ಪಾಪಮ್ಮ ಮನೆ ಮತ್ತು ಕೊಟ್ಟಿಗೆಯ ಸೂರಿನ ಮೇಲೂ ಹಸಿರೇ ಹಸಿರು. ಸೂರಿನ ತುಂಬಾ ಚಾಚಿದ್ದ ಅವರೆ ಬಳ್ಳಿಯಂತೂ ಕೆಳಗಿದ್ದ ತರಕಾರಿ ಗಿಡಗಳ ಮೇಲೂ ಹಬ್ಬಿತ್ತು. ಪಾಪಮ್ಮ ಅವರ ಮಂತ್ರ ದಂಡದ ಸ್ಪರ್ಶದಿಂದ ಕಲ್ಲುಗಳಿಂದ ತುಂಬಿದ್ದ ಹೊಲದಲ್ಲೂ ಈಗ ಹಸಿರು ಚಿಮ್ಮುತ್ತಿದೆ. ಆ ಪುಟ್ಟ ಮನೆಯ ಸುತ್ತ ಹಾಗೂ ಹೊಲದಲ್ಲಿ ಒಂದೇ ಒಂದು ಇಂಚು ಪಾಳು ಬಿದ್ದ ಭೂಮಿ ಕಣ್ಣಿಗೆ ಬೀಳುವುದು ಅಸಾಧ್ಯ. ಕೋಲಾರವೆಂಬ ಬಿರು ಬಿಸಿಲಿನ ನಾಡಿನಲ್ಲಿ, ಪಸೆಯಾರಿದ ಭೂಮಿಯಲ್ಲಿ ಹಸಿರು ಕಟ್ಟಿಕೊಡುವುದು ಸುಲಭದ ಕೆಲಸವಲ್ಲ. ಅಷ್ಟರಲ್ಲೇ ಸೆರಗಿನಲ್ಲಿ ಕೈಯೊರೆಸುತ್ತಾ ಪಾಪಮ್ಮ ಬಂದರು. ಅರವತ್ತರ ಆಜುಬಾಜಿನ ಮಹಿಳೆ. ಪಾಪಮ್ಮ ಅವರ ತೆಲುಗು ಮಿಶ್ರಿತ ಕನ್ನಡ ಅರ್ಥೈಸಿಕೊಳ್ಳುವುದು ಕಷ್ಟವಾಗಲಿಲ್ಲ. ನಮ್ಮ ವಿವರ ಕೇಳಿ ತಿಳಿದ ಅವರು, "ಆ ಪಲಾವ್ ಬೀನ್ಸ್ ಬಳ್ಳಿ ಮೇಲೆ ಕಪ್ಪು- ಕಪ್ಪು ಚುಕ್ಕೆ ಇದೆ ನೋಡಿ. ಅದು ಸೆಗಣಿ- ಗಂಜಲ ಹೊಡೆದಿದ್ದು. ಅದ್ರಿಂದ ಹುಳ ಬೀಳೋದಿಲ್ಲ" ಎನ್ನುತ್ತಾ ಪಾಪಮ್ಮ ಎರಡು ಮೂರು ಕಾಯಿ ಕಿತ್ತು ಸೆರಗಿಗೆ ಹಾಕಿಕೊಂಡರು. ಕೋಲಾರ ಜಿಲ್ಲೆಯ ಡಿ. ಕುರುಬರ ಹಳ್ಳಿ ಎಂಬ ಕುಗ್ರಾಮದಲ್ಲಿ ಕಳೆದ 20 ವರ್ಷದಿಂದ ಸಾವಯವ ಕೃಷಿಯನ್ನೇ ಮಾಡುತ್ತಾ ಬಂದಿರುವ ಪಾಪಣ್ಣ- ಪಾಪಮ್ಮ ದಂಪತಿಯದ್ದು ಸಂತೃಪ್ತ ಜೀವನ, ನಳನಳಿಸುವ ಅವರ ಹೊಲದಂತೆ! "ಗ್ರಾಮ ವಿಕಾಸದೋರು (ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ) ಬಂದು ನಮಗೆ ಟ್ರೇನಿಂಗ್ ಕೊಟ್ರು. ಯಾರ‍್ಯಾರ ಮನೆಯಲ್ಲಿ ನಾಟಿ ಬೀಜ ಐತೋ ತಂದಿಡ್ರಿ ಅಂದಿಂದ್ರು. ನಮ್ಮನೆಲೇನೇ ಒಂದು ಹದಿನೈದಿಪ್ಪತ್ತು ವೆರೈಟಿ ಇತ್ತು. ನಮ್ಮತ್ರ ಬದನೆ, ಅವರೆ, ತೊಗರಿ, ಅಲಸಂಡೆ, ಬೀನ್ಸು, ನುಗ್ಗೆ ಕಾಯಿ, ರಾಗಿ, ಭತ್ತ, ಬೆಂಡೆ, ಜೋಳ, ಸೋನೆ, ಸಜ್ಜೆ ಎಲ್ಲ ಇದ್ದವು. ಆ ಬೀಜಗಳನ್ನೆಲ್ಲಾ ಕೊಟ್ಟೆವು. ಬೀಜಕ್ಕೋಸ್ಕರನೇ ಬೆಳೆ ತೆಗೀತೀವಿ ನಾವು. ಸಾವಯವ ಕೃಷಿನ ನಂಬಿ ಇಪ್ಪತ್ತು ವರ್ಷವಾಯ್ತು. ಅಂದಿನಿಂದ ಇಂದಿನವರೆಗೂ ತರಕಾರಿ ತರೋದಿಕ್ಕೆ ಸಂತೆಗೆ ಹೋಗಿಲ್ಲ ನಾವು. ನಮ್ಗೆ ಬೇಕಾಗಿದ್ದೆಲ್ಲ ಹೊಲದಲ್ಲೇ ಬೆಳಿತೀವಿ" ಎನ್ನುವ ಪಾಪಮ್ಮ ಹಾಗೂ ಅವರ ಕುಟುಂಬ ಮಾರುಕಟ್ಟೆಯನ್ನು ಅವಲಂಬಿಸಿರುವುದು ಬಟ್ಟೆ, ಉಪ್ಪು, ಸಾಬೂನಿಗೆ ಮಾತ್ರ! ಪಾತ್ರೆ ತೊಳೆದ ನೀರಿರಲಿ ಅಥವಾ ಬಚ್ಚಲು ಮನೆಯ ನೀರೇ ಆಗಿರಲಿ ಅವರ ಮನೆಯ ಹನಿ ನೀರೂ ಪೋಲಾಗದೆ ಗಿಡಗಳ ಬುಡಕ್ಕೆ ಹೋಗುತ್ತದೆ. "ನಮಗೆ ಒಂದೆಕರೆ ಗದ್ದೆ, ಮೂರೆಕರೆ ಹೊಲ ಇದೆ. ಹೊಲದಲ್ಲಿ ರಾಗಿ, ಅವರೆ, ತೊಗರಿ, ಕಡಲೆ ಕಾಯಿ ಬೆಳೀತೀವಿ. ಗದ್ದೆಯಲ್ಲಿ ಭತ್ತ ಬೆಳೆಯೋಕೆ ನೀರಿಲ್ಲದ ಕಾರಣ ಇವಾಗ ತರಕಾರಿ ಬೆಳಿತಾ ಇದೀವಿ" ಎನ್ನುವ ಪಾಪಮ್ಮ, "ನೀವು ಬೆಂಗಳೂರಿಗೆ ಹೋದ ಮೇಲೆ ಯಾವುದಾದ್ರೂ ಆಫೀಸರಿಗೆ ಹೇಳಿ ನಮ್ಮ ಹೊಲದಲ್ಲಿ ಒಂದು ಬೋರ್ ತೆಗೆಸೋಕೆ ಹೇಳ್ತೀರಾ" ಎಂಬ ಮನವಿಯನ್ನೂ ಮುಂದಿಟ್ಟರು. ರಾಗಿ, ಅವರೆ, ತೊಗರಿ, ಕಡಲೆ ಕಾಯಿ, ಭತ್ತ, ಜೋಳ, ಸಜ್ಜೆ, ಬದನೆ, ಬೀನ್ಸ್, ಅಲಸಂಡೆ, ಕಬ್ಬು, ಪಪ್ಪಾಯಿ, ಮೆಣಸು, ಹಾಗಲ ಕಾಯಿ, ಬಾಳೆ ಹೀಗೆ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಅವರು ಹತ್ತು ಹಲವು ಬಗೆಯ ಬೆಳೆ ತೆಗೆಯುತ್ತಾರೆ.
ಜೋಳ, ಅವರೆ, ತೊಗರಿ, ಭತ್ತ, ರಾಗಿ ಹೀಗೆ ಪಾಪಮ್ಮ ಅವರ ಮನೆಯ ತುಂಬೆಲ್ಲಾ ವಿವಿಧ ಗಾತ್ರದ ಡಬ್ಬಗಳಲ್ಲಿ ಬೀಜಗಳಿವೆ. ಸಾಲಾಗಿ ಇಟ್ಟಿದ್ದ ಐದು-ಆರು ಡಬ್ಬಗಳಲ್ಲೂ ಬದನೆ ಬೀಜ ಇರುವುದನ್ನು ಕಂಡು, 'ಬದನೆ ಬೀಜಗಳನ್ನು ಏಕೆ ಬೇರೆ ಬೇರೆ ಡಬ್ಬಗಳಲ್ಲಿ ಇಟ್ಟಿರುವಿರಿ?' ಎಂದು ಕೇಳಿದಾಗ "ನಮ್ಮ ಹೊಲದಲ್ಲಿ ಆರು ವಿಧದ ಬದನೆ ತಳಿಗಳಿವೆ ಎಂದರು" ಎಂದರು ಪಾಪಮ್ಮ. ಬದನೆಯ ಪ್ರಸ್ತಾಪ ಬಂದ ಕಾರಣ ಮಾತು ಬಿಟಿ ಬದನೆ ಹಾಗೂ ಅದರ ಹೆಸರಿನಲ್ಲಿ ನಡೆಯುತ್ತಿರುವ ವಾದ- ವಿವಾದಗಳ ಎಡೆಗೆ ತಿರುಗಿತು. ಆ ಬಗ್ಗೆ ಪಾಪಮ್ಮ ಅವರ ಬಳಿ ಪ್ರಶ್ನಿಸಿದಾಗ "ಬಿಟಿ ಬದನೆ ಖಂಡಿತಾ ಬೇಡ. ಈಗ್ಲೇ ನಮ್ಮ ಭೂಮಿ ಬರಡಾಗಿದೆ. ಅದು ಟೆಕ್ನಿಕಲ್ ಬದನೆ ಅಂತೆ. ನಮ್ಮನೆಯಲ್ಲೇ, ಚಪ್ಪರದ ಬದನೆ, ಉದ್ದ ಬದನೆ, ಮರ ಬದನೆ, ನಾಟಿ ಬದನೆ, ಮುಸುಕು ಬದನೆ, ನೀಲಿ ಬದನೆ ಹೀಗೆ 6-7 ಥರದ್ದು ಬದನೆ ಇದೆ. ನಮ್ಮ ಹಳ್ಳಿಲಿ ಒಂದು ಸುತ್ತು ಹಾಕಿ ನೋಡಿ 40-45 ಥರದ ಬದನೆ ಸಿಗುತ್ತೆ. ಇನ್ನು ದೇಶದಲ್ಲಿ ಎಷ್ಟೊಂದು ಥರದ ಬದನೆಗಳು ಇರಬಹುದು? ಬಿಟಿ ಬದನೆ ಬಂದ್ರೆ ನಾಟಿ ಬದನೆ ತಳಿಗಳೆಲ್ಲಾ ಹೋಗುತ್ತೆ. ಮಾರ್ಕೆಟ್‌ನಲ್ಲಿ ಚೆನ್ನಾಗಿ ಕಾಣುವುದನ್ನೇ ಜನ ತೆಕ್ಕೊಳ್ತಾರೆ. ಬೆಂಗಳೂರು ಗುಂಟ ಬಂದು ಬಿಟಿ ಬದನೆ ನಮ್ಗೆ ಬೇಡಾ ಅಂಥ ಮಂತ್ರಿಗಳತ್ರ (ಕೇಂದ್ರ ಪರಿಸರ ಖಾತೆ ಸಚಿವ ಜಯರಾಮ್ ರಮೇಶ್) ಹೇಳಿದ್ವಿ" ಎನ್ನುತ್ತಾ ಪಾಪಮ್ಮ ಅಡುಗೆ ಮನೆಯಲ್ಲಿ ಒಂದರ ಮೇಲೊಂದರಂತೆ ಪೇರಿಸಿಟ್ಟ ಮಡಿಕೆಗಳ ಸಾಲಿನ ಬಳಿ ಕರೆದೊಯ್ದರು. "ಈ ಮಡಿಕೆಯಲ್ಲಿರೋ ಭತ್ತ ನೋಡಿ, ನಾಲ್ಕು ವರ್ಷ ಆಯ್ತು, ಹುಳ- ಹುಪ್ಪಟೆ ಇಲ್ಲದೆ ಇನ್ನೂ ಚೆನ್ನಾಗೇ ಇದೆ. ಅದ್ರ ಮೇಲೆ ಸೀತಾ ಫಲದ ಸೊಪ್ಪು ಹಾಕಿದಿನಿ ನೋಡಿ ಅದಕ್ಕೆ" ಎನ್ನುತ್ತಾ ಕೆಳಗಿಟ್ಟ ಮಡಿಕೆಯನ್ನು ಮತ್ತೆ ಪೇರಿಸಿಟ್ಟರು. ಬೀಜ ಸಂಗ್ರಹಣೆ ಮಾಡಿ ಇತರರಿಗೆ ಮಾರಾಟ ಮಾಡುತ್ತೀರೋ ಅಥವಾ ಸ್ವಂತಕ್ಕಷ್ಟೇ ಬಳಸುತ್ತೀರೋ ಎಂಬ ಪ್ರಶ್ನೆಗೆ "ನಮ್ಮ ಅಗತ್ಯಕ್ಕೆ ಬೇಕಾದಷ್ಟು ಇಟ್ಟುಕೊಂಡು ಉಳಿದದ್ದನ್ನ ಸಂತೆಗೆ ಹೋಗಿ ಮಾರ‍್ತೀವಿ. ಬೀಜ ಮಾತ್ರ ಅಲ್ಲ ತರಕಾರೀನೂ ಮಾರ‍್ತೀವಿ" ಎಂಬ ಪಾಪಣ್ಣ ಅವರ ಮಾತನ್ನು ನಮ್ಮೊಂದಿಗಿದ್ದ ಸ್ಥಳೀಯರು ಕನ್ನಡಕ್ಕೆ ಅನುವಾದಿಸಿ ಮತ್ತೊಮ್ಮೆ ನೆರವಿಗೆ ಬಂದರು.
ಪಾಪಮ್ಮ ತಮ್ಮ ಜಮೀನಿಗೆ ಉಣಿಸುವುದು ಅವರೇ ತಯಾರಿಸುವ ಎರೆಗೊಬ್ಬರ, ಮರಳು-ಗಂಜಲದ ಮಿಶ್ರಣ ಮತ್ತು ಕೊಟ್ಟಿಗೆ ಗೊಬ್ಬರ. "ಅದು ಸಾಕಾಗದೇ ಇದ್ರೆ ಬೇವಿನ ಹಿಂಡಿ ಮತ್ತೆ ಹೊಂಗೆ ಹಿಂಡಿ ಹಾಕ್ತೀವಿ" ಎಂದ ಆ ದಂಪತಿಗೆ ಇರುವುದು ಒಬ್ಬನೇ ಮಗ. "ಬೆಂಗ್ಳೂರಲ್ಲಿ ಆಟೋ ಓಡಿಸ್ತಾ ಇದ್ದ. ಇವಾಗ ಕಂಡಕ್ಟರ್‌ಗೆ ಕಾಲ್‌ಫರ್ ಆಗಿ ಟ್ರೇನಿಂಗ್ ಹೋಗಿದಾನೆ. ಮೊಮ್ಮಗ ಹಾಸನದ ಕೃಷಿ ಕಾಲೇಜಲ್ಲಿ ಓದ್ತಿದಾನೆ. ಮಗ-ಸೊಸೆ ಮನೆಗೆ ಬಂದಾಗ ಹೊಲದ ಕೆಲಸಕ್ಕೆ ಕೈ ಸೇರಿಸ್ತಾರೆ" ಎಂದ ಪಾಪಮ್ಮ ಬಳಿ ದಂಪತಿಯ ಹೆಸರಿನ ಸಾಮ್ಯತೆ ಬಗ್ಗೆ ಕೇಳಿದಾಗ, "ಅದೇನೋ ಗೊತ್ತಿಲ್ಲ. ಆದ್ರೆ ನಮ್ಮ ಅಪ್ಪ-ಅಮ್ಮ ಮತ್ತೆ ಇವ್ರ ಅಪ್ಪ-ಅಮ್ಮನ ಹೆಸ್ರೂ ಮುನಿಯಪ್ಪ- ಸೀತಮ್ಮ ಅಂತ. ಅವ್ರ ಮದ್ವೆ ಆಗಿದ್ದೂ ಒಂದೇ ದಿನ!" ಎನ್ನುತ್ತಾ ನಗುತ್ತಾರೆ. ನಾಲ್ಕು ಎಕರೆ ಜಮೀನಿನಲ್ಲಿ ವಿಧ- ವಿಧದ ಬೆಳೆ ತೆಗೆಯುತ್ತಿರುವ ಈ ದಂಪತಿಯ ಯಶಸ್ಸಿನ ಗುಟ್ಟು ಬಹುಶಃ ಲಾಭದ ಲೆಕ್ಕಾಚಾರವಿಲ್ಲದ ಪರಿಶುದ್ಧ ಕೃಷಿ. ಪಾಪಮ್ಮ ಅವರ ಈ ನಾಲ್ಕು ಎಕರೆ ಜಮೀನಿನಲ್ಲಿ ಕೀಟ ಬಾಧೆ ಬಹಳ ಕಡಿಮೆ. ಹಾಗೇನಾದರೂ ಆದರೆ ಬೇವಿನ ಸೊಪ್ಪು, ಲಕ್ಕೆ ಸೊಪ್ಪು ಹಾಕಿ ಸಾವಯವ ಮಾರ್ಗದ ಮೂಲಕವೇ ಪರಿಹಾರ ಕಂಡುಕೊಳ್ಳುತ್ತಾರಂತೆ. "ಆಲೂಗೆಡ್ಡೆ, ಟೊಮೇಟೊ ನಾವು ಬೆಳೆಯೋಲ್ಲ. ಅದರ ಬೆಲೆ ಏರುಪೇರು ಆಗ್ತಾ ಇರುತ್ತದೆ. ಉಳಿದ ತರಕಾರಿಗಳನ್ನ ನಾವೇ ಬೆಳೆಯೋದ್ರಿಂದ ಸಂತೆಗೆ ಹೋಗಿ ಕೊಂಡುತರುವ ಕೆಲಸವೇ ನಮಗಿಲ್ಲ. ಉತ್ಪನ್ನ ನಮಗೆ ಆಗಿ ಮಿಕ್ಕಿದರೆ ಮಕ್ಕಳಿಗೆ ಕೊಟ್ಟು ಕಳಿಸ್ತೀವಿ. ಉಳಿದ್ರೆ ಮಾರ‍್ತೀವಿ" ಎಂದರು ಪಾಪಣ್ಣ.
ಮುಂದೆ ಜಮೀನಿನಲ್ಲಿ ಏನಾದರೂ ಹೊಸತನ್ನು ಆರಂಭಿಸುವ ಯೋಜನೆ ಏನಾದರೂ ಇದೆಯೇ ಎಂಬ ಪ್ರಶ್ನೆಗೆ, "ಹೌದು. ಹೊಸ ಕೃಷಿ ಆರಂಭಿಸಬೇಕು. ಬೇರೆ- ಬೇರೆ ರೀತಿಯ ನಾಟಿ ಬೀಜಗಳನ್ನು ಸಂಗ್ರಹಿಸಬೇಕು ಹಾಗೂ ಬೆಳೆ ತೆಗೆಯಬೇಕು, ಎಂಬ ಆಸೆ ಇದೆ. ಯಾರಾದರೂ ಹೊಲಕ್ಕೆ ಭೇಟಿ ನೀಡೋಕೆ ಬಂದ್ರೆ ಖುಷಿ ಆಗುತ್ತೆ. ಬಂದವರಿಗೂ ನಮ್ಮ ಹೊಲ ಖುಷಿ ನೀಡುವಂತಿರಬೇಕು. ಅದರಂತೆಯೇ ನೀರಿನದೊಂದೇ ಸಮಸ್ಯೆ ಇಲ್ಲಿ. ಅದೊಂದು ಪರಿಹಾರ ಆಗಿಬಿಟ್ರೆ ಎಲ್ಲವೂ ಅಂದುಕೊಂಡಂತೆ ನಡೆಯುತ್ತದೆ" ಎನ್ನುವ ಇಳಿವಯಸ್ಸಿನ ಈ ದಂಪತಿಯ ಉತ್ಸಾಹಕ್ಕೆ ಎಂಥವರೂ ತಲೆದೂಗಲೇಬೇಕು. ಕೃಷಿ ಕಾರ್ಯದಲ್ಲಿ ಪಾಪಮ್ಮ ಅವರ ಸಾಧನೆಯನ್ನು ಗಮನಿಸಿದ ಕರ್ನಾಟಕ ಸರ್ಕಾರ 2008ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿ ಕೈ ತೊಳೆದುಕೊಂಡಿತು. ಸರ್ಕಾರದಿಂದ ಏನಾದರೂ ನೆರವು? "ಕೊಟ್ಟೈತಲ್ಲಾ ಸರ್ಕಾರ ಪ್ರಶಸ್ತಿ ಜೊತೆಗೆ ಜೊತೆ ಒಂದು ಲಕ್ಷ ರೂಪಾಯಿ" ಅದಲ್ಲದೆ ಬೇರೇನಾದರೂ? "ಒಂದು ಡ್ರಮ್ಮು ಕೊಟ್ಟಿದಾರೆ ಅಕ್ಕಿ ಹಾಕೋಕೆ. ಸರ್ಕಾರದ ಆಹಾರ ಭದ್ರತೆ ವತಿಯಿಂದ ಅಂತೆ ಅದು"! ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕ ಬಳಸಿ ಬೇಸಾಯ ಮಾಡುವ ಪದ್ಧತಿ ಬಹುಶಃ ಕೋಲಾರದ ಜನರ ಪಾಲಿಗೆ 'ಔಟ್ ಡೇಟೆಡ್' ಎನಿಸಿಕೊಳ್ಳುತ್ತಿದೆ. ಸಾವಯವ ಕೃಷಿಯ ತಾಣದಂತೆ ಕಂಡು ಬರುವ ಕೋಲಾರ ಜಿಲ್ಲೆಯಲ್ಲಿ ಕುಲಾಂತರಿ ಬೀಜಗಳ ಕುರಿತ ವ್ಯಾಪಕ ಜಾಗೃತಿಯೂ ಮೂಡುತ್ತಿದೆ. ಇದೇ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಮತ್ತೊಬ್ಬರು ಪಾಪಮ್ಮ ಇದ್ದಾರೆ. ಬಿಟಿ ಬದನೆ ವಿರುದ್ಧ ಸಿಡಿದೆದ್ದ ಈ ಪಾಪಮ್ಮ ತಮ್ಮ ತಂಡದೊಂದಿಗೆ ದೆಹಲಿಯವರೆಗೂ ಹೋಗಿ ಸಚಿವ ಜಯರಾಮ್ ರಮೇಶ್ ಅವರನ್ನು ಮುಖತಃ ಕಂಡು ಬಿಟಿ ಬದನೆ ಭಾರತಕ್ಕೆ ಬೇಡ ಎಂಬ ಮನವಿಯನ್ನೂ ಸಲ್ಲಿಸಿದ್ದಾರೆ. "ಬಿಟಿ ಬದನೆ ಬೇಕು ಅಂತಾರಲ್ಲಾ, ಮೊದಲು ಆ ಆಫೀಸರುಗಳೆಲ್ಲರೂ ತಮ್ಮ ತಮ್ಮ ಮಕ್ಕಳಿಗೆ ಅದನ್ನ ತಿನ್ನಿಸಲಿ. ಆಮೇಲೂ ಅದು ಒಳ್ಳೆಯದು ಎನಿಸಿದರೆ ರೈತರಿಗೆ ಕೊಡಲಿ" ಎಂದು ಖಾರವಾಗೇ ನುಡಿಯುತ್ತಾರೆ ಆಕೆ. ಕೋಲಾರ ಡಿ. ಮಾದೇಹಳ್ಳಿಯ ಮಂಗಮ್ಮ ಕೂಡಾ ಸಾವಯವ ಕೃಷಿ ಹಾಗೂ ಬೀಜ ಬ್ಯಾಂಕಿಂಗ್‌ನಲ್ಲಿ ಹೆಸರುವಾಸಿ. ಸಾವಯವ ಕೃಷಿಯತ್ತ ರೈತರನ್ನು ಆಕರ್ಷಿಸುವ ಮಂಗಮ್ಮ ಬೀಜ ಬ್ಯಾಂಕಿಂಗ್ ಹಾಗೂ ಕುಲಾಂತರಿ ಬೀಜಗಳ ಕುರಿತ ಜಾಗೃತಿ ಅಭಿಯಾನವನ್ನೂ ನಡೆಸುತ್ತಾರೆ. ಇನ್ನೂ ವಿವಾದಾಸ್ಪದ ವಿಷಯವಾಗೇ ಉಳಿದಿರುವ ಮೊದಲ ಹಸಿರು ಕ್ರಾಂತಿಗೆ ಕರ್ನಾಟಕದಲ್ಲಿ ಎದುರಾಗಿದ್ದ ತೀವ್ರ ಪ್ರತಿಕ್ರಿಯೆ ಹಾಗೂ ಎಂ.ಡಿ. ನಂಜುಡಸ್ವಾಮಿ ನೇತೃತ್ವದಲ್ಲಿ ಬಿಟಿ ಹತ್ತಿ ಹೊಲಕ್ಕೆ ಬೆಂಕಿ ಇಟ್ಟ ಪ್ರಕರಣ ಕನ್ನಡಿಗರ ಮನದಿಂದ ಅಷ್ಟು ಸುಲಭವಾಗಿ ಮಾಸುವಂಥದ್ದಲ್ಲ. ರಾಸಾಯನಿಕ ಗೊಬ್ಬರಗಳ ಅತಿ ಬಳಕೆ, ಭಾರೀ ಇಳುವರಿ ನೀಡುವ ಬೀಜಗಳ ತಳಿ, ಏಕ ಬೆಳೆಯನ್ನು ವ್ಯಾಪಕಗೊಳಿಸಿದ ದೇಶದ ಮೊದಲ ಹಸಿರು ಕ್ರಾಂತಿ ಒಂದೇ ಪಟ್ಟಿಗೆ ಲಾಭ ತಂದಂತೆ ಕ್ರಮೇಣ ರೈತರ ಬುಡಕ್ಕೆ ಕೊಡಲಿ ಇಟ್ಟಿದ್ದು ಸುಳ್ಳಲ್ಲ. ದೇಸೀ ಬೀಜಗಳು ತೆರೆಮರೆಗೆ ಸರಿದಿದ್ದೂ ಆ ಸಮಯಕ್ಕೇ. ರಾಸಾಯನಿಕ ಗೊಬ್ಬರ, ಉತ್ತಮ ಇಳುವರಿಯ ಬೀಜ, ಅದಕ್ಕೆ ತಗಲುವ ಕೀಟ ಬಾಧೆಯನ್ನು ತೊಲಗಿಸಲು ಆಗಮಿಸಿದ ಕೀಟನಾಶಕ- ಕಳೆನಾಶಿನಿಗಳು ಕ್ರಮೇಣ ಗದ್ದೆ- ಜಮೀನುಗಳಿಗೆ ಕೆಮಿಕಲ್ ಲ್ಯಾಬರೆಟರಿಯ ಕಳೆ ನೀಡಿತು ಎಂದರೆ ಅತಿಶಯೋಕ್ತಿಯಲ್ಲ. ಆದರೆ ಕುಲಾಂತರಿ ತಳಿಯ ಹಣೆಪಟ್ಟಿ ಹೊತ್ತು ರೈತನ ಜಮೀನು ಪ್ರವೇಶಿಸಲು ಪ್ರಯತ್ನಿಸುತ್ತಿರುವ 'ಎರಡನೇ ಹಸಿರು ಕ್ರಾಂತಿ'ಯಿಂದ ಮಾನವನ ಮೇಲೆ ಮಾತ್ರವಲ್ಲ ಪರಿಸರದ ಮೇಲೂ ಮಾರಕ ಪರಿಣಾಮ ಬೀರುತ್ತದೆ ಎಂಬ ಜಾಗೃತಿ ಹಳ್ಳಿ ಹಳ್ಳಿಗೂ ತಲುಪಿದೆ ಎಂಬುದಕ್ಕೆ ಕೋಲಾರದ ಗ್ರಾಮಗಳೇ ಸಾಕ್ಷಿ. ಹಿಂದಿನ ಹಸಿರು ಕ್ರಾಂತಿಗಿಂತ ಪ್ರಸ್ತುತ ಕ್ರಾಂತಿಗೆ ಭಾರೀ ವಿರೋಧ ವ್ಯಕ್ತವಾಗುತ್ತಿರುವುದೂ ದಿಟ. ಆದರೆ ಹಿಂದಿನ ಬಾರಿಯ ಹಿಂಸಾತ್ಮಕ ಪ್ರತಿಕ್ರಿಯೆ ಹಾಗೂ ವಾದ ವಿವಾದಗಳ ಬದಲಿಗೆ ಈ ಬಾರಿ ದೇಸಿ ಬೀಜಗಳ ಸಂರಕ್ಷಣೆ, ಸಾವಯವ ಕೃಷಿ ಹಾಗೂ ಬೇರು ಮಟ್ಟದಲ್ಲೇ ಬದಲಾವಣೆ ತರಲು ಶಕ್ಯರಾದ ಮಹಿಳಾ ಕೃಷಿಕರ ರೂಪದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಸೌಜನ್ಯ: ದ ಸಂಡೇ ಇಂಡಿಯನ್ |