ಮೊನ್ನೆ ಮೊನ್ನೆ ತಾನೇ ತೊಗರಿಬೇಳೆಯ ಬೆಲೆ 100 ರ ಗಡಿದಾಟಿ ಹೋಗಿ ಜನರಿಗೆ ಆಘಾತ ಉಂಟುಮಾಡಿದ್ದು ಬಾರಿ ಪ್ರಮಾಣದಲ್ಲಿ ದಾಸ್ತಾನು ಮಾಡಿದ್ದ, ದೊಡ್ಡ ಜನಗಳು ಕಳ್ಳ ದಾಸ್ತಾನುಗಾರರು ಬಾರಿ ಲಾಭ ಮಾಡಿಕೊಂಡರು.
ಸಾಕಷ್ಟು ದಿನ ಬೆಲೆ ಮೇಲೇ ಇತ್ತು. ಸರಿ ಮತ್ತೊಮ್ಮೆ ತೊಗರಿ ಬೆಳೆ ಕೈಗೆ ಬರುವ ಸಮಯ. ಈ ಬಾರಿ ಒಂದಷ್ಟು ಒಳ್ಳೆ ಬೆಲೆ ಸಿಗಬಹುದೇನೋ ಅಂತ ರೈತರು ಕನಸು ಕಾಣುತ್ತಿದ್ದರು. ರಾಜ್ಯದಲ್ಲಿ ಕಳೆದ ಬಾರಿ 7.5 ಲಕ್ಷ ಎಕರೆ ಪ್ರದೇಶದಲ್ಲಿ ತೊಗರಿ ಬೆಳೆದಿದ್ದರೆ, ಈ ಬಾರಿ ಬಿತ್ತನೆ ಆದದ್ದೇ 5.5 ಲಕ್ಷ ಎಕರೆ ಪ್ರದೇಶದಲ್ಲಿ. ಬರ ಪ್ರವಾಹಗಳೂ ಸಾಕಷ್ಟು ಹಾನಿ ಮಾಡಿವೆ. ಅದು ಇಳುವರಿ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಇಳುವರಿಯೂ ಸಾಕಷ್ಟು ಕಡಿಮೆಯಾಗಿದೆ. ಹೀಗಾಗಿ ತೊಗರಿ ಬೆಲೆ ಹೆಚ್ಚೇ ಇರುತ್ತದೆಯೇನೋ ಎಂಬ ಭಾವನೆ ಇತ್ತು. ಹಾಗಾಗಿಲ್ಲ.
ರಾಜ್ಯದ ತೊಗರಿ ಮಂಡಳಿಯು ರೈತರಿಗೆ ಕ್ವಿಂಟಲ್ಗೆ 4000 ರೂ. ಬೆಂಬಲ ಬೆಲೆ ಕೊಟ್ಟು ಖರೀದಿ ಮಾಡಬೇಕೆಂಬ ತೀರ್ಮಾನವಾಗಿದೆ. ಆದರೆ ವಾಸ್ತವಿಕವಾಗಿ ತೊಗರಿ ಮಂಡಳಿ ಖರೀದಿಗೆ ಇಳಿದೇ ಇಲ್ಲ. ರೈತರಿಗೆ ಕ್ವಿಂಟಲ್ಗೆ 3500 ರಿಂದ 4000 ರೂಪಾಯಿ ಮಾತ್ರ ಬೆಲೆ ಸಿಗುತ್ತಿದೆ. ಮಾರುಕಟ್ಟೆಯಲ್ಲಿ ಸಾರ್ವಜನಿಕರಿಗೆ ತೊಗರಿ 60 ರಿಂದ 65 ರೂ.ಗೆ ದೊರೆಯುತ್ತಿದೆ.
ಬರಬೇಕಾದಷ್ಟು ಬೆಳೆ ಬರದೇ ಇದ್ದರೂ ತೊಗರಿಯ ಬೆಲೆ ಕಡಿಮೆಯಾದದ್ದು ಹೇಗೆ? ಇದಕ್ಕೆ ಎರಡು ಕಾರಣಗಳಿವೆ ಎನ್ನುತ್ತಾರೆ ಒಳಹೊರಗು ಬಲ್ಲವರು.
ಒಂದು ರೈತರಿಂದ ಅಗ್ಗವಾಗಿ ತೊಗರಿ ಖರೀದಿ ಮಾಡಲು ಅನುಕೂಲವಾಗಲು ದೊಡ್ಡ ಕಂಪನಿದಾರರು ಬಾರಿ ವ್ಯಾಪಾರಸ್ತರು ತಂತ್ರ ಹೂಡಿದ್ದಾರೆ. ಎರಡು ಕೇಂದ್ರ ಸರ್ಕಾರ ಆಗ್ನೇಯ ಏಷ್ಯಾ ದೇಶಗಳೊಂದಿಗೆ ಮಾಡಿಕೊಂಡಿರುವ ಕೃಷಿ ಉತ್ಪನ್ನಗಳ ಮುಕ್ತ ವ್ಯಾಪಾರದ ನೀತಿಯ ಫಲವಾಗಿ ನೆರೆಯ ಬರ್ಮಾ ದೇಶದಿಂದ ತೊಗರಿ ದೊಡ್ಡ ಪ್ರಮಾಣದಲ್ಲಿ ನಮ್ಮ ದೇಶಕ್ಕೆ ಆಮದಾಗಿ ಬಂದಿದೆ. ಅಮೇರಿಕನ್ ಕಂಪನಿಗಳು ತೊಗರಿಯನ್ನು ಇಲ್ಲಿಗೆ ತಂದಿವೆ.
ಒಟ್ಟು ಪರಿಣಾಮ ತೊಗರಿ ರೈತನಿಗೆ ಸಿಗಬೇಕಾದ ಬೆಲೆ ಸಿಗುತ್ತಿಲ್ಲ. ಇನ್ನು ಸ್ವಲ್ಪ ದಿನ ಆದ ಮೇಲೆ ಅಂದರೆ ಸುಗ್ಗಿ ಕಾಲ ಮುಗಿದ ಮೇಲೆ ಜನರಿಗೆ ತೊಗರಿ ಬೇಳೆ ಬೆಲೆ ಏರಿಸಲು ಏನೇನು ತಂತ್ರಗಾರಿಕೆ ನಡೆಯಲಿದೆಯೋ ನೋಡಬೇಕಿದೆ.
ಸೌಜನ್ಯ: ಜನಶಕ್ತಿ