸ್ವರೂಪ ಪಡೆಯಲಿದೆ.
ಇಂದು ಮೀಸಲು ಮಸೂದೆ ಕುರಿತು ವಿಪಕ್ಷ ನಾಯಕ ಅರುಣ್ ಜೈಟ್ಲಿ, ಚರ್ಚೆ ಆರಂಭಿಸಿ, ಮಹಿಳೆಯರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸುವ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಲು ಈಗ ಕಾಲ ಪಕ್ವವಾಗಿದೆ. ಲಿಂಗ ಆಧಾರಿತ ಮೀಸಲಾತಿಯಲ್ಲಿ ರೊಟೆಷನ್ ಆಧಾರಿತ ಕ್ಷೇತ್ರ ಮೀಸಲು ವ್ಯವಸ್ಧೆ ಜಾರಿಗೆ ಬರಬೇಕು. ಹಾಗಾದಾಗ ಪ್ರತಿ ೧೫ ವರ್ಷಗಳಿಗೊಮ್ಮೆ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯೆ ದೊರೆತಂತಾಗುತ್ತದೆ ಎಂದು ಪ್ರತಿಪಾದಿಸಿದರು.
ಕಾಂಗ್ರೆಸ್ ಪಕ್ಷದ ಜಯಂತಿ ನಟರಾಜನ್, ಮಹಿಳೆಯರಿಗೆ ಮೀಸಲು ಸೌಲಭ್ಯ ಕಲ್ಪಿಸಲು ಪಕ್ಷ ಬದ್ಧವಾಗಿದೆ. ಮಹಿಳೆಯರನ್ನು ತೀರ್ಮಾನ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಇದು ಸಹಕಾರಿಯಾಗಲಿದೆ. ಇದರಿಂದ ಶಾಸನ ಸಭೆಗಳಲ್ಲಿ ಶೇ ೩೩ ರಷ್ಟು, ಪಂಚಾಯತ್‌ಗಳಲ್ಲಿ ಶೇ 50 ರಷ್ಟು ಮೀಸಲಾತಿ ಕಲ್ಪಿಸಲು ಸರ್ಕಾರ ಬದ್ಧವಾಗಿದೆ.
ಚರ್ಚೆಯಲ್ಲಿ ಪಾಲ್ಗೊಂಡ ಬಹುತೇಕ ಸದಸ್ಯರು ಮೀಸಲು ಮಸೂದೆ ಕುರಿತು ಮಾತನಾಡಿದರಲ್ಲದೇ ಮಸೂದೆಗೆ ಅಡ್ಡಿಪಡಿಸಿದವರ ಧೋರಣೆಯನ್ನು ಬಲವಾಗಿ ಖಂಡಿಸಿದರು. ಇದು ಸಂಸದೀಯ ವ್ಯವಸ್ಧೆಯನ್ನೇ ಅಣಕಿಸಿದಂತಿದೆ ಎಂದು ಹೇಳಿದರು.
ಸರ್ಕಾರ ಮಸೂದೆ ಮಂಡನೆ ವಿಚಾರದಲ್ಲಿ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಂಡಿಲ್ಲ. ಸದನವನ್ನು ನಿರ್ವಹಿಸುವ ವಿಧಾನದಲ್ಲಿ ಎಡವಿದೆ ಎಂದು ಬಿಜೆಪಿ ಮತ್ತು ಎಡಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿದವು. ಜೆಡಿಯುನ ಶಿವಾನಂದ ತಿವಾರಿ ಮಸೂದೆಗೆ ಬೆಂಬಲ ವ್ಯಕ್ತಪಡಿಸಿ ಅಚ್ಚರಿ ಮೂಡಿಸಿದರು.
ಮಸೂದೆಗೆ ಅಡ್ಡಿಪಡಿಸುತ್ತಿದ್ದ, ಸದನದಲ್ಲಿ ಗದ್ದಲ ಎಬ್ಬಿಸುತ್ತಿದ್ದ ಮತ್ತು ಧರಣಿ ನಡೆಸುತ್ತಿದ್ದ ಸಮಾಜವಾದಿ ಪಕ್ಷ, ಆರ್,ಜೆ,ಡಿ ಮತ್ತು ಲೋಕಜನಶಕ್ತಿ ಪಕ್ಷದ ಏಳು ಮಂದಿ ಸದಸ್ಯರನ್ನು ಅಮಾನತುಗೊಳಿಸಲಾಗಿತ್ತು. ಇದೇ ಮೊದಲ ಬಾರಿಗೆ ಮಾರ್ಷಲ್‌ಗಳ ಮೂಲಕ ಸದಸ್ಯರನ್ನು ದೈಹಿಕವಾಗಿ ಎತ್ತಿ ಹೊರಗೆ ಕಳುಹಿಸಿದ್ದು ಕೂಡ ಇಂದಿನ ಕಲಾಪದ ವೈಶಿಷ್ಟ್ಯವಾಗಿತ್ತು.