ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಚಿಕ್ಕಮಗಳೂರು:ನಾಲ್ಕು ಜಿಲ್ಲೆಗಳಲ್ಲಿ ಕಾರ್ಯಾಚರಣೆ: 1500 ಪೊಲೀಸರು ಅರಣ್ಯದಲ್ಲಿ ನಕ್ಸಲರಿಗಾಗಿ ಮನೆಮನೆ ಶೋಧ

ಚಿಕ್ಕಮಗಳೂರು:ನಾಲ್ಕು ಜಿಲ್ಲೆಗಳಲ್ಲಿ ಕಾರ್ಯಾಚರಣೆ: 1500 ಪೊಲೀಸರು ಅರಣ್ಯದಲ್ಲಿ ನಕ್ಸಲರಿಗಾಗಿ ಮನೆಮನೆ ಶೋಧ

Wed, 11 Nov 2009 02:41:00  Office Staff   S.O. News Service
ಚಿಕ್ಕಮಗಳೂರು: ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಮಲೆನಾಡು ಪ್ರದೇಶದಲ್ಲಿ 1500 ಪೊಲೀಸರು ಅರಣ್ಯ ಪ್ರವೇಶಿಸಿದ್ದು ಎಲ್ಲ ಪ್ರದೇಶ, ಮನೆಗಳನ್ನು ಶೋಧಿಸಲಿದ್ದಾರೆ ಎಂದು ಪೊಲೀಸ್ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಇತ್ತೀಚೆಗೆ ನಡೆದ ನಕ್ಸಲ್ ನಿಗ್ರಹಪಡೆ ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಜಯ್ಕುಮಾರ್ ಸಿಂಗ್ ಅವರ ಸೂಚನೆಯಂತೆ ಈ ಕಾರ್ಯಾಚರಣೆ ನಡೆಯುತ್ತಿದೆ. ನಾಲ್ಕೂ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳೇ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದು, ರಾಜ್ಯ ಮೀಸಲು ಪಡೆ, ನಕ್ಸಲ್ ನಿಗ್ರಹ ಪಡೆ, ಜಿಲ್ಲಾ ಮೀಸಲು ಪೊಲೀಸರು ಮತ್ತು ಸಿವಿಲ್ ಪೊಲೀಸರು ಜಂಟಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದಾರೆ.

ಚಿಕ್ಕಮಗಳೂರು ಎಸ್‌ಪಿ ಎಂ.ಎನ್. ನಾಗರಾಜ್ ನೇತೃತ್ವದಲ್ಲಿ ಶೃಂಗೇರಿಯಲ್ಲಿ ಪ್ರಸ್ತುತ ಕಾರ್ಯಾಚರಣೆಯ ನಿಯಂತ್ರಣ ಕೇಂದ್ರ ಸ್ಥಾಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಎಲ್ಲ ಪೊಲೀಸ್ ತಂಡಗಳಿಗೂ ಜಿಪಿಎಸ್ (ಗ್ಲೋಬಲ್ ಪ್ರೋಸೆಸ್ಸಿಂಗ್ ಸಿಸ್ಟಂ) ಸೌಲಭ್ಯ ಒದಗಿಸಲಾಗಿದ್ದು, ನಿಯಂತ್ರಣ ಕೇಂದ್ರದ ಮೂಲಕ ಪ್ರತಿ ತಂಡದ ನಡೆ ಗುರುತಿಸಬಹುದಾಗಿದೆ. ಪೊಲೀಸ್ ತಂಡಗಳ ಮುಖಾಮುಖಿ, ಚಕಮಕಿ ತಪ್ಪಿಸುವುದೂ ಈ ಸೌಲಭ್ಯ ಬಳಕೆಯ ಮುಖ್ಯ ಉದ್ದೇಶ. 


ಮಂಗಳವಾರ ಮುಂಜಾನೆ ನಕ್ಸಲ್ ಬೇಟೆಗೆ ಕಾಡಿಗೆ ತೆರಳಿದ ಪ್ರತಿ ಪೊಲೀಸರ ಬೆನ್ನಚೀಲದಲ್ಲಿ ಒಣಹಣ್ಣು, ಹಾಲಿನ ಪುಡಿ, ಬಿಸ್ಕತ್, ಬ್ರೆಡ್ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಇದ್ದವು. ಎಲ್ಲರೂ ಗುರುವಾರದವರೆಗೂ ಕಾಡಿನಲ್ಲಿ ಶೋಧಕಾರ್‍ಯ ನಡೆಸಲಿದ್ದಾರೆ. ನಕ್ಸಲರ ವಿರುದ್ಧ ಇಷ್ಟು ದೊಡ್ಡ ಪ್ರಮಾಣದಲ್ಲಿ ಜಂಟಿ ಕಾರ್ಯಾಚರಣೆ ನಡೆಯುತ್ತಿರುವುದು ಇದೇ ಮೊದಲು ಎಂದು ಮೂಲಗಳು ತಿಳಿಸಿವೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ 16, ಉಡುಪಿ ಜಿಲ್ಲೆಯಲ್ಲಿ 10, ಶಿವಮೊಗ್ಗದಲ್ಲಿ 6 ತಂಡ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 4 ತಂಡ  ಗೌಪ್ಯ ಕಾರ್ಯಾಚರಣೆಯಲ್ಲಿವೆ. ವಿಶೇಷವಾಗಿ ಆಯ್ಕೆ ಮಾಡಿದ 20ರಿಂದ 30 ಯುವ ಸಿಬ್ಬಂದಿ ಪ್ರತಿ ತಂಡದಲ್ಲಿದ್ದಾರೆ. ಆಂಧ್ರಪ್ರದೇಶದಲ್ಲಿ ಗ್ರೇಹೌಂಡ್ಸ್ ತರಬೇತಿ ಪಡೆದ ಸಿಬ್ಬಂದಿಯೂ ಈ ಬಾರಿ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವುದು ವಿಶೇಷ.

ಶೃಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಕಿಗ್ಗಾ, ಕೆರೆಕಟ್ಟೆ, ದೇವಲಕೊಪ್ಪ ಮತ್ತು ಹಂಚಿಕೊಡಿಗೆ ಪ್ರದೇಶಗಳಲ್ಲಿ, ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮೆಣಸಿನ ಹಾಡ್ಯ, ಬಲಿಗೆ, ನಡಗುಂದ ಮತ್ತು ಕಲ್ಲುಗುಡ್ಡೆ, ಕಳಸ ಠಾಣೆ ವ್ಯಾಪ್ತಿಯ ಮುಜೇಖಾನ್ ಮತ್ತು ಸಿಂಗಸಾರ್, ಕುದುರೆಮುಖ ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಚುರುಕಾಗಿ ಸಾಗಿದೆ.
 
ಸೌಜನ್ಯ: ಪ್ರಜಾವಾಣಿ
 
 

Share: