ಬೆಂಗಳೂರು, ಅ.25 : ಉತ್ತರ ಕನ್ನಡದ ತದಡಿಯಲ್ಲಿ ವಿದ್ಯುತ್ ಉತ್ಪಾದನಾ ಘಟಕದ ಬಗ್ಗೆ ವಿವಾದ ಹಸಿರಾಗಿರುವಾಗಲೇ, ಅತ್ಯಾಧುನಿಕ ಬಂದರು ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅಗತ್ಯ ಪೂರ್ವಭಾವಿ ಸಿದ್ಧತೆಗಳನ್ನು ಆರಂಭಿಸಿದೆ.
ಈ ಬಂದರು ನಿರ್ಮಾಣದ ಪ್ರಮುಖ ಉದ್ದೇಶವೆಂದರೆ ಬಳ್ಳಾರಿ ಮತ್ತು ಸುತ್ತಮುತ್ತಲಿನ ಪ್ರದೇಶದ ಗಣಿಗಳ ಅದಿರನ್ನು ವಿದೇಶಗಳಿಗೆ ನೇರವಾಗಿ ರಫ್ತು ಮಾಡುವುದು. ಇದಕ್ಕಾಗಿಯೇ ವಾರ್ಷಿಕ ಸುಮಾರು 100 ದಶಲಕ್ಷ ಟನ್ನಷ್ಟು ಕಬ್ಬಿಣದ ಅದಿರು ಸೇರಿದಂತೆ ಮತ್ತಿತರೆ ಸರಕನ್ನು ಸಾಗಿಸುವ ಸಾಮರ್ಥ್ಯದೊಂದಿಗೆ ಬಂದರು ನಿರ್ಮಿಸಲು ಯೋಜನೆ ಸಿದ್ಧಪಡಿಸುತ್ತಿದೆ.
ಇದಕ್ಕೆ ಪೂರಕವಾಗಿ ಬಳ್ಳಾರಿ ಮತ್ತು ಸುತ್ತಮುತ್ತಲಿನ ಗಣಿಗಳಿಂದ ಅದಿರು ಸಾಗಿಸಲು ಅಗತ್ಯ ಇರುವ ಹುಬ್ಬಳ್ಳಿ- ಅಂಕೋಲ ರೈಲು ಮಾರ್ಗ ನಿರ್ಮಾಣವನ್ನೂ ತ್ವರಿತವಾಗಿ ಕೈಗೆತ್ತಿಕೊಳ್ಳುವ ಸಂಬಂಧ ಪ್ರಯತ್ನಗಳನ್ನೂ ನಡೆಸಿದೆ.
ರಾಜ್ಯದಲ್ಲಿ ಸುಮಾರು ೬೦೦ ಕಿ.ಮೀ.ನಷ್ಟು ಸಮುದ್ರ ತೀರ ಇದೆ. ಆದರೆ, ಇದಕ್ಕೆ ಲಗತ್ತಾಗಿರುವ ಬಂದರು ಮಾತ್ರ ಇಲ್ಲ. ಅಂದರೆ, ನವ ಮಂಗಳೂರು ಬಂದರನ್ನು ಹೊರತುಪಡಿಸಿದರೆ ರಾಜ್ಯದಲ್ಲಿ ಯಾವುದೇ ಬಂದರು ಇಲ್ಲದಂತಾಗಿದೆ. ಪ್ರತಿವರ್ಷ ಕೇವಲ ೩೮ ದಶಲಕ್ಷ ಟನ್ ಸರಕನ್ನು ಮಾತ್ರ ಸಾಗಿಸುವ ಸಾಮರ್ಥ್ಯವನ್ನು ಈ ಬಂದರು ಹೊಂದಿದೆ.
ಅಧಿಕ ಸಂಪನ್ಮೂಲ, ರಫ್ತು ವ್ಯವಸ್ಥೆ ಕೊರತೆ: ಬಳ್ಳಾರಿ, ಹೊಸಪೇಟೆ, ಚಿತ್ರದುರ್ಗ ಸೇರಿದಂತೆ ಮತ್ತಿತರೆ ಪ್ರದೇಶಗಳಲ್ಲಿ ಕಬ್ಬಿಣ ಅದಿರಿನ ಖಜಾನೆಗಳೇ ಇವೆ. ಪ್ರತಿವರ್ಷ ಲಕ್ಷಾಂತರ ಟನ್ನಷ್ಟು ಅದಿರನ್ನು ತೆಗೆದರೂ ಅದನ್ನು ಹೊರದೇಶಗಳಿಗೆ ರಫ್ತು ಮಾಡಲು ಅಗತ್ಯವಾದ ವ್ಯವಸ್ಥೆಯೇ ಇಲ್ಲದಂತಾಗಿದೆ. ಅಂದರೆ, ಮಂಗಳೂರು ಬಂದರಿನ ಸಾಮರ್ಥ್ಯ ಅಲ್ಪ ಇರುವುದೇ ಈ ಕೊರತೆಗೆ ಪ್ರಮುಖ ಕಾರಣ.
ಸಮಸ್ಯೆಗೆ ಪರಿಹಾರ: ರಾಜ್ಯದ ಪ್ರಾಕೃತಿಕ ಸಂಪನ್ಮೂಲಗಳಲ್ಲಿ ಪ್ರಮುಖವಾಗಿರುವ ಕಬ್ಬಿಣದ ಅದಿರಿನ ರಫ್ತನ್ನೇ ಕೇಂದ್ರೀಕರಿಸಿಕೊಂಡು ತದಡಿಯಲ್ಲಿ ಅತ್ಯಾಧುನಿಕವಾದ ಬಂದರು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
- ಈ ಬಂದರು ೧೪ ಬರ್ತ್ಗಳನ್ನು (ಲಂಗರು ವೇದಿಕೆ. ಇಲ್ಲಿಂದಲೇ ಸರಕುಗಳನ್ನು ಹಡಗುಗಳಿಗೆ ತುಂಬುವುದು) ಹೊಂದಿರುತ್ತದೆ.
ಪ್ರತಿ ವರ್ಷ ೧೦೦ ದಶಲಕ್ಷ ಟನ್ ಸರಕು ಸಾಗಿಸುವ ಸಾಮರ್ಥ್ಯ ಬಂದರಿಗಿರುತ್ತದೆ.
- ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಈ ಬಂದರು ನಿರ್ಮಾಣ.
ರೈಲು ಮಾರ್ಗವೇ ಸೂಕ್ತ: ಕೇವಲ ಬಂದರು ನಿರ್ಮಿಸಿದ ಮಾತ್ರಕ್ಕೆ ಅದರ ಸಾಮರ್ಥ್ಯಕ್ಕೆ ಅನುಗುಣವಾಗಿ ಅದಿರು ಇಲ್ಲಿಗೆ ಬರುವುದಿಲ್ಲ. ಏಕೆಂದರೆ, ಪ್ರಸ್ತುತ ಬಹುತೇಕ ಅದಿರು ರಸ್ತೆ ಮಾರ್ಗದ ಮೂಲಕ ನವ ಮಂಗಳೂರು ಬಂದರನ್ನು ತಲುಪುತ್ತಿದೆ. ತದಡಿ ಬಂದರು ನಿರ್ಮಾಣವಾದ ನಂತರ ಇದೇ ರಸ್ತೆ ಮಾರ್ಗವನ್ನು ನಂಬಿ ಕುಳಿತರೆ ಬಂದರು ನಿರ್ಮಾಣ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಂತಾಗುತ್ತದೆ.
ಈ ಕಾರಣದಿಂದ ರಾಜ್ಯ ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗ ನಿರ್ಮಾಣವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಈ ಮಾರ್ಗ ರಚನೆಯ ಸಾಧಕ- ಬಾಧಕಗಳ ಬಗ್ಗೆ ಈ ಹಿಂದೆ ನೀಡಿದ್ದ ವರದಿಗಳ ಬದಲಾಗಿ ಸರ್ಕಾರ ಇದೀಗ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ವಿಜ್ಞಾನಿಗಳಿಂದ ಪ್ರತ್ಯೇಕ ಅಧ್ಯಯನ ನಡೆಸಲಿದೆ.
ಪ್ರಸ್ತುತ ಉದ್ದೇಶಿತ ತದಡಿ ಬಂದರಿಗೆ ಇರುವ ರಸ್ತೆ ಮಾರ್ಗಗಳೆಂದರೆ:
ರಾಷ್ಟ್ರೀಯ ಹೆದ್ದಾರಿ ೬೩ ಮತ್ತು ತಡಸ್ ರಸ್ತೆ. ಇಲ್ಲಿಂದ ಪ್ರತಿವರ್ಷ ಕೇವಲ ೨೦ ದಶಲಕ್ಷ ಟನ್ ಅದಿರು ಸಾಗಿಸಬಹುದು. ಇದೇ ರಸ್ತೆಗಳನ್ನು ಅಗಲೀಕರಣ ಮಾಡಿದರೆ ಗರಿಷ್ಠ ೫೦ ದಶಲಕ್ಷ ಅದಿರು ಸಾಗಿಸಲು ಮಾತ್ರ ಸಾಧ್ಯ. ಹೀಗಾಗಿ ಹುಬ್ಬಳ್ಳಿ- ಅಂಕೋಲ ರೈಲು ಮಾರ್ಗವೇ ಅನಿವಾರ್ಯ ಎಂಬುದು ಸರ್ಕಾರದ ವಾದ.
3 ಪಟ್ಟು ಸಸಿ: ಹುಬ್ಬಳ್ಳಿ- ಅಂಕೋಲ ರೈಲು ಮಾರ್ಗ ನಿರ್ಮಾಣಕ್ಕೆ ಬಲಿ ಆಗಲಿರುವ ಸಸ್ಯ- ಮರಗಳ ಮೂರುಪಟ್ಟು ಸಸಿಗಳನ್ನು ನೆಟ್ಟು ಸಾಮಾಜಿಕ ಅರಣ್ಯ ನಿರ್ಮಾಣದ ಬಗ್ಗೆಯೂ ಸರ್ಕಾರ ಯೋಜನೆ ರೂಪಿಸುತ್ತಿದೆ.
ಸೌಜನ್ಯ: ರವಿ ಮಲ್ಲೇನಹಳ್ಳಿ, ಕನ್ನಡಪ್ರಭ.