ಬೆಂಗಳೂರು,ಫೆಬ್ರವರಿ 23 ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಮೇಲೆ ನಡೆದ ಹಲ್ಲೆ ಪ್ರಕರಣ ಸಂಬಂಧ ೩ ಮಹಿಳೆಯರು ಸೇರಿದಂತೆ ೮ ಮಂದಿ ಆರೋಪಿಗಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ನಿನ್ನೆ ರಾತ್ರಿ ಬಂಧಿಸಿದ್ದಾರೆ.
ಬಂಧಿತರು ಗೊಲ್ಲರಹಟ್ಟಿ ಮತ್ತು ಕೊಡಿಗೇಹಳ್ಳಿ ಗ್ರಾಮದವರಾಗಿದ್ದು, ಇವರನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಕೊಡಿಗೇನಹಳ್ಳಿ ನಿವಾಸಿಗಳೆನ್ನಲಾದ ಜಾನಿಗೆರೆ ಹೊಸಹಳ್ಳಿಯ ಹನುಮಯ್ಯ (೪೫), ಮಂಜುಳ (೩೫), ಕೋಡಿಗೇಹಳ್ಳಿಯ ದೇವಯ್ಯ (೩೭), ಲಕ್ಮೀಗೋವಿಂದಯ್ಯ (೨೮), ಗಂಗಪ್ರಸಾದ್ (೩೦), ಉದ್ದಿನ ಹೊಸಹಳ್ಳಿಯ ಗಜಲಕ್ಷ್ಮಿ (೨೮), ಕೊಡಿಗೇಹಳ್ಳಿ ವೆಂಕಟೇಶ್ (೩೨) ಮತ್ತು ಮಲ್ಲೇಶ್ (೪೮) ಬಂಧಿತ ಆರೋಪಿಗಳಾಗಳಾಗಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆ ಐಪಿಸಿ ೧೪೩, ೧೪೭, ೧೪೮, ೩೪೧, ೩೨೩, ೩೨೪, ೫೦೬, ೩೫೩, ೪೨೭, ೩೦೭ ಪ್ರಕಾರ ಒಟ್ಟು ೧೧ ಮೊಕದ್ದಮೆ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಕೂಡ ಕಾರ್ಯಾಚರಣೆ ಕೈಗೊಂಡಿರುವ ಬ್ಯಾಡರಹಳ್ಳಿ ಠಾಣೆ ಪೊಲೀಸರು ನಿಜವಾದ ಆರೋಪಿಗಳ ಶೋಧ ಕಾರ್ಯ ನಡೆಸಿ ಮತ್ತಷ್ಟು ಆರೋಪಿಗಳನ್ನು ಬಂಧಿಸುವ ಸಾಧ್ಯತೆ ದಟ್ಟವಾಗಿದೆ.
ಒಟ್ಟಾರೆ ಬಿಡಿಎ ಅಧಿಕಾರಿಗಳಿಗೆ ಯಾರು ಥಳಿಸಿದ್ದಾರೆ ಎಂಬುದು ಗುಟ್ಟಾಗಿದ್ದು, ಮುಂದಿನ ಪರಿಸ್ಥಿತಿ ಯಾವ ರೀತಿ ತಿರುಗಲಿದೆ ಎಂಬುದು ಎಲ್ಲ ಕುತೂಹಲವಾಗಿದೆ.
ಉದ್ದೇಶಿತ ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದ ಪ್ರದೇಶವನ್ನು ನಿನ್ನೆ ಬಿಡಿಎ ಅಧಿಕಾರಿಗಳು ಸರ್ವೇ ಕಾರ್ಯ ನಡೆಸಲು ಹೋದಾಗ ಅಧಿಕಾರಿಗಳನ್ನು ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.