ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಸಂಕಷ್ಟ ಕಾಲದಲ್ಲಿ ಪ್ರತೀ ಕೆಜಿ ರೇಷ್ಮೆ ಗೂಡಿಗೆ ಇಪ್ಪತ್ತರಿಂದ ಮೂವತ್ತು ರೂ ಬೆಂಬಲ ಬೆಲೆ ನೀಡಲು ಸರ್ಕಾರ ಚಿಂತನೆ

ಬೆಂಗಳೂರು: ಸಂಕಷ್ಟ ಕಾಲದಲ್ಲಿ ಪ್ರತೀ ಕೆಜಿ ರೇಷ್ಮೆ ಗೂಡಿಗೆ ಇಪ್ಪತ್ತರಿಂದ ಮೂವತ್ತು ರೂ ಬೆಂಬಲ ಬೆಲೆ ನೀಡಲು ಸರ್ಕಾರ ಚಿಂತನೆ

Sat, 30 Jan 2010 17:02:00  Office Staff   S.O. News Service

ಬೆಂಗಳೂರು,ಜನವರಿ 30: ಸಂಕಷ್ಟ ಕಾಲದಲ್ಲಿ ಪ್ರತೀ ಕೆಜಿ ರೇಷ್ಮೆ ಗೂಡಿಗೆ ಇಪ್ಪತ್ತರಿಂದ ಮೂವತ್ತು ರೂ ಬೆಂಬಲ ಬೆಲೆ ನೀಡಲು ಸರ್ಕಾರ ಚಿಂತನೆ ನಡೆಸಿದೆ.

 

ಇಂದಿಲ್ಲಿ ಸುದ್ಧಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಸಣ್ಣ ಕೈಗಾರಿಕೆ ಹಾಗೂ ರೇಷ್ಮೆ ಖಾತೆ ಸಚಿವ ವೆಂಕಟರಮಣಪ್ಪ ಈ ವಿಷಯ ತಿಳಿಸಿದರಲ್ಲದೇ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿನ ಬೆಲೆ ಕೆಜಿಗೆ ೧೫೦ ರೂಗಳಿಗಿಂತ ಕೆಳಗಿಳಿದಲ್ಲಿ ಸರ್ಕಾರವೇ ರೇಷ್ಮೆ ಬೆಳೆಗಾರರ ಹಿತ ಕಾಪಾಡಲು ಬೆಂಬಲ ಬೆಲೆ ನೀಡಲು ಚಿಂತನೆ ನಡೆಸಿದೆ ಎಂದರು.

 

 

ಇವತ್ತು ಸರ್ಕಾರ ಮೆಕ್ಕೆಜೋಳದಿಂದ ಹಿಡಿದು ಹಲವು ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುತ್ತದೆ.ಆದರೆ ಆ ಪದಾರ್ಥಗಳನ್ನು ಕೆಲ ತಿಂಗಳವರೆಗಾದರೂ ಸಂಗ್ರಹಿಸಿಟ್ಟುಕೊಳ್ಳಬಹುದು.ಆದರೆ ರೇಷ್ಮೆ ಗೂಡನ್ನು ಇಪ್ಪತ್ನಾಲ್ಕು ಗಂಟೆಗಳ ಕಾಲವೂ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ನುಡಿದರು.

 

 

ಹೀಗಾಗಿಯೇ ತಾವು ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ಚರ್ಚೆ ನಡೆಸಿದ್ದು ಪ್ರತೀ ಕೆಜಿ ರೇಷ್ಮೆ ಗೂಡಿಗೆ ಇಪ್ಪತ್ತರಿಂದ ಮೂವತ್ತು ರೂ ಬೆಂಬಲ ಬೆಲೆ ನೀಡಲು ಮನವಿ ಮಾಡಿಕೊಂಡಿದ್ದೇನೆ.ಅವರೂ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.

 

 

ರಾಜ್ಯದಲ್ಲಿ ಕಳೆದ ವರ್ಷ ೭೭ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳಿ ಬೆಳೆದು ಏಳು ಸಾವಿರ ಮೆಟ್ರಿಕ್ ಟನ್‌ಗಳಷ್ಟು ರೇಷ್ಮೆಯನ್ನು ಉತ್ಪಾದಿಸಲಾಗಿತ್ತು ಎಂದ ಅವರು,ಆ ಮೂಲಕ ಕರ್ನಾಟಕ ದೇಶದಲ್ಲೇ ಅತ್ಯಂತ ಹೆಚ್ಚು ರೇಷ್ಮೆ ಬೆಳೆಯುವ ರಾಜ್ಯವಾಗಿದೆ ಎಂದು ವಿವರ ನೀಡಿದರು.

 

 

ಪ್ರಸಕ್ತ ವರ್ಷ ೮೨ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳಿ ಬೆಳೆಯಲಾಗಿದ್ದು ಮುಂದಿನ ವರ್ಷ ೯೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆದು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆ ಉತ್ಪಾದಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.

 

ಬೆಂಗಳೂರು ಸುತ್ತ ಮುತ್ತ ರಿಯಲ್ ಎಸ್ಟೇಟ್ ಕಾರಣದಿಂದಾಗಿ ರೇಷ್ಮೆ ಉತ್ಪಾದನೆ ಕಾರ್ಯ ಇಳಿಮುಖವಾಗಿದ್ದು ಇದೇ ಕಾರಣದಿಂದ ಹೆಚ್‌ಡಿಕೋಟೆ ಸುತ್ತ ಮುತ್ತಲ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆ ಬೆಳೆಯಲು ಚಿಂತನೆ ನಡೆಸಲಾಗಿದೆ ಎಂದರು.

 

 

ಈಗಾಗಲೇ ಹೆಚ್‌ಡಿಕೋಟೆ ಸುತ್ತ ಮುತ್ತಲ ಪ್ರದೇಶಗಳಲ್ಲಿ ತಂಬಾಕು ಬೆಳೆಯ ಪ್ರಮಾಣ ಕಡಿಮೆಯಾಗಿದ್ದು ಅದರ ಬದಲು ರೇಷ್ಮೆ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

 

 

ಮೈಸೂರು ಬಿತ್ತನೆ ವಲಯದಲ್ಲಿ ಒಂದು ಕೆಜಿ ರೇಷ್ಮೆ ಗೂಡಿಗೆ ನೀಡಲಾಗುತ್ತಿದ್ದ ಬೋನಸ್ ಪ್ರಮಾಣವನ್ನು ಐವತ್ತು ರೂಗಳಿಂದ ನೂರು ರೂಗಳಿಗೆ ಹೆಚ್ಚಿಸಲಾಗಿದೆ ಎಂದೂ ಹೇಳಿದರು.

 

ಹೊಸತಾಗಿ ನಾಟಿ ಮಾಡಲು ಪ್ರತೀ ಹೆಕ್ಟೇರ್‌ಗೆ ಐದು ಸಾವಿರ ರೂ ಸಬ್ಸಿಡಿ ನೀಡಲಾಗುತ್ತಿದೆ.ಈ ಬಾಬ್ತಿನಲ್ಲೇ ಕಳೆದ ವರ್ಷ ಮೂವತ್ತು ಕೋಟಿ ರೂ ನೀಡಲಾಗಿದೆ ಎಂದು ನುಡಿದರು.

 

ರೇಷ್ಮೆ ಬೆಳೆಗಾರರಿಗೆ ನೀಡಲಾಗುತ್ತಿರುವ ವಿಮೆಯ ಬಾಬ್ತು ೭೩ ಲಕ್ಷ ರೂಗಳನ್ನು ಈ ವರ್ಷ ಸರ್ಕಾರ ತುಂಬಿದೆ ಎಂದ ಅವರು,ಇದೇ ರೀತಿ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ರೇಷ್ಮೆ ಬೆಳೆಗಾರರಿಗಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

 

 

ರೇಷ್ಮೆ ಮಾರುಕಟ್ಟೆಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ತಡೆಗಟ್ಟುವ ಸಲುವಾಗಿ ಆರಂಭಿಕ ಹಂತದಲ್ಲಿ ರಾಮನಗರ ಹಾಗೂ ಚನ್ನಪಟ್ಟಣ ಮಾರುಕಟ್ಟೆಗಳಲ್ಲಿ ಸಿಸಿ ಟಿವಿಯನ್ನು ಅಳವಡಿಸಲಾಗುತ್ತಿದ್ದು ಕ್ರಮೇಣ ಎಲ್ಲ ರೇಷ್ಮೆ ಮಾರುಕಟ್ಟೆಗಳಲ್ಲೂ ಇದನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.


Share: