ಭಟ್ಕಳ, ನವೆಂಬರ್ 6: ಮನುಷ್ಯನ ಬದುಕು ಭ್ರಮನಿರಸನಕ್ಕೊಳಗಾಗುತ್ತಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಹೊಟ್ಟೆಯ ಹಸಿವಿನ ಆಕ್ರಂದನಗಳಿಗಿಂತ ಜೋರಾಗಿ ಉಟ್ಟ ಬಟ್ಟೆಯ ಮೇಲಾಟಗಳು ನಡೆಯುತ್ತಿವೆ. ಮುಗ್ಧತೆ, ಪ್ರಾಮಾಣಿಕತೆ, ವಾಸ್ತವದ ಹಂದರ ಹರಿದು ಹೋಗಿ ಬೂಟಾಟಿಕೆಯ ಪರದೆಯೊಳಗೆ ಸಿಲುಕಿ ಮಾಯವಾಗುತ್ತಿವೆ. ಒಂದಕ್ಕೊಂದು ಸಂಬಂಧವಿಲ್ಲದ ಚರ್ಚೆಗಳು, ತಲೆ ಬುಡವಿಲ್ಲದೇ ಬುದ್ದಿ ಮಾತುಗಳು ಎಂದು ಕರೆಯಿಸಿಕೊಳ್ಳಲು ನಡೆಸಿರುವ ತರಲೆಗಳ ಹಪಾಹಪಿತನ, ಶಿಸ್ತಿನ ಹೆಸರಿನಲ್ಲಿ ಅಶಿಸ್ತಿನ ಆಡಂಬರ... ಒಂದೇ ಎರಡೇ... ಭಟ್ಕಳ ಸರಕಾರಿ ಪದವಿ ಕಾಲೇಜಿನ ಅಂಗಳದಲ್ಲಿ ಇದೀಗ ಎಲ್ಲವೂ ಪುಕ್ಕಟೆಯಾಗಿ ದರ್ಶನಕ್ಕೆ ಲಭ್ಯವಿದೆ.
ನಮ್ಮಲ್ಲಿ ಧರ್ಮ-ದೇವರುಗಳ ಕುರಿತಂತೆ ಚರ್ಚೆ ನಡೆಯುವಷ್ಟು ಮತ್ಯಾವ ವಿಷಯವೂ ಸುಳಿಯುವುದಿಲ್ಲ. ಯಾರು ದೇವರು? ಯಾವುದು ಧರ್ಮ? ಎಲ್ಲವು ಇಂದಿಗೂ ಅಯೋಮಯ. ದೇವಸ್ಥಾನಕ್ಕೆ, ಮಸೀದಿಗೆ, ಬಸದಿಗೆ, ಚರ್ಚಿಗೆ ನಡೆದು ಬಿಡುವುದೆಲ್ಲ ನಮ್ಮ ಧರ್ಮದ ವಿವರಗಳ ವ್ಯಾಪ್ತಿಗೆ ಬಂದು ಕುಳಿತಿದೆ. ಅದಕ್ಕಾಗಿಯೇ ಬೇರೆ ಬೇರೆ ಸ್ಥಳ ಗೊತ್ತುಪಡಿಸಿ ಬೇರೆ ಬೇರೆ ಧರ್ಮಗಳ ನಾಮಕರಣವೂ ನಡೆದಿದೆ. ಅದೇ ಆಧಾರದ ಮೇಲೆಯೇ ಬಣ್ಣ ಬಣ್ಣದ ಧರ್ಮ ಗುರುಗಳು! ತೊಡುವ ಬಟ್ಟೆಗಳಿಂದಲೂ ಭಿನ್ನತೆಗಳ ಸೃಷ್ಟಿ. ವಿಚಿತ್ರವೆಂದರೆ ತಿಂದು ಕರಗಿಸುವ ಆಹಾರಗಳೂ ಇಂದು ಧರ್ಮಗಳ ಹೆಸರನ್ನು ಹೇಳುತ್ತಿವೆ. ಇಷ್ಟಾದರೂ ನಮ್ಮ ದುರ್ಗುಣಗಳು ನಮ್ಮ ಧರ್ಮವನ್ನು ಹೇಳುವುದಿಲ್ಲ. ಕಳ್ಳ, ಸುಳ್ಳ, ಹೊಟ್ಟೆಕಿಚ್ಚಿನವ, ಕೊಲೆಗಾರ, ಮೊಸಗಾರ, ಜಗಳಗಂಟ, ಶೋಕಿಮ್ಯಾನ್... ಹಾಗೆಯೇ ಓಸಿ ಆಡಿಸುವವ, ಇಸ್ಪೀಟ್ ದಂಧೆಯವ, ಕಳ್ಳಭಟ್ಟಿ ಸಾರಾಯಿ ಮಾರುವವ, ಗಣಿ ಕೊರೆದವ, ಸಾಗುವಾನಿ ಸಾಗಿಸುವವ.... ಹೀಗೆ ಯಾರ ಹೆಸರಿನ ದೆಸೆಯಿಂದಲೂ ಧರ್ಮ ಸೃಷ್ಠಿಯಾಗುವುದಿಲ್ಲ. ಯಾರೂ ಅದು ಅವನ ಧರ್ಮವೆಂದು ಕರೆಯುವುದಿಲ್ಲ. ಅಂದರೆ ನಮ್ಮ ಧರ್ಮ ಯಾವುದು? ನಾವು ದೇವರ ತೃಪ್ತಿಗಾಗಿ ಆಚರಿಸಿಕೊಂಡು ಬರುತ್ತಿರುವ ಚಟುವಟಿಕೆಗಳು ಮಾತ್ರ ಧರ್ಮವೆಂದು ಬಿಂಬಿತವಾಗಿವೆ. ಇಲ್ಲಿ ದೇವರು ಎನ್ನುವ ಪ್ರಶ್ನೆ ಬಂದಾಗಲೂ ಜನರ ದೃಷ್ಟಿ ವಿಭಿನ್ನ ಪಥದಲ್ಲಿಯೇ ಸಾಗುವುದನ್ನು ಕಾಣುತ್ತೇವೆ. ಕುತೂಹಲಕಾರಿ ಸಂಗತಿ ಏನೆಂದರೆ ತನ್ನನ್ನು ತಾನು ಹೇಗಾದರೂ ಮಾಡಿ ಸಂತೃಪ್ತಗೊಳಿಸುವುದರತ್ತ ಮನಸ್ಸನ್ನು ಹರಿಬಿಟ್ಟ ಮನುಷ್ಯ ಅಲ್ಲಿಯೇ ದೇವರ ಹೆಸರನ್ನು ಹೇಳುತ್ತಿರುವುದನ್ನೂ ಕಾಣುತ್ತೇವೆ. ಅದಕ್ಕೇ ಆತ ಹೇಳುವುದೆಲ್ಲ ಸರಿಯಾಗಿ ಉಳಿದವುಗಳಿಗೆ ಬೆಲೆಯೇ ಇಲ್ಲವಾಗಿದೆ. ವಾಸ್ತವ ಎನ್ನುವುದು ನಮ್ಮಿಂದ ದೂರವಾಗಿ ಭ್ರಮಾತ್ಮಕ ಪ್ರಪಂಚವೇ ಸರಿ ಎನ್ನುವ ಬೆಳವಣಿಗೆ ಇದೆಯಲ್ಲ, ಅದು ದಿನದಿಂದ ದಿನಕ್ಕೆ ನಮ್ಮನ್ನು ಆಪತ್ತಿಗೆ ಸಿಲುಕಿಸುತ್ತಿದೆ. ಇಲ್ಲಿಯ ಸರಕಾರಿ ಪದವಿ ಕಾಲೇಜಿನಲ್ಲಿ ನಡೆಯುತ್ತಿರುವ ಹಾಗೂ ಇತ್ತೀಚಿನ ಭಟ್ಕಳದ ಬೆಳವಣಿಗೆಗಳು ಇದರದ್ದೇ ಆದ ಒಂದು ಭಾಗ ಎಂಬುದನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ.

ಇಸ್ಲಾಮ್ ಧರ್ಮ ಬುರ್ಖಾ ಧರಿಸುವಂತೆ ಮಹಿಳೆಯರಿಗೆ ಕಡ್ಡಾಯಗೊಳಿಸುವುದರತ್ತಲೂ ವಿಭಿನ್ನ ಚರ್ಚೆಗಳು ನಡೆಯುತ್ತಿವೆ. ಖ್ಯಾತ ಮುಸ್ಲೀಮ ಲೇಖಕಿ ಸಾ.ರಾ. ಅಬೂಬಕ್ಕರ್‌ರಂತವರು ಮಹಿಳೆಯರಿಗೆ ಬುರ್ಖಾ ಕಡ್ಡಾಯ ಅಲ್ಲವೆಂದೇ ವಾದಿಸುತ್ತ ಧಾರ್ಮಿಕ ಗೃಂಥಗಳ ಹೇಳಿಕೆಯನ್ನೂ ಉಲ್ಲೇಖಿಸುತ್ತಾರೆ. ಅವರ ಪ್ರಕಾರ ಪವಿತ್ರ ಕುರಾನಿನ ಯಾವುದೇ ಅಧ್ಯಾಯದಲ್ಲಿಯೂ ಬುರ್ಖಾ ಎಂಬ ಪದವೇ ಇಲ್ಲ! ಆದರೆ ಪವಿತ್ರ ಕುರಾನಿನಲ್ಲಿ ‘ಹೊದಿಕೆ’ ಎಂಬ ಪದವಿದೆ. ಅದು ಇನ್ನೊಬ್ಬರ ಕಾಕ ದೃಷ್ಟಿಯನ್ನು ತಪ್ಪಿಸಿಕೊಳ್ಳುವ ಸಲುವಾಗಿ ಮಹಿಳೆಯರು ಶಿರ ಹಾಗೂ ಮೈಯನ್ನು ಮುಚ್ಚಿಕೊಳ್ಳಲು ಬಳಸುವ ಹೊದಿಕೆ. ಮುಸ್ಲೀಮ್ ಬಾಹುಳ್ಯ ಇರುವ ಅರಬ್ ನೆಲದಲ್ಲಿ ಅಲ್ಲಿಯ ಪರಿಸ್ಥಿತಿಗನುಗುಣವಾಗಿ ಅದು ಬುರ್ಖಾ ಆಗಿ ಪರಿವರ್ತನೆ ಹೊಂದಿತೆಂದೂ, ಅದು ಕಾಲಕ್ರಮೇಣ ಜಗತ್ತಿನ ಕೆಲ ಭಾಗಗಳಿಗೆ ವಿಸ್ತರಿಸಿತೆಂದೂ ಅವರು ಹೇಳುತ್ತಾರೆ. ಭಟ್ಕಳ ಹಾಗೂ ಅರಬ್ ನೆಲಕ್ಕೂ ಐತಿಹಾಸಿಕ ನಂಟು ಇರುವುದರಿಂದ ಅಬೂಬಕ್ಕರ್‌ರ ಮಾತು ಇಲ್ಲಿ ವೇದ್ಯವಾಗುತ್ತದೆ. ಆದರೆ ಬುರ್ಖಾ ಧರಿಸುವಿಕೆಯನ್ನೇ ಧರ್ಮದ ಒಂದು ಭಾಗವಾಗಿ ನೋಡುವ ಭಟ್ಕಳದ ಮುಸ್ಲೀಮರಲ್ಲಿ ಈ ಮಾತು ಸಂದೇಹವನ್ನು ಸೃಷ್ಟಿಸಿದರೆ ಆಶ್ಚರ್ಯಪಡುವಂತದ್ದೇನಿಲ್ಲ. ಹಾಗೆಯೇ ಹಿಂದೂ ಧರ್ಮದ ಕೇಸರಿ ಶ್ಯಾಲಿನೆಡೆಗೆ ಸ್ವಲ್ಪ ನೊಡೋಣ.
ಸನಾತನ ಧರ್ಮವೆಂದು ಕರೆದುಕೊಳ್ಳುವ ‘ಹಿಂದೂ’ ಧರ್ಮದಲ್ಲಿ ‘ಸನಾತನ’ ಪದದ ಅರ್ಥ ಗ್ರಹಿಸುವಿಕೆ ಇನ್ನೂ ಅಪೂರ್ಣವಾಗಿಯೇ ಉಳಿದುಕೊಂಡಿದೆ. ಜನರನ್ನು ದಾಸರನ್ನಾಗಿ ಇಟ್ಟು ಕೊಳ್ಳಲು ಹುಟ್ಟು ಹಾಕಿದ ಆಚರಣೆಗಳು, ಅದನ್ನೇ ದೇವರು, ಧರ್ಮವೆಂದು ನಂಬಿಕೊಳ್ಳುವ ಜನರಿಗೆ ನಿಜವಾದ ಹಿಂದೂವನ್ನು (ಸ್ವಾಮಿ ವಿವೇಕಾನಂದರ ಹಿಂದೂ ಧರ್ಮ) ಮುಟ್ಟಲು ಅಸಾಧ್ಯ ಆಗಿದೆ ಎಂದು ಹೇಳುವಾಗ ಕೆಲವರಿಗೆ ಕೋಪ ಬಂದರೆ ಅದು ಅವರ ಮಾನಸಿಕ ದೌರ್ಬಲ್ಯ (ಅಜ್ಞಾನವೂ ಇರಬಹುದು) ಎಂದೇ ಕರೆಯಬೇಕಾಗುತ್ತದೆ. ಅಂತಹ ಮೇಧಾವಿ ವಿವೇಕಾನಂದರನ್ನೇ ಇದೇ ಕೂಪಮಂಡೂಕಗಳು ತುಚ್ಛವಾಗಿ ಹಳಿಯುತ್ತಿದ್ದರು ಎಂದು ಕೇಳಿಸಿಕೊಳ್ಳುವಾಗ ಮನಸ್ಸಿಗೆ ನೋವಾಗುತ್ತದೆ. ಇಷ್ಟಾದರೂ ನಮಗೆ ವಿವೇಕಾನಂದರು ಅಪರೂಪಕ್ಕೆ ನೆನಪಾದರೆ, ಜಾತಿ, ಧರ್ಮಗಳನ್ನು ಹರಿಬಿಟ್ಟು ಪ್ರತಿದಿನ ಉಂಡೆದ್ದು ಹೋಗುವ ಚಾಲಾಕಿಗಳು ನಮ್ಮ ನಿತ್ಯದ ಗುರುಗಳು! ಪವಿತ್ರ ಭಗವದ್ಗೀತೆ ಮಹಾನ್ ಹಿಂದೂ ಎಂದು ಕರೆಸಿಕೊಳ್ಳುವವನ ಕೈಯನ್ನು ಸೇರಲು ಇನ್ನೂ ಹಿಂದೇಟು ಹಾಕುವುದರ ಮರ್ಮವೇನು? ಉತ್ತರ ಬೇಡುವ ಕೆಲಸ ನಮಗೆ ಬೇಡ ಅಲ್ಲವೇ!? ಅವರ ಇಚ್ಛೆಯಂತೆ ನಾವು ಏನನ್ನೂ ಪ್ರಶ್ನಿಸದೇ ಒಪ್ಪಿಕೊಳ್ಳಬೇಕು. ಹೇಗಿದೆ ನೋಡಿ.. ಆ ಕಾರಣದಿಂದಲೇ ಯಾವ ಪುರಾಣ ಕಥೆಗಳ ಪಾತ್ರಗಳ ಕೈಯಲ್ಲಿ ಆಯುಧಗಳಿದ್ದವೋ ಅದೆಲ್ಲ ಈಗಿನ ಹುಡುಗರ ಕೈಯನ್ನು ಸೇರಿಕೊಳ್ಳುತ್ತಿವೆ. ತ್ರಿಶೂಲ, ಗಧೆ... ಇದೀಗ ಮೈಗೊಂದು ಕೇಸರಿ ಶ್ಯಾಲು...ಮುಂದೇನು ಕಾದಿದೆಯೋ ಬಲ್ಲವರಾರು?
ಆದರೆ ಇದನ್ನೆಲ್ಲವನ್ನೂ ಅವರವರ ಸ್ವಾರ್ಥಕ್ಕಾಗಿ ಬೆಂಬಲಿಸುವ ವರ್ಗವೊಂದಿದೆ. ನಮ್ಮ ನಮ್ಮ ಆಚರಣೆಗಳನ್ನು ಧರ್ಮವೆಂದೂ ಪ್ರಚಾರಗೊಳಿಸುವ ಹುನ್ನಾರವೂ ತೆರೆಮರೆಯಲ್ಲಿ ಸಾಗಿದೆ. ಆಗಷ್ಟೇ ಅಧ್ಯಯನಕ್ಕೆ ಮೈ ಮನಸ್ಸನ್ನು ಅಣಿ ಮಾಡಿಕೊಂಡಿರುವ ಯುವ ಮನಸ್ಸುಗಳಿಗೆ ಇದೇ ಸತ್ಯವಾಗಿ ತೋರುತ್ತಿದೆ. ಆಘಾತಕ್ಕೊಳಗಾಗುವ ಕೋಮಲ ಮನಸ್ಸುಗಳು ಭವಿಷ್ಯದಲ್ಲಿ ಆತಂಕವನ್ನು ಎದುರಿಸುವಂತಾದರೆ ಅದರ ಹೊಣೆ ಹೊರಬೇಕಾದವರು ಯಾರು?