ಇಂದಿನ ಆಧುನಿಕ ಸಮಾಜದಲ್ಲಿ ವಿನಿಮಯಗಳು ಅವಶ್ಯಕ. ಯಾವುದೇ ವಸ್ತು ಅಥವಾ ಎಂತಹುದೇ ಸೇವೆಯನ್ನು ಹಣ ಕೊಟ್ಟು ಪಡೆಯುವವ ಗ್ರಾಹಕ ಅಥವ ಬಳಕೆದಾರ ಎನಿಸುತ್ತಾನೆ. ಗ್ರಾಹಕ ತಾನು ಹಣ ಕೊಟ್ಟು ಖರೀದಿಸುವ ಯಾವುದೇ ವಸ್ತು ಅಥವ ಸೇವೆಯ ಬಗ್ಗೆ ಅದರ ಉತ್ಪಾದಕ-ಮಾರಾಟಗಾರನಿಂದ, ಸಂಪೂರ್ಣ ಮಾಹಿತಿ ಪಡೆಯಲು ಅರ್ಹನಾಗಿದ್ದಾನೆ. ಗ್ರಾಹಕನ ಈ ಸಾರ್ವಭೌಮ ಅಧಿಕಾರಕ್ಕೆ ರಾಜ್ಯ ಗ್ರಾಹಕ ನ್ಯಾಯಾಲಯ ಮತ್ತು ರಾಷ್ಟ್ರೀಯ ಗ್ರಾಹಕ ನ್ಯಾಯಾಲಯಗಳ ನೆರವು ಸಹ ಲಭ್ಯವಿದೆ. ಪ್ರತಿವರ್ಷ ಮಾರ್ಚ್ ೧೫ರಂದು ಗ್ರಾಹಕ ಹಕ್ಕು ಸಂರಕ್ಷಣಾ ದಿನವೆಂದು ಆಚರಿಸಿ ಅದರ ಮಹತ್ವ ವಿವರಿಸುವ ಕೆಲಸಗಳು ಸಹ ಆಚರಣೆಯಲ್ಲಿದೆ.
ವಿಪರ್ಯಾಸವೆಂದರೆ ಇವು ಕೇವಲ ತೂಕ, ಅಳತೆಯಲ್ಲಿ ಮೋಸ, ಗುಣಮಟ್ಟದಲ್ಲಿ ನ್ಯೂನತೆ, ವಸ್ತುವಿನಲ್ಲಿ ಅಡಕ ವಾಗಿರುವ ಅಂಶಗಳ ಅಸಮರ್ಪಕ ಮಾಹಿತಿಗಳಿಗೆ ಮಾತ್ರ ಸೀಮಿತ ಮಾಡಿ ಗ್ರಾಹಕ ಸೇವೆಯ ಮೂಲಕ ಭಾಷೆ-ಸಂಸ್ಕೃತಿಯನ್ನು ಸಂರಕ್ಷಿಸುವ, ಬೆಳೆಸುವ ಬಹುದೊಡ್ಡ ಆಯಾಮವನ್ನು ಎಲ್ಲೆಡೆ ಕಡೆಗಣಿಸಿರುವುದು ಕಂಡು ಬರುತ್ತದೆ. ಯಾವುದೇ ವಸ್ತುವನ್ನು ಎಲ್ಲಿಯೇ ಉತ್ಪಾದಿಸುವವ ಅದನ್ನು ಕರ್ನಾಟಕದಲ್ಲಿ ವಿತರಿಸುವವ ಅಥವ ಮಾರಾಟ ಮಾಡುವವನಿಗೆ ಕರ್ನಾಟಕದಲ್ಲಿ ಬಹುಜನ ಬಳಸುವ ಭಾಷೆ ಕನ್ನಡ, ಕನ್ನಡ ಗ್ರಾಹಕನೇ ಇಲ್ಲಿ ಸಾರ್ವಭೌಮ ಎಂಬ ತಿಳುವಳಿಕೆ ಹೊಂದಿ ತನ್ನ ಉತ್ಪನ್ನದ ಎಲ್ಲಾ ಜಾಹೀರಾತುಗಳನ್ನು - ವಿವರಗಳನ್ನು-ಮಾಹಿತಿಯನ್ನು-ಸೇವೆಯನ್ನು ಕನ್ನಡದಲ್ಲಿ ನೀಡಬೇಕಾಗಿರುವುದು ಸಹಜವಲ್ಲವೇ? [ಇದು ಭಾರತದ ಇತರ ರಾಜ್ಯಗಳಲ್ಲಿ ಆಯಾ ಭಾಷೆಗಳಿಗೆ ಪ್ರಾಮುಖ್ಯ ದೊರಕಬೇಕು ಎನ್ನುವುದು ಸಹ ಸತ್ಯವಾದದ್ದು] ಹಾಗಾಗಿ ಕರ್ನಾಟಕದ ಅಧಿಕೃತ ಭಾಷೆ ಕನ್ನಡವಾಗಿದ್ದು, ನಮ್ಮ ಸಂವಿಧಾನದ ಭಾಷ ಸೂತ್ರದ ನಿಲುವಿನಂತೆ ದೇಶೀಯ ಭಾಷೆಗಳಲ್ಲೇ ಆದಳಿತ-ವ್ಯವಹಾರ ನಡೆಸಬೇಕೆಂಬುದರ ಅದೇಶದಂತೆ ಕರ್ನಾಟಕದಲ್ಲಿ ಕನ್ನಡಕ್ಕೆ ಆಧ್ಯತೆ ನೀಡಿ ಎನ್ನುವುದು ನಿರ್ವಿವಾದವಾದವಾಗಿರುವಾಗ ಗ್ರಾಹಕ ಸೇವೆಯಲ್ಲಿ ಕನ್ನಡಿಗ ಕನ್ನಡತನದಿಂದ ವಂಚಿತನಾಗಿರುವುದನ್ನು ನಾವು ಎಲ್ಲೆಡೆ ಕಾಣಬಹುದಾಗಿದೆ.
ನಮ್ಮ ಮನೆಗಳಲ್ಲಿ ಬಹು ಜಾಗರೂಕತೆಯಿಂದ ಉಪಯೋಗಿಸಬೇಕಾದ ಅನಿಲ ಸಿಲಿಂಡರಿನ ಮೇಲಿನ ಸುರಕ್ಷಿತ ಉಪಯೋಗದ ವಿವರ ಕನ್ನಡದಲ್ಲಿಲ್ಲದಿರುವುದನ್ನು, ನಮ್ಮ ಆರೋಗ್ಯ-ಜೀವ ರಕ್ಷಣೆಗೆ ಉಪಯೋಗಿಸುವ ಔಷದಿ-ಮಾತ್ರೆ-ಚುಚ್ಚುಮದ್ದಿನ ಬಗ್ಗೆ ಮಾಹಿತಿ ಸಹ ಕನ್ನಡದಲ್ಲಿ ಇಲ್ಲದಿರುವುದನ್ನು, ಇವುಗಳ ಕುರಿತು ನಾವು ಸುರಕ್ಷತೆಯಿಂದಿರಬೇಕಾದ ಸೂಕ್ಷ್ಮವನ್ನು ಗಂಭೀರವಾಗಿ ಪರಿಗಣಿಸದೆ ಬಹಳ ಹಗುರವಾಗಿದ್ದು ಬಿಟ್ಟಿದ್ದೇವೆ. ದೂರವಾಣಿಯಲ್ಲಿ ನಮ್ಮನ್ನು ಸಂಪರ್ಕಿಸಿ, ನಾವು ಅವರಿಗೆ ಗ್ರಾಹಕರಾಗಬಯಸುವ ಬ್ಯಾಂಕುಗಳು, ವಾಣಿಜ್ಯ ಮಳಿಗೆಗಳವರು, ಮನೆ-ನಿವೇಶನ ದೊರಕಿಸುವವರು, ಸಾಲ ನೀಡುವವರು, ಕಾರು-ಮೋಟಾರು ಮಾರುವವರು, ಗ್ರಾಹಕನಾದವನು ವ್ಯಾಪಾರಸ್ಥನ ಭಾಷೆಯಲ್ಲಿ ಮಾತನಾಡಲು ಒತ್ತಾಯಿಸುವುದು ಸರ್ವೇ ಸಾಮಾನ್ಯವಾಗಿದ್ದು ನಾವ್ಯಾರೂ ಅಲ್ಲಿ ಸಹಜವಾಗಿರಬೇಕಾಗಿದ್ದ ಕನ್ನಡಕ್ಕಾಗಿ, ಆಗ್ರಹಿಸುವುದು ಸಂಕೋಚವೋ-ಸಂಕುಚಿತವೆನ್ನಿಸಿಯೋ ಸುಮ್ಮನಿದ್ದುಬಿಟ್ಟಿದ್ದೇವೆ. ನಮ್ಮ ಕನ್ನಡದ ಸ್ವಾಭಿಮಾನವನ್ನು ವ್ಯಕ್ತಪಡಿಸುವುದು ಸಹ ಅವಮಾನವೆಂದು ತೆಪ್ಪಗಾಗಿದ್ದೇವೆ. ಹೀಗೆ ಉತ್ಪತ್ತಿಯಾಗುತ್ತಿರುವ ಎಲ್ಲಾ ರೀತಿಯ ಸಲಕರಣೆಗಳು, ಟಿವಿ-ಫ್ರಿಡ್ಜು-ನೀರು-ಬೀರು-ಸಾಬೂನು-ಕೀಟನಾಷಕ-ತಲೆಗೆ ಬಳಿದುಕೊಳ್ಳುವ ಬಣ್ಣ-ಹಚ್ಚಿಕೊಳ್ಳುವ ಎಣ್ಣೆ ಇವೆಲ್ಲವನ್ನು ಉಪಯೋಗಿಸುವ ವಿವರಗಳು-ಇದರ ಬಗ್ಗೆ ಮಾಹಿತಿ ನಮ್ಮ ಕನ್ನಡ ಭಾಷೆಯಲ್ಲಿ ನೀಡದೆ, ಆದರೂ ನೀವಿದನ್ನು ಖರೀದಿಸಬೇಕು ಎಂದು ಹೆಮ್ಮೆಯಿಂದ ಅವರು ಜಾಹೀರಾತು ನೀಡುವುದನ್ನು ಕಣ್ಣು ಮುಚ್ಚಿ ನೋಡಿ! ಕಿವಿ ಮುಚ್ಚಿ ಆಲಿಸಿ!! ಕಿಸೆಯಿಂದ ಕಾಸು ತೆಗೆದು ನಾವೆಲ್ಲರೂ ಖರೀದಿಸುತ್ತಿದ್ದೇವೆ!
ಇಲ್ಲಿ ಗಮನಿಸಬೇಕಾಗಿರುವ ಬಹಳ ಸುಲಭವಾದ ಅಂಶವೆಂದರೆ, ನಾವು ಗ್ರಾಹಕರಾಗಿ ಎಲ್ಲೆಡೆ ಕನ್ನಡಕ್ಕಾಗಿ ಆಗ್ರಹಿಸಿದರೆ. ಕನ್ನಡದಲ್ಲಿ ಸೇವೆ ನೀಡಲು ಕನ್ನಡಿಗನಿಗೆ ಕೆಲಸ ದೊರೆಯುತ್ತದೆ. ಹಾಗು ಉತ್ಪನ್ನಗಳ ವಿವರ ಕನ್ನಡದಲ್ಲಿ ದೊರೆಯುವುದು ಎಂದರೆ ಕನ್ನಡದಲ್ಲಿ ವಿವರಣೆ ಬರೆಯುವವನಿಗೆ, ಕನ್ನಡ ಮುದ್ರಿಸುವವನಿಗೆ ಕೆಲಸ ದೊರೆಯುತ್ತದೆಯಲ್ಲವೇ? ಹೀಗೆ ಪಟ್ಟಿ ಮಾಡುತ್ತಾ ಹೋದರೆ ಇದು ಕನ್ನಡವನ್ನು ಬೆಳೆಸುವ-ಸಂರಕ್ಷಿಸುವ, ಬಹುದೊಡ್ಡ ಸಾಧಕವೆನಿಸುತ್ತದ್ದಲ್ಲವೇ? ಕನ್ನಡ ಬಾರದವನು ಕನ್ನಡ ಕಲಿಯುವ ಅನಿವಾರ್ಯತೆಯನ್ನು ಸಹ ಇದು ಹುಟ್ಟುಹಾಕುತ್ತದೆ. ಎಲ್ಲಿಯವರೆಗೆ ಬಳಕೆದಾರರಾದ ನಾವು ಸೇವೆಯನ್ನು ಕನ್ನಡದಲ್ಲಿ ಕೇಳುವುದಿಲ್ಲವೋ ಉತ್ಪಾದಕ ಅಥವ ಮಾರಾಟಗಾರ ಸಹಜವಾಗಿರಬೇಕಾಗಿದ್ದ ನಮ್ಮ ಹಕ್ಕನ್ನು ಕಡೆಗಣಿಸುವುದು ಸಾಮಾನ್ಯ. ಸಹಜವಾಗಿ ನಮಗೆ ದೊರಕಬೇಕಾದದ್ದ ಕನ್ನಡದಲ್ಲಿನ ಗ್ರಾಹಕ ಸೇವೆಯನ್ನು ಇಂದು ನಾವು ಆಗ್ರಹ ಮಾಡಿ ಪಡೆಯಬೇಕಾದ ಸ್ಥಿತಿ ತಂದುಕೊಂಡಿದ್ದೇವೆ.
ಇಂದು ಬ್ಯಾಂಕು ಗಳಲ್ಲಿ ಸಾಲ ಪಡೆಯುವ - ಜೀವವಿಮೆ ಮಾಡಿಸುವ ಅರ್ಜಿಯನ್ನು ನಾವು ಕನ್ನಡದಲ್ಲಿ [ನಿಗಮದ ಪ್ರಕಾರ ಇದು ವರ್ನ್ಯಾಕುಲರ್ ಭಾಷೆ] ಭರ್ತಿ ಮಾಡಿ ಸಹಿ ಮಾಡಿದರೆ "ನನ್ನ ಹೆಸರು ಇಂಥದ್ದು, ನನಗೆ ಕನ್ನಡ ಭಾಷೆ ಒಂದೇ ಬರೋದು, ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ, ನೀವು ಇಂಗ್ಲಿಷ್-ಹಿಂದಿ ಭಾಷೇಲಿ ಬರೆದಿರುವುದೆಲ್ಲವನ್ನೂ, ಓದಿಸಿ ಕೇಳಿ ಅರ್ಥ ಮಾಡಿಕೊಂಡಿದ್ದೇನೆ" ಎಂದು ಷರಾ ಬೇರೆ ಬರೆದುಕೊಡಬೇಕಾದಂತ ದುಸ್ಥಿತಿ ಕನ್ನಡ ಗ್ರಾಹಕನಿಗೆ ಬಂದೊದಗಿದೆ.
ಹಲವು ಭಾಷೆ, ಸಂಸ್ಕೃತಿಗಳಿಂದ ಮೇಳೈಸುತ್ತಿರುವ ವಿವಿಧತೆಯಲ್ಲಿ ಏಕತೆ ಸಾರುವ ರಾಷ್ಟ್ರ ನಮ್ಮದು. ಇವುಗಳೆಲ್ಲವನ್ನು ಪ್ರೀತಿಸುವ ಮತ್ತು ಗೌರವಿಸುವ ಔದಾರ್ಯ ಸಾಮೂಹಿಕವಾಗಿ ಇದ್ದಾಗ ಸಾಮರಸ್ಯ ತನ್ನಿಂತಾನೆ ಮೂಡುತ್ತದೆ. ಹೇಗೆ ಜಾಗೃತ ಗ್ರಾಹಕ ಜವಾಬ್ದಾರಿ ಯುತ ಉತ್ಪಾದಕನಿಗೆ ಕಾರಣಕರ್ತನಾಗುತ್ತಾನೋ, ಜಾಗೃತ ಕನ್ನಡ ಗ್ರಾಹಕ ಕರ್ನಾಟಕದಲ್ಲಿ ಕನ್ನಡತನವನ್ನು ಉಳಿಸುವ ಮೂಲಕ, ಇತರ ಭಾಷಿಕರಿಗೆ ಅವರವರ ರಾಜ್ಯಗಳಲ್ಲಿ ಅವರ ಭಾಷೆ ಉಳಿಸಿಕೊಳ್ಳಲು ಸ್ಪೂರ್ತಿಯಾಗುತ್ತ, ಅನೇಕತೆಯಲ್ಲಿರುವ ಈ ದೇಶದ ಏಕತೆಯನ್ನು ಸಾರುತ್ತ ಸಮಗ್ರ ದೇಶದ ಬೆಳವಣಿಗೆ, ಅಭಿವೃದ್ಧಿಗೆ ಪೂರಕನಾಗಬಹುದಲ್ಲವೇ?
ಕೇವಲ ವ್ಯಾಪಾರಿ ಸಂಸ್ಥೆಗಳ ನಾಮಫಲಕಗಳಲ್ಲಿ ಮಾತ್ರ ಕನ್ನಡ ಕಾಣುವಂತಾಗುವ ಕಾನೂನಿನಿಂದ ಏನೂ ಪ್ರಯೋಜನವಿಲ್ಲ! ಕನ್ನಡ ನಾಡಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ನಿರಾಕರಿಸುವುದು 'ಶಿಕ್ಷಾರ್ಹ ಅಪರಾಧ' ಎಂಬ ಕಾನೂನನ್ನು ನಮ್ಮ ಸರ್ಕಾರ ಜಾರಿಗೆ ತರಬೇಕಿದೆ. ಹೀಗೆ ಕಾನೂನು ಜಾರಿಯಾದಲ್ಲಿ ಕನ್ನಡ ಅನುಷ್ಠಾನದ ಎಲ್ಲಾ ರೀತಿಯ ವ್ಯಾಪಾರಿ ಸಂಸ್ಥೆಗಳು ಎಚ್ಚರಿಕೆ ವಹಿಸುತ್ತವೆ ಮತ್ತು ಗ್ರಾಹಕನೇ ದೇವರು ಎನ್ನುವ ಮಾತಿಗೆ ಬೆಲೆ ಸಿಗುವಂತಾಗುತ್ತದೆ. ಆದರೆ ಭಾರತದಲ್ಲಿ ಗ್ರಾಹಕನ ಹಕ್ಕುಗಳಿಗಾಗಿರೋ ಮಾರ್ಗದರ್ಶಿ/ ನಿಯಮಗಳ ದೊಡ್ಡ ಪಟ್ಟಿಯಲ್ಲಿ ಭಾಷಾ ಆಯಾಮವೇ ಇಲ್ಲದಿರುವುದು ಮತ್ತೊಂದು ವಿಪರ್ಯಾಸವೇ ಸರಿ!
ಕಲ್ಯಾಣ ರಾಮನ್ ಚಂದ್ರಶೇಖರನ್