ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಚಿಕ್ಕಮಗಳೂರು ಜಿಲ್ಲಾಡಳಿತದಿಂದ ಐ.ಜಿ. ರಸ್ತೆ ಅಗಲೀಕರಣಕ್ಕೆ ಸಮರೋಪಾದಿ ಸಿದ್ಧತೆ

ಚಿಕ್ಕಮಗಳೂರು ಜಿಲ್ಲಾಡಳಿತದಿಂದ ಐ.ಜಿ. ರಸ್ತೆ ಅಗಲೀಕರಣಕ್ಕೆ ಸಮರೋಪಾದಿ ಸಿದ್ಧತೆ

Sat, 19 Dec 2009 09:44:00  Office Staff   S.O. News Service
ಚಿಕ್ಕಮಗಳೂರು, ಡಿಸೆಂಬರ್ ೧೮: ಜಿಲ್ಲಾ ಕೇಂದ್ರದ ಇಂದಿರಾಗಾಂಧಿ ರಸ್ತೆ ಅಗಲೀಕರಣ ಪ್ರಕ್ರಿಯೆಗೆ ಜಿಲ್ಲಾಡಳಿತವು ಸಮರೋಪಾದಿಯಲ್ಲಿ ಸಿದ್ದತೆ ನಡೆಸುತ್ತಿದೆ. ಕಡೂರು-ಮಂಗಳೂರು ನಡುವೆ ಸೇತುಕೊಂಡಿಯಾಗಿ ಸಂಪರ್ಕ ಕಲ್ಪಿಸುವ ಈ ರಸ್ತೆಯು ನಗರದೊಳಗೆ ಬರೋಬರಿ ಎರಡು ಕಿ.ಮೀ.ವರೆಗೆ ಹಾದು ಹೋಗಿದೆ. ಇದು ಪ್ರಮುಖ ಹೆದ್ದಾರಿ ರಾಜ್ಯ ಹೆದ್ದಾರಿಗಳಲ್ಲಿ ಒಂದಾಗಿದ್ದರೂ ಅತ್ಯಂತ ಕಿರಿದಾಗಿದ್ದು ರಸ್ತೆ ಸಂಚಾರಕ್ಕೆ ತೀವ್ರ ತೊಂದರೆ ಎದುರಾಗಿದೆ. 

ರಸ್ತೆಯ ಇಕ್ಕೆಲ್ಲಗಳಲ್ಲಿ ಪಾದಚಾರಿಗಳ ನಡಿಗೆಗಳಿಗೂ ತೊಂದರೆ ಉಂಟಾಗುತ್ತದೆ. ಒಂದೆಡೆ ಕಿರಿದಾದ ರಸ್ತೆಯಲ್ಲಿ ವಾಹನಗಳ ದಟ್ಟಣೆ ದಿನೇ ದಿನೇ ಹೆಚ್ಚುತ್ತಲಿದ್ದರೆ, ಮತ್ತೊಂದೆಡೆ ಸಧ್ಯಕ್ಕಿರುವ ಫುಟ್‌ಬಾತನ್ನು ಬಿಡದೆ ಅಕ್ರಮ ಕಟ್ಟಡಗಳು ಗಗನದೆತ್ತರ ಚಾಚತೊಡಗಿದೆ. ನಕ್ಷೆಯಲ್ಲಿ ಮಾತ್ರ ಕಾಣಿಸಿಕೊಳ್ಳುವ ಪಾರ್ಕೀಂಗ್ ಜಾಗವನ್ನು ಬಿಡದೆ ಅಕ್ಕಪಕ್ಕದ ಕಟ್ಟಡಗಳ, ನಿವೇಶನಗಳ ಮಾಲೀಕರು ರಸ್ತೆಯನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ತೆರವುಗೊಳಿಸುವಾಗ ಜಿಲ್ಲಾಡಳಿತದ ಮುಂದೆ ಕಾಣಿಸುವ ಸಮಸ್ಯೆಗಳಿಗ ಮೂಲ ಕಾರಣವಾಗಿ ಕಾಣಿಸಿಕೊಳ್ಳುತ್ತದೆ. 

ಈಗಾಗಲೇ ವ್ಯಾಪಾರಿಗಳು, ವರ್ತಕರು, ಮನೆಗಳ ಮಾಲೀಕರು ಕಾನೂನು ಕಟ್ಟಳೆಗಳನ್ನು ಬದಿಗೆ ಸರಿಸಿರುವುದು ಜಿಲ್ಲಾಡಳಿತ ನಡೆಸಿರುವ ಆರಂಭಿಕ ಸಮೀಕ್ಷೆಯಲ್ಲಿ ರುಜುವಾತಾಗಿದೆ. 1975 ರಲ್ಲಿಯೇ ಈ ರಸ್ತೆಯನ್ನು ಅಗಲೀಕರಣಗೊಳಿಸಲು ಅಂದಿನ ಸರಕಾರ ಮುಂದಾಗಿತ್ತು. ಕಡೂರು ಭಾಗದಿಂದ ಅಗಲೀಕರಣಗೊಳಿಸುತ್ತಾ ನಗರದ ಹನುಮಂತಪ್ಪ ವೃತ್ತದ ಬಳಿ ಬರುವ ವೇಳೆಗಾಗಲೇ ಕೆಲವು ಒತ್ತುವರಿದಾರರು  ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಅಗಲೀಕರಣ ಪ್ರಕ್ರಿಯೆಯ ನೆನೆಗುದಿಗೆ ಬೀಳಲು ಪ್ರಮುಖ ಕಾರಣರಾಗಿದ್ದರು. 

ಸದ್ಯದ ಬೆಳವಣಿಗೆಯಲ್ಲಿ ಇಲ್ಲಿನ ನಗರಸಭೆ, ಲೋಕೋಪಯೋಗಿ ಇಲಾಖೆಗಳು ತಮ್ಮ ಕಾರ್ಯವನ್ನು ಸಮರ್ಥವಾಗಿ ನಿಭಾಹಿಸುತ್ತಿಲ್ಲ. ಹಿಂದೆ 2005 ರಲ್ಲಿ ಮಹಾತ್ಮಗಾಂಧಿ ರಸ್ತೆ ಅಗಲೀಕರಣಕ್ಕೆ ಅಂದಿನ ಜಿಲ್ಲಾಡಳಿತವು ಜಿಲ್ಲಾಧಿಕಾರಿ ರಾಜೇಂದ್ರಕುಮಾರ್ ಸಿಂಗ್ ಕಠಾರಿಯಾ ನೇತೃತ್ವದಲ್ಲಿ ಮುಂದಾಗಿತ್ತು. ಆ ದಿನಗಳಲ್ಲಿ ಇಂದಿರಾಗಾಂಧಿ ರಸ್ತೆ, ದೀಪಾ ನರ್ಸಿಂಗ್ ಹೋಮ್ ಎದುರಿರುವ ರಸ್ತೆ, ಖಾಸಗಿ ಬಸ್‌ನಿಲ್ದಾಣದ ರಸ್ತೆ, 150 ವರ್ಷಗಳ ಇತಿಹಾಸವಿರುವ ಕೇಂದ್ರ ಕಾರಾಗೃಹ ಸ್ಥಳಾಂತರ ಮುಂತಾದ ಚಟುವಟಿಕೆಗಳು ನಡೆಯಬೇಕಿತ್ತು. 

ಆದರೆ ಆ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್, ಜೆಡಿ‌ಎಸ್ ನೇತೃತ್ವದ ಸಮ್ಮಿಶ್ರ ಸರಕಾರ ಅಸ್ತಿತ್ವದಲ್ಲಿತ್ತು. ಕಾಂಗ್ರೆಸ್‌ನ ಎನ್. ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದ ಕಾಲವದು. ಸ್ಥಳೀಯ ಬಿಜೆಪಿ ಶಾಸಕ ಸಿ.ಟಿ. ರವಿ ಅಭಿವೃದ್ಧಿಪರ ಚಟುವಟಿಕೆಗಳು ನಡೆಯದಂತೆ ತಡೆಯೊಡ್ಡಿದ್ದಕ್ಕೆ ಕಾರಣವೇ ಅದು. ಎಂ.ಜಿ. ರಸ್ತೆ ಅಗಲೀಕರಣಕ್ಕಾಗಿ ರಸ್ತೆ ಒತ್ತುವರಿ ಮಾಡಿಕೊಂಡಿದ್ದ ಅಕ್ರಮ ಕಟ್ಟಡಗಳ ತೆರವುಗೊಳಿಸಲು ಜೆಸಿಬಿ ಯಂತ್ರ ಬಳಸಿಕೊಂಡಿದ್ದ ಸಂದರ್ಭದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಶಾಸಕ ಸಿ.ಟಿ.ರವಿ ಜೆಸಿಬಿ ಯಂತ್ರದಡಿ ಮಲಗಿ ಸವಾಲು ಎಸೆದಿದ್ದರು. ಬಳಿಕ ಸಾರ್ವಜನಿಕರನ್ನು ವರ್ತಕರನ್ನು ಎತ್ತಿಕಟ್ಟಿ ಸಮಸ್ಯೆಗೆ ಕಾರಣರಾಗಿದ್ದರು. ಈ ವಿಷಯವು ರಾಜ್ಯಾದ್ಯಂತ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿತ್ತು.

ಈ ಹಂತದಲ್ಲಿ ಎಂ.ಜಿ ರಸ್ತೆ ಅಗಲೀಕರಣ ಪ್ರಕ್ರಿಯೆ ನಡೆದು ಕಾಮಗಾರಿ ಕೆಲಸವು ಸಂಪೂರ್ಣವಾಯಿತಾದರು ಉಳಿದ ಭಾಗಗಳಲ್ಲಿ ಅದು ಸಾಧ್ಯವಾಗಲಿಲ್ಲ. ಅತ್ಯಂತ ದಕ್ಷ ಅಧಿಕಾರಿಯಾಗಿದ್ದ ಕಠಾರಿಯ ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿರೋಧ ಕಟ್ಟಿಕೊಂದು ಬೇರೆಡೆಗೆ ವರ್ಗಾವಣೆಯಾಗಬೇಕಾಯಿತು. 

ಪ್ರಸ್ತುತ ಸಮಯದಲ್ಲಿ ಜಿಲ್ಲಾಧಿಕಾರಿಯಾಗಿರುವ ಆರ್. ನಾರಾಯಣಸ್ವಾಮಿ ರಸ್ತೆ ಅಗಲೀಕರಣದಂತ ಸಂಕೀರ್ಣ ವಿಚಾರದಲ್ಲಿ ಯಶಸ್ವಿಯಾಗಲು ಮುಂದಡಿ ಇಟ್ಟಿರುವುದನ್ನು ಸಾರ್ವಜನಿಕರು ಶ್ಲಾಘಿಸುತ್ತಿದ್ದಾರೆ. ಜಿಲ್ಲಾಡಳಿತ ಈಗಾಗಲೇ ಅವರು ಜಿಲ್ಲಾ ಕೇಂದ್ರ ಕಾರಾಗೃಹವನ್ನು ರಾಮನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಕಾರಾಗೃಹಕ್ಕೆ ಸ್ಥಳಾಂತರಿಸಿದ್ದಾರೆ. ಆದರೆ ವರ್ತಕರು ಮಾತ್ರ ತೀವ್ರವಾಗಿ ಜಿಲ್ಲಾಡಳಿತವನ್ನು ಕಾಡತೊಡಗಿದ್ದಾರೆ. ತಾವು ಮಾಡಿಕೊಂಡಿರುವ ಒತ್ತುವರಿ ಕಟ್ಟಡವನ್ನು ಸಂಪೂರ್ಣ ತೆರವುಗೊಳಿಸದಂತೆ ಪದೇ ಪದೇ ಮನವಿ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ನ್ಯಾಯಾಲಯದ ಮೊರೆ ಹೋದರೆ ಇನ್ನು ಕೆಲವರು ಹೋರಾಟಕ್ಕೆ ಮುಂದಾಗಿದ್ದಾರೆ. 

ಸದ್ಯದ ಮಟ್ಟಿಗೆ ಬೋಳರಾಮೇಶ್ವರ ದೇವಾಸ್ಥಾನದ ಎದುರಿನಿಂದ ದಂಟರಮಕ್ಕಿ ಕೆರೆವರೆಗೆ ಇರುವ ಸುಮಾರು ಎರಡು ಕಿ.ಮೀ. ರಸ್ತೆಯು ಕೇವಲ 60 ಅಡಿಗಳು ಮಾತ್ರವಿದೆ. ರಾಜ್ಯ ಹೆದ್ದಾರಿಯಾಗಿರುವ ಈ ರಸ್ತೆಯನ್ನು 140 ಅಡಿಗಳಿಗೆ ವಿಸ್ತರಿಸಲು ಚಿಂತನೆ ನಡೆಸಲಾಗಿದೆ. ವಾಹನಗಳ ದಟ್ಟಣೆ, ಜನದಟ್ಟಣೆಗಳ, ನಡುವೆ ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆಯನ್ನು ಅಭಿವೃದ್ದಿ ಪಡಿಸುವುದು ಅನಿವಾರ್ಯ ಎನ್ನಿಸಿಕೊಂಡಿದೆ. 

ಹೀಗಾಗಿ ಕಳೆದ ಕೆಲವು ದಶಕಗಳಿಂದ ಪ್ರಸ್ತಾಪವಾಗುತ್ತಿದ್ದ ರಸ್ತೆ ಅಗಲೀಕರಣ ಪ್ರಕ್ರಿಯೆಯು ಕಳೆದ ಒಂದು ತಿಂಗಳಿನಿಂದ ಚುರುಕುಗೊಂಡಿದೆ. ಸರ್ವೇ ಕಾರ್ಯದಲ್ಲಿ ಪ್ರಗತಿ ಕಂಡುಬಂದಿದೆ. ಅಕ್ಕಪಕ್ಕದ ಹಳೆಯ ಕಟ್ಟಡ, ಹೊಸ ಕಟ್ಟಡಗಳನ್ನು ಶೋಧಿಸಿ ಸರ್ವೇ ನಡೆಸಲಾಗಿದೆ. ಒತ್ತುವರಿಯಾಗಿರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಹಾಗೂ ರಸ್ತೆಯ ಮಧ್ಯ ಭಾಗದಿಂದ ಎಷ್ಟೆಷ್ಟೂ ಅಡಿಗಳ ಪ್ರಮಾಣದಲ್ಲಿ ನಿಗದಿ ಮಾಡಬೇಕೆಂಬ ಜಿಜ್ಞಾಸೆಗೆ ಇನ್ನಷ್ಟೇ ಉತ್ತರ ಕಂಡುಕೊಳ್ಳಬೇಕಿದೆ. 

ಜಿಲ್ಲಾಡಳಿತ ಸರ್ವೇ ಪ್ರಕಾರ 140 ಅಡಿ ರಸ್ತೆ ಅಗಲೀಕರಣವಾಗಬೇಕು. ಈಗ ಇರುವುದು ಕೇವಲ 60 ಅಡಿಗಳು ಮಾತ್ರ ಅಂದ್ರೆ ರಸ್ತೆಯ ಮಧ್ಯಭಾಗದಿಂದ ರಾಜ್ಯ ಹೆದ್ದಾರಿಯು 70 ಅಡಿ ಇರಬೇಕೆಂಬುದು ಲೋಕೋಪಯೋಗಿ ಇಲಾಖೆಯ ನಿಯಮವು ಆಗಿದೆ. ಆದರೆ ಜ‌ಇಲ್ಲಾಡಳಿತವು ವರ್ತಕರ ಒತ್ತಡ ಮತ್ತು ಮರ್ಜಿಗೆ ಸಿಲುಕಿ ಕೇವಲ ೫೦ ಅಡಿಗಳು ಮಾತ್ರ ವಿಸ್ತರಿಸಲು ಯೋಜನೆ ರೂಪಿಸಲಾಗುತ್ತಿದೆ ಎನ್ನುವ ಮಾತುಗಳು ಕ‌ಏಳಿ ಬರುತ್ತಿದೆ. ರಸ್ತೆಯ ಇಕ್ಕೆಲ್ಲಗಳಲ್ಲಿ ಸಾರ್ವಜನಿಕರ ಪಾದಚಾರಿಗಳ ತಿರುಗಾಟಕ್ಕೆ ಕನಿಷ್ಟ ೫ ಅಡಿಗಳ ಫುಟ್‌ಬಾತ್ ನಿರ್ಮಾಣವು ಇದರಲ್ಲಿ ಸೇರಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಎರಡು ತಿಂಗಳಲ್ಲಿ ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ ದೊರೆಯುವ ಸಾಧ್ಯತೆ ಇದೆ. 

ಇಂತಹ ಪ್ರಕ್ರಿಯೆ ಒಂದೆಡೆ ನಡೆಯುತ್ತಲಿದ್ದರೆ ಮತ್ತೊಂದೆಡೆ ಅನೇಕ ವರ್ತಕರು ಜಿಲ್ಲಾಧಿಕಾರಿಗಳ ರಾಜಕಾರಣಿಗಳ ಮುಂದೆ ದುಂಬಾಲು ಬಿದ್ದಿದ್ದಾರೆ. ಹೇಗಾದರು ಸರಿ 50 ಅಡಿಗಳಿಗಿಂತ ಹೆಚ್ಚಿನ ಒತ್ತುವರಿ ಜಾಗವನ್ನು ತೆರವುಗೊಳಿಸಬಾರದು ಎಂದು ಪರಿಪರಿಯಾಗಿ ಕಾಡಿ ಬೇಡತೊಡಗಿದ್ದಾರೆ. ಇನ್ನು ಕೆಲವರು ನ್ಯಾಯಾಲಯ ಕಟಕಟೆಯಲ್ಲಿ ನಿಂತು ತಡೆಯಾಜ್ಞೆ ತರುವ ನಿಟ್ಟಿನಲ್ಲಿ ಯೋಚಿಸಿದ್ದಾರೆ. ಯಾವಾಗ ಜೆಸಿಬಿ ಯಂತ್ರದ ಸದ್ದು ಕೇಳಿ ಬರಲಿದೆಯೋ ಅದೇ ವೇಳೆಗೆ ಸರಿಯಾಗಿ ತಡೆಯಾಜ್ಞೆ ತಂದು ಬಿಡುವ ಉತ್ಸುಕತೆ ಕೆಲವರಲ್ಲಿ ಕಂಡು ಬಂದಿದೆ. 

ಇಷ್ಟೆಲ್ಲ ಮಾರ್ಪಾಡುಗಳನ್ನು ಮಾಡಲು ಹೊರಟಿರುವ ಜಿಲ್ಲಾಡಳಿತದ ಅಧಿಕಾರಿಗಳು ಸೌಜನ್ಯದ ದೃಷ್ಟಿಯಿಂದ ವರ್ತಕರಲ್ಲಿ ಹಲವು ಸುತ್ತಿನ ಮಾತುಕತೆ ನಡೆಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಆದರೆ ಅವರು ಸಾರ್ವಜನಿಕ ಪ್ರಕಟಣೆಯನ್ನು ಈವರೆಗೂ ಹೊರಡಿಸದೆ ಇರುವುದು ಜನ ಸಮುದಾಯವು ಆತಂಕಕೊಳಗಾಗಲು ಮೂಲ ಕಾರಣವೆನಿಸಿದೆ. ಜಿಲ್ಲಾ ವಾಹನ ಚಾಲಕರ, ಮಾಲೀಕರ, ರಸ್ತೆ ಬಳಕೆದಾರರ, ಸಾರ್ವಜನಿಕರ ಸಮಗ್ರ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಭೆ ಕರೆಯದೆ ಇರುವುದು ದುರದೃಷ್ಟಕರವಾಗಿದೆ. 

ಏನಾದರೂ ಸರಿ ರಸ್ತೆ ಅಗಲೀಕರಣ ಎಂಬುದು ಅಭಿವೃದ್ಧಿಪರ ಚಟುವಟಿಕೆಗಳಲ್ಲಿ ಒಂದು. ಇದು ಇಂದಲ್ಲದಿದ್ದರೆ ಮುಂದೊಂದು ದಿನ ಯಾವತ್ತಾದರು ಸರಿ ಅಗಲೀಕರಣವಾಗಲೇಬೇಕು. ಆದ್ದರಿಂದ ಜಿಲ್ಲಾಡಳಿತವು ಸೂಕ್ತ ತಿಳುವಳಿಕೆಯಿಂದ ಮುಂದಡಿ ಇಟ್ಟರೆ ಮಾತ್ರ ಸಮಂಜಸವಾಗುತ್ತದೆ. 


ವರದಿ: ಅಜೀಜ್ ಕಿರುಗುಂದ 


Share: