ಭಟ್ಕಳ, ಜನವರಿ 5: ಸಭೆಯ ಮಧ್ಯೆ ಪಡಿತರ ಸಮಸ್ಯೆಯತ್ತ ಮಾತನ್ನು ಹೊರಳಿಸಿದ ಅವರು, ಅಜ್ಜನ ಹೆಸರಿನಲ್ಲಿ ಜಾಗದ ರೆಕಾರ್ಡ ಇನ್ನೂ ಬದಲಾಗದೇ ಉಳಿದುಕೊಂಡಿರುವ ಉದಾಹರಣೆಗಳು ಇವೆ. ಸಾಗುವಳಿ ಮಾಡಿಕೊಂಡು ಯಜಮಾನಿಕೆ ಹೊಂದಿರುವ ಅಂತವರಿಗೂ ಬಿಪಿಎಲ್ ಕಾರ್ಡ ನೀಡಲಾಗಿದೆ. ಇದರಿಂದ ಅರ್ಹ ಫಲಾನುಭವಿಗಳು ವಂಚಿತರಾಗುತ್ತಿದ್ದು, ಅನರ್ಹರಿಂದ ಕಾರ್ಡ ಹಿಂಪಡೆದು ಬಿಸಿ ಮುಟ್ಟಿಸಬೇಕಾಗಿದೆ ಎಂದು ತಿಳಿಸಿದರು. ಇದಕ್ಕೆ ದನಿಗೂಡಿಸಿದ ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಉದಯ ನಾಯ್ಕ, ಮುಂದಿನ ಸಭೆಯ ಒಳಗಾಗಿ ಕೆಲವಷ್ಟನ್ನಾದರೂ ಗುರುತಿಸಿ ಕ್ರಮ ಕೈಗೊಳ್ಳಿ. ಇದರಿಂದ ಉಳಿದವರಿಗೆ ಎಚ್ಚರಿಕೆಯನ್ನು ರವಾನಿಸಿದಂತಾಗುತ್ತದೆ ಎಂದು ವಿವರಿಸಿದರು.
ಸಾಕಷ್ಟು ಪ್ರತಿರೋಧ ವ್ಯಕ್ತಪಡಿಸಿದ್ದಾಗ್ಯೂ ಗ್ರಾಮೀಣ ಭಾಗಕ್ಕೆ ಹಳೆಯ ಬಸ್ಸುಗಳ ಸಂಚಾರ ಮುಂದುವರೆದಿದೆ. ಅಪಾಯವನ್ನು ಬೆನ್ನಿಗೆ ನೇತು ಹಾಕಿಕೊಂಡೇ ಓಡಾಡುವ ಇಂತಹ ಬಸ್ಸುಗಳಿಂದ ಮುಂದೆ ಸಂಭವಿಸಬಹುದಾದ ಅನಾಹುತಕ್ಕೆ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ ಎಂದು ಮಾದೇವ ನಾಯ್ಕ ಎಚ್ಚರಿಸಿದರು. ಕೆಎಸ್ಆರ್ಟಿಸಿ ಕಾರ್ಯಕ್ರಮಗಳಲ್ಲಿ ತಾಲೂಕು ಪಂಚಾಯತ ಆಡಳಿತವನ್ನು ಕಡೆಗಣಿಸುತ್ತಿರುವ ಬಗ್ಗೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು. ಕಸವಿಲೇವಾರಿಗಾಗಿ ಅರಣ್ಯ ಇಲಾಖೆ ಆಯಾ ಗ್ರಾಮಪಂಚಾಯತ ವ್ಯಾಪ್ತಿಯಲ್ಲಿ ಸ್ಥಳ ನಿಗದಿಪಡಿಸುವುದರಿಂದ ಬೇಕಾ ಬಿಟ್ಟಿ ಕಸ ಚೆಲ್ಲಾಟಕ್ಕೆ ಕೊನೆ ಹಾಡಬಹುದು.
ಇದಕ್ಕೆ ಇಲಾಖೆ ಕಾರ್ಯಪ್ರವೃತ್ತರಾಗಬೇಕಿದೆ ಎಂದು ಕಾರ್ಯನಿರ್ವಹಣಾಧಿಕಾರಿಗಳು ಸಲಹೆ ನೀಡಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಅರಣ್ಯಾಧಿಕಾರಿಗಳು ಗ್ರಾಮಪಂಚಾಯತ ಕಾರ್ಯದರ್ಶಿಗಳ ಸಹಾಯದೊಂದಿಗೆ ಕ್ರಮ ಜರುಗಿಸುವ ಭರವಸೆ ನೀಡಿದರು. ಈಗಾಗಲೇ ಜಲಾನಯನ ಇಲಾಖೆಯ ವತಿಯಿಂದ ಯಲ್ವಡಿಕವೂರು ಹಾಗೂ ಶಿರಾಲಿ ಭಾಗದಲ್ಲಿ ೬.೭೦ ಲಕ್ಷ ರೂಪಾಯಿ ವೆಚ್ಚದಲ್ಲಿ ಮಳೆ ಕೊಯ್ಲು ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಉಳಿದ ಹಣ ಬಿಡುಗಡೆಯಾದ ನಂತರ ಮುಂದಿನ ದಿನಗಳಲ್ಲಿ ಉಳಿದೆಡೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಜಲಾಯನ ಅಧಿಕಾರಿ ಜೆ.ಎನ್.ನಾಯ್ಕ ಸಭೆಗೆ ಮಾಹಿತಿ ನೀಡಿದರು. ತಾಲೂಕು ಪಂಚಾಯತ ವ್ಯವಸ್ಥಾಪಕ ವಿನೋದ ಗಾಂವಕರ ಎಲ್ಲರನ್ನೂ ಸ್ವಾಗತಿಸಿದರು.
ಚಿತ್ರ, ವರದಿ: ವಸಂತ ದೇವಾಡಿಗ, ಭಟ್ಕಳ