ಮೈಸೂರು, ಜನವರಿ 22:`ನೈಸ್' ವಿವಾದ ಮತ್ತೆ ಮುಂಚೂಣಿಗೆ ಬಂದಿದೆ. ನೈಸ್ ಕಂಪನಿಯ ಮೋಸ, ವಂಚನೆಗೆ ಗುರಿಯಾದ ರೈತರು ನೈಸ್ ಕಂಪನಿಯಿಂದ ದಬ್ಬಾಳಿಕೆಗೆ ಗುರಿಯಾದ ರೈತರು ಈಗ ಎದ್ದು ನಿಂತಿದ್ದಾರೆ. ಕಳೆದ 10 ದಿನಗಳಿಂದ ಬೆಂಗಳೂರು ಹೊರ ವಲಯದ ರಸ್ತೆ ಬಂದ್ ಆಗಿದೆ. ಕೆಂಗೇರಿ ಸಮೀಪದ ವಸಂತಪುರ, ಚಿಕ್ಕ ತೋಗೂರು, ನೆಲಮಂಗಲ ಹೀಗೆ ವಿವಿಧ ಭಾಗಗಳಲ್ಲಿ ಭೂಮಿ ಕಳೆದುಕೊಂಡು ನೊಂದ ರೈತರು ಪ್ರತಿಭಟನಾ ಧರಣಿ ಕುಳಿತಿದ್ದಾರೆ. ರಸ್ತೆ ತಡೆ ನಡೆಸುತ್ತಿದ್ದಾರೆ. ಸಂಚಾರ ಸ್ಥಗಿತವಾಗಿದೆ. ಪ್ರತಿಭಟನಾಕಾರರು ನೈಸ್ ರಸ್ತೆಯ ಮೇಲೆ ಅಡಿಗೆ ಮಾಡುತ್ತಾ ಅಲ್ಲೇ ಊಟ ಮಾಡುತ್ತಾ, ಅಲ್ಲೇ ಮಲಗುತ್ತಾ ಹೋರಾಟ ಮುಂದುವರೆಸಿದ್ದಾರೆ.
ಭರವಸೆಗಳು ಈಡೇರಲಿಲ್ಲ
ಬೆಂಗಳೂರು ಹೊರವಲಯದಲ್ಲಿ ಹೊಸೂರು ರಸ್ತೆಯಿಂದ ತುಮಕೂರು ರಸ್ತೆಯವರೆಗಿನ 41 ಕಿ.ಮೀ. ಉದ್ದದ ವರ್ತುಲ ರಸ್ತೆ ನಿರ್ಮಿಸುವ ಪ್ರಕ್ರಿಯೆ ಆರಂಭವಾದಂದಿನಿಂದ ಹಾಗೂ ಬೆಂಗಳೂರು, ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಬ ಯೋಜನೆ ಆರಂಭಗೊಂಡಂದಿನಿಂದ ಗ್ರಾಮಸ್ಥರು, ಈ ಭಾಗದ ಭೂಮಿ ನಂಬಿಕೊಂಡು ಬರುತ್ತಿದ್ದ ಜನರ ಬದುಕಿನಲ್ಲಿ ಏನೇನೋ ಬದಲಾವಣೆಗಳು ಅಲ್ಲೋಲ, ಕಲ್ಲೋಲಗಳು ಘಟಿಸಿ ಹೋಗಿವೆ.
ಈ ರಸ್ತೆಗಾಗಿ ಭೂಮಿ ಕಳೆದುಕೊಳ್ಳುವ ರೈತರಿಗೆ ಹಲವಾರು ಭರವಸೆಗಳನ್ನು ನೀಡಲಾಗಿತ್ತು. ಅದರಂತೆ ರೈತರು `ನೈಸ್'ಗೆ ನೀಡುವ ಪ್ರತಿ ಒಂದು ಎಕರೆ ಜಮೀನಿಗೆ ಪ್ರತಿಯಾಗಿ 60*40 ಅಳತೆಯ ಒಂದು ನಿವೇಶನವನ್ನು ರೈತರಿಗೆ ನೀಡಬೇಕಿತ್ತು. ಈ ಭರವಸೆ ಭರವಸೆಯಾಗಿಯೇ ಉಳಿದಿದೆ. ಅದೇ ರೀತಿಯಲ್ಲಿ ಜಮೀನು ಕಳೆದುಕೊಳ್ಳುವ ರೈತರ ಕುಟುಂಬ ವರ್ಗದವರೊಬ್ಬರಿಗೆ ಉದ್ಯೋಗ ನೀಡಬೇಕಾದ ಹೊಣೆಗಾರಿಕೆ ನೈಸ್ ಕಂಪನಿಯ ಮೇಲಿದೆ. ಈ ನಿಟ್ಟಿನಲ್ಲಿ ಒಂದೇ ಒಂದು ಹೆಜ್ಜೆಯನ್ನು ನೈಸ್ ಕಂಪನಿ ಮುಂದಿಟ್ಟಿಲ್ಲ.
ಹೊಸೂರು ರಸ್ತೆಯಿಂದ ಆರಂಭಿಸಿ ತುಮಕೂರು ರಸ್ತೆಯವರೆಗಿನ ಬೆಂಗಳೂರು ಹೊರವಲಯದ ನೈಸ್ ವರ್ತುಲ ರಸ್ತೆಯ ಮೇಲೆ ವಾಹನ ಸಂಚಾರ ಆರಂಭವಾಗಿ ಎಷ್ಟೋ ದಿನಗಳಾಗಿ ಹೋದವು. ಹಲವು ಹೆದ್ದಾರಿಗಳಿಗೆ ಹೋಲಿಸಿದರೆ ಅತ್ಯಂತ ದುಬಾರಿಯಾದ ರಸ್ತೆ ಸುಂಕವನ್ನು ವಸೂಲಿ ಮಾಡುತ್ತಿರುವ ನೈಸ್ ಕಂಪನಿಗೆ ಪ್ರತಿ ದಿನ ಈ ರಸ್ತೆಯಿಂದ ಸುಮಾರು 20 ಲಕ್ಷ ಸಂಗ್ರಹವಾಗುತ್ತಿದೆಯೆಂದು ಅಂದಾಜಿದೆ. ನೈಸ್ ಖಜಾನೆ ತುಂಬುತ್ತಿದೆ. ಆದರೆ ರೈತರಿಗೆ ಕೊಟ್ಟ ಭರವಸೆಗಳ ಕಂತೆ ಧೂಳು ತಿನ್ನುತ್ತಾ ಕುಳಿತಿದೆ.
ನೈಸ್ ರಸ್ತೆ ಈ ಭಾಗದ ರೈತರ ಹಾಗೂ ಜನರ ಬದುಕಿನಲ್ಲಿ ಎಷ್ಟೋ ಅವಾಂತರಗಳನ್ನು ಸೃಷ್ಟಿಸಿದೆ. ರಸ್ತೆಯ ಎರಡೂ ಬದಿಯಲ್ಲಿ ಎತ್ತರದ ತಡೆಗೋಡೆ ನಿರ್ಮಿಸಿರುವ `ನೈಸ್' ಬೇಲಿಯಿಂದಾಗಿ ಎಷ್ಟೋ ಕಡೆ ಊರುಗಳೇ ಎರಡು ಭಾಗವಾದಂತಿವೆ. ಮನೆ ಒಂದು ಕಡೆ ಜಮೀನು ಒಂದೆ ಕಡೆ ಹೀಗೆ. ಸಂಪರ್ಕ ಸುಲಭವಲ್ಲ. ಎಲ್ಲೋ ದೂರದ ಸೇತುವೆ ಹುಡುಕಿಕೊಂಡು ಕಿಲೋಮೀಟರುಗಟ್ಟಲೆ ಸುತ್ತಿಕೊಂಡು ಅಲೆಯಬೇಕು. ಸಾಕಷ್ಟು ಮೇಲ್ಸೇತುವೆ ಇಲ್ಲ . ಪಾದಚಾರಿಗಳ ಸುರಂಗ ಮಾರ್ಗವಂತೂ ಇಲ್ಲವೇ ಇಲ್ಲ. ಇನ್ನೂ ನೈಸ್ ರಸ್ತೆಯ ಎರಡೂ ಬದಿಗಳಲ್ಲಿ ಸರ್ವೀಸ್ ರಸ್ತೆ ನಿರ್ಮಿಸಿಕೊಡಬೇಕಾದ ಅನಿವಾರ್ಯತೆ ಜನರಿಗೆ ಮನದಟ್ಟಾಗುತ್ತಿದೆ. ಕನಿಷ್ಟ ನೈಸ್ ಮೇಲೆ ಅಥವಾ ಕೆಳಗೆ ಕನಿಷ್ಟ 500 ಮೀಟರ್ ಗೆ ಒಂದರಂತೆ ಸೇತುವೆ ನಿರ್ಮಿಸಿ ಜನರ ಓಡಾಟ ಸುಗಮಗೊಳಿಸಬೇಕಾಗಿದೆ.
ಸರ್ವೀಸ್ ರಸ್ತೆ, ಮೇಲ್ಸೇತುವೆ ಇತ್ಯಾದಿ ಸೌಕರ್ಯ ಇಲ್ಲದ್ದರಿಂದ ಕೆಂಗೇರಿ ಸಮೀಪದ ಹೆಮ್ಮಿಗೆಪುರ ಬಳಿ 2 ವರ್ಷಗಳ ಹಿಂದೆ ಅಪಘಾತವಾಗಿ ಇಬ್ಬರು ದುರ್ಮರಣಕ್ಕೆ ಈಡಾಗಿದ್ದರು. ಆಗ ನೈಸ್ ಕಂಪನಿ ಆ ಸ್ಥಳದಲ್ಲಿ ಮೇಲ್ಸೇತುವೆ ಕಟ್ಟುವ ಭರವಸೆ ಕೊಟ್ಟಿತ್ತು. ಆದರೆ ಕಾಮಗಾರಿ ಪೂರ್ಣವಾಗಲೇ ಇಲ್ಲ. ಈಗ ಮತ್ತೊಂದು ಅಫಘಾತ ಅದೇ ಜಾಗದಲ್ಲಿ ಆಗಿ ಶಾಲಾ ಮಕ್ಕಳಿಗೆ ಪೆಟ್ಟಾಯಿತು. ಹಲವು ತರದ ಅತೃಪ್ತಿ ಸಮಸ್ಯೆಗಳಿಂದ ತೀವ್ರ ಅಸಮಾಧಾನಗೊಂಡಿದ್ದ ರೈತರು ಜನರು ತೀವ್ರ ಪ್ರತಿಭಟನೆಗೆ ಮುಂದಾದರು. ಹೋರಾಟ ತೀವ್ರಗೊಂಡಿತು.
ನೈಸ್ ಎಂಬ ತಿಮಿಂಗಲದ ಭೂಮಿ ನುಂಗಾಟಗಳು
ನೈಸ್ ಎಂಬುದು ಎಂತಹ ದಗಲಬಾಜಿ, ದಬಾವಣೆಕೋರ, ವಂಚಕ ಕಂಪನಿ ಎಂದು ನೋಡಿದರೆ ನಿಜಕ್ಕೂ ಆಘಾತವಾಗುತ್ತದೆ. ರಾಜ್ಯ ಬಿಜೆಪಿ ಸರ್ಕಾರ ಅದರ ಬೆಂಬಲಕ್ಕೆ ನಿಂತಿರುವುದು ಮತ್ತೂ ನಾಚಿಕೆಗೇಡಿನದಾಗಿದೆ. ಅಗತ್ಯಕ್ಕಿಂತ ಬಾರೀ ಹೆಚ್ಚು ಭೂಮಿ ಲಪಟಾಯಿಸಿರುವುದು, ರೈತರ ಭೂಮಿಗೆ ನಿಕೃಷ್ಟ ಬೆಲೆ ನೀಡಿಕೊಂಡಿರುವುದು, ಯೋಜನೆಯ ಸುತ್ತಮುತ್ತಲ ಭಾಗದಲ್ಲಿನ ಜಮೀನನ್ನು ಮಾರಲು ಒಪ್ಪದವರ ಮೇಲೆ ದೌರ್ಜನ್ಯ ನಡೆಸಿ ಒತ್ತಡ ತಂತ್ರ ಕುತಂತ್ರ ಬಳಸಿ ಭೂಮಿ ಹೊಡೆದುಕೊಳ್ಳುವುದು... ಒಹೋ ಒಂದೆರಡಲ್ಲ ನೈಸ್ ದಬ್ಬಾಳಿಕೆಗಳು...
ನೈಸ್ ತನ್ನ ಯೋಜನೆ ಜಾರಿ ಮಾಡಲು ಅಗತ್ಯವಾದ ಭೂಮಿ ಅಂದರೆ ನೈಸ್ಗೆ ಸಿಗಬೇಕಾದ ಭೂಮಿ 18,500 ಎಕರೆ. ಆದರೆ ನೈಸ್ ಕಂಪನಿಯು ಇದೀಗ ಸುಮಾರು 23,000 ಎಕರೆಗೂ ಹೆಚ್ಚು ಭೂಮಿಯನ್ನು ಅಂದರೆ ಸುಮಾರು 5000 ಎಕರೆಯಷ್ಟು ಭೂಮಿಯನ್ನು ಹೆಚ್ಚುವರಿಯಾಗಿ ಪಡೆದುಕೊಂಡಿದೆ.
ಬೆಲೆಯಲ್ಲಿ ಮೋಸ
ಯೋಜನೆಗೆಂದು ಭೂಮಿ ಕೊಟ್ಟ ರೈತರಿಗೆ ಎಕರೆಗೆ ಸಿಕ್ಕಿರುವುದು ಕೇವಲ 5 ರಿಂದ 7 ಲಕ್ಷ. ಆದರೆ ಕೆಲವೇ ದಿನಗಳಲ್ಲಿ ಪ್ರದೇಶದ ಜಮೀನಿನ ಬೆಲೆ ಎಕರೆಗೆ ಲಕ್ಷಗಳ ಲೆಕ್ಕ ಮೀರಿ ಕೋಟಿಗಳನ್ನು ದಾಟಿದೆ. ಎಷ್ಟೊಂದು ಲೂಟಿ. ಈ ಪರಿಯಾಗಿ ಜಮೀನಿನ ಬೆಲೆ ಏರುತ್ತದೆ ಎಂಬುದು ನೈಸ್ ಕಂಪನಿಗೆ ಗೊತ್ತಿಲ್ಲದೇ ಏನಿಲ್ಲ. ಎಲ್ಲ ಗೊತ್ತಿದ್ದೇ `ವ್ಯವಸ್ಥಿತವಾಗಿ' ವ್ಯಾಪಕ ಭೂಮಿ ಖರೀದಿ ಮಾಡಿದೆ. ಸರ್ಕಾರವೇ ನೈಸ್ ಕೈಗಿಡುವ ಹೆಚ್ಚುವರಿ ಭೂಮಿ ಒಂದು ಕಡೆಯಾದರೆ ನೈಸ್ ಕಂಪನಿ ಯೋಜನಾ ಪ್ರದೇಶದ ಸುತ್ತಮುತ್ತ ತನ್ನ ಏಜೆಂಟರ ಮೂಲಕ ಬಾರಿ ಭೂಮಿ ಖರೀದಿ ಮಾಡಿದೆ. ನಯವಾದ ವಂಚನೆ, ಒತ್ತಡ, ಬೆದರಿಕೆ, ಹಲ್ಲೆ ಯಾವ ವಿಧಾನವನ್ನು ಕಂಪನಿ ಬಳಸದೇ ಬಿಟ್ಟಿಲ್ಲ. ಒಟ್ಟಾರೆ ರೈತರು ನೈಸ್ ಕಂಪನಿಗೆ ಭೂಮಿ ಕೊಡಬೇಕು. ಕೊಡದಿದ್ದರೆ ಉಳಿಗಾಲವಿಲ್ಲ.
ನೈಸ್ ಯೋಜನೆಗೆ ಗುರುತಿಸಲಾಗಿದ್ದ ಭೂಮಿಯಲ್ಲಿ ನೈಸ್ ಭಂಟರು ಅನುಸರಿಸಿದ್ದು ಬೇರೆಯದೇ ತಂತ್ರ. `ನೈಸ್ ಕಂಪನಿ ಎಕರೆಗೆ 3 ರಿಂದ 4 ಲಕ್ಷ ಬೆಲೆ ಕೊಡುತ್ತದೆ. ನಾವು ಎಕರೆಗೆ ಇನ್ನೆರಡು ಲಕ್ಷ ಹೆಚ್ಚಿಗೆ ಕೊಡುತ್ತೇವೆ' ಎಂದು ಪುಸಲಾಯಿಸಿ ಒತ್ತಡ ಹಾಕಿ ರೈತರಿಂದ ಅತ್ಯಂತ ಅಗ್ಗವಾಗಿ ಭೂಮಿ ಖರೀದಿಸಿದ ಏಜೆಂಟರು ಅತ್ಯಂತ ಅಗ್ಗವಾಗಿ ಭೂಮಿ ಕೊಂಡರು. ಇನ್ನು ಮಧ್ಯವರ್ತಿಗಳ ಕಾಟ ಮತ್ತೊಂದು ಬಗೆಯದು ಏನೇನೋ ತಂತ್ರ ಮಾಡಿ ಅಗ್ಗವಾಗಿ ಭೂಮಿ ಹೊಡೆದುಕೊಂಡು, ಅದೇ ಭೂಮಿಯನ್ನು ನೈಸ್ ಕಂಪನಿ ಎಕರೆಗೆ 50 ಲಕ್ಷ, 60 ಲಕ್ಷಕ್ಕೆ ಮಾರಿರುವ ಉದಾಹರಣೆಗಳೂ ಇವೆ.
ನೈಸ್ಗೆ ರೈತರಿಂದ ಹೀಗೆಲ್ಲಾ ಭೂಮಿ ಖರೀದಿ ಮಾಡುವಾಗ ಮತ್ತೊಂದು ಲೆಕ್ಕಾಚಾರವೂ ಇದೆ. ಅದೇನೆಂದರೆ, ಈ ಜಮೀನುಗಳ ಅಕ್ಕಪಕ್ಕ ಇರುವ ಸರ್ಕಾರಿ ಭೂಮಿ, ಗೋಮಾಳ ಇತ್ಯಾದಿ ಇತ್ಯಾದಿ ಜಮೀನು ಲಪಟಾಯಿಸಬೇಕಾದರೆ ಅದರ ಪಕ್ಕ ಟೆಂಟು ಹಾಕಿ ನೆಲೆಯೂರಲು ಒಂದು ನೆಲೆ ಬೇಕಲ್ಲವೇ? ಅದಕ್ಕೆ ಯೋಜಿಸಿ ಯೋಜಿಸಿ ಭೂಮಿ ಖರೀದಿಸುವುದು ನಡೆದಿದೆ.
ನೈಸ್ ಕಂಪನಿಯ ದೋಕಾ ವ್ಯವಹಾರ
ಈಗ ನೈಸ್ ಕಂಪನಿಯು ನಿರ್ಮಿಸಿರುವ ರಸ್ತೆಯನ್ನು, ಸೇತುವೆ, ಮೇಲ್ಸೇತುವೆಗಳನ್ನು ನೋಡಿದವರು ಸಾವಿರಾರು ಕೋಟಿ ರೂಪಾಯಿಗಳ ಬಂಡವಾಳ ಹೂಡಿ ವಿಶಾಲವಾದ ಒಟ್ಟು 6 ಪಥಗಳ ದ್ವಿಮುಖ ರಸ್ತೆ ಮಾಡಿರುವಾಗ ನೈಸ್ ಮಾಲಿಕ ಖೇಣಿಯು ತನಗೆ ಲಾಭ ಬರಬೇಕೆಂದು ಬಯಸುವುದೇ ಸರಿಯಾಗೇ ಇದೆಯಲ್ಲವೇ ಎಂದು ಭಾವಿಸಬಹುದು.
ಕಿಲಾಡಿ ಖೇಣಿ ನಮ್ಮ ಹಳ್ಳಿ ರೈತರಂತೆ ಮುಗ್ಧನಲ್ಲ. ಇಂತಹ ಬೃಹತ್ ಕಾಮಗಾರಿಯಲ್ಲಿ ಆತ ನಿಜವಾಗಿಯೂ ಬಂಡವಾಳವನ್ನೇ ತೊಡಗಿಸಿಲ್ಲ. ಒಪ್ಪಂದ ಕುದುರಿದ ಮೇಲೆ ಸರ್ಕಾರ ಅಧಿಸೂಚನೆ ಹೊರಡಿಸಿ ಭೂಮಿಯ ಒಡೆತನವನ್ನು ನೈಸ್ ಕಂಪನಿಗೆ ವರ್ಗಾಯಿಸಿತು. ತನ್ನ ವಶಕ್ಕೆ ಬಂದ ರೈತರ ಹಾಗೂ ಸರ್ಕಾರದ ಜಮೀನನ್ನೇ ಬ್ಯಾಂಕಿನಲ್ಲಿ ಅಡವಿಟ್ಟ ಖೇಣಿ ಪ್ರತಿ ಎಕರೆಗೆ 55 ಲಕ್ಷ ರೂಪಾಯಿ ಸಾಲ ಎತ್ತಿದ್ದಾನೆ. ಅದೇ ದುಡ್ಡಿನಿಂದ ಕಾಮಗಾರಿ ನಡೆಸಿದ್ದಾನೆ. ಹೇಗಿದೆ ತಂತ್ರ.
ಬಂಡವಾಳವಿಲ್ಲದೆ ದುಡ್ಡು ಗೋರುವ ಷಡ್ಯಂತ್ರ
ಭೂಮಿ ನುಂಗಣ್ಣನಾದ ನೈಸ್ ಕಂಪನಿಯ ಯೋಜನೆಯು ಎಲ್ಲಿಯವರೆಗೆ ಇದೆ ಎಂದರೆ ಅದು ಒಟ್ಟು ಉದ್ದೇಶಿತ ಬಿಡದಿ, ರಾಮನಗರ, ಮೈಸೂರು, ಶ್ರೀರಂಗಪಟ್ಟಣ, ಟೌನ್ಶಿಪ್ ಸೇರಿದಂತೆ ತನ್ನ ಒಟ್ಟು ಯೋಜನೆಗೆ 1.72 ಲಕ್ಷ ಎಕರೆ ಭೂಮಿ ಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿದೆಯಂತೆ. ನೈಸ್ ಕಂಪನಿಗೆ ಭೂಮಿ ನೀಡುವುದು ಎಂದರೆ ಯಾವುದೇ ಟ್ರಸ್ಟ್ಗೆ ಅಥವಾ ಸಂಸ್ಥೆಗೆ ಒಂದು ನಿರ್ದಿಷ್ಟ ಅವಧಿಗೆ ಭೂಮಿ ನೀಡಿದಂತೆ ಅಲ್ಲ. ನಿರ್ದಿಷ್ಟ ಅವಧಿ ಮುಗಿದ ಮೇಲೆ ಭೂಮಿಯು ಮರಳಿ ಸರ್ಕಾರಕ್ಕೆ ಸೇರುವುದಿಲ್ಲ. ಬದಲಿಗೆ ಈ ಯೋಜನೆಯಲ್ಲಿ ಭೂಮಿಯ ಒಟ್ಟಾರೆ ಮಾಲಿಕತ್ವವೇ ನೈಸ್ ಕಂಪನಿಗೆ ದೊರೆಯುತ್ತದೆ.ಅಂದರೆ ಕ್ರಯಕ್ಕೆ ನೀಡಲಾಗುತ್ತದೆ. ಆ ಭೂಮಿ ಭೂಮಿ ನುಂಗಣ್ಣನಾದ ನೈಸ್ ಹೊಟ್ಟೆ ಸೇರಿ ಜೀರ್ಣವಾಯಿತೆಂದೇ ಅರ್ಥ.
ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ ಎಂಬುದು ನೈಸ್ ಪಾಲಿಗೆ ಸ್ವರ್ಗವೇ ಧರೆಗಿಳಿದಂತಾಗಿದೆ. ಕೆಲವು ವರ್ಷಗಳ ಹಿಂದೆ ಕಾಂಗ್ರೆಸ್, ಜೆಡಿ (ಎಸ್) ಸರ್ಕಾರ ಇದ್ದಾಗ ನೈಸ್ಗೆ ಅಗತ್ಯಕ್ಕಿಂತ ಹೆಚ್ಚು ಭೂಮಿ ಕೊಟ್ಟಿದ್ದ ಬಗೆಗೆ ತೀವ್ರವಾದ ವಿವಾದಗಳು ನಡೆಯುತ್ತಿರುವ ಹೊತ್ತಲ್ಲೇ ಆಗಿನ ವಿರೋಧ ಪಕ್ಷವಾಗಿದ್ದ ಬಿಜೆಪಿಯ ಹತ್ತಾರು ಶಾಸಕರು ನೈಸ್ ಮಾಲಿಕ ಖೇಣಿ ಏರ್ಪಡಿಸಿದ್ದ `ಭೂರಿ ಭೋಜನ ಕೂಟ'ದಲ್ಲಿ ಪಾಲ್ಗೊಂಡು `ಹೊಟ್ಟೆ ಬಿರಿಯುವಂತೆ ಉಂಡು' ಅಲ್ಲಿ ನೈಸ್ ಭಜನೆ ಮಾಡಿದ್ದರು ಎಂಬುದು ಆಗಲೇ ನಾಡಿನಲ್ಲೆಲ್ಲಾ ಟಾಂಟಾಂ ಆಗಿತ್ತು.
ನೈಸ್ ಕಂಪನಿಯಿಂದ ಈಗ ರೈತರಿಗೆ ಆಗಿರುವ ಅನ್ಯಾಯ, ಆಗಲಿರುವ ಅನ್ಯಾಯ ಎರಡು ಸ್ಪಷ್ಟವಾಗಿದೆ. ಹೀಗಾಗಿಯೇ ರೈತರು ಪ್ರತಿಭಟನೆಗೆ ಇಳಿದಿದ್ದಾರೆ.
ಅನ್ಯಾಯದ ಪರಿ ಹೇಗಿದೆಯೆಂದರೆ ಭೂಮಿ ಕಳೆದುಕೊಂಡ ಎಷ್ಟೋ ರೈತರಿಗೆ ನಯಾ ಪೈಸೆಯೂ ಪರಿಹಾರ ಸಿಕ್ಕಿಲ್ಲ. ಆದರೆ ಅವರ ಭೂಮಿ ಖೇಣಿ ಕರ್ನಾಟಕ ಕೈಗಾರಿಕಾಭಿವೃದ್ಧಿ ಅಭಿವೃದ್ಧಿ ಮಂಡಳಿಗೆ ಎಕರೆಗೆ 1.5 ಕೋಟಿ ರೂ.ಗೆ ಮಾರಿಕೊಂಡಿದ್ದಾನೆ.
ಇಂತಹ ಅನ್ಯಾಯಗಳ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘ (ಕೆ.ಪಿ.ಆರ್.ಎಸ್.) ಬೆಂಗಳೂರು ನಗರ ಜಿಲ್ಲಾ ಸಮಿತಿ, ರಾಮನಗರ, ಜಿಲ್ಲಾ ಸಂಚಾಲನ ಸಮಿತಿ, ಜನವಾದಿ ಮಹಿಳಾ ಸಂಘಟನೆ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ಗಳು ಮುಂಚೂಣಿಯಲ್ಲಿ ನಿಂತು ಹೋರಾಟ ಆರಂಭಿಸಿದವು. ದಲಿತ ಸಂಘಟನೆಗಳು ಕನ್ನಡ ಸಂಘಟನೆಗಳು ಹಲವು ಸ್ಥಳೀಯ ಸಂಘಟನೆಗಳು ಬೆಂಬಲಕ್ಕೆ ನಿಂತವು. ಹೋರಾಟ ರಾಜ್ಯದ ಗಮನ ಸೆಳೆಯಿತು.
ಹೋರಾಟಕ್ಕೆ ಬೆಂಬಲ ನೀಡಿ ಪಾಲ್ಗೊಂಡಿದ್ದ ಮಾಜಿ ಪ್ರಧಾನಿ ದೇವೇಗೌಡರು ಭಾವೋದ್ವೇಗದಲ್ಲಿ ಬಳಸಿದ ಅನಗತ್ಯ ಪದಗಳನ್ನೇ ನೆಪ ಮಾಡಿಕೊಂಡು ಇಡೀ ಹಗರಣದಿಂದಲೇ ಜನರ ಗಮನ ಬೇರೆಡೆ ಸೆಳೆಯುವಂತಹ ಪ್ರಯತ್ನಗಳನ್ನು ಬಿಜೆಪಿಯು ರಾಜ್ಯಾದ್ಯಂತ ನಡೆಸಿದರೂ ಪ್ರಕರಣದ ಅಗಾಧತೆ ನೈಸ್ ಕಂಪನಿಯ ಬೃಹತ್ ಮೋಸ. ಅದಕ್ಕೆ ಅವಕಾಶ ಕೊಡುವುದಿಲ್ಲ. 41 ಕಿ.ಮೀ ಉದ್ದದ ಬೆಂಗಳೂರು ವರ್ತುಲ ರಸ್ತೆಯಲ್ಲೇ ಸುಮಾರು 1500 ಎಕರೆಯಷ್ಟು ಭೂಮಿ ಹೆಚ್ಚುವರಿಯಾಗಿ ನೈಸ್ ಹೊಡೆದುಕೊಂಡಿದೆ ಎಂದಮೇಲೆ ಈ ಒಟ್ಟು ಯೋಜನೆಯಲ್ಲಿ ಹಿಡನ್ ಅಜೆಂಡಾ ಏನೆಂಬುದು ರಾಜ್ಯದ ಜನತೆಗೆ ಮನವರಿಕೆಯಾಗುತ್ತಿದೆ. ಹೀಗಾಗಿಯೇ ಬೆಂಗಳೂರಿನಲ್ಲಿ ಮಾತ್ರವಲ್ಲ, ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು ಹೀಗೆ ಇಡೀ ಯೋಜನಾ ವ್ಯಾಪ್ತಿಯಲ್ಲಿ ನೈಸ್ ವಂಚನೆಯ ವಿರುದ್ಧ ಜನರು, ರೈತರು ಬೀದಿಗಿಳಿಯುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.
ಸೌಜನ್ಯ: ಜನಶಕ್ತಿ